ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಬಲ ತುಂಬಿದ ಕೊಹ್ಲಿ ಶತಕ

ಅಶ್ವಿನ್‌, ಇಶಾಂತ್ ಶರ್ಮಾ ಜೊತೆ ನಾಯಕನ ಉತ್ತಮ ಜೊತೆಯಾಟ
Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ಸೆಂಚೂರಿಯನ್‌: ಟೀಕೆಗಳಿಗೆ ಶತಕದ ಮೂಲಕ ಉತ್ತರ ನೀಡಿದ ವಿರಾಟ್ ಕೊಹ್ಲಿ ಇಲ್ಲಿನ ಸೂಪರ್ ಸ್ಪೋರ್ಟ್‌ ‍ಪಾರ್ಕ್‌ನಲ್ಲಿ ಬೆಳಗಿದರು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬೆಂಬಲದೊಂದಿಗೆ ಅವರು ಗಳಿಸಿದ ಶತಕ ಭಾರತಕ್ಕೆ ಉತ್ತಮ ಮೊತ್ತ ಗಳಿಸಿಕೊಟ್ಟಿತು.

ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಕೊಹ್ಲಿ, ರವಿಚಂದ್ರನ್ ಅಶ್ವಿನ್‌ ಮತ್ತು ಇಶಾಂತ್ ಶರ್ಮಾ ಭಾರತವನ್ನು ಅಪಾಯದಿಂದ ಪಾರು ಮಾಡಿ ಹಿನ್ನಡೆಯನ್ನು ಕುಗ್ಗಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 90 ರನ್‌ ಗಳಿಸಿದ್ದು ಒಟ್ಟಾರೆ 118 ರನ್‌ಗಳ ಮುನ್ನಡೆ ಸಾಧಿಸಿದೆ.

28 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಯಾರ್ಕರ್‌ ಮತ್ತು ಶಾರ್ಟ್ ಎಸೆತಗಳನ್ನು ಹಾಕಿ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸಿದ ಜಸ್‌ಪ್ರೀತ್ ಬೂಮ್ರಾ ಐದು ಓವರ್‌ಗಳ ಅಂತರದಲ್ಲಿ ಏಡನ್‌ ಮಾರ್ಕರಮ್ ಮತ್ತು ಹಾಶೀಂ ಆಮ್ಲಾ ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡವಿ ಭಾರತಕ್ಕೆ ಮೇಲುಗೈ ತಂದುಕೊಟ್ಟರು.

ತಮ್ಮ ಮೊದಲ ಓವರ್‌ನಲ್ಲಿ ಮರ್ಕರಮ್ ಅವರನ್ನು ವಾಪಸ್ ಕಳುಹಿಸಿದ ಬೂಮ್ರಾ ಮೂರನೇ ಓವರ್‌ನಲ್ಲಿ ಆಮ್ಲಾಗೆ ಪೆವಿಲಿಯನ್ ದಾರಿ ತೋರಿಸಿದರು. ಆದರೆ ಎಲ್ಗರ್ ಮತ್ತು ಡಿವಿಲಿಯರ್ಸ್‌ ನಿರಾಯಾಸವಾಗಿ ರನ್‌ ಕಲೆ ಹಾಕಿದರು. ಎದುರಿಸಿದ ಮೊದಲ ಎಸೆತದಲ್ಲೇ ಡಿವಿಲಿಯರ್ಸ್‌ ಬೌಂಡರಿ ಗಳಿಸಿದರೆ ನಿಧಾನಕ್ಕೆ ಲಯ ಕಂಡುಕೊಂಡ ಎಲ್ಗರ್‌ ನಂತರ ಸುಲಭವಾಗಿ ರನ್‌ ಹೆಕ್ಕಿದರು. ಹೀಗಾಗಿ ನಿರಂತರವಾಗಿ ಬೌಂಡರಿಗಳು ಹರಿದು ಬಂದವು. ಚಹಾ ವಿರಾಮದ ನಂತರ ಮೂರು ಓವರ್‌ಗಳಾಗುವಷ್ಟರಲ್ಲಿ ಮಳೆ ಕಾಡಿತು. ಒಂದು ತಾಸಿನ ನಂತರ ಪಂದ್ಯವನ್ನು ಮತ್ತೆ ಆರಂಭಿಸಲಾಯಿತು. ಸ್ವಲ್ಪ ಹೊತ್ತಿನಲ್ಲೇ ಬೆಳಕಿನ ಅಭಾವದಿಂದಾಗಿ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು. ಡಿವಿಲಿಯರ್ಸ್‌ (50; 78 ಎ, 6 ಬೌಂ) ಮತ್ತು ಎಲ್ಗರ್‌ (36; 78 ಎ, 1 ಸಿ, 4 ಬೌಂ) ಕ್ರೀಸ್‌ನಲ್ಲಿದ್ದರು.

ಕೊಹ್ಲಿ ಅಮೋಘ ಬ್ಯಾಟಿಂಗ್‌

ಭಾನುವಾರ 85 ರನ್‌ಗಳೊಂದಿಗೆ ಔಟಾಗದೆ ಉಳಿದಿದ್ದ ವಿರಾಟ್ ಕೊಹ್ಲಿ ಸೋಮವಾರ ಅಮೋಘ ಬ್ಯಾಟಿಂಗ್ ಮಾಡಿದರು. ಅವರೊಂದಿಗೆ ಬೆಳಿಗ್ಗೆ ಬ್ಯಾಟಿಂಗ್ ಮುಂದುವರಿಸಿದ ಹಾರ್ದಿಕ್ ಪಾಂಡ್ಯ ದಿನದ ಏಳನೇ ಓವರ್‌ನಲ್ಲಿ ರನ್‌ ಔಟ್‌ ಆದರು. ಅಲ್ಲಿಗೆ ಆರನೇ ವಿಕೆಟ್ ಜೊತೆಯಾಟ ಮುರಿದು ಬಿತ್ತು. ಆದರೆ ರವಿಚಂದ್ರನ್ ಅಶ್ವಿನ್ ಮತ್ತು ಇಶಾಂತ್‌ ಶರ್ಮಾ ಅವರೊಂದಿಗೆ ತಲಾ 71 ಮತ್ತು 25 ರನ್‌ ಸೇರಿಸಿದ ಕೊಹ್ಲಿ ತಂಡವನ್ನು 300ರ ಗಡಿ ದಾಟಿಸಿದರು. 152 ರನ್‌ಗಳ ಹಿನ್ನಡೆಯೊಂದಿಗೆ ಮೂರನೇ ದಿನದಾಟ ಆರಂಭಿಸಿದ ತಂಡಕ್ಕೆ ಕೊನೆಯ ಐವರು ಬ್ಯಾಟ್ಸ್‌ಮನ್‌ಗಳು 126 ರನ್ ಕಾಣಿಕೆ ನೀಡಿದರು.

ದಿನದ ಐದನೇ ಓವರ್‌ನಲ್ಲಿ ಲುಂಗಿ ಗಿಡಿ ಅವರ ಎಸೆತದಲ್ಲಿ ಎರಡು ರನ್‌ ಗಳಿಸಿ ಕೊಹ್ಲಿ ಶತಕದ ಸಂಭ್ರಮದಲ್ಲಿ ತೇಲಿದರು. ಇದು ಅವರಿಗೆ ವರ್ಷದ ಮೊದಲ ಶತಕ ಮತ್ತು ಒಟ್ಟಾರೆ 21ನೇ ಟೆಸ್ಟ್ ಶತಕ. ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡ ನಂತರ ಟೀಕೆಗಳು ಎದುರಾಗಿದ್ದುದರಿಂದ ಕೊಹ್ಲಿ ಸಂಭ್ರಮದಲ್ಲಿ ‘ಉತ್ತರ’ದ ಕೆಚ್ಚು ಇತ್ತು.

ಪಾಂಡ್ಯ  ಔಟಾದ ನಂತರ ಜೊತೆಯಾದ ಕೊಹ್ಲಿ ಮತ್ತು ಅಶ್ವಿನ್‌ ಇನಿಂಗ್ಸ್‌ಗೆ ಮಹತ್ವದ ತಿರುವು ನೀಡಿದರು. ರಬಾಡ ಎಸೆತವನ್ನು ಬೌಂಡರಿಗೆ ಅಟ್ಟುವುದರೊಂದಿಗೆ ಖಾತೆ ತೆರೆದ ಅಶ್ವಿನ್‌ ಮುಂದಿನ ಓವರ್‌ನಲ್ಲಿ ಗಿಡಿ ಎಸೆತವನ್ನೂ ಬೌಂಡರಿಗೆ ಕಳುಹಿಸಿದರು. ರಬಾಡ ಹಾಕಿದ ಇನಿಂಗ್ಸ್‌ನ 70ನೇ ಓವರ್‌ನಲ್ಲಿ ಮೂರು ಬೌಂಡರಿ ಗಳಿಸಿ ರನ್‌ ಗಳಿಕೆಗೆ ವೇಗ ತುಂಬಿದರು. ಏಳು ಬೌಂಡರಿಗಳೊಂದಿಗೆ 38 ರನ್‌ ಗಳಿಸಿದ ಅವರು ಪ್ಲೆಸಿ ಪಡೆದ ಅತ್ಯುತ್ತಮ ಕ್ಯಾಚ್‌ಗೆ ಬಲಿಯಾದರು.

ಮಹಮ್ಮದ್ ಶಮಿಗೆ ಕ್ರೀಸ್‌ನಲ್ಲಿ ತಳವೂರಲು ಆಗಲಿಲ್ಲ. ಆದರೆ ಅವರ ನಂತರ ಬಂದ ಇಶಾಂತ್ ಶರ್ಮಾ ನಾಯಕನಿಗೆ ಉತ್ತಮ ಬೆಂಬಲ ನೀಡಿದರು. ಮಾರ್ಕೆಲ್ ಹಾಕಿದ 89ನೇ ಓವರ್‌ನ ಐದನೇ ಎಸೆತವನ್ನು ಡ್ರಾಪ್ ಮಾಡಿ ಬೌಂಡರಿಗೆ ಅಟ್ಟಿದ ಕೊಹ್ಲಿ 150 ರನ್‌ಗಳನ್ನು ಪೂರೈಸಿದರು. ನಂತರ ಕುತ್ತಿಗೆಯಲ್ಲಿ ನೇತಾಡುತ್ತಿದ್ದ ಮದುವೆಯ ಉಂಗುರಕ್ಕೆ ಮುತ್ತು ನೀಡಿದರು.

ಭೋಜನ ವಿರಾಮದ ನಂತರದ ಎಂಟನೇ ಓವರ್‌ನಲ್ಲಿ ವೇಗವಾಗಿ ರನ್ ಗಳಿಸುವ ಭರದಲ್ಲಿ ಮಾರ್ನೆ ಮಾರ್ಕೆಲ್ ಅವರನ್ನು ಬೌಂಡರಿಯಾಚೆ ಅಟ್ಟುವ ಶ್ರಮ ವಿಫಲವಾಯಿತು. ಲಾಂಗ್ಆನ್‌ನಲ್ಲಿದ್ದ ಡಿವಿಲಿಯರ್ಸ್ ಸುಲಭ ಕ್ಯಾಚ್ ಪಡೆದು ಭಾರತದ ಇನಿಂಗ್ಸ್‌ಗೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT