ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪ್ಪತ್ತೇಳು ಮಲೆಗಳ ಕಣಿವೆ ಗ್ರಾಮ!

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಆನುಮಲೆ, ಜೇನುಮಲೆ, ಎಪ್ಪತ್ತೇಳು ಮಲೆಗಳಲ್ಲಿ ತಪ್ಪದೆ ನಾಟ್ಯವಾಡುವಂತಹ ನಮ್ಮಪ್ಪ ಮುದ್ದು ಮಾದಪ್ಪನಿಗೆ ಉಘೇ ಅನ್ರಪ್ಪ...’ ಎಂಬ ಹಾಡನ್ನು ಕೇಳಿದಾಗ ನಿಜಕ್ಕೂ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತ ಎಪ್ಪತ್ತೇಳು ಬೆಟ್ಟಗಳಿವೆಯೇ ಎಂಬ ಪ್ರಶ್ನೆ ಏಳಬಹುದು. ವಾಸ್ತವವಾಗಿ ಹಾಡಿನಲ್ಲಿ ಉಲ್ಲೇಖಿಸಿರುವುದಕ್ಕಿಂತಲೂ ಹೆಚ್ಚು ಬೆಟ್ಟಗಳು ಇಲ್ಲಿವೆ! ಈ ಎಪ್ಪತ್ತೇಳು ಬೆಟ್ಟಗಳ ನಡುವಣ ಕಣಿವೆ ಗ್ರಾಮವೇ ಮಾರ್ಟಳ್ಳಿ.

ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಕೌದಳ್ಳಿ ಅರಣ್ಯವನ್ನು ದಾಟಿದ ಮೇಲೆ ವಡಕೆಹಳ್ಳ ಎಂಬ ಪುಟ್ಟ ಗ್ರಾಮ ಸಿಗುತ್ತದೆ. ಮುಖ್ಯ ರಸ್ತೆಯಿಂದ ಬಲಕ್ಕೆ ಕವಲೊಡೆಯುವ ರಸ್ತೆ ಹಿಡಿದು ಕಾಲು ಗಂಟೆ ಪ್ರಯಾಣಿಸಿದರೆ ಮಾರ್ಟಳ್ಳಿ ಗಡಿಯನ್ನು ತಲುಪುತ್ತೇವೆ.

ವಡಕೆಹಳ್ಳದಿಂದ ನಾಲ್‌ರೋಡ್‌ವರೆಗೆ ಬೆಟ್ಟಗುಡ್ಡಗಳ ನಡುವೆ ಉತ್ತರ-ದಕ್ಷಿಣಕ್ಕೆ 10 ಕಿ.ಮೀ. ಉದ್ದ, 3 ಕಿ.ಮೀ. ಅಗಲಕ್ಕೆ ಹರಡಿರುವ ಮಾರ್ಟಳ್ಳಿ ಕಣಿವೆ ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಸುತ್ತಲೂ ಕುರುಚಲು ಅರಣ್ಯದ ಬೆಟ್ಟಗಳು ಆವರಿಸಿದ್ದು, ಆಸುಪಾಸಿನ ಭೂಪ್ರದೇಶಕ್ಕಿಂತ ತಗ್ಗಿನಲ್ಲಿದೆ.

ಜೇನುಮಲೆ, ಬಗಳಿಮಲೆ, ಪೆರಿಯಮಲೆ, ಕೂಸಿಮಲೆ, ಕಲ್ಕಾರಮಲೆ, ಎರುದುಮಲೆ, ಸಾಂಬ್ರಾಣಿಮಲೆ, ಬೀರಂಗಿಮಲೆ, ಪಾಲಮಲೆ ಮುಂತಾದ ಬೆಟ್ಟಗಳು ಪದರ ಪದರವಾಗಿ ನಿಸರ್ಗ ನಿರ್ಮಿತ ಕೋಟೆಯಂತೆ ಗ್ರಾಮವನ್ನು ಸುತ್ತುವರೆದಿವೆ. ಊರನ್ನು ತಲುಪಲು ಎರಡು ಅರಣ್ಯಮಾರ್ಗಗಳಿದ್ದು, ಉತ್ತರದಿಂದ ವಡಕೆಹಳ್ಳ ಮಾರ್ಗವಾಗಿ ಹಾಗೂ ದಕ್ಷಿಣದಿಂದ ರಾಮಾಪುರ ಮಾರ್ಗವಾಗಿ ತಲುಪಬಹುದು. ಕಲ್ಕಾರಮಲೆ ಇಲ್ಲಿನ ಅತಿ ಎತ್ತರದ ಬೆಟ್ಟವಾಗಿದ್ದು, 40 ಕಿ.ಮೀ. ದೂರದಲ್ಲಿರುವ ಕಾಮಗೆರೆವರೆಗೂ ಕಾಣಿಸುತ್ತದೆ. ಈ ಬೆಟ್ಟವನ್ನು ಹತ್ತಿ ಆಚೆ ಇಳಿದರೆ ಮಲೆಮಹದೇಶ್ವರ ಬೆಟ್ಟ ಸಿಗುತ್ತದೆ. ಆನೆ, ಜಿಂಕೆ, ಕಾಡೆಮ್ಮೆ, ಕಡವೆ, ಚಿರತೆ, ಮುಳ್ಳುಹಂದಿ, ಕರಡಿ, ಕಪ್ಪುಕೋತಿ ಒಳಗೊಂಡಂತೆ ವೈವಿಧ್ಯಮಯ ಪ್ರಾಣಿಗಳು ಹಾಗೂ ತೇಗ, ಬೀಟೆ, ಶ್ರೀಗಂಧ, ಮತ್ತಿ, ಜುಜ್ಜಲು ಮುಂತಾದ ಬೆಲೆಬಾಳುವ ವೃಕ್ಷಸಮೂಹಗಳಿಂದ ಕೂಡಿದ ಇಲ್ಲಿನ ಅರಣ್ಯವನ್ನು 2013ರಲ್ಲಿ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮಕ್ಕೆ ಸೇರಿಸಲಾಯಿತು.

ದಶಕಗಳ ಹಿಂದೆ ಈ ಅರಣ್ಯ ಪ್ರದೇಶದ ಕೆಲವೆಡೆ ಕಪ್ಪುಕಲ್ಲಿನ ಗಣಿಗಾರಿಕೆ ನಡೆಯುತ್ತಿತ್ತಾದರೂ, ವೀರಪ್ಪನ್ ಹಾವಳಿಯ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸಲಾಯಿತು.
ಈ ಪ್ರದೇಶದಲ್ಲಿ ಬಹಳ ಹಿಂದೆ ಸೋಲಿಗರು, ಇರುಳಿಗರು ಮುಂತಾದ ಬುಡಕಟ್ಟು ಜನರು ವಾಸಿಸುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ಕಾಡಿನಲ್ಲಿ ಪಾಳುಬಿದ್ದ ಬಾವಿಗಳು, ಕಟ್ಟಡದ ಅವಶೇಷಗಳು, ಹಗೇವುಗಳು, ವೀರಗಲ್ಲುಗಳು ಮುಂತಾದ ಜನವಸತಿಯ ಕುರುಹುಗಳು ಕಂಡುಬರುತ್ತವೆ. ಆ ಕುರಿತು ಸರಿಯಾದ ಅಧ್ಯಯನ ನಡೆದಿಲ್ಲ.

ಈಗ ಇಲ್ಲಿ ತಮಿಳು ಕ್ರೈಸ್ತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೆಟ್ಟೂರು ಜಲಾಶಯ ನಿರ್ಮಾಣಗೊಂಡಾಗ ಹಿನ್ನೀರಿನಲ್ಲಿ ಹೊಲಮನೆಗಳನ್ನು ಕಳೆದುಕೊಂಡ ಸಂತ್ರಸ್ತರು ತಮ್ಮ ಕೃಷಿ ಮತ್ತು ಪಶುಸಂಗೋಪನೆ ಚಟುವಟಿಕೆಗಳಿಗೆ ಹೇಳಿಮಾಡಿಸಿದಂತಿದ್ದ ಈ ಸ್ಥಳಕ್ಕೆ ಬಂದು ನೆಲೆಸಿದರು. ಏಕೀಕರಣ ಸಂದರ್ಭದಲ್ಲಿ ಈ ಪ್ರದೇಶ ಕರ್ನಾಟಕಕ್ಕೆ ಸೇರ್ಪಡೆಯಾಯಿತು.

ವಿದೇಶಿ ಕ್ರೈಸ್ತ ಮಿಷನರಿಗಳ ಪ್ರಭಾವದಿಂದ ಚರ್ಚ್ ಮತ್ತು ಶಾಲೆಗಳು ಸ್ಥಾಪನೆಗೊಂಡು ಶೈಕ್ಷಣಿಕವಾಗಿ ಉತ್ತಮ ಅಭಿವೃದ್ಧಿಯನ್ನು ಕಂಡಿದೆ. ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಚಾಮರಾಜನಗರ ಜಿಲ್ಲೆಯಲ್ಲೇ ಅತಿ ದೊಡ್ಡ ಗ್ರಾಮ ಪಂಚಾಯಿತಿ ಆಗಿದ್ದು, ಚುನಾವಣೆಯ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಮಾತೃಭಾಷೆ ತಮಿಳಾದರೂ ಜನರು ಕನ್ನಡ ಕಲಿತು ಎಲ್ಲರೊಡನೆ ಸಾಮರಸ್ಯದ ಬದುಕು ನಡೆಸುತ್ತಿದ್ದಾರೆ.

ಕೃಷಿಯನ್ನೇ ಮುಖ್ಯ ಕಸುಬನ್ನಾಗಿಸಿಕೊಂಡಿರುವ ಇಲ್ಲಿಯ ಜನರು ಕಳೆದ ಎರಡು ವರ್ಷಗಳಿಂದ ಮಳೆಯ ಅಭಾವದಿಂದ ಬರ ಪರಿಸ್ಥಿತಿ ತಲೆದೋರಿ ದನಕರು ಸಾಕಣೆಗೂ ಪರದಾಡುವಂತಾಯಿತು. ಈ ವರ್ಷ ಮಳೆ-ಬೆಳೆ ಚೆನ್ನಾಗಿದ್ದು, ರೈತರ ಮನಸ್ಸು ಹೊಲದ ಪೈರುಗಳಂತೆಯೇ ಅರಳಿದೆ. ಬರಡಾಗಿದ್ದ ಭೂಮಿ ರಾಗಿ, ಜೋಳ, ಭತ್ತದ ಹೊಲಗದ್ದೆಗಳಾಗಿ ಮೈಕೊಡವಿಕೊಂಡು ನಿಂತಿವೆ. ತೊರೆಗಳಿಗೆ ಅಡ್ಡಲಾಗಿ ನಿರ್ಮಿಸಿದ ಕಿರುಜಲಾಶಯಗಳು ತುಂಬಿ ತುಳುಕುತ್ತಿವೆ. ಹಳ್ಳಕೊಳ್ಳಗಳು ತುಂಬಿ ಹರಿದು ಕಾಡು ಕಣಿವೆಗಳೆಲ್ಲ ಚಿಗುರಿ, ಹಸಿರು ಹೊದ್ದು ಸಮೃದ್ಧವಾಗಿ ಮೆರೆಯುತ್ತಿವೆ.

ಬೆಟ್ಟದ ಮೇಲೇರಿ ನಿಂತು ಅಲೆಯಲೆಯಾಗಿ ಹಸಿರು ಸಮುದ್ರದಂತೆ, ಮಡಿಕೆ ಮಡಿಕೆಯಾಗಿ ನುಣ್ಣಗೆ ಕಂಗೊಳಿಸುವ ಕಾಡು, ಕಣಿವೆ, ಬೆಟ್ಟಗುಡ್ಡಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಆಹ್ಲಾದಕರ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT