ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳಿವಳಿಕೆ ಕೊರತೆ ಮತ್ತು ಪರಿಣಾಮ

Last Updated 15 ಜನವರಿ 2018, 19:31 IST
ಅಕ್ಷರ ಗಾತ್ರ

ಪ್ರಚಲಿತ ವಿದ್ಯಮಾನಗಳು ಹಾಗೂ ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಜನಸಾಮಾನ್ಯರು ಹೊಂದಿರುವ ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸುವಲ್ಲಿ, ರಾಜಕೀಯ ಚರ್ಚೆಗಳಲ್ಲಿ ಬಳಕೆಯಾಗುವ ಪದಗಳು ಮಹತ್ವದ ಪಾತ್ರ ವಹಿಸಿವೆ. ಪ್ರೀತಿ ಮತ್ತು ಸಹೋದರ ಭಾವದ ಸಮಾಜವನ್ನು ಕಟ್ಟಲು ಬಳಸಬಹುದಾದ ಪದಗಳನ್ನೇ ಬಳಸಿಕೊಂಡು ನಮ್ಮದೇ ಸಮಾಜದ ಕೆಲವರ ವಿರುದ್ಧ ಜನರನ್ನು ಎತ್ತಿಕಟ್ಟಲು, ದ್ವೇಷ ಮೂಡಿಸಲು ಕೂಡ ಸಾಧ್ಯವಿದೆ.

ಹಾಗಾಗಿ, ಅಧಿಕಾರದಲ್ಲಿ ಇರುವವರು ವಿವೇಚನೆ ಮತ್ತು ಎಚ್ಚರದಿಂದ ಮಾತನಾಡಬೇಕಾದ ಜವಾಬ್ದಾರಿ ಹೊತ್ತಿದ್ದಾರೆ. ರಾಜಕೀಯವಾಗಿ ಬಹಳ ಚರ್ಚೆಯಲ್ಲಿರುವ ‘ಹಿಂದುತ್ವ’ ಪದದ ಬಗ್ಗೆ ಈಚೆಗೆ ಟ್ವೀಟ್‌ ಮಾಡಿ, ಅದರ ಬಗ್ಗೆ ಹೇಳಿಕೆ ನೀಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಅಜ್ಞಾನದ ಉರಿಗೆ ತುಪ್ಪ ಸುರಿದಿದ್ದಾರೆ.

ತಮ್ಮಿಂದ ಅಗಿಯಲು ಸಾಧ್ಯವಾಗದಷ್ಟು ದೊಡ್ಡದಾದ ರಾಜಕೀಯ ತುತ್ತನ್ನು ಪರಮೇಶ್ವರ್ ಅವರು ಬಾಯಿಗೆ ಹಾಕಿಕೊಂಡಿರುವುದು ಇದೇ ಮೊದಲೇನೂ ಅಲ್ಲ. 2015ರಲ್ಲಿ ಬೆಂಗಳೂರಿನಲ್ಲಿ ಟೆನಿಸ್ ಆಟಗಾರ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಪರಮೇಶ್ವರ್, ‘ಆಕೆ ರಾತ್ರಿ 9.30ರ ವೇಳೆಯಲ್ಲಿ ಟೆನಿಸ್ ಆಡುವಂಥದ್ದು ಏನಿತ್ತು’ ಎಂದು ಪ್ರಶ್ನಿಸಿ
ದ್ದರು. ಪರಮೇಶ್ವರ್ ಆಗ ಗೃಹ ಸಚಿವರಾಗಿದ್ದರು, ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕಾಗಿದ್ದುದು ಪರಮೇಶ್ವರ್ ಹೊಣೆಯಾಗಿತ್ತು. ಆದರೆ ಆಗ ಅವರು ಮಾತನಾಡಿದ ರೀತಿ ಸಂತ್ರಸ್ತರನ್ನೇ ದೂಷಿಸುವ, ಅಸೂಕ್ಷ್ಮ ವರ್ತನೆಗೆ ಸ್ಪಷ್ಟ ನಿದರ್ಶನವಾಗಿತ್ತು.

ಆದಿವಾಸಿಗಳನ್ನು ತಲೆಮಾರುಗಳಿಂದಲೂ ಸರಿಯಾಗಿ ನೋಡಿಕೊಂಡಿರದ ಎಸ್ಟೇಟ್ ಮಾಲೀಕರ ಕ್ರಮ ವಿರೋಧಿಸಿ, ಕೂಲಿ ಕಾರ್ಮಿಕರಿಗೆ ಕನಿಷ್ಠ ಕೂಲಿಗಾಗಿ ಒತ್ತಾಯಿಸಿ, ಆದಿವಾಸಿಗಳ ಹಕ್ಕುಗಳಿಗಾಗಿ ಒತ್ತಾಯಿಸಿ ನಾವು 2016ರ ಡಿಸೆಂಬರ್‌ನಲ್ಲಿ ಪ್ರತಿಭಟನೆ ನಡೆಸಿದಾಗ ಪರಮೇಶ್ವರ್ ‘ಈ ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ನೋಟು ರದ್ದತಿ ಕಾರಣ’ ಎಂದಿದ್ದರು. ಮನೆಯಿಲ್ಲದವರಿಗೆ, ದುರ್ಬಲರಿಗೆ ನ್ಯಾಯ ಕೊಡಿಸಲು ಮುಂದಾಗುವ ಬದಲು ಪರಮೇಶ್ವರ್ ಅವರು ಬಿಜೆಪಿಯ ಮೇಲೆ ಗೂಬೆ ಕೂರಿಸಲು, ಶ್ರೀಮಂತ ಪ್ಲಾಂಟರ್‌ಗಳನ್ನು ಬೆಂಬಲಿಸಲು ಯತ್ನಿಸಿದ್ದರು.

ಈಗ ಅವರು ಆಲೋಚನಾರಹಿತ ಹೇಳಿಕೆಗಳ ಸರಣಿಯನ್ನು ಒಂದು ಟ್ವೀಟ್ ಮೂಲಕ ಮುಂದುವರಿಸಿದ್ದಾರೆ: ‘ಕಾಂಗ್ರೆಸ್ ಪಕ್ಷವು ತನ್ನನ್ನು ಮೃದು ಹಿಂದುತ್ವ ಪರ ಎಂದು ತೋರಿಸಿಕೊಳ್ಳಲು ಯತ್ನಿಸುತ್ತಿದೆಯೇ ಎಂದು ಕಳೆದ ಕೆಲವು ವಾರಗಳಿಂದ ಮಾಧ್ಯಮ ಸ್ನೇಹಿತರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ‘ಕಡು ಹಿಂದುತ್ವ’ ಅಂದರೇನು? ಅದು ಕೋಮುವಾದಿಯೇ? ಮೃದು ಹಿಂದುತ್ವ ಅಂದರೇನು? ಎಲ್ಲರನ್ನೂ ಬೇಷರತ್ತಾಗಿ ಒಪ್ಪಿಕೊಳ್ಳುವುದೇ?’

ನಂತರ ಅವರು ಎಲ್ಲರನ್ನೂ ಒಳಗೊಳ್ಳುವ ಹಿಂದುತ್ವದಲ್ಲಿ ಕಾಂಗ್ರೆಸ್‌ಗೆ ನಂಬಿಕೆ ಇದೆ ಎಂದಿದ್ದರು.

ಪರಮೇಶ್ವರ್, ‘ಹಿಂದುತ್ವ’ದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ. ಈ ಪದವನ್ನು ಅವರು ಹಿಂದೂ ಧರ್ಮಕ್ಕೆ ಪರ್ಯಾಯವಾಗಿಯೂ ಬಳಸುತ್ತಿದ್ದಾರೆ. ಆದರೆ, ಇವೆರಡೂ ಒಂದಕ್ಕೊಂದು ವಿರುದ್ಧವಾದ ಅರ್ಥ ಕಲ್ಪಿಸುತ್ತವೆಯೇ ವಿನಾ, ಒಂದಕ್ಕೊಂದು ಪರ್ಯಾಯ ಪದಗಳಂತೂ ಅಲ್ಲ.

ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕೆಲವರಿಂದ ಬಿಂಬಿತವಾಗಿರುವ, ರಾಜಕಾರಣದಲ್ಲಿ ದಶಕಗಳ ಅನುಭವ ಹೊಂದಿರುವ ವ್ಯಕ್ತಿಯೊಬ್ಬರು ಪ್ರಮುಖ ರಾಜಕೀಯ ಪದವೊಂದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದಿಲ್ಲದಿರುವಾಗ, ‘ಹಿಂದುತ್ವ’ ಮತ್ತು ‘ಹಿಂದೂ’ ಪದಗಳ ನಡುವಿನ ವ್ಯತ್ಯಾಸ ಜನ
ಸಾಮಾನ್ಯರಿಗೆ ಗೊತ್ತಿಲ್ಲದಿರುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ ತಿಳಿವಳಿಕೆಯ ಈ ಕೊರತೆಯು ಹಿಂದುತ್ವದ ಅಪಾಯಕಾರಿ ಪರಿಣಾಮಗಳಿಗೆ ಸಮಾಜ ನಿಧಾನವಾಗಿ ತುತ್ತಾಗಲು ಅವಕಾಶ ಕಲ್ಪಿಸುತ್ತದೆ.

ಹಿಂದುತ್ವ ಅಂದರೆ ಏನು?: ಹಿಂದುತ್ವ ಎಂಬ ರಾಜಕೀಯ ಸಿದ್ಧಾಂತವನ್ನು ಮೊದಲಿಗೆ ವಿನಾಯಕ ದಾಮೋದರ ಸಾವರ್ಕರ್ ಅವರು 1923ರಲ್ಲಿ ಬಳಸಿದರು. ಬ್ರಾಹ್ಮಣ ನಂಬಿಕೆಗಳನ್ನು ಆಧರಿಸಿದ, ಮತಾಂಧವಾದ ಏಕರೂಪಿ ಅಸ್ಮಿತೆಯ ಆಧಾರದಲ್ಲಿ ಅಸಾಂವಿಧಾನಿಕ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ ‘ಹಿಂದುತ್ವ’ ಸಿದ್ಧಾಂತ. ಈ ಸಿದ್ಧಾಂತವು ವಸಾಹತುಶಾಹಿ ಬ್ರಿಟಿಷರ ವಿರುದ್ಧವೂ ಹೋರಾಟ ನಡೆಸಿಲ್ಲ, ಸಮಾಜೋ-ಆರ್ಥಿಕ ಅಸಮಾನತೆಗಳ ವಿರುದ್ಧವೂ ಹೋರಾಟ ನಡೆಸಿಲ್ಲ. ಆದರೆ ಇದು ಧಾರ್ಮಿಕ ಅಲ್ಪಸಂಖ್ಯಾತರನ್ನು, ದಲಿತರನ್ನು, ಪ್ರಗತಿಪರರನ್ನು ಮತ್ತು ಇತರ ಅಂಚಿನ ಸಮುದಾಯಗಳನ್ನು ಕೆಟ್ಟವರಂತೆ ಚಿತ್ರಿಸುತ್ತದೆ, ಅವರ ಭಾರತೀಯತೆಯನ್ನು ಕೀಳಾಗಿ ಕಾಣುತ್ತದೆ.

ಸಾವರ್ಕರ್‌ ನಂತರ, ಹಿಂದುತ್ವದ ಚಿಂತಕರೆಂದು ಗುರುತಿಸಿಕೊಂಡಿರುವ ಎಂ.ಎಸ್. ಗೊಳ್ವಲಕರ್‌ ಅವರು (ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೆಯ ಸರಸಂಘಚಾಲಕ) ಹಿಟ್ಲರನ ‘ಜನಾಂಗೀಯ ಶುದ್ಧತೆ’ಯ ಪರಿಕಲ್ಪನೆಯಿಂದ ಕೆಲವು ಅಂಶಗಳನ್ನು ಪಡೆದುಕೊಂಡರು. ನಾಜಿಗಳು 1930ರಲ್ಲಿ ನಡೆಸಿದ ಧಾರ್ಮಿಕ ಅಲ್ಪಸಂಖ್ಯಾತರ ಮಾರಣಹೋಮವನ್ನು ಕಂಡು ‘ಹಿಂದುಸ್ತಾನದಲ್ಲಿರುವ ನಾವು ನೋಡಿ ಕಲಿತುಕೊಳ್ಳಬೇಕಾದ, ಪ್ರಯೋಜನ ಪಡೆಯಬೇಕಾದ ಉತ್ತಮ ಪಾಠ’ ಎಂದು ಹೇಳಿದರು. ಗೊಳ್ವಲಕರ್‌ ಅವರನ್ನು ವಿದ್ವಾಂಸರೊಬ್ಬರು ‘ದ್ವೇಷದ ಗುರು’ ಎಂದು ಕರೆದಿದ್ದಾರೆ. ಗೊಳ್ವಲಕರ್‌ ಅವರು ಪೂರ್ವಗ್ರಹಗಳಿಂದಾಗಿ ಮತ್ತು ಇತಿಹಾಸದ ಬಗ್ಗೆ ನಿಖರವಾದ ಮಾಹಿತಿ ಇಲ್ಲದೆ, ‘ಈ ನಾಡಿನಲ್ಲಿ ಹಿಂದೂಗಳು ಮಾಲೀಕರು, ಪಾರ್ಸಿ ಮತ್ತು ಯಹೂದಿಗಳು ಅತಿಥಿಗಳು, ಮುಸ್ಲಿಮರು ಮತ್ತು ಕ್ರೈಸ್ತರು ಡಕಾಯಿತರು’ ಎಂದು ಬರೆದಿದ್ದಾರೆ.

ಹಾಗಾಗಿ, ‘ಹಿಂದುತ್ವ’ ಎಂಬುದು ಸಂಸ್ಕೃತ ಮತ್ತು ಹಿಂದಿ ಆಧಾರಿತ ಉತ್ತರ ಭಾರತೀಯ ಮೂಲವನ್ನು ಹೊಂದಿರುವಂಥದ್ದು. ಅದು ಎಲ್ಲರನ್ನೂ ಒಳಗೊಳ್ಳುವಂಥದ್ದಲ್ಲ. ಬಹುಮುಖಿ, ಬಹುತ್ವ ಪೋಷಕ, ಪರಿವರ್ತನೆ ಕಾಣಬಲ್ಲ, ಎಲ್ಲರನ್ನೂ ಒಳಗೊಳ್ಳಬಲ್ಲ ಮತ್ತು ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಹಿಂದೂ ಧರ್ಮದ ತಾತ್ವಿಕತೆಗೆ ಕೂಡ ‘ಹಿಂದುತ್ವ’ ವಿರುದ್ಧವಾಗಿದೆ. ಹಿಂದೂ ಧರ್ಮವು ನಮ್ಮ ದೇಶವನ್ನು ಸಹಿಷ್ಣುತೆಗೊಂದು ಮಾದರಿಯಾದ ಸಮಾಜವನ್ನಾಗಿ ರೂಪಿಸಿದ್ದರೆ, ಹಿಂದುತ್ವವು ಅಸಹಿಷ್ಣುತೆಯನ್ನು ಸಾಂಸ್ಥಿಕಗೊಳಿಸಿ, ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಮರ್ಯಾದೆಗೆ ಭಂಗ ತಂದಿದೆ.

ಮೃದು, ಕಡು ಸೇರಿದಂತೆ ಯಾವುದೇ ಬಗೆಯ ಹಿಂದುತ್ವದ ಮೇಲಿನ ನಂಬಿಕೆಯು ನಮ್ಮ ದೇಶದ ಪ್ರಜಾತಾಂತ್ರಿಕ ಮೌಲ್ಯಗಳಿಗೆ ವಿರುದ್ಧ ಎಂಬುದು ಪರಮೇಶ್ವರ್ ಎಂಬ ವೃತ್ತಿಪರ ರಾಜಕಾರಣಿಗೆ ಅರ್ಥ ಆಗಬೇಕು. ಮುಖ್ಯವಾಹಿನಿಯ ರಾಜಕೀಯದಲ್ಲಿ ಇರುವವರು, ಮುಖ್ಯವಾಹಿನಿಯ ರಾಜಕೀಯದಲ್ಲಿ ಇಲ್ಲದಿರುವವರು ಪಾರಿಭಾಷಿಕ ಪದಗಳನ್ನು ಅರ್ಥ ಮಾಡಿಕೊಳ್ಳುವುದು ಒಳಿತು. ಆಗ ನಮಗೆ ಗೋಡ್ಸೆಯ ಹಿಂದುತ್ವವನ್ನು ಕಳಚಿ, ಗಾಂಧೀಜಿಯ ಹಿಂದೂ ಧರ್ಮವನ್ನು ಪುನರ್‌ ನಿರ್ಮಿಸುವ ಪ್ರಕ್ರಿಯೆ ಆರಂಭಿಸಲು ಸಾಧ್ಯವಾಗುತ್ತದೆ.

-ಚೇತನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT