ದೊಡ್ಡ ಮಸೀದಿ ರಸ್ತೆಯ ಅಂಗನವಾಡಿ ಬಳಿ ಸದಾ ಗಬ್ಬೆದ್ದು ನಾರುವ ತ್ಯಾಜ್ಯ

ಕಸದ ರಾಶಿಗೆ ಕಂದಮ್ಮಗಳ ‘ಕಸಿವಿಸಿ’

ಗಾಳಿ ಜೋರಾಗಿ ಬೀಸಿದರೂ ಇಲ್ಲಿನ ತ್ಯಾಜ್ಯ ರಾಶಿಯೊಳಗಿನ ಕಸಕಡ್ಡಿಗಳು ಕೇಂದ್ರದೊಳಗೆ ಬರುತ್ತವೆ. ಇನ್ನು ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿ ಮಾಡುವುದು ವಿಳಂಬ ಮಾಡಿದರೆ ದುರ್ವಾಸನೆ ನಡುವೆ ಮಕ್ಕಳು ಪಾಠ, ಊಟ ಪೂರೈಸುವ ಸನ್ನಿವೇಶ ಸೃಷ್ಟಿಯಾಗುತ್ತದೆ.

ದೊಡ್ಡ ಮಸೀದಿ ರಸ್ತೆಯ ಅಂಗನವಾಡಿ ಬಳಿ ಸದಾ ಗಬ್ಬೆದ್ದು ನಾರುವ ತ್ಯಾಜ್ಯ.

ಚಿಕ್ಕಬಳ್ಳಾಪುರ: ಊಟ ಮಾಡಿ ಮಿಕ್ಕಿದ ಆಹಾರ, ಮನೆ ಕಸ–ಮುಸುರೆ, ಬಳಸಿ ಬಿಸಾಕಿದ ಸ್ಯಾನಿಟರಿ ಪ್ಯಾಡ್‌ಗಳು, ಯಥೇಚ್ಛವಾಗಿ ತ್ಯಾಜ್ಯವಾಗುವ ಪ್ಲಾಸ್ಟಿಕ್ ಬ್ಯಾಗ್‌ಗಳು... ಹೀಗೆ ನಿತ್ಯ ದಂಡಿಯಾಗಿ ಬೀಳುವ ಕಸದಿಂದ ಸೃಷ್ಟಿಯಾಗುವ ತ್ಯಾಜ್ಯದ ರಾಶಿ ಮುದ್ದು ಕಂದಮ್ಮಗಳು ಓದುವ ಅಂಗನವಾಡಿಗೆ ಮಗ್ಗಲು ಮುಳ್ಳಿನಂತೆ ಕಿರಿಕಿರಿ ಉಂಟು ಮಾಡುತ್ತಿದೆ.

ನಗರದ ನೈರ್ಮಲ್ಯ ಕಾಪಾಡುವ ಹೊಣೆ ಹೊತ್ತ ನಗರಸಭೆಗೆ ಕೂಗಳತೆಯಲ್ಲಿರುವ ಸಮಸ್ಯೆಯ ಚಿತ್ರಣವಿದು. ನಗರಸಭೆಗೆ ಹೊಂದಿಕೊಂಡಂತಿರುವ ದೊಡ್ಡ ಮಸೀದಿ ರಸ್ತೆಯಲ್ಲಿ ಸಾಧು ಮಠದ ರಸ್ತೆಗೆ ಸಂಧಿಸುವ ಜಾಗದಲ್ಲಿರುವ ಅಂಗನವಾಡಿ ಕೇಂದ್ರದ ಬಳಿ ಈ ಕಸದ ‘ಕಸಿವಿಸಿ’ ಸದಾ ಗೋಚರಿಸುತ್ತದೆ. ಅದರ ನಡುವೆಯೇ ಇಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತದೆ.

ಗಾಳಿ ಜೋರಾಗಿ ಬೀಸಿದರೂ ಇಲ್ಲಿನ ತ್ಯಾಜ್ಯ ರಾಶಿಯೊಳಗಿನ ಕಸಕಡ್ಡಿಗಳು ಕೇಂದ್ರದೊಳಗೆ ಬರುತ್ತವೆ. ಇನ್ನು ಪೌರಕಾರ್ಮಿಕರು ತ್ಯಾಜ್ಯ ವಿಲೇವಾರಿ ಮಾಡುವುದು ವಿಳಂಬ ಮಾಡಿದರೆ ದುರ್ವಾಸನೆ ನಡುವೆ ಮಕ್ಕಳು ಪಾಠ, ಊಟ ಪೂರೈಸುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಂಗನವಾಡಿ ಸಿಬ್ಬಂದಿಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸುವಂತೆ ಮಾಡುತ್ತಿದೆ.

ಚಿಂದಿ ಆಯುವವರು ಪ್ಲಾಸ್ಟಿಕ್‌ ವಸ್ತುಗಳಿಗೆ ಇಲ್ಲಿನ ತ್ಯಾಜ್ಯದ ರಾಶಿ ತಿರುವಿ ಹಾಕಿದರೆ, ನಾಯಿಗಳು, ಬೀದಿ ಹಸುಗಳು ಆಹಾರಕ್ಕಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹರಡುತ್ತವೆ. ಇದರಿಂದ ಆಗಾಗ ತ್ಯಾಜ್ಯದ ದೂಳು, ವಾಸನೆ ಅಂಗನವಾಡಿ ಸುತ್ತ ಸುಳಿದಾಡುತ್ತದೆ. ಹೀಗಾಗಿ ಪೋಷಕರು ಮಕ್ಕಳನ್ನು ಈ ಕೇಂದ್ರಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಈ ಅಂಗನವಾಡಿ ಕೇಂದ್ರದಲ್ಲಿ ಆಟವಾಡಲು ಮೈದಾನವಿಲ್ಲ. ವಿರಾಮದ ವೇಳೆ ಹೊರಗಡೆಯಾದರೂ ಸುತ್ತಾಡಿಸಬೇಕೆಂದರೆ ತ್ಯಾಜ್ಯದ ರಾಶಿ ಭಯ. ಜತೆಗೆ ನಿಯಮಿತವಾಗಿ ಕೇಂದ್ರಕ್ಕೆ ಗರ್ಭಿಣಿಯರು, ಬಾಣಂತಿಯರು ಮಾತೃಭೋಜನಕ್ಕೆ ಬರುತ್ತಾರೆ. ಕಿಶೋರಿಯರು ಆಹಾರ ಧಾನ್ಯ ಪಡೆದುಕೊಳ್ಳಲು ಭೇಟಿ ನೀಡುತ್ತಾರೆ. ಹೀಗಾಗಿ ಈ ತ್ಯಾಜ್ಯ ಸುರಿಯುವ ಸ್ಥಳವನ್ನು ಶಾಶ್ವತವಾಗಿ ಸ್ಥಳಾಂತರಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ.

‘ಕಸದಿಂದ ಆಗುವ ತೊಂದರೆ ತಪ್ಪಿಸಿ ಎಂದು ಅನೇಕ ಬಾರಿ ನಗರಸಭೆ ಆರೋಗ್ಯ ವಿಭಾಗದ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದೇನೆ. ಇಲ್ಲಿ ಕಸ ಸುರಿಯುವುದನ್ನು ನಿರ್ಬಂಧಿಸಿ ಇಲ್ಲವೇ ಕಸದ ತೊಟ್ಟಿಯನ್ನಾದರೂ ಇಡಿ ಎಂದು ಕೇಳಿಕೊಂಡಿರುವೆ. ಯಾರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಸ್ಥಳೀಯ ನಗರಸಭೆ ಸದಸ್ಯರು ಇತ್ತ ಸುಳಿಯುವುದೇ ಇಲ್ಲ’ ಎಂದು ಸ್ಥಳೀಯ ನಿವಾಸಿ ಸಲ್ಮಾ ಅಳಲು ತೋಡಿಕೊಂಡರು.

‘ಇಲ್ಲಿ ಕಸ ಸುರಿಯಲು ಬರುವವರಿಗೆ ಅನೇಕ ಬಾರಿ ಮನವಿ ಮಾಡಿಕೊಂಡು, ನಗರಸಭೆ ವಾಹನಕ್ಕೆ ಕಸ ನೀಡಿ ಎಂದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಪೈಪೋಟಿಯಲ್ಲಿ ಕಸ ಸುರಿಯುತ್ತಾರೆ. ನಮಗಂತೂ ಹೇಳಿ ಹೇಳಿ ಸಾಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಾಗಿಲು ತೆರೆದ ನಂತರ ಅರ್ಧಗಂಟೆ ಅಂಗನವಾಡಿ ಸುತ್ತ ಹರಡಿದ ಕಸ ಸ್ವಚ್ಛಗೊಳಿಸುವುದು ನಿತ್ಯಕರ್ಮವಾಗಿದೆ. ಬಾಗಿಲು ತೆರೆದಿಟ್ಟು ಮಕ್ಕಳಿಗೆ ಊಟ ಮಾಡಿಸಲು ಆಗುವುದಿಲ್ಲ. ಮಳೆಗಾಲದಲ್ಲಿ ಕೆಟ್ಟ ವಾಸನೆ ಸಹಿಸಿಕೊಳ್ಳಲು ಆಗುವುದಿಲ್ಲ. ಆದಷ್ಟು ಬೇಗ ಇಲ್ಲಿ ತ್ಯಾಜ್ಯ ಸುರಿಯುವ ಸ್ಥಳವನ್ನು ಸ್ಥಳಾಂತರ ಮಾಡಿದರೆ ನೆಮ್ಮದಿ ಸಿಗುತ್ತದೆ’ ಎಂದು ಅಂಗನವಾಡಿ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

ಅಂಗನವಾಡಿಗೆ ಹೊಂದಿಕೊಂಡಂತೆ ಶಿಥಿಲಗೊಂಡ ಹಳೇ ಕಟ್ಟಡವಿದೆ. ಅದರಿಂದಾಗಿ ಅಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅಂಗನವಾಡಿ ಸಿಬ್ಬಂದಿ ಸವಾಲಿನ ಕೆಲಸವಾಗಿದೆ. ಜತೆಗೆ ಮಕ್ಕಳ ಸುರಕ್ಷತೆಯ ಬಗ್ಗೆಯೂ ಆತಂಕವಿದೆ. ಹೀಗಾಗಿ ಆ ಕಟ್ಟಡವನ್ನು ನವೀಕರಿಸಬೇಕು ಇಲ್ಲವೇ ಕೆಡವಿ ಹಾಕಬೇಕು ಎನ್ನುವುದು ಸ್ಥಳೀಯರ ಆಗ್ರಹ.
***
ದಿನವಿಡೀ ಗಬ್ಬೆದ್ದು ನಾರುತ್ತದೆ

‘ಇಲ್ಲಿಗೆ 10ನೇ ವಾರ್ಡ್‌ಗಿಂತ 9ನೇ ವಾರ್ಡ್‌ ಜನರು ಕಸ ತಂದು ಸುರಿಯುತ್ತಾರೆ. ದಿನದ 24 ಗಂಟೆಯೂ ಇಲ್ಲಿ ತ್ಯಾಜ್ಯ ಗಬ್ಬೆದ್ದು ನಾರುತ್ತಲೇ ಇರುತ್ತದೆ. ನಗರಸಭೆಯ ಸ್ಥಳೀಯ ಸದಸ್ಯ, ಅಧಿಕಾರಿಗಳು ಇದನ್ನು ಕಂಡರೂ ಕಾಣದವರಂತೆ ವರ್ತಿಸುತ್ತಾರೆ. ಹಾಗಿದ್ದ ಮೇಲೆ ನಗರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದು ಯಾರ ಜವಾಬ್ದಾರಿ. ಇದಂತೂ ನಾಚಿಕೆಗೇಡಿನ ವಿಚಾರ’ ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
**
ಜನರೂ ಪ್ರಜ್ಞಾವಂತರಾಗಬೇಕು

‘ಸ್ಥಳೀಯರಿಗೆ ಬುದ್ದಿ ಇಲ್ಲ. ಯಾವಾಗ ಬೇಕು ಆಗೆಲ್ಲ ಬಂದು ಇಲ್ಲಿ ಕಸ ಸುರಿಯುತ್ತಲೇ ಇರುತ್ತಾರೆ. ಹೀಗಾಗಿ ಪೌರಕಾರ್ಮಿಕರು ಕಸ ತೆಗೆದುಕೊಂಡು ಹೋದರೂ ಇಲ್ಲಿ ಸದಾ ತ್ಯಾಜ್ಯದ ರಾಶಿ ಕಾಣುತ್ತಲೇ ಇರುತ್ತದೆ. ಒಂದು ನಿಗದಿತ ಸಮಯಕ್ಕೆ ಎಲ್ಲರೂ ಬಂದು ಕಸ ಸುರಿದರೆ, ಅದನ್ನು ನಿಯಮಿತವಾಗಿ ವಿಲೇವಾರಿ ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇಲ್ಲಿ ಕಸ ಸುರಿಯಲು ಏನಾದರೂ ತೊಟ್ಟಿಯೋ ಅಥವಾ ಕಂಟೈನರ್ ವ್ಯವಸ್ಥೆ ಮಾಡಿದರೆ ಉತ್ತಮ’ ಎಂದು ನಗರ್ತಪೇಟೆ ರಸ್ತೆ ನಿವಾಸಿ ಅವಿನಾಶ್‌ ಹೇಳಿದರು.
**
ನಗರಸಭೆಗೆ ಕೂಗಳತೆಯಲ್ಲಿರುವ ಕಸದ ಸಮಸ್ಯೆಯನ್ನೇ ಬಗೆಹರಿಸದವರಿಂದ ನಾವು ಹೆಚ್ಚು ನಿರೀಕ್ಷಿಸುವುದು ತಪ್ಪು. ಮೊದಲು ನಾಗರಿಕರು ಪ್ರಜ್ಞಾವಂತರಾಗಬೇಕು
ಕಿರಣ್ , ಗಂಗಮ್ಮನಗುಡಿ ರಸ್ತೆ ನಿವಾಸಿ

 

 

 

Comments
ಈ ವಿಭಾಗದಿಂದ ಇನ್ನಷ್ಟು
ಗಡಿ ಭಾಗದ ಶಾಲೆಯಲ್ಲಿ ಕನ್ನಡ ಕಹಳೆ

ಚಿಕ್ಕಬಳ್ಳಾಪುರ
ಗಡಿ ಭಾಗದ ಶಾಲೆಯಲ್ಲಿ ಕನ್ನಡ ಕಹಳೆ

27 May, 2018
ವಾಹನ ನಿಲುಗಡೆ ತಾಣವಾದ ಸಂತೆ ಶೆಡ್‌

ಬಾಗೇಪಲ್ಲಿ
ವಾಹನ ನಿಲುಗಡೆ ತಾಣವಾದ ಸಂತೆ ಶೆಡ್‌

27 May, 2018
ಕುಸಿತಗೊಂಡ ಹಂದಿ ಮಾಂಸದ ವ್ಯಾಪಾರ

ಚಿಕ್ಕಬಳ್ಳಾಪುರ
ಕುಸಿತಗೊಂಡ ಹಂದಿ ಮಾಂಸದ ವ್ಯಾಪಾರ

27 May, 2018
ಈಡೇರದ ಸಾವಿರ ಮನೆ ಹಂಚಿಕೆ ಯೋಜನೆ

ಗೌರಿಬಿದನೂರು
ಈಡೇರದ ಸಾವಿರ ಮನೆ ಹಂಚಿಕೆ ಯೋಜನೆ

26 May, 2018
ಕುಸಿದ ಮಾವಿನ ಫಸಲು: ಹೆಚ್ಚಿದ ಧಾರಣೆ

ಚಿಂತಾಮಣಿ
ಕುಸಿದ ಮಾವಿನ ಫಸಲು: ಹೆಚ್ಚಿದ ಧಾರಣೆ

26 May, 2018