ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲ ಸಂಘಟನೆಗಳ ಹಿತಾಸಕ್ತಿಯಿಂದಲೇ ಗಲಭೆ

ರಿಪ್ಪನ್‌ಪೇಟೆ: ಪೊಲೀಸ್‌ ಠಾಣೆ ನೂತನ ಕಟ್ಟಡ ಉದ್ಘಾಟಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ
Last Updated 15 ಜನವರಿ 2018, 12:49 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ರಾಜ್ಯದಲ್ಲಿ ಕೆಲ ಸಂಘಟನೆಗಳ ಹಿತಾಸಕ್ತಿಯಿಂದ ಮತೀಯ ಗಲಭೆಗಳು ನಡೆಯುತ್ತಿವೆ ಹೊರತು ಕಾನೂನು ಸುವ್ಯವಸ್ಥೆಯಲ್ಲಿ ಎಂದಿಗೂ ಲೋಪವಾಗಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಸುಮಾರು ₹ 1.40 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್‌ ಠಾಣೆ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಕ್ಷಣಾ ಇಲಾಖೆಯ ಸಿಬ್ಬಂದಿಗಳ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದೀಗ ಪೊಲೀಸ್ ಇಲಾಖೆ ಜನಸ್ನೇಹಿಯಾಗಿದ್ದು, ನಾಗರಿಕರು ನಿರಾಳವಾಗಿ ತಮ್ಮ ಸಮಸ್ಯೆಗಳನ್ನು ಇಲಾಖೆಯೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾಗೂ ಅಫೀಮು, ಗಾಂಜಾ, ಮಟ್ಕಾ ಇನ್ನಿತರ ಅನೈತಿಕ ಚಟುವಟಿಕೆಗಳಲ್ಲಿ ತೊಡಗುವವರಿಗೆ ಇಲಾಖೆ ಸಿಂಹ ಸ್ವಪ್ನವಾಗಿದೆ. ಸಭ್ಯತೆಗೆ ಸದಾ ಗೌರವ ನೀಡುತ್ತದೆ. ಸಮಾಜದ ಹಿತ ಚಿಂತನೆ ಜನ ಸಾಮಾನ್ಯರಲ್ಲಿದೆ ಶಾಂತಿ ಸುವ್ಯವಸ್ಥೆ ಕಾಪಾಡುವುದು ಇಲಾಖೆಯ ಆದ್ಯ ಕರ್ತವ್ಯ ಎಂದು ಹೇಳಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಇಂದಿನವರೆಗೆ ಹೊಸದಾಗಿ 28 ಸಾವಿರ ಪೊಲೀಸರು, 1,642 ಎಸ್ಐ ನೇಮಕ ಮಾಡಿದೆ. ಅಲ್ಲದೆ 18 ಸಾವಿರ ಎಸ್ಐಗಳ ನೇಮಕಾತಿ ಪಟ್ಟಿ ಕ್ಯಾಬಿನೇಟ್‌ನಲ್ಲಿ ತಿರ್ಮಾನಗೊಂಡು ಆದೇಶ ಹಂತದಲ್ಲಿದೆ. ಅಲ್ಲದೆ ಬಡ್ತಿಗಾಗಿ ಕಾಯುತ್ತಿರುವ ಸಿಬ್ಬಂದಿಗಳಿಗೆ ಸರಳ ನೀತಿ ಅನುಸರಿಸಲಾಗಿದೆ’ ಎಂದು ತಿಳಿಸಿದರು.

ರಾಜ್ಯದಲ್ಲಿ 11 ಸಾವಿರ ಪೊಲೀಸ್‌ ವಸತಿ ಗೃಹಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಜಿಲ್ಲೆಗೆ ತಲಾ 250 ವಸತಿ ಗೃಹ ನೀಡಲಾಗಿದೆ. 2,500 ನಿವೇಶನಗಳ ಕಾಮಗಾರಿ ಅಪೂರ್ಣಗೊಂಡಿದೆ ಎಂದು ಅಂಕಿ ಅಂಶ ನೀಡಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಪೊಲೀಸ್ ಸಿಬ್ಬಂದಿಗಳಿಗಾಗಿ ಕಿಂಚಿತ್‌ ಕಾಳಜಿ ವಹಿಸಿಲ್ಲ ಎಂದು ಟೀಕಿಸಿದರು.

ಕಂದಾಯ ಸಚಿವರಿಗೆ ಶ್ಲಾಘನೆ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸಚಿವರಾದ ನಂತರ ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ಕೊಡಿಸುವ ಮಹತ್ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಗ್ರಾಮ ಮತ್ತು ನಗರ ಪ್ರದೇಶದ ಜನತೆಗೆ ಭೂ ಒಡೆತನದ ಹಕ್ಕು ಕೊಡಿಸಿದ್ದಾರೆ. ಹಾಡಿ, ಗಲ್ಲಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಸೇರ್ಪಡೆಗೊಳಿಸಿ ನಿರ್ವಸತಿಗರಿಗೆ ಭದ್ರತೆ ಕಲ್ಪಿಸಿದ್ದಾರೆ ಎಂದು ಪ್ರಶಂಸಿಸಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಕಳಕಳಿ ಇದ್ದಲ್ಲಿ ಜನತೆ ಸಹೋದರತ್ವ ದಿಂದ ಬಾಳಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಆಟೊ ಪ್ರಯಾಣಿಕರ ಸುರಕ್ಷತೆಗಾಗಿ ‘ಆಟೊಮಿತ್ರ’ ಎಂಬ ನೂತನ ಆ್ಯಪ್ ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ವಾಸಪ್ಪಗೌಡ, ಎನ್‌. ಚಂದ್ರೇಶ್‌, ಶ್ವೇತಾಬಂಡಿ, ಕಲಗೋಡು ರತ್ನಾಕರ, ಲಕ್ಷ್ಮಮ್ಮ, ಮಂಜುನಾಥಗೌಡ, ತಿಮ್ಮಪ್ಪ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT