ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ ಸಮಾಜ ಕಟ್ಟಿದ ಸಿದ್ಧರಾಮೇಶ್ವರರು

ನಾಗೇಂದ್ರನಮಟ್ಟಿಯಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ
Last Updated 15 ಜನವರಿ 2018, 10:56 IST
ಅಕ್ಷರ ಗಾತ್ರ

ಹಾವೇರಿ: ‘ಸಿದ್ದರಾಮೇಶ್ವರರು ಕೇವಲ ಕೆರೆ ಕಟ್ಟೆಗಳನ್ನು ಮಾತ್ರವಲ್ಲ, ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿ ದರು’ ಎಂದು ಕೆರಿಮತ್ತಿಹಳ್ಳಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ವೀರೇಶ ಗು. ಪೂಜಾರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ನಾಗೇಂದ್ರನಮಟ್ಟಿಯ ಸಾಂಸ್ಕೃತಿಕ ರಂಗಮಂದಿರದಲ್ಲಿ ಭಾನುವಾರ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತ್ಯತೀತ ಸಮಾಜ ನಿರ್ಮಾಣ, ಸಾಮೂಹಿಕ ವಿವಾಹ, ಅಂತರಜಾತಿ ವಿವಾಹ, ಜನರಲ್ಲಿ ಜಾಗೃತಿ ಮೂಡಿಸು ವಲ್ಲಿ ಅವರ ಕೊಡುಗೆ ಅಪಾರ ಎಂದರು.

ರಾಜ ಮತ್ತು ರಾಜಕೀಯದಿಂದ ದೂರ ಉಳಿದಿದ್ದ ಸಿದ್ದರಾಮೇಶ್ವರರು ಸೌಮ್ಯ ಸ್ವಭಾವ ಹೊಂದಿದ್ದರೂ, ಸ್ವಾಭಿಮಾನಿ ಆಗಿದ್ದರು. ಅವರ ಬಗ್ಗೆ ಕವಿ ರಾಘವಾಂಕ ಬರೆದಿದ್ದಾರೆ. ಆದರೆ, ಕೆಲವು ಹಿತಾಸಕ್ತಿಗಳು ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿಲ್ಲ. ಹೀಗಾಗಿ ಸಿದ್ದರಾಮೇಶ್ವರರ ಬಗ್ಗೆ ಜನತೆಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ’ ಎಂದರು.

‘ನಮ್ಮಂತಹ ಹಿಂದುಳಿದ ಸಮಾಜಕ್ಕೆ ಸಾಂಸ್ಕೃತಿಕ ನಾಯಕರಿದ್ದಾರೆ. ಅವರ ತತ್ವಗಳ ಅನುಸರಣೆ ಬಹುಮುಖ್ಯ ಎಂದು ತೋರಿಸಿಕೊಟ್ಟ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದ ಅವರು, ‘ಸದಾಶಿವ ಆಯೋಗದ ವರದಿಯು ನಮ್ಮ ಸಮುದಾಯಕ್ಕೆ ಮರಣ ಶಾಸನವಾಗಿದ್ದು, ಅದರ ಜಾರಿಯ ಮೂಲಕ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸವನ್ನು ಸರ್ಕಾರ ಮಾಡಬಾರದು’ ಎಂದು ಎಚ್ಚರಿಕೆ ನೀಡಿದರು

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ‘ಶಿವ ಯೋಗಿ ಸಿದ್ಧರಾಮೇಶ್ವರರು 12ನೇ ಶತಮಾನದಲ್ಲಿ ಬಸವಣ್ಣನವರೊಡ ಗೂಡಿ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಕರೆ ನೀಡಿದರು. ಇದೇ ತತ್ವಾದರ್ಶದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಕಾರ್ಯನಿರ್ವಹಿಸುತ್ತಿದ್ದು, ಸಿದ್ದರಾಮೇಶ್ವರ ಜಯಂತಿ ಸರ್ಕಾರಿ ಆಚರಣೆಗೆ ಆದೇಶ ನೀಡಿದೆ’ ಎಂದರು.

‘ಸಮಾಜದ ಅಭಿವೃದ್ಧಿಗೆ ಸಂಘಟನೆ ಮುಖ್ಯವಾಗಿದ್ದು, ಎಲ್ಲರೂ ಸಂಘಟಿತರಾಗಬೇಕು. ಸರ್ಕಾರ ನೀಡುವ ಸೌಲಭ್ಯಗಳ ಪ್ರಯೋಜನ ಪಡೆದುಕೊಂಡು ಮುಖ್ಯ ವಾಹಿನಿಗೆ ಬೇಕು. ಯಾವುದೇ ಶರಣರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು’ ಎಂದರು.

'ಟೆಂಡರ್ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ನೀಡಲಾಗುತ್ತಿದೆ. ಕೃಷಿ, ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಬ್ಸಿಡಿ ಇದೆ. ಇಂದು ತಂತ್ರಜ್ಞಾನ ಮತ್ತು ವಿಜ್ಞಾನ ಮುಂದುವರಿದಿದ್ದು, ನಾವುಗಳು ಬದಲಾವಣೆಗೆ ತಕ್ಕಂತೆ ಹೊಂದಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ತಹಶೀಲ್ದಾರ್ ಜೆ.ಬಿ.ಮಜ್ಜಗಿ, ನಗರಸಭೆ ಸದಸ್ಯರಾದ ಜಗದೀಶ ಮಲಗೌಡ,ಹನುಮಂತಪ್ಪ ದೇವಗಿರಿ, ಮಲ್ಲೇಶಪ್ಪ ಪಟ್ಟಣಶೆಟ್ಟಿ, ಭೋವಿ ಸಮಾಜದ ಜಿಲ್ಲಾ ಸಂಘದ ಅಧ್ಯಕ್ಷ ರವಿ ಪೂಜಾರ, ಮುಖಂಡರಾದ ದಾಸಪ್ಪ ಕರ್ಜಗಿ, ನಾಗರಾಜ ಮಳಗಾವಿ, ದ್ಯಾಮಣ್ಣ ಅರಸನಾಳ, ಸದಾನಂದ ದೊಡ್ಡಮನಿ ಇದ್ದರು.

ಬೆಳಿಗ್ಗೆ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಬಳಿ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಚಾಲನೆ ನೀಡಿದರು.‌

ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ನಾಗೇಂದ್ರನಮಟ್ಟಿ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT