ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಕಾಣದ ದೈನಂದಿನ ಸಮಸ್ಯೆಗಳು

ಜಿಲ್ಲಾಡಳಿತ ವಿರುದ್ಧ ಕೋರ್ಟ್‌ ಮೊರೆ: ವಿವಿಧ ಸಂಘಟನೆಗಳಿಂದ ಎಚ್ಚರಿಕೆ
Last Updated 15 ಜನವರಿ 2018, 13:24 IST
ಅಕ್ಷರ ಗಾತ್ರ

ಯಾದಗಿರಿ: ಸೂರ್ಯಾಸ್ತಗೊಂಡರೆ ಸಾಕು ರಕ್ತ ಹೀರುವ ಸೊಳ್ಳೆಗಳ ಹಾವಳಿ; ರಸ್ತೆಗಳಲ್ಲಿ ಸದಾ ದೂಳಿನ ಸಿಂಚನ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಶೌಚಾಲಯಗಳ ಕೊರತೆ; ನಿರಂತರ ಗಬ್ಬುವಾಸನೆ ಸೂಸುವ ಚರಂಡಿಗಳು; ಹಂದಿಗಳ ಹಾವಳಿ, ಪಾದಚಾರಿ ರಸ್ತೆಗಳ ಕೊರತೆ, ನೆರಳು ನೀಡುವ ಉದ್ಯಾನಗಳ ಅಭಾವ, ನೂರಾರು ರೋಗಗಳ ತಾಣವಾಗಿರುವ ತರಕಾರಿ ಮಾರುಕಟ್ಟೆ; ಸರ್ಕಾರ ಅನುದಾನ ಒದಗಿಸಿದರೂ ನಿರ್ಮಾಣಗೊಳ್ಳದ ಮಾಂಸ, ಮೀನು ಮಾರುಕಟ್ಟೆ...

ನಗರದಲ್ಲಿ ನಿತ್ಯ ಎದುರಾಗುವ ಸಾಲು ಸಾಲು ಸಮಸ್ಯೆಗಳಿವು. ಇವಕ್ಕೆ ಪರಿಹಾರ ನೀಡಿ ಸಮಸ್ಯೆ ಬಗೆಹರಿಸು ವಂತೆ ನಗರದಲ್ಲಿನ ಸಂಘಟನೆಗಳು ಜಿಲ್ಲಾಡಳಿತಕ್ಕೆ ಅರ್ಜಿ ಗುಜರಾಯಿಸಿ ಸೋತಿವೆ. ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಸಂಘಟನೆಗಳು ಗೋಗರೆದು ಧ್ವನಿ ಕಳೆದುಕೊಂಡಿವೆ. ಆದರೆ, ಜಿಲ್ಲಾಡಳಿತ ಮಾತ್ರ ಜಾಣ ಕುರುಡು ಮತ್ತು ಕಿವುಡು ಪ್ರದರ್ಶಿಸುತ್ತಲೇ ಬಂದಿದೆ. ಇದರಿಂದ ಬೇಸತ್ತಿರುವ ಸಂಘಟನೆಗಳು ಜಿಲ್ಲಾಡ ಳಿತದ ಕಾರ್ಯವೈಖರಿ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿವೆ!

2010ನೇ ಸಾಲಿನಲ್ಲಿ ಜಿಲ್ಲಾ ಕೇಂದ್ರವಾದ ಯಾದಗಿರಿ, ನಗರ ಸ್ವಚ್ಛತೆ ಮತ್ತು ಮೂಲಸೌಕರ್ಯ ಇಲ್ಲದೇ ಜನರು ಸಂಕಷ್ಟಪಡುತ್ತಿದ್ದಾರೆ. ಸುಂದರ ಜಿಲ್ಲಾ ಕೇಂದ್ರಕ್ಕೆ ಅಗತ್ಯ ಇರುವ ಯಾವೊಂದು ಸೌಕರ್ಯ ಎಂಟು ವರ್ಷ ಕಳೆದರೂ ದೊರೆತಿಲ್ಲ ಎಂಬುದಾಗಿ ನಗರದ ಬಸವೇಶ್ವರ ನಗರದ ನಿವಾಸಿಗಳಾದ ಜಯಮ್ಮ ಸುಣಗಾರ, ದೇವಯ್ಯ ದೂರುತ್ತಾರೆ.

ಅಭಿವೃದ್ಧಿ ಕಾಮಗಾರಿ ನನೆಗುದಿಗೆ: 2010ನೇ ಸಾಲಿನಲ್ಲಿ ಸರ್ಕಾರ ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲು ನಗರಸಭೆಗೆ ಅನುದಾನ ನೀಡದ್ದರೂ, ಟೆಂಡರ್ ಪ್ರಕ್ರಿಯೆಯನ್ನೇ ನಗರಸಭೆ ಆರಂಭಿಸಿಲ್ಲ. ಪ್ರಸಕ್ತ ವರ್ಷದ ಹಲವು ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಕೂಡ ನಡೆದಿಲ್ಲ. ಸ್ಥಳೀಯ ಸಂಸ್ಥೆಯ ಅಸಡ್ಡೆಯಿಂದಾಗಿ ನಗರ ಸೌಂದರ್ಯ ಕಳೆಗುಂದುತ್ತಿದೆ. ನಾನಾರೋಗಗಳಿಗೆ ಕಾರಣವಾಗುತ್ತಿರುವ ಚರಂಡಿಗಳು ಹಾಗೂ ಸೊಳ್ಳೆ ನಿಯಂತ್ರಣಕ್ಕೆ ನಗರಸಭೆ ಇದುವರೆಗೂ ಫಾಗಿಂಗ್‌ ನಡೆಸಿಲ್ಲ ಎಂದು ನಗರದ ಕೊಳೆಗೇರಿ ನಿವಾಸಿಗಳಾದ ವೆಂಕಟೇಶ್, ರಾಮು ಹೇಳುತ್ತಾರೆ.

ಸಿಬ್ಬಂದಿ ಕೊರತೆ ನೆಪ: ನಗರಾಭಿವೃದ್ಧಿಗೆ ಕೈಜೋಡಿಸಬೇಕಾದ ಮೂರು ಅಂಗಸಂಸ್ಥೆಗಳಾದ ಜಿಲ್ಲಾಡಳಿತ– ನಗರಾಭಿವೃದ್ಧಿ ಪ್ರಾಧಿಕಾರ– ನಗರಸಭೆ ಒಂದಕ್ಕೊಂದು ಸಂಬಂಧ ಇಲ್ಲ ಎಂಬಂತೆ ಇರುವುದೇ ನಗರದ ಅಭಿವೃದ್ಧಿ ಹಿನ್ನಡೆಗೆ ತೊಡಕಾಗಿದೆ ಎಂಬುದಾಗಿ ನಾಗರಿಕರು ತಿಳಿಸುತ್ತಾರೆ.

‘ಸ್ಥಳೀಯ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಕ್ಕೆ ಆರ್ಥಿಕ ದೃಢತೆ ಒದಗಿಸಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುವಂತೆ ಮಾಡಬೇಕಾದ ಜವಾ ಬ್ದಾರಿ ಹೊತ್ತ ಜಿಲ್ಲಾಡಳಿತ ಇದುವರೆಗೂ ಅಂತಹ ಕೆಲಸಕ್ಕೆ ಮುಂದಾಗಿಲ್ಲ. 1 ಲಕ್ಷ ಜನಸಂಖ್ಯೆಗೆ ಕೇವಲ ಏಳೆಂಟು ಕಾಯಂ ಪೌರಕಾರ್ಮಿಕರನ್ನು ಹೊಂದಿರುವ ನಗರಸಭೆ ಬಗ್ಗೆ ಜಿಲ್ಲಾಧಿಕಾರಿ ಎಂದೂ ಅಚ್ಚರಿ ವ್ಯಕ್ತಪಡಿಸಿಲ್ಲ. ಚಾಟಿ ಬೀಸಬೇಕಾದ ಜನಪ್ರತಿನಿಧಿಗಳು ಗಮನಹರಿಸದೇ ಚುನಾವಣಾ ಜಪದಲ್ಲಿ ಮುಳುಗಿರುವುದರಿಂದ ನಗರದಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ’ ಎಂದು ಟೋಕ್ರೆ ಕೋಲಿ ಕಬ್ಬಲಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್‌ ಜಿ.ಮುದ್ನಾಳ ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT