ಶುಕ್ರವಾರ, 19 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳು ಬೆಳಗಿತು ಮೋರ್ಚಿಂಗ್

Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ನಾವು ಹೇಗೆ ಬದುಕಬೇಕು, ಬದುಕಿನಲ್ಲಿ ಏನು ಮಾಡಬೇಕು ಎಂಬುದನ್ನು ದೇವರು ಹಣೆಯಲ್ಲಿ ಬರೆದೇ ಕಳಿಸ್ತಾನಂತೆ. ಸಂಗೀತದ ಗಂಧ ಗಾಳಿ ಇಲ್ಲದ ಕುಟುಂಬದಲ್ಲಿ ಹುಟ್ಟಿದ ನನಗೆ ಸಂಗೀತದ ಬಗ್ಗೆ ಆಸಕ್ತಿ ಹುಟ್ಟಿದ್ದು, ಬಳಸದೇ ಎಸೆದ ವಸ್ತುಗಳ ನಡುವೆ ಒಂದು ಮೋರ್ಚಿಂಗ್‌ ಸಿಕ್ಕಿ ನನ್ನ ಬಯಕೆಗೆ ರೆಕ್ಕೆ ಸಿಕ್ಕಿದ್ದು... ಅದೇ ನನ್ನ ಬಾಳು ಬೆಳಗಿದ್ದು... ಇವೆಲ್ಲಾ ವಿಧಿಲಿಖಿತ ಅಂತಲೇ ಹೇಳ್ತೀನಿ.

ನಾನು ಹುಟ್ಟಿದ ವರ್ಷ 1931. ತಾಯಿ ಬೆಂಗಳೂರಿನವರು, ತಂದೆಯ ಊರು ಶಿರಾ. ಒಂದೂವರೆ ವರ್ಷದ ಮಗುವಿದ್ದಾಗ ಮನೆಯಲ್ಲಿ ಬಹಳ ಕಷ್ಟ ಇತ್ತಂತೆ. ಅದಕ್ಕೆ ನನ್ನ ತಂದೆ ಬೆಂಗಳೂರಿಗೆ ಬಂದರು. ಇಲ್ಲಿಗೆ ಬಂದು 85 ವರ್ಷ ಆಯ್ತು. ನಾವು ವಿಶ್ವಕರ್ಮರು. ಚಿನ್ನದ ಕೆಲಸ ನಮ್ಮ ಕುಲಕಸುಬು. ನಗರ್ತಪೇಟೆಯ ಈ ಮನೆಯ ನೆಲಮಹಡಿಯಲ್ಲಿ ಆಗಿನಿಂದಲೂ ಚಿನ್ನದ ಅಂಗಡಿ ಇದೆ. ಕೈಲಾದ ಕೆಲಸಗಳನ್ನು ಈಗಲೂ ಮಾಡುತ್ತೇನೆ.

ಆಗಿನ ಬೆಂಗಳೂರನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತೆ. ಈ ಊರಲ್ಲಿ ಏನೂ ಇರಲಿಲ್ಲ. ಪೇಟೇನೂ ಇಲ್ಲ, ಜನಾನೂ ಇಲ್ಲ, ಮನೇನೂ ಇಲ್ಲ. ವಾಹನ ಸಂಚಾರ ಕಡಿಮೆ ಅಂದ್ರೆ ಕಡಿಮೆ. ಕಾರ್ಪೊರೇಷನ್‌ ಹತ್ರ ಸಂಪಂಗಿ ಕೆರೆ ಇತ್ತು. ಅಲ್ಲಿ ಸಂಜೆ 6 ಗಂಟೆ ನಂತರ ಯಾರೂ ಓಡಾಡುವಂತಿರಲಿಲ್ಲ. ಪೊಲೀಸ್‌ನೋರೇ ಅಲ್ಲಿ ಡೇಂಜರ್‌ ಲೈಟ್‌ ಹಾಕಿಬಿಟ್ಟಿದ್ರು. ಕಳ್ಳತನ ಜಾಸ್ತಿ. ನಮ್ಮ ತಾಯಿ ಅಣ್ಣಮ್ಮ ದೇವಸ್ಥಾನಕ್ಕೆ ಹೋಗಬೇಕಾದರೆ ಐದಾರು ಹೆಂಗಸರನ್ನು ಕರೆದುಕೊಂಡು ಹೋಗೋರು. ಐದು ಗಂಟೆಯೊಳಗೆ ಮನೆ ಸೇರುತ್ತಿದ್ದರು. ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನದ ಕಡೆ ರಾತ್ರಿ ಹೊತ್ತು ಓಡಾಡುವಂತೆಯೇ ಇರಲಿಲ್ಲ. ಟೌನ್‌ಹಾಲ್‌ ಹೊರತುಪಡಿಸಿ ಎಲ್ಲಾ ಪ್ರದೇಶಗಳು ಉಳುವ ಭೂಮಿಯಾಗಿದ್ದವು. ಶಿವಾಜಿ ಟಾಕೀಸ್‌ ಸುತ್ತಮುತ್ತ ತಿಗಳರು ಕೊತ್ತಂಬರಿ, ಕರಿಬೇವು ಬೆಳೀತಾ ಇದ್ರು.

ಜಯಚಾಮರಾಜೇಂದ್ರ ರಸ್ತೆಯಲ್ಲಿ (ಜೆ.ಸಿ. ರಸ್ತೆ) ರವೀಂದ್ರ ಕಲಾಕ್ಷೇತ್ರ ಆಗಿದ್ದು ಆಮೇಲೆ. ಯಾರೇ ಸಂಗೀತ ಕಲಾವಿದರು ಬಂದರೂ ಕಛೇರಿಗಳು ನಡೀತಾ ಇದ್ದಿದ್ದು ಟೌನ್‌ಹಾಲ್‌ನಲ್ಲಿಯೇ. ಮೂವಿಲ್ಯಾಂಡ್‌ ಟಾಕೀಸ್‌ನಲ್ಲಿ ಬರೀ ತೆಲುಗು ಸಿನಿಮಾಗಳನ್ನೇ ಹಾಕುತ್ತಿದ್ದರು. ಆಗ ಕಬ್ಬನ್‌ ಪೇಟೆಯಲ್ಲಿ ಅನೇಕ ಭಜನೆ ಮನೆಗಳಿದ್ದವು. ನಾನೂ ಹೋಗ್ತಿದ್ದೆ. ಭಜನೆ ಆದಮೇಲೆ ತಿಂದು ಮಿಕ್ಕುವಷ್ಟು ತಿಂಡಿ ಕೊಡ್ತಿದ್ರು. ಮಿಕ್ಕಿದ್ದನ್ನು ಮನೆಯಲ್ಲಿ ಎರಡು ದಿನ ಇಟ್ಕೊಂಡು ತಿನ್ನುತ್ತಿದ್ದೆ. ಆಗ ಜನರಲ್ಲಿ ದುರಾಸೆ ಇರಲಿಲ್ಲ. 10 ರೂಪಾಯಿಗೆ ಪಲ್ಲ (100 ಸೇರು) ಅಕ್ಕಿ ಸಿಗ್ತಿತ್ತು. ಲೀಟರ್‌ ಪೆಟ್ರೋಲ್‌ಗೆ ಮೂರು ರೂಪಾಯಿ.

ನಾನು ಇಲ್ಲೇ ಹತ್ತಿರದ ಮಕ್ಕಳ ಬಸವಣ್ಣ ಬೀದಿಯಲ್ಲಿರುವ ಮಾಡೆಲ್‌ ಸ್ಕೂಲ್‌ನಲ್ಲಿ ನಾಲ್ಕನೇ ಕ್ಲಾಸ್‌ವರೆಗೆ ಓದಿದೆ. ಇವತ್ತಿಗೂ ಅದು ಕಲ್ಲಿನ ಕಟ್ಟಡ ಶಾಲೆ ಎಂದೇ ಕರೆಸಿಕೊಳ್ಳುತ್ತಿದೆ (ಆಗ ನಮ್‌ ಹೆಡ್‌ಮೇಷ್ಟ್ರಿಗೆ 7 ರೂಪಾಯಿ ಸಂಬಳ). ನನಗೆ 13 ವರ್ಷ ಇರುವಾಗ ಸಂಗೀತ ಕಲಿಯಬೇಕು ಎಂಬ ಹುಚ್ಚು ಶುರುವಾಯಿತು. ಒಂದು ದಿನ ಸಜ್ಜನ್‌ರಾವ್‌ ರಸ್ತೆಯ ಪಾರ್ಕ್‌ನಲ್ಲಿ ಯಾವುದೋ ಛತ್ರದಿಂದ ಮೈಕ್‌ನಲ್ಲಿ ಬರುತ್ತಿದ್ದ ಹಾಡನ್ನು ಕೇಳುತ್ತಾ ಕುಳಿತೆ. ಸಂಗೀತ ಕಲಿಯಲೇಬೇಕು ಎಂದು ಅವತ್ತೇ ಬಲವಾಗಿ ತೀರ್ಮಾನಿಸಿಬಿಟ್ಟೆ.

ಚೌಳು ಗಲ್ಲಿಯಲ್ಲಿ ಎಚ್. ಪುಟ್ಟಾಚಾರ್‌ ಅಂತ ತಬಲಾ ಕಲಾವಿದರಿದ್ದರು. ಆಗ ಯಾವುದೇ ವಾದ್ಯ ಕಲೀಬೇಕಾದ್ರೂ ಹಾಡಿಕೆ ಕಲಿಯಲೇಬೇಕಾಗಿತ್ತು. ಅವರೂ ಅದನ್ನೇ ಹೇಳಿದ್ರು. ತಿಂಗಳಿಗೆ ಐದು ರೂಪಾಯಿ ಶುಲ್ಕ. ಆಗ ಚಲಾವಣೆ ಮಾಡ್ತಿದ್ದುದು ಬೆಳ್ಳಿ ರೂಪಾಯಿಗಳು. ಆದರೆ ಫೀಸು ಕೊಡುವ ಶಕ್ತಿ ನನ್ನಲ್ಲಿಲ್ಲ ಎಂದು ಹೇಳಿದೆ. ‘ಮೊದಲು ಕಲಿಯಯ್ಯಾ’ ಅಂದ್ರು. ಹಾಡ್ತಾ ಇದ್ದೆ.

ಹಾಗೆ ನಾನು ಮೂರು ವರ್ಷಕ್ಕೂ ಹೆಚ್ಚು ಸಂಗೀತ ಕಲಿತೆ. ಇಷ್ಟರೊಳಗೆ 10 ಕೀರ್ತನೆ, 8 ವರ್ಣಗಳಲ್ಲಿ ಪಳಗಿದ್ದೆ. ಅದೇ ಸಮಯಕ್ಕೆ ನನ್ನದೇ ಸ್ವಂತ ಚಿನ್ನದ ಅಂಗಡಿ ತೆರೆದು ಮೆಷಿನ್‌ಗಳನ್ನೂ ಹಾಕಿದೆ. ಕೈತುಂಬಾ ಕೆಲಸ ಸಿಗತೊಡಗಿತು. ಸಂಗೀತದ ಪಾಠಕ್ಕೆ ಹೋಗಬೇಕೆಂದರೂ ಸಮಯ ಸಿಗುತ್ತಿರಲಿಲ್ಲ. ನಮ್ಮ ಮೇಷ್ಟ್ರಿಗೆ ಹೋಗಿ ಹೇಳಿದೆ. ಅವರು ಬೇಜಾರು ಮಾಡಿಕೊಂಡರು. ಅದಕ್ಕೆ, ‘ಸಾರ್‌ ನಾನು ಮೃದಂಗ ಕಲೀತೇನೆ’ ಅಂದೆ. ಜೊತೆಗೆ ಘಟ ನುಡಿಸೋದೂ ಕಲಿತೆ. ಆದರೆ ಬೆಳಿಗ್ಗೆ 8ರಿಂದ ರಾತ್ರಿವರೆಗೂ ಬಿಡುವೇ ಸಿಗದಂತಾಯಿತು. ಮತ್ತೆ ಸಂಗೀತ ಕಲಿಕೆ ಕುಂಟತೊಡಗಿತು.

ಅದಕ್ಕೆ ಅವರು ಏನಂದ್ರು ಗೊತ್ತಾ? ‘ಏನಯ್ಯಾ ಮಲ ಮೂತ್ರ ವಿಸರ್ಜನೆಗೆ ನೀನು ಸಮಯ ಮಾಡ್ಕೊಳ್ಳೋದಿಲ್ವಾ? ಕಟ್ಕೊಂಡೇ ಇರ್ತೀಯಾ? ಹಾಗೇ ಸಂಗೀತಕ್ಕಂತ ಸಮಯ ಮಾಡ್ಕೋ. ಕಷ್ಟಪಟ್ಟು ಕಲಿ’ ಅಂದುಬಿಟ್ರು. ಈಗ ಸಂಗೀತದಲ್ಲಿ ಬದುಕಬಹುದು. ಆಗಿನ ಸಂಭಾವನೆಯಲ್ಲಿ ವೃತ್ತಿಯಾಗಿ ಸ್ವೀಕರಿಸಲು ಸಾಧ್ಯವಿರಲಿಲ್ಲ.

ಒಂದು ದಿನ, ಅಂಗಡಿಯಲ್ಲಿ ಒಂದು ಮೋರ್ಸಿಂಗ್‌ ಸಿಗ್ತು. ಅದನ್ನು ಪಾಲಿಶ್‌ ಮಾಡಿ ನಮ್ಮ ಮೇಷ್ಟ್ರಿಗೆ ತಗೊಂಡು ಹೋಗಿ ತೋರಿಸಿ ‘ಇದನ್ನೇ ಕಲೀತೀನಿ’ ಅಂದೆ. ಮೃದಂಗ ನುಡಿಸ್ತಾ ಇದ್ದುರಿಂದ ಲಯ, ತಾಳ ಎಲ್ಲ ನೆರವಿಗೆ ಬಂತು. ಮನೆಯಲ್ಲೂ ಪ್ರಾಕ್ಟೀಸ್‌ ಮಾಡ್ತಿದ್ದೆ. ಆಗ ಬೆಂಗಳೂರಿನಲ್ಲಿ ಮೋರ್ಸಿಂಗ್‌ ಕಲಾವಿದರು ಯಾರೂ ಇರಲಿಲ್ಲ. ಇದೆಲ್ಲಾ ನಡೆದಿದ್ದು 1947 ಅಥವಾ 48ರಲ್ಲಿ ಒಂದು ಘಟನೆ ನಡೆಯಿತು.

ಹಾಗೆ ಪುಟ್ಟಾಚಾರ್‌ ಮೇಷ್ಟ್ರ ಹತ್ರ ಒಂದು ದಿನ ಪ್ರಾಕ್ಟೀಸ್ ಮಾಡುತ್ತಿದ್ದಾಗ ಪಿಟೀಲು ಚೌಡಯ್ಯ ಅವರು ಬಂದು, ‘ಪುಟ್ಟಾಚಾರ್ರೇ ನನ್ನ ಕಛೇರಿಗೆ ಮೃದಂಗ ನುಡಿಸಬೇಕು’ ಅಂದ್ರು. ಅದಕ್ಕೆ ನಮ್ಮ ಮೇಷ್ಟ್ರು, ‘ನಮ್ಮ ಹುಡುಗ ಮೋರ್ಸಿಂಗ್‌ ನುಡಿಸ್ತಾನೆ, ಹಾಕ್ಕೊಳ್ಳಿ’ ಅಂದ್ರು. ‘ಮೋರ್ಸಿಂಗ್‌ನೋರು ಬೆಂಗಳೂರಲ್ಲಿ ಯಾರೂ ಇಲ್ಲ ಕಣ್ರೀ ಹಾಕ್ಕೊಳ್ಳೋಣ’ ಅಂದುಬಿಟ್ರು. ಆಗ ಅವರಿಗೆ 50 ವರ್ಷ ದಾಟಿರಬಹುದು. ಅಂದಿನಿಂದ ಚೌಡಯ್ಯ ಅವರಿಗೆ ನಾನೇ ಮೋರ್ಸಿಂಗ್‌ ಕಲಾವಿದನಾಗಿದ್ದೆ. ಕಳೆದ ವರ್ಷ ನನಗೆ ನಮ್ಮ ಸರ್ಕಾರದೋರು ಪಿಟೀಲು ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಕೊಟ್ಟು ಸನ್ಮಾನಿಸಿದರು. ಇದು ನನ್ನ ಪಾಲಿನ ಸೌಭಾಗ್ಯ.

ಬಳೆ‍ಪೇಟೆಯಲ್ಲೆ ನಡೆಯುತ್ತಿದ್ದ ಹರಿಕಥೆ ವಿದ್ವಾಂಸ ಗುರುರಾಜ ನಾಯ್ಡು ಸಂಗೀತೋತ್ಸವದಲ್ಲಿ ಕೂಡಾ ನಾನು ನಮ್ಮ ಮೇಷ್ಟ್ರ ಜತೆ ಮೋರ್ಸಿಂಗ್‌ ನುಡಿಸ್ತಿದ್ದೆ. ಚೌಡಯ್ಯ ಅವರು ನನ್ನನ್ನು ಬಹಳ ಮೆಚ್ಚಿಕೊಂಡರು. ಮೇಷ್ಟ್ರ ಜತೆ ಸಾಕಷ್ಟು ಕಛೇರಿಗಳಿಗೆ ಹೋಗ್ತಿದ್ದೆ. ನನ್ನ ಸಂಗೀತ ಸೇವೆ ನಡೆಯುತ್ತಿದ್ದುದು ಪ್ರವೃತ್ತಿಯಾಗಿ ಮಾತ್ರ. ನನ್ನ ಜೀವನಕ್ಕೆ ಚಿನ್ನದಂಗಡಿಯೇ ಆಧಾರವಾಗಿತ್ತು. ಆಗ ವಯೊಲಿನ್‌ನವರಿಗೆ 3 ರೂಪಾಯಿ ಸಂಭಾವನೆ. ಬಹಳ ದೊಡ್ಡ ಕಲಾವಿದರಾದರೆ 100 ರೂಪಾಯಿ ಕೊಡೋರು. ತಮ್ಮ ಪಕ್ಕವಾದ್ಯದವರಿಗೆ ಯೋಗ್ಯತೆಗೆ ಅನುಗುಣವಾಗಿ 3, 5, 7 ರೂಪಾಯಿ ಸಂಭಾವನೆಯನ್ನು ಅವರೇ ಕೊಡ್ತಿದ್ರು. ಈಗ ಮೋರ್ಸಿಂಗ್‌ ಕಲಾವಿದರಿಗೇ ಇತರ ಖರ್ಚು ವೆಚ್ಚ ಹೊರತು 6ರಿಂದ 10 ಸಾವಿರದವರೆಗೂ ಕೊಡ್ತಾರೆ.

ನನಗೆ 25ನೇ ವಯಸ್ಸಿನಲ್ಲಿ ಮದುವೆ ಆಯ್ತು. ಆಗ ವರದಕ್ಷಿಣೆ, ವಧು ದಕ್ಷಿಣೆ ಇರಲಿಲ್ಲ. ಎರಡೂ ಕಡೆಯವರು ಖರ್ಚುಗಳನ್ನು ಹಂಚಿಕೊಳ್ಳುತ್ತಿದ್ದರು. ನನ್ನ ಮದುವೆಗೆ 1,000 ರೂಪಾಯಿ ಖರ್ಚಾಗಿತ್ತು. ಆಗೆಲ್ಲಾ ಮದುವೆಯಾಗಿ ಮೂರು ತಿಂಗಳ ನಂತರ ಪ್ರಸ್ಥ ಮಾಡಿಸುತ್ತಿದ್ದರು. ಒಂದೇ ವರ್ಷದಲ್ಲಿ ಮೂರು ತಲೆಮಾರು ಆಗಬಾರದು ಎಂಬುದು ಹಿರಿಯರ ಲೆಕ್ಕಾಚಾರ. ನನಗೆ ಪ್ರಸ್ಥ ನಡೆದಿದ್ದೂ ಮೂರು ತಿಂಗಳ ನಂತರವೇ. ಹೆಣ್ಣಿನ ಕಡೆಯವರು ಮದುವೆಯಷ್ಟೇ ಪ್ರಸ್ಥಕ್ಕೂ ಖರ್ಚು ಮಾಡುತ್ತಿದ್ದರು.

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮೋರ್ಸಿಂಗ್‌ಗೆ ಒಂದು ಸ್ಥಾನವೇ ಇರಲಿಲ್ಲ. ನಾನು ನುಡಿಸಲು ಶುರು ಮಾಡಿದಾಗಿನಿಂದ ಪಕ್ಕವಾದ್ಯದಲ್ಲಿ ಸ್ಥಾನ ಪಡೆಯುತ್ತಾ ಬಂತು. ಲಾಲ್‌ಗುಡಿ ಜಯರಾಂ, ಆರ್.ಕೆ. ಶ್ರೀಕಂಠನ್‌, ವೀಣೆ ರಾಜಾರಾವ್‌, ಯೇಸುದಾಸ್‌, ಟಿ.ವಿ. ಶಂಕರನಾರಾಯಣನ್‌, ಮ್ಯಾಂಡೋಲಿನ್‌ ಶ್ರೀನಿವಾಸ್‌, ಕದ್ರಿ ಗೋಪಾಲನಾಥ್‌ ಹೀಗೆ ನೂರಾರು ವಿದ್ವಾಂಸರ ಕಛೇರಿಗೆ ನಾನು ಪಕ್ಕವಾದ್ಯದಲ್ಲಿರುತ್ತಿದ್ದೆ. ನಾನೇ ಎಷ್ಟೋ ವಿದ್ವಾಂಸರ ಬಳಿ ಅವಕಾಶ ಕೇಳಿ ಪಡೆಯುತ್ತಿದ್ದೆ. ಯಾರೊಂದಿಗೆ ನುಡಿಸಿದ್ದೇನೆ ಅನ್ನೋದಕ್ಕಿಂತ ನುಡಿಸಿಲ್ಲ ಎಂದು ಪಟ್ಟಿ ಮಾಡಬಹುದು. ಇದನ್ನು ಅಹಂ ಅಂದುಕೊಳ್ಳಬೇಡಿ. ಆದರೆ ಇದು ವಾಸ್ತವ. ಈಗ ಮೋರ್ಸಿಂಗ್‌ಗೆ ಆದ್ಯತೆಯ ಸ್ಥಾನ ಸಿಗುತ್ತಿದೆ. ಆದರೂ ಮೋರ್ಸಿಂಗ್‌ ಕಲಿಯಲು ಮಕ್ಕಳು ಮುಂದೆ ಬರುತ್ತಿಲ್ಲ. ನಾನು ಕರ್ನಾಟಕದ ಬಹುತೇಕ ಕಡೆ ಮತ್ತು ಬೇರೆ ಬೇರೆ ರಾಜ್ಯಗಳಿಗೂ ಹೋಗಿದ್ದೇನೆ. ಪ್ಯಾರಿಸ್‌, ಆಮ್‌ಸ್ಟರ್‌ಡಾಂ, ರೋಮ್‌ನಲ್ಲಿ ಕೂಡಾ ಕಛೇರಿ ನೀಡಿದ್ದೇನೆ.

ಸಂಗೀತದ ಗಂಧವೇ ಇಲ್ಲದ ಒಂದು ಕುಟುಂಬ ನಮ್ಮದಾಗಿತ್ತು. ಈಗ ನನ್ನ ಮಕ್ಕಳಾದ ರಾಜಶೇಖರ ಮತ್ತು ಭಾಗ್ಯಲಕ್ಷ್ಮಿ ಎಂ.ಕೃಷ್ಣ ‌ಮೋರ್ಸಿಂಗ್‌ನಲ್ಲಿ ಹೆಸರು ಮಾಡಿದ್ದಾರೆ.  ಇನ್ನೊಬ್ಬ ಮಗಳು ಲೀಲಾವತಿಗೆ ಸಂಗೀತ ಒಲಿಯಲಿಲ್ಲ. ಭಾಗ್ಯಲಕ್ಷ್ಮಿಗೆ ಮದುವೆಯಾದ ಬಳಿಕ ಮೋರ್ಸಿಂಗ್‌ನಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲ ಎಂದೇ ಅಂದುಕೊಂಡಿದ್ದೆವು. ಆದರೆ ಅವಳ ಗಂಡ ತುಂಬಾ ಪ್ರೋತ್ಸಾಹ ಕೊಡತೊಡಗಿದ. ಈಗ ಭಾಗ್ಯಲಕ್ಷ್ಮಿಯನ್ನು, ದೇಶದ ಅಪರೂಪದ ಮೋರ್ಸಿಂಗ್‌ ಕಲಾವಿದೆ ಎಂದೇ ಗುರುತಿಸುತ್ತಾರೆ. ದೊಡ್ಡ ಮಗ ಧ್ರುವರಾಜ್‌, ಮೃದಂಗದಲ್ಲಿ ನುರಿತ ಕೈ. ನಾಲ್ಕೂ ಜನ ಸೇರಿ ಆಕಾಶವಾಣಿ ಮತ್ತು ದೂರದರ್ಶನದಲ್ಲಿಯೂ ಕಾರ್ಯಕ್ರಮ ನೀಡಿದ್ದೇವೆ. ಒಂದೇ ಕುಟುಂಬದ ನಾಲ್ವರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿದ ದಾಖಲೆಯೂ ನಿರ್ಮಾಣವಾಯಿತು.

ಮೋರ್ಸಿಂಗ್‌ ಕಲಾವಿದರೇ ಇಲ್ಲದ ಕಾಲದಲ್ಲಿ ನುಡಿಸಲು ಶುರು ಮಾಡಿದವನು ನಾನು. 1979ರಲ್ಲಿ ಆಕಾಶವಾಣಿಯಲ್ಲಿ ಮೊದಲ ಬಾರಿಗೆ ಮೋರ್ಸಿಂಗ್‌ ನುಡಿಸಿದವನೂ ನಾನೇ. ಈಗ, ಮೋರ್ಸಿಂಗ್‌ ಅಂದರೆ ಭೀಮಾಚಾರ್‌; ಭೀಮಾಚಾರ್‌ ಅಂದರೆ ಮೋರ್ಸಿಂಗ್‌ ಎಂದು ಕರ್ನಾಟಕ ಸಂಗೀತ ಕ್ಷೇತ್ರ ಗುರುತಿಸುವಂತಾಗಿದೆ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮೋರ್ಸಿಂಗ್‌ಗೆ ಒಂದು ಸ್ಥಾನ ಕಲ್ಪಿಸಿಕೊಟ್ಟವನು ನಾನು ಎಂಬ ಹೆಮ್ಮೆ ನನ್ನಲ್ಲಿದೆ.

‘ಮೋರ್ಚಿಂಗ್‌ ಭೀಮ’ನಿಗೆ ‘ಜೀವಮಾನ ಸಾಧನೆ’ ಪುರಸ್ಕಾರ

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೋರ್ಚಿಂಗ್‌ಗೆ ಗಟ್ಟಿ ಸ್ಥಾನ ತಂದುಕೊಟ್ಟವರು ಎಲ್. ಭೀಮಾಚಾರ್. ಇವರು ಸಂಗೀತ ವಲಯದಲ್ಲಿ ‘ಮೋರ್ಚಿಂಗ್ ಭೀಮ’ ಎಂದೇ ಪ್ರಖ್ಯಾತರು. ಮಲ್ಲೇಶ್ವರದ ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್‌ ತನ್ನ 53ನೇ ನಾದಜ್ಯೋತಿ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಎಲ್‌. ಭೀಮಾಚಾರ್‌ ಅವರಿಗೆ ‘ಜೀವಮಾನ ಸಾಧನೆ ಪುರಸ್ಕಾರ’ ನೀಡಿ ಗೌರವಿಸಲಿದೆ. ಪ್ರಶಸ್ತಿ ವಿತರಣೆ ಸಮಾರಂಭ ಶನಿವಾರ (ಜ.20) ಮಲ್ಲೇಶ್ವರದ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ನಡೆಯಲಿದೆ.

ಭೀಮಾಚಾರ್ ಅವರಿಗೆ ಈಗಾಗಲೇ ತಿರುಚ್ಚಿಯ ತ್ಯಾಗರಾಜ ಭಾಗವತರ್‌ ಟ್ರಸ್ಟ್‌ ‘ಮೋರ್ಚಿಂಗ್‌ ಎಂಪರರ್’ ಎಂದು ಪುರಸ್ಕರಿಸಿದೆ. ಲಯವಾದ್ಯ ಕಲಾರತ್ನ, ಲಯವಾದ್ಯ ಕಲಾನಿಧಿ, ಅನನ್ಯ ಪುರಸ್ಕಾರ, ಲಯವಾದ್ಯ ಕಲಾಭೂಷಣ, ಕರ್ನಾಟಕ ಗಾನಕಲಾ ಪರಿಷತ್‌ ನೀಡುವ ‘ಗಾನಕಲಾಭೂಷಣ’, ಬೆಂಗಳೂರಿನ ಪರ್ಕಸಿವ್‌ ಆರ್ಟ್‌ ಸೆಂಟರ್‌ ನೀಡುವ ‘ಲಯಕಲಾ ನಿಪುಣ’, ಕರ್ನಾಟಕ ಸರ್ಕಾರ ಕೊಡುವ ‘ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ’, ಮಲ್ಲೇಶ್ವರದ ನಾದಜ್ಯೋತಿ ಸಂಗೀತ ಸಭಾದ ‘ನಾದಜ್ಯೋತಿ’ ಪುರಸ್ಕಾರಗಳ ಗೌರವ ಸಂದಿದೆ.

ಮೋರ್ಚಿಂಗ್ ವಾದ್ಯ ಚಿಕ್ಕದಾದರೂ ಇದರ ನಾದ, ಲಯ ಕೇಳಲು ಆಪ್ಯಾಯಮಾನ. ನುಡಿಸಾಣಿಕೆ ಬಹಳ ಕಷ್ಟ. ಈ ವಾದ್ಯ ನುಡಿಸಬೇಕಾದರೆ ರಾಗ, ತಾಳಗಳ ಪರಿಚಯ, ಮೃದಂಗ ನುಡಿಸಾಣಿಕೆಯ ಜ್ಞಾನ ಬೇಕು. ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಈ ವಾದ್ಯದ ನಾದವನ್ನು ಪ್ರತ್ಯೇಕವಾಗಿ ಸವಿಯಬೇಕಾದರೆ ‘ತನಿಯಾರ್ವತನ’ದವರೆಗೂ ಕಾಯಬೇಕು. ಗಾಯಕ ತನಿ ಬಿಟ್ಟಾಗ ಮೋರ್ಚಿಂಗ್ ಕಲಾವಿದರ ಸಾಮರ್ಥ್ಯ, ಪ್ರತಿಭೆ ಅನಾವರಣವಾಗುತ್ತದೆ.

ಭೀಮಾಚಾರ್ ಬಗ್ಗೆ ಒಂದಿಷ್ಟು...

* ಜನನ: 1931

* ಮೊದಲ ಗುರು: ಎಚ್. ಪುಟ್ಟಾಚಾರ್‌

* ಪತ್ನಿ: ಎಸ್. ಜಯಮ್ಮ

* ಮಕ್ಕಳು: ಧ್ರುವರಾಜ್ (ಮೃದಂಗ ಕಲಾವಿದ), ರಾಜಶೇಖರ, ಲೀಲಾವತಿ, ಭಾಗ್ಯಲಕ್ಷ್ಮಿ (ಮೋರ್ಚಿಂಗ್ ಕಲಾವಿದೆ), ಎಂ. ಕೃಷ್ಣ,

* ಸಂಪರ್ಕ ವಿವರ: 080 2221 5853, 99455 31961

ನೂರಾರು ವಿದ್ವಾಂಸರ ಕಛೇರಿಗೆ ನಾನು ಪಕ್ಕವಾದ್ಯದಲ್ಲಿರುತ್ತಿದ್ದೆ. ಎಷ್ಟೋ ವಿದ್ವಾಂಸರ ಬಳಿ ನಾನೇ ಅವಕಾಶ ಕೇಳಿ ಪಡೆಯುತ್ತಿದ್ದೆ. ಯಾರೊಂದಿಗೆ ನುಡಿಸಿದ್ದೇನೆ ಅನ್ನೋದಕ್ಕಿಂತ ನುಡಿಸಿಲ್ಲ ಎಂದು ಪಟ್ಟಿ ಮಾಡಬಹುದು.

– ಭೀಮಾಚಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT