ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕ್ಲಿಂಗ್ ಪ್ರತಿಭೆ ಮುತ್ತಪ್ಪ

ಹುನಗುಂಡಿ ಯುವಕನಿಗೆ ಬೇಕಿದೆ ಪ್ರೋತ್ಸಾಹ
Last Updated 15 ಜನವರಿ 2018, 10:26 IST
ಅಕ್ಷರ ಗಾತ್ರ

ಹೊಳೆಆಲೂರು (ರೋಣ): ಆರ್ಥಿಕ ಮುಗ್ಗಟ್ಟು ಎದುರಾದರೂ ಎದೆಗುಂದದೇ ಗೆಳೆಯನ ಸಹಾಯದಿಂದ ಹೊಸದಿಲ್ಲಿಗೆ ತೆರಳಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಮೀಪದ ಹುನಗುಂಡಿ ಗ್ರಾಮದ ವಿದ್ಯಾರ್ಥಿ 6ನೇ ಸ್ಥಾನ ಪಡೆದಿದ್ದಾನೆ.

ಹೊಸದಿಲ್ಲಿಯಲ್ಲಿ ಸೆಂಟ್ರಲ್ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಜ. 3ರಂದು ಜೂನಿಯರ್ ಸೈಕ್ಲಿಂಗ್ ವಿಭಾಗದಲ್ಲಿ ಪಾಲ್ಗೊಂಡಿದ್ದ ರೋಣ ತಾಲ್ಲೂಕಿನ ಹುನಗುಂಡಿ ಗ್ರಾಮದ ಮುತ್ತಪ್ಪ ನವಲಳ್ಳಿ ಈ ಸಾಧನೆ ಮಾಡಿದವರು. ಮತ್ತಪ್ಪ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರುವ ಆಸೆ, ಛಲವಿದೆ. ಆದರೆ, ಆರ್ಥಿಕ ಪರಿಸ್ಥಿತಿ ಮುತ್ತಪ್ಪನ ಕೈ ಕಟ್ಟಿ ಹಾಕಿದೆ.  ಇಂಥ ಪರಿಸ್ಥಿತಿಯಲ್ಲೂ ಗೆಳೆಯ ಆಸೀಫ್ ಬೆಂಬಲದಿಂದ ಮುತ್ತಪ್ಪ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ರೋಣ ತಾಲ್ಲೂಕಿನ ಪುಟ್ಟ ಗ್ರಾಮ ಹುನಗುಂಡಿಯಲ್ಲಿ 2001ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಮುತ್ತಪ್ಪನಿಗೆ ಚಿಕ್ಕಂದಿನಿಂದಲೂ ಸೈಕ್ಲಿಂಗ್ ಎಂದರೆ ತುಂಬಾ ಆಸಕ್ತಿ. ಗದುಗಿನ ಅನಂತ ದೇಸಾಯಿ ಸೈಕ್ಲಿಂಗ್ ಶಾಲೆಯಲ್ಲಿ ತರಬೇತಿ ಹಿಡಿದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಉತ್ಕಟ ಇಚ್ಚೆ ಅರ್ಹತೆ ಹೊಂದಿದ್ದರೂ ಲಕ್ಷಾಂತರ ರೂ ಮೌಲ್ಯದ ಸೈಕಲ್ ಖರೀದಿಗೆ ಹಣವಿಲ್ಲಿದೇ ಮುತ್ತಪ್ಪ ಕೊರಗುತ್ತಿದ್ದಾರೆ. ಸದ್ಯ ವಿಜಯಪುರದಲ್ಲಿ ಪ್ರಥಮ ವರ್ಷದ ಕಲಾ ವಿಭಾಗದಲ್ಲಿ ಇವರು ಓದುತ್ತಿದ್ದಾರೆ.

ತಂದೆ ಹನುಮಂತಪ್ಪ ರಂಗಭೂಮಿ ಕಲಾವಿದ. ತಾಯಿ ಮನೆಗೆಲಸದೊಂದಿಗೆನಾಲ್ವರು ಮಕ್ಕಳನ್ನು ಪೋಷಿಸುವ ಹೊಣೆ
ಹೊತ್ತಿದ್ದಾರೆ. ಮಗನ ಸಾಧನೆಗೆ ನೆರವಾಗಲೆಂದು ಪೋಷಕರು ಹಲವು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನೆರವು ಕೋರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಮುತ್ತಪ್ಪನಿಗೆ ಸರ್ಕಾರ ಹಾಗೂ ಸಂಘ– ಸಂಸ್ಥೆಗಳು ನೆರವು ನೀಡಿಸಾಧನೆಗೆ ಪ್ರೇರಣೆ ನೀಡಬೇಕು ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಹಲವು ಸಾಧನೆಗಳು: ಮುತ್ತಪ್ಪ 2012ರಲ್ಲಿ ಗದಗ ಜಿಲ್ಲಾ ಪಂಚಾಯ್ತಿ ವತಿಯಿಂದ ನಡೆದ 10 ಕಿ.ಮೀ ಸ್ಪರ್ಧೆಯಲ್ಲಿ ದ್ವಿತೀಯ, 2014ರಲ್ಲಿ ಬಾಗಲಕೋಟೆ ಅಮೆಚೂರ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ 4ನೇ ಸ್ಥಾನ, 2015ರಲ್ಲಿ ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಹುಬ್ಬಳ್ಳಿಯಲ್ಲಿ ನಡೆಸಿದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, 2015ರಲ್ಲಿ ವಿಜಯಪುರದಲ್ಲಿ ಜಿಲ್ಲಾಡಳಿತದಿಂದ ಜರುಗಿದ ರಾಷ್ಟ್ರೀಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 2016–17ರಲ್ಲಿ ಗದಗದಲ್ಲಿ ಜರುಗಿದ ಮೌಂಟೇನ್ ಜಾಕ್
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಬೀಳಗಿಯಲ್ಲಿ 2017ರಲ್ಲಿ ನಡೆದ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT