ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 2 ರಿಂದ ಹಾರ್ನ್‌ಬೆಲ್‌ ಹಕ್ಕಿ ಹಬ್ಬ

ಪ್ರಖ್ಯಾತ ಪಕ್ಷಿ ತಜ್ಞರು, ಛಾಯಾಚಿತ್ರ ತಜ್ಞರಿಂದ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ
Last Updated 15 ಜನವರಿ 2018, 11:13 IST
ಅಕ್ಷರ ಗಾತ್ರ

ದಾಂಡೇಲಿ : ದಾಂಡೇಲಿಯಲ್ಲಿ ಫೆ. 2 ರಿಂದ ಸ್ಥಳೀಯ ಅರಣ್ಯ ಅತಿಥಿಗೃಹದ ಆವರಣದಲ್ಲಿ ಹಾರ್ನಬಿಲ್ ಹಕ್ಕಿ ಹಬ್ಬ ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ದೇಶದ ನಾನಾ ಭಾಗಗಳಿಂದ ಪಕ್ಷಿ ತಜ್ಞರು ಛಾಯಾಚಿತ್ರ ತಜ್ಞರು ಆಗಮಿಸಿ ಉಪನ್ಯಾಸ ಹಾಗೂ ಪ್ರಾತ್ಯಕ್ಷಿತೆ ನೀಡುವರು ಎಂದು ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಎಸ್. ರಮೇಶ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಜರುಗಲಿರುವ ಹಾರ್ನಬಿಲ್ ಹಕ್ಕಿ ಹಬ್ಬ ಕುರಿತು ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಎಲ್ಲ ವರ್ಗದ ಜನರಿಗೂ ಅದರಲ್ಲಿಯೂ ಯುವ ಪೀಳಿಗೆಗೆ ಹಾರ್ನಬಿಲ್ ಹಕ್ಕಿಯ ಮಹತ್ವ ಕುರಿತು ಅರಿವು ಮೂಡಿಸುವುದು ಹಬ್ಬದ ಉದ್ದೇಶ. ಈ ಭಾಗದಲ್ಲಿ ಗುರುತಿಸಿಕೊಂಡಿರುವ ಅಪರೂಪದ ಪಕ್ಷಿಗಳ ಸಂತತಿಯನ್ನು ಉಳಿಸಿ ಬೆಳೆಸಲು ಈ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾರ್ನಬಿಲ್ ಪಕ್ಷಿಗೆ ಸಂಬಂಧಪಟ್ಟಂತೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ, ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಛಾಯಾಚಿತ್ರ, ಚಿತ್ರಕಲೆ ಪ್ರದರ್ಶನ ನಡೆಯಲಿದ್ದು, ಉತ್ತಮ ಛಾಯಾಚಿತ್ರ ಹಾಗೂ ಚಿತ್ರಕಲೆಗೆ ಬಹುಮಾನ ನೀಡಲಾಗುವುದು ಎಂದರು.

ಫೆ. 3 ರಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ಅರಣ್ಯ ಸಚಿವ ರಮಾನಾಥ ರೈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಗಾಲ್ಯಾಂಡಿನ ಕಲಾ ತಂಡದವರು ವಿಶಿಷ್ಟ ನೃತ್ಯ ರೂಪಕ ಹಾಗೂ ಪರಿಸರ ಕುರಿತು ವಾಸುದೇವ ವಾದ್ಯಗೋಷ್ಠಿ, ವಿನಯ ಹೆಗಡೆ ಬಾನಂಗಳದಲ್ಲಿ ಚಿತ್ತಾರ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
**
ದಾಂಡೇಲಿ ಹಾರ್ನಬಿಲ್ ಸಂರಕ್ಷಿತ ಪ್ರದೇಶ : ದಾಂಡೇಲಿಯ ಅರಣ್ಯ ಪ್ರದೇಶದ ಭಾಗವನ್ನು ಹಾರ್ನಬಿಲ್ ಸಂರಕ್ಷಿತ ಪ್ರದೇಶ ಎಂದು ಕರೆಯಲಾಗುತ್ತದೆ. ಈ ಪ್ರಭೇದದ ಪಕ್ಷಿಗಳು ಪರಿಸರ ಹಾಗೂ ಮಾನವನ ಅಸ್ತಿತ್ವಕ್ಕೆ ದಕ್ಕೆ ಉಂಟಾಗುವುದನ್ನು ತಡೆಗಟ್ಟುತ್ತವೆ.

ಹಾರ್ನಬಿಲ್ ಪಕ್ಷಿಯ ಕನ್ನಡದ ಹೆಸರು ಮುಂಗಟ್ಟೆ. ಸ್ಥಳೀಯವಾಗಿ ಇದನ್ನು ಕನಾರಿ ಹಾಗೂ ವಿಮಾನ ಪಕ್ಷಿ ಎಂದು ಕರೆಯುತ್ತಾರೆ. ಭಾರತದಲ್ಲಿ ಹಾರ್ನಬಿಲ್‌ಗಳ 9 ಪ್ರಭೇದಗಳಿದ್ದು, 4 ಬಗೆಯ ಹಾರ್ನಬಿಲ್‌ಗಳು ದಾಂಡೇಲಿಯ ಸುತ್ತಮುತ್ತಲು ಕಂಡು ಬರುತ್ತವೆ. ಮಲಬಾರ ಗ್ರೇಹಾರ್ನಬಿಲ್, ಇಂಡಿಯನ್ ಗ್ರೇಹಾರ್ನಬಿಲ್, ಮಲಬಾರ್ ಪೈಡ್ ಹಾರ್ನಬಿಲ್ ಹಾಗೂ ಗ್ರೇಟ್ ಇಂಡಿಯನ್ ಹಾರ್ನಬಿಲ್ ಇವೇ ಆ ನಾಲ್ಕು ಪ್ರಕಾರದ ಹಾರ್ನಬಿಲ್ ಪಕ್ಷಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT