ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟೆಗೆ 60 ಮರಗಳ ಅಡಿಕೆ ಕೊಯ್ಲು

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಮಲೆನಾಡಿನ ಬಹುತೇಕ ಪ್ರದೇಶಗಳ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಈ ಭಾಗದಲ್ಲಿ ಅಡಿಕೆಯನ್ನು ರೈತನ ಬಂಗಾರ ಎಂದೇ ಕರೆಯುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವೊಂದು ಭಾಗಗಳ ಮಣ್ಣಿನ ಸಾರದ ಕಾರಣ ಇಲ್ಲಿನ ವಾತಾವರಣ ಅಡಿಕೆಗೆ ಸೂಕ್ತ ವಾಗಿದೆ. ಅತ್ಯಂತ ಎತ್ತರದ ಅಡಿಕೆ ಮರದಿಂದ ಫಸಲನ್ನು ಸಮರ್ಪಕವಾಗಿ ಕಟಾವು ಮಾಡುವುದು ರೈತರಿಗೆ ಅತ್ಯಂತ ಸವಾಲಿನ ಕೆಲಸವಾಗಿದೆ.

ಹೆಚ್ಚಿನ ಕೃಷಿಕರು ಮರ ಏರುವವರ ಮೂಲಕ ಕೊಯ್ಲಿನ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ತಾಲ್ಲೂಕುಗಳಲ್ಲಿ ಕೆಲವೇ ಕೆಲವು ತಜ್ಞ ಅಡಿಕೆ ಕೊಯ್ಲು ಮಾಡುವವರಿದ್ದು, ಇವರಿಗೆ ಹೆಚ್ಚಿನ ಬೇಡಿಕೆಯಿದೆ. ಐದಾರು ತಿಂಗಳು ಮುಂಚಿತವಾಗಿಯೇ ಇವರು ಬುಕ್ ಆಗುವುದರಿಂದ ಸಮಯಕ್ಕೆ ಸರಿಯಾಗಿ ಕೆಲಸಗಾರರು ಸಿಗುವುದೇ ಅಪರೂಪ.

ಇಂದಿನ ಯುವಕರಂತೂ ಅತ್ಯಂತ ಎತ್ತರದ ಮರಗಳನ್ನು ಏರುವ ಸಾಹಸಕ್ಕೆ ಕೈ ಹಾಕುತ್ತಿಲ್ಲ ಹಾಗೂ ವಾಸ್ತವದಲ್ಲಿ ಇದು ಅಪಾಯಕಾರಿ ವೃತ್ತಿಯೂ ಹೌದು. ಮರವನ್ನು ಏರುವಲ್ಲಿ ಅತ್ಯಂತ ಕಠಿಣ ಪರಿಶ್ರಮದ ಅಗತ್ಯವಿದ್ದು, ಬಿಸಿಲಿನಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಕೊಯ್ಲುದಾರರ ಕೊರತೆ ಅಡಿಕೆ ಬೆಳೆಗಾರರನ್ನು ಬಹುವಾಗಿ ಕಾಡುತ್ತಿದೆ.

ಅದಕ್ಕೆಂದೇ ರೈತರ ಈ ಸಮಸ್ಯೆಗೆ ಪರಿಹಾರ ಒದಗಿಸುವಂತಹ ಯಂತ್ರವನ್ನು ಶಿವಮೊಗ್ಗದ ಯುವಕ ಶೆರ್ವಿನ್ ಕೆ. ಮೊಬಿನ್ ರೂಪಿಸಿದ್ದಾರೆ. ಅದುವೇ ಅಡಿಕೆ ಗೊನೆ ಕೊಯ್ಲು ಮಾಡುವ ‘ಬೀಟಲ್‌ನಟ್ ರ್‍ಯಾಪರ್’ ಯಂತ್ರ. ಶೆರ್ವಿನ್‌ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರರು. ಅವರ ಇಪ್ಪತ್ತು ಎಕರೆ ಅಡಿಕೆ ತೋಟದಲ್ಲಿ ಕಟಾವಿಗೆ ಕೂಲಿ ಕಾರ್ಮಿಕರ ಸಮಸ್ಯೆ ಕಾಡುತ್ತಿತ್ತು. ಈ ಸಮಸ್ಯೆಗೆ ಪರಿಹಾರೋಪಾಯ ಹುಡುಕಹೊರಟಾಗ ಅವರಿಗೆ ಹೊಳೆದಿದ್ದೇ ಈ ಯಂತ್ರದ ಪರಿಕಲ್ಪನೆ.

ಯಂತ್ರದ ಕಾರ್ಯವೈಖರಿ: ಬೀಟಲ್‌ನಟ್ ರ್‍ಯಾಪರ್ ಯಂತ್ರಕ್ಕೆ 52 ಸಿ.ಸಿ.ಯ ಎರಡು ಬಿಎಚ್‌ಪಿ ಮೋಟರ್‌ಗಳನ್ನು ಅಳವಡಿಸಿದ್ದು ಅದಕ್ಕೆ ಎರಡು ವಿಶಿಷ್ಟ ಚಕ್ರಗಳಿವೆ. ಇವು ಯಂತ್ರವನ್ನು ಸುಲಲಿತವಾಗಿ ಹಾಗೂ ವೇಗವಾಗಿ ಮರವನ್ನೇರಲು ಸಹಾಯ ಮಾಡುತ್ತವೆ. ಯಂತ್ರದ ಮುಂಭಾಗದಲ್ಲಿ ಬ್ಲೇಡ್‌ ಅಳವಡಿಸಲಾಗಿದ್ದು ಇದು ಅಡಿಕೆಯ ಗೊನೆಯನ್ನು ಅತ್ಯಂತ ನಾಜೂಕಾಗಿ ಕತ್ತರಿಸಲು ಸಹಕಾರಿಯಾಗಿದೆ.

ಯಂತ್ರವು ಅಡಿಕೆ ಮರವನ್ನು ಅಪ್ಪಿಕೊಂಡಾಗ ಎರಡೂ ಬದಿಗಳಲ್ಲಿ ಚಕ್ರಗಳು ಮರಕ್ಕೆ ಅಂಟಿಕೊಳ್ಳುವಂತೆ ಅಳವಡಿಸಬೇಕು. ಬಳಿಕ ಯಂತ್ರವನ್ನು ಚಾಲೂ ಮಾಡಿ ಹಗ್ಗ ಎಳೆದರೆ ಅದು ವೇಗವಾಗಿ ಮರವನ್ನೇರುತ್ತದೆ. ಮುಂಭಾಗದಲ್ಲಿರುವ ಬ್ಲೇಡ್ ಮೂಲಕ ಅಡಿಕೆ ಗೊನೆಗಳನ್ನು ಕತ್ತರಿಸಿ ತನ್ನ ಬೆನ್ನಿನಲ್ಲಿ ಹೇರಿಕೊಳ್ಳುತ್ತದೆ. ಯಂತ್ರದಿಂದ ಕೆಳಗೆ ಇಳಿಬಿಡಲಾದ ಹಗ್ಗವನ್ನು ಮರದಲ್ಲಿನ ಗೊನೆಗಳಿರುವೆಡೆಗೆ ತಿರುಗಿಸಿ ಬೇಕಾದಂತೆ ಅಡಿಕೆ ಗೊನೆಗಳನ್ನು ಕತ್ತರಿಸಿ ಹಗ್ಗವನ್ನು ಸಡಿಲಿಸುವ ಮೂಲಕ ಯಂತ್ರವನ್ನು ಮತ್ತೆ ಕೆಳಗೆ ಇಳಿಸಿಕೊಳ್ಳಬಹುದು.

ಅಡಿಕೆ ಗೊನೆ ಕೊಯ್ಲು ಮಾಡುವ ಈ ಯಂತ್ರವನ್ನು ಸಾಮಾನ್ಯ ಅಡಿಕೆ ಬೆಳೆಗಾರರೂ ಇಟ್ಟುಕೊಳ್ಳಬಹುದು. ಈ ಯಂತ್ರದ ತಯಾರಿಗೆ ಸುಮಾರು ₹ 62 ಸಾವಿರ ಖರ್ಚಾಗುತ್ತದೆ ಎನ್ನುತ್ತಾರೆ ಶೆರ್ವಿನ್. ಇದೊಂದು ಬಹೂಪಯೋಗಿ ಯಂತ್ರವಾಗಿದ್ದು, ಒಂದು ನಿಮಿಷದಲ್ಲಿ ಒಂದು ಉದ್ದನೆಯ ಮರವನ್ನೇರಿ ಅಡಿಕೆ ಗೊನೆಯನ್ನು ಕೀಳುತ್ತಾ ಕೆಳಗಿಳಿಯುವ ಮೂಲಕ ಗಂಟೆಗೆ ಸುಮಾರು ಐವತ್ತರಿಂದ ಅರವತ್ತು ಮರದ ಅಡಿಕೆ ಗೊನೆಯನ್ನು ಕೀಳುವ ತಾಕತ್ತು ಈ ಯಂತ್ರಕ್ಕಿದೆ. ಸಣ್ಣ ಗಾತ್ರದ ಮರಗಳಾಗಿದ್ದಲ್ಲಿ ಇನ್ನೂ ಹೆಚ್ಚಿನ ಮರಗಳನ್ನು ಏರಬಲ್ಲದು. ಈ ಯಂತ್ರಕ್ಕೆ ಇಂಧನವಾಗಿ ಪೆಟ್ರೋಲ್‌ ಬಳಸಲಾಗುತ್ತಿದ್ದು ಅತ್ಯಂತ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ. ಹೀಗಾಗಿ ಒಂದು ಲೀಟರ್ ಪೆಟ್ರೋಲ್‌ನಲ್ಲಿ ಸುಮಾರು ಇನ್ನೂರು ಮರಗಳನ್ನು ಏರಿ ಕೊಯ್ಲು ಮಾಡುವ ಸಾಮರ್ಥ್ಯ ಅದಕ್ಕಿದೆ.

ಕೊಯ್ಲುದಾರರು ಸಿಗುವುದೇ ಕಷ್ಟ. ಸಿಕ್ಕರೂ ಸಮಯಕ್ಕೆ ಸರಿಯಾಗಿ ಅವರು ಕೆಲಸಕ್ಕೆ ಬರುವುದಿಲ್ಲ. ಬಂದವರು ಮರವನ್ನೇರಿ ಅಡಿಕೆ ಗೊನೆಯನ್ನು ಕೊಯ್ದರೂ ಅದನ್ನು ಮೇಲಿನಿಂದ ಕೆಳಕ್ಕೆ ಹಾಕುವಾಗ ಅಡಿಕೆಯು ಗೊನೆಯ ಗೊಂಚಲಿನಿಂದ ಬೇರ್ಪಟ್ಟು ತೋಟವಿಡೀ ಚದುರಿಬಿಡುತ್ತದೆ. ಇದನ್ನು ಹೆಕ್ಕಲೆಂದೇ 2-3 ಮಂದಿ ಕಾರ್ಮಿಕರ ಅವಶ್ಯಕತೆ ಹೆಚ್ಚುವರಿಯಾಗಿ ಬೇಕಿರುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಕೊಯ್ಲಿನ ಯಂತ್ರ ಪರಿಹಾರ ಒದಗಿಸುತ್ತದೆ. ಈ ಯಂತ್ರವು ತಾನು ಕೊಯ್ದ ಅಡಿಕೆ ಗೊನೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡೇ ಕೆಳಗೆ ಇಳಿಯುವುದರಿಂದ ಅಡಿಕೆಯು ಗೊನೆಯಿಂದ ಬೇರ್ಪಡುವ ಅಪಾಯ ಇರುವುದಿಲ್ಲ.

ಅಡಿಕೆ ಬೆಳೆಗಾರರ ಎಲ್ಲಾ ಸಂಕಷ್ಟಗಳಿಗೂ ಪರಿಹಾರ ಸಿಗುವಂತೆ ಈ ಯಂತ್ರವನ್ನು ವಿನ್ಯಾಸಗೊಳಿಸಿರುವುದು ವಿಶೇಷ. ಕಾರ್ಮಿಕರು ಮರ ಏರುವಾಗ ಉಂಟಾಗಬಹುದಾದ ಅಪಾಯಗಳನ್ನು ಈ ಯಂತ್ರದ ಬಳಕೆಯಿಂದ ತಡೆಯಬಹುದು. ಸಾಮಾನ್ಯವಾಗಿ ಅಡಿಕೆ ಮರಗಳು ಅತ್ಯಂತ ಎತ್ತರಕ್ಕೆ ಬೆಳೆಯುವುದರಿಂದ ಕಾರ್ಮಿಕರು ಏರುವಾಗ ಅಥವಾ ಇಳಿಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಕೆಳಕ್ಕೆ ಬಿದ್ದು ಪ್ರಾಣಕ್ಕೆ ಎರವಾಗುವ ಸಾಧ್ಯತೆ ಇರುತ್ತದೆ. ಇನ್ನು ಕೆಲವು ಬಾರಿ ಹಳೆಯ ಮರದ ಮೇಲ್ಮೈ ಸೂರ್ಯನ ಬಿಸಿಲಿಗೆ ಟೊಳ್ಳಾಗಿದ್ದು ಕಾರ್ಮಿಕರು ಮರವನ್ನೇರುವಾಗ ಕಾರ್ಮಿಕರ ಭಾರವನ್ನು ತಾಳಲಾರದೆ ಮುರಿದು ಬೀಳುವ ಸಂಭವವಿರುತ್ತದೆ. ಕಡಿಮೆ ತೂಕದ ಈ ಯಂತ್ರದಿಂದ ಮರಗಳು ಮುರಿದು ಬೀಳುವ ಅಪಾಯ ತುಂಬಾ ಕಡಿಮೆ.

ಸಾಮಾನ್ಯವಾಗಿ ಅಡಿಕೆ ಕೊಯ್ಲು ಮಾಡುವ ಕೂಲಿ ಕಾರ್ಮಿಕರು ಒಂದು ಅಡಿಕೆ ಮರವನ್ನೇರಲು ₹6ರಿಂದ ₹10ರವರೆಗೆ ಕೂಲಿಯನ್ನು ಅಪೇಕ್ಷಿಸುತ್ತಾರೆ. ಆದರೆ ಈ ಯಂತ್ರವನ್ನು ಬಳಸಿದಲ್ಲಿ ಕೇವಲ 50ರಿಂದ 60 ಪೈಸೆಯಲ್ಲಿ ಒಂದು ಮರದ ಅಡಕೆಯನ್ನು ಕಟಾವು ಮಾಡಬಹುದು. ಸಮಯದ ಉಳಿತಾಯವೂ ಆಗುತ್ತದೆ ಎನ್ನುತ್ತಾರೆ ಶೆರ್ವಿನ್.

ಇಷ್ಟೆಲ್ಲ ಸರಳ ನಿರ್ವಹಣೆ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಹೊಂದಿದ ಈ ಯಂತ್ರ, ಅಡಿಕೆ ಬೆಳೆಗಾರರಲ್ಲಿ ಕುತೂಹಲ ಕೆರಳಿಸಿದ್ದು, ಶೆರ್ವಿನ್‌ ಅವರಲ್ಲಿ ಮಾಹಿತಿ ಪಡೆಯಲು ಬರುತ್ತಿದ್ದಾರೆ. ರೈತರಿಗೆ ಕಡಿಮೆ ದರದಲ್ಲಿ ಈ ಯಂತ್ರಗಳನ್ನು ಮಾರಾಟ ಮಾಡುವ ಯೋಚನೆಯನ್ನೂ ಹಾಕಿಕೊಂಡಿದ್ದಾರೆ.
ಸಂಪರ್ಕಕ್ಕೆ: 8971137467.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT