ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಸಂಭ್ರಮದ ಸಂಕ್ರಾಂತಿ ಆಚರಣೆ

Last Updated 15 ಜನವರಿ 2018, 9:34 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸಂಭ್ರಮ ಸಡಗರದಿಂದ ಸಾವಿರಾರು ಭಕ್ತರು ಭಾನುವಾರ ಸಂಕ್ರಾಂತಿ ಹಬ್ಬ ಆಚರಿಸಿದರು

ಇಲ್ಲಿನ ಆಂಜನೇಯಸ್ವಾಮಿ, ಬನಶಂಕರಿ ಅಮ್ಮ, ರಾಮಕೃಷ್ಣ ದೇವಾಲಯ ಹಾಗೂ ವೀರಭಧ್ರಸ್ವಾಮಿ ದೇವಾಲಯಗಳಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಸಾವಿರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ವಿಶೇಷ ಅಲಂಕಾರ: ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಶನಿವಾರ ಸಂಜೆಯಿಂದಲೇ ದೇವಾಲಯಗಳಲ್ಲಿ ದೇವಸ್ಥಾನ ಸಮಿತಿಯ ಯುವಕರು ಉಪ್ಪು ಹಾಗೂ ಬಣ್ಣಗಳಿಂದ ಚಿತ್ತಾಕರ್ಷಕವಾದ ರಂಗೋಲಿ ಬಿಡಿಸಿದ್ದರು. ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶಾಲವಾದ ಪೆಂಡಾಲ್‌ನಲ್ಲಿ ವಿಜ್ಞೇಶ್ವರ, ತಿರುಪತಿ ತಿಮ್ಮಪ್ಪ, ಪದ್ಮಾವತಿ, ಆನೆ ಮಾದರಿಗಳನ್ನು ಇರಿಸಲಾಗಿತ್ತು. ವಿವಿಧ ಬಗೆಯ ಅಲಂಕಾರಿಕ ಹೂವು ಹಾಗೂ ವಿದ್ಯುತ್ ದೀಪಗಳಿಂದ ದೇವಾಲಯವನ್ನು ಅಲಂಕಾರ ಮಾಡಲಾಗಿತ್ತು.

ವಿಶೇಷ ಪೂಜೆಯ ಅಂಗವಾಗಿ ಆಂಜನೇಯ ಸ್ವಾಮಿ ಮೂರ್ತಿಯನ್ನು ಹತ್ತಿಯಿಂದ ಸಿಂಗರಿಸಲಾಗಿತ್ತು. ಮುಂಜಾನೆ 6.30ಕ್ಕೆ ಅರ್ಚಕ ಸೀತಾರಾಂ ಮಹಾಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯ ಪಿ.ಎಸ್. ಮೂರ್ತಿ, ಅವರ ಪತ್ನಿ ಶಶಿಕಲಾ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ಸಿ.ಮೋಹನ್, ಸದಸ್ಯರಾದ ಅಂಜಲಿ ಮೋಹನ್, ಷಣ್ಮುಖಪ್ಪ, ಗರಗಜ್ಜರ ಸಿದ್ಧಪ್ಪ ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

ಬನಶಂಕರಿ ಅಮ್ಮನವರ ದೇವಸ್ಥಾನ ಹಾಗೂ ರಾಮಕೃಷ್ಣ ದೇವಾಲಯಗಳಲ್ಲೂ ದೇವರನ್ನು ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ವೀರಭಧ್ರಸ್ವಾಮಿಗೆ ಬೆಳ್ಳಿ ಕವಚವನ್ನು ಹಾಕಿ ಪೂಜಿಸಲಾಯಿತು.

ಪ್ರಸಾದ ವ್ಯವಸ್ಥೆ: ವಿಶೇಷ ಪೂಜೆ ಅಂಗವಾಗಿ ಎಲ್ಲ ದೇವಾಲಯಗಳಲ್ಲೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಲಾಡು, ಎಳ್ಳು ಬೆಲ್ಲ, ಪೊಂಗಲ್, ಕೇಸರಿಬಾತ್, ಪುಳಿಯೊಗರೆ ವಿತರಿಸಲಾಯಿತು.

ಬಿ.ದುರ್ಗ ಹೋಬಳಿಯ ಬಹುತೇಕ ಗ್ರಾಮಗಳಿಂದ ಸಾವಿರಾರು ಭಕ್ತರು ಮಕ್ಕಳೊಂದಿಗೆ ದೇವಸ್ಥಾನಗಳಿಗೆ ಬಂದಿದ್ದರು.

‘ನಮ್ಮ ಊರಲ್ಲೂ ಪೂಜೆ ಮಾಡುತ್ತಾರೆ. ಆದರೆ, ಇಂತಹ ಅಲಂಕಾರ ಹಾಗೂ ಪೂಜೆಯನ್ನು ಸುತ್ತಲಿನ ಯಾವುದೇ ಊರಲ್ಲಿ ಮಾಡುವುದಿಲ್ಲ’ ಎಂದು ಬಿ.ದುರ್ಗ ಗ್ರಾಮದ ಮಂಜಮ್ಮ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT