ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟಲಿಂಗ ದೇವರಲ್ಲ, ಮಹತ್ವದ್ದೂ ಅಲ್ಲ

ಗುರುದೇವ ಆಶ್ರಮದ ಶಾಂತಗಂಗಾಧರ ಸ್ವಾಮೀಜಿ ಪ್ರತಿಪಾದನೆ
Last Updated 15 ಜನವರಿ 2018, 13:10 IST
ಅಕ್ಷರ ಗಾತ್ರ

ಸಿಂದಗಿ: ಶಿವಯೋಗಿ ಸಿದ್ಧರಾಮೇಶ್ವರರು ಇಷ್ಟಲಿಂಗಧಾರಣೆ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ. ಆದರೆ ಅವರ ಕುಲಸ್ಥರಾದ ಭೋವಿ ಸಮುದಾಯದ ಜನರು ಇಷ್ಟಲಿಂಗಧಾರಣೆ ಮಾಡಿ ಕೊಳ್ಳುತ್ತಾರಾ? ಇಷ್ಟಲಿಂಗ ಇದು ದೇವರಲ್ಲ. ಇದೊಂದು ಕುರುಹು. ಅದೇನು ಅಷ್ಟು ಮಹತ್ವದ್ದಲ್ಲ ಎಂದು ಗುರುದೇವ ಆಶ್ರಮದ ಶಾಂತಗಂಗಾಧರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಭಾನುವಾರ ಇಲ್ಲಿಯ ಮಿನಿವಿಧಾನ ಸೌಧ ಆವರಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

‘ಸಿದ್ಧರಾಮೇಶ್ವರರು ವಡ್ಡರ ಸಮುದಾಯಕ್ಕೆ ಸೇರಿದವರು ಎಂಬು ದನ್ನು ಸೊಲ್ಲಾಪುರ, ವಿಜಯಪುರದ ಭಕ್ತರು ಈಗಲೂ ಒಪ್ಪುವುದಿಲ್ಲ ಎಂಬುದು ವಿಷಾದಕರ ಸಂಗತಿ’ ಎಂದರು. ‘ಭೋವಿ ಸಮುದಾಯದ ಜನತೆ ಮದ್ಯ ವ್ಯಸನದಿಂದ ದೂರಿದ್ದು ಕಾಯಕ ಜೀವಿಗಳಾಗಬೇಕು’ ಎಂದು ಸಲಹೆ ನೀಡಿದರು.

ದೇವರಹಿಪ್ಪರಗಿ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಕ ಕಾಂತೂ ಒಡೆಯರ ಉಪನ್ಯಾಸ ನೀಡಿ, ‘12ನೇ ಶತಮಾನದಲ್ಲಿನ ಐದು ಶರಣ ರತ್ನಗಳು ಎಂದು ಕರೆಯಿಸಿಕೊಳ್ಳುವವರಲ್ಲಿ ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಅಕ್ಕಮಹಾದೇವಿ ಅವರಂತೆ ಸಿದ್ಧರಾಮ ಕೂಡ ಒಬ್ಬರಾಗಿದ್ದಾರೆ’ ಎಂದರು.

‘ಸಿದ್ಧರಾಮ ಗುಡಿ ಗುಂಡಾರ ಕಟ್ಟುವುದಕ್ಕಿಂತ ಕೆರೆ ಕಟ್ಟಿ ರೈತರಿಗೆ ಮಹದುಪಕಾರ ಮಾಡಿದ್ದಾರೆ. 770 ಶರಣರಲ್ಲಿ ಶ್ರೇಷ್ಠರಾದ ಸಿದ್ಧರಾಮರು 68 ಸಾವಿರ ವಚನಗಳನ್ನು ರಚಿಸಿದ್ದಾರೆ. ಆದರೆ ಈಗ ಲಭ್ಯವಾಗಿರುವ ವಚನಗಳು ಕೇವಲ 1,379 ಮಾತ್ರ. ಸಿದ್ಧರಾಮರ ವಚನಗಳ ಸಂಶೋಧನಾ ಕಾರ್ಯ ನಡೆಯಬೇಕಿದೆ’ ಎಂದು ಕೇಳಿಕೊಂಡರು.

‘ದೇಶದಲ್ಲಿ 1.57 ಕೋಟಿ ಭೋವಿ ಸಮುದಾಯದವರಿದ್ದಾರೆ. ಆದರೆ ಯಾವುದೇ ವಿಶ್ವವಿದ್ಯಾಯಲಯಕ್ಕೆ ಸಿದ್ಧರಾಮೇಶ್ವರರ ಹೆಸರಿಟ್ಟಿಲ್ಲ. ಯಾವ ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡದಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ’ ಎಂದರು.

‘ವಡ್ಡರ ಮೂಲವೃತ್ತಿ ಕಲ್ಲ ಗಣಿಗಾರಿಕೆ ನಿಂತು ಹೋಗಿದೆ. ಕಲ್ಲು ಗಣಿಗಾರಿಕೆಯನ್ನು ಸರ್ಕಾರ ಪ್ರಾರಂಭಿಸಬೇಕು’ ಎಂದು ಅವರು ಒತ್ತಾಯಿಸಿದರು. ತಾಲ್ಲೂಕು ಪಂಚಾಯಿತಿ ಇಒ ಭಾರತಿ ಚಲುವಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಎಸ್.ಗುಣಾರಿ, ದೈಹಿಕ ಶಿಕ್ಷಣಾಧಿಕಾರಿ ಎ.ಎಂ.ಬಿರಾದಾರ, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಭೋವಿ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ ಪಂಡಿತ ಯಂಪೂರೆ, ಆಶ್ರಯ ಸಮಿತಿ ಸದಸ್ಯ ನಾಗಪ್ಪ ಪಾತ್ರೋಟಿ ವೇದಿಕೆಯಲ್ಲಿದ್ದರು. ತಹಶೀಲ್ದಾರ್ ವೀರೇಶ ಬಿರಾದಾರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ವಿ.ಎಸ್.ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT