ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಢನಂಬಿಕೆ ಬಿತ್ತುವ ಜ್ಯೋತಿಷಿಗಳು’

‘ಜ. 31ರ ಚಂದ್ರಗ್ರಹಣ’ ಕುರಿತ ಕಾರ್ಯಾಗಾರದಲ್ಲಿ ವಿಜ್ಞಾನ ಶಿಕ್ಷಕರ ಅಭಿಮತ
Last Updated 15 ಜನವರಿ 2018, 10:45 IST
ಅಕ್ಷರ ಗಾತ್ರ

ಹಾಸನ : ಗ್ರಹಣಗಳು ಭೂಮಿ, ಚಂದ್ರ ಮತ್ತು ಸೂರ್ಯನ ನಡುವೆ ನಡೆಯುವ ನೈಸರ್ಗಿಕ ವಿದ್ಯಮಾನಗಳು. ಇದನ್ನು ಜ್ಯೋತಿಷಿಗಳು ಮೂಢನಂಬಿಕೆಗೆ ಬಳಸಿಕೊಂಡು ಜನರ ಭಾವನೆಗಳ ಜತೆ ಆಟವಾಡುತ್ತಾರೆ ಎಂದು ಚನ್ನರಾಯಪಟ್ಟಣ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ರಮೇಶ್ ಬೇಸರ ವ್ಯಕ್ತಪಡಿಸಿದರು.

ನಗರದ ಬಿಜಿವಿಎಸ್ ಸಂಪನ್ಮೂಲ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ಸೂಪರ್ ಮೂನ್ ಚಂದ್ರಗ್ರಹಣ ಜ. 31’ ಕುರಿತ ಜಿಲ್ಲಾ ಮಟ್ಟದಸಂಪನ್ಮೂಲ ವ್ಯಕ್ತಿಗಳ ಸಬಲೀಕರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನೈಸರ್ಗಿಕ ವಿದ್ಯಮಾನಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಸರಳವಾಗಿ ಜನರಿಗೆ ತಿಳಿಸಬೇಕು. ಚಂದ್ರ ಗ್ರಹಣ ನಿಸರ್ಗದ ಅತ್ಯುತ್ತಮ ಚಟುವಟಿಕೆ. ಇದನ್ನು ನಿರ್ಭಯವಾಗಿ ಜನರು ನೋಡಿ ಆನಂದಿಸುವುದನ್ನು ಕಲಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳ ವಿಜ್ಞಾನ ಸಂಘಗಳ ಮೂಲಕ ಜ. 31ರಂದು ಜನರಿಗೆ ಗ್ರಹಣ ವೀಕ್ಷಣೆ ಮಾಡಿಸುವ ಮೂಲಕ ವೈಜ್ಞಾನಿಕ ಸತ್ಯದ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು ಮಾತನಾಡಿ, ಟಿ.ವಿಗಳಲ್ಲಿ ಜ್ಯೋತಿಷಿಗಳು, ಆಚಾರ್ಯರು ಜನರನ್ನು ಅಂಧಕಾರಕ್ಕೆ ತಳ್ಳಲು ಸುಳ್ಳು ಹೇಳುತ್ತಾರೆ. ಅವರ ಆಟವನ್ನು ಬಯಲು ಮಾಡಲು ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ಕಡೆ ಗ್ರಹಣಗಳ ಕುರಿತು ವೈಜ್ಞಾನಿಕ ವಿವರಣೆ ನೀಡಿ ವೀಕ್ಷಣೆಗೆ ಸಿದ್ಧಗೊಳಿಸಬೇಕು ಎಂದರು.

ಚಂದ್ರನ ಹುಟ್ಟು-ವಿಕಾಸದ ಬಗ್ಗೆ ಪವರ್‌ ಪಾಯಿಂಟ್ ಪ್ರದರ್ಶನ ಮೂಲಕ ವಿವರಿಸಿದ ಸಂಪನ್ಮೂಲ ವ್ಯಕ್ತಿ ಕೆ.ಎಸ್ ರವಿಕುಮಾರ್, ‘ಚಂದ್ರನ ತೂಕ ಭೂಮಿಯ ಆರನೆ ಒಂದು ಭಾಗ. ಅದರ ನೆಲವೆಲ್ಲ ಕುಳಿಗಳಿಂದ ಕೂಡಿದ್ದು, ಸೂರ್ಯನ ಕಿರಣ ಪ್ರತಿಫಲಿಸಿ ನಿರಂತರ ತಂಪು ಬೆಳಕು ನೀಡುತ್ತದೆ’ ಎಂದರು.

150 ವರ್ಷಗಳ ನಂತರ ಜ.31ರಂದು ಸಂಭವಿಸುತ್ತಿರುವ ಈ ಗ್ರಹಣ ಮೂರು ವಿಷಯಗಳಲ್ಲಿ ಮಹತ್ವದ್ದಾಗಿದೆ. ಇದು ಅತ್ಯಂತ ದೊಡ್ಡ ತಟ್ಟೆಯಾಕಾರದಲ್ಲಿ ತಾಮ್ರವರ್ಣವಾಗಿ ಹುಟ್ಟುತ್ತದೆ. ಸುಮಾರು 5 ಗಂಟೆ ವರೆಗೆ ತನ್ನ ಪೂರ್ಣತೆ ಕಾಯ್ದು ಕೊಳ್ಳುತ್ತದೆ. ಹಾಸನದಲ್ಲಿ ಗ್ರಹಣ ಸಂಜೆ 4 ಗಂಟೆ 21 ನಿಮಿಷಕ್ಕೆ ಆರಂಭವಾಗುವುದು. ಆದರೆ, ಗ್ರಹಣದ ಗೋಚರ ಸಂಜೆ 6 ಗಂಟೆ 29 ನಿಮಿಷಕ್ಕೆ. ನಂತರ 7 ಗಂಟೆ 37 ನಿಮಿಷದವರೆಗೂ ಸಂಪೂರ್ಣ ಕೆಂಪುವರ್ಣಮಯವಾಗಿ ಕಾಣಿಸುವ ಗ್ರಹಣ ರಾತ್ರಿ 9.29ಕ್ಕೆ ಮುಕ್ತಾಯವಾಗುವುದು ಎಂದು ವಿವರಿಸಿದರು.

ಬಿಜಿವಿಎಸ್ ಜಿಲ್ಲಾ ಖಜಾಂಚಿ ಜಯಪ್ರಕಾಶ್, ಬಿಜಿವಿಎಸ್ ತಾಲ್ಲೂಕು ಸಮಿತಿ ಸದಸ್ಯೆ ರಾಧಾ, ಕಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT