ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಎಲ್‌ಆರ್‌ ನೀಡಲು ಆನ್‌ಲೈನ್‌ ಪರೀಕ್ಷೆ

Last Updated 16 ಜನವರಿ 2018, 7:10 IST
ಅಕ್ಷರ ಗಾತ್ರ

ರಾಯಚೂರು: ಕಲಿಕಾ ಚಾಲನಾ ಅನುಜ್ಞಾ ಪತ್ರ (ಎಲ್‌ಎಲ್‌ಆರ್‌) ನೀಡುವುದಕ್ಕೆ ಇನ್ನು ಮುಂದೆ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕರಿಸಿ, ಆನ್‌ಲೈನ್‌ನಲ್ಲೆ ಪರೀಕ್ಷೆ ಬರೆಯುವ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಯಚೂರು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯಲ್ಲಿ ತಯಾರಿ ನಡೆದಿದೆ.

ಫಾರ್ಮ್‌ ನಂ–2 ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕು. ಪರೀಕ್ಷಾ ಶುಲ್ಕ ವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ಆನಂತರ, ಪರೀಕ್ಷೆಗೆ ಹಾಜರಾಗುವ ದಿನಾಂಕ ಹಾಗೂ ಸಮಯವು ಸಿಗುತ್ತದೆ. ನಿಗದಿಯಾದ ದಿನದಂದು ಆರ್‌ಟಿಒ ಕಚೇರಿಗೆ ಹಾಜರಾಗಿ ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯಬೇಕು. ಪರೀಕ್ಷೆ ಬರೆಯುವುದಕ್ಕಾಗಿ ಪ್ರತ್ಯೇಕ ಕೋಣೆಯೊಂದನ್ನು ಸಜ್ಜುಗೊಳಿಸ ಲಾಗುತ್ತಿದ್ದು, ಅಲ್ಲಿ 10 ಕಂಪ್ಯೂಟರ್‌ ಸಿಸ್ಟಮ್‌ ಅಳವಡಿಸಲಾಗುವುದು. ಏಕಕಾಲಕ್ಕೆ 10 ಅರ್ಜಿದಾರರು ಪರೀಕ್ಷೆ ಬರೆಯಬಹುದು.

ಹೊಸ ವ್ಯವಸ್ಥೆ ಜಾರಿಯ ನಂತರ ಎಲ್‌ಎಲ್‌ಆರ್‌ ಪಡೆಯುವುದಕ್ಕೆ ಮೌಖಿಕ ಅಥವಾ ಲಿಖಿತ ಪರೀಕ್ಷೆ ಇರುವುದಿಲ್ಲ. ಆನ್‌ಲೈನ್‌ನಲ್ಲಿ ಪರೀಕ್ಷೆ ಉತ್ತೀರ್ಣರಾದ ತಕ್ಷಣವೇ ಎಲ್‌ಎಲ್‌ಆರ್‌ ಪತ್ರ ಮುದ್ರಣ ವಾಗುತ್ತದೆ. ಸಂಚಾರ ಚಿಹ್ನೆಗಳು ಮತ್ತು ಸಿಗ್ನಲ್‌ಗಳು, ಮೋಟಾರು ವಾಹನ ಕಾಯ್ದೆ 1989ರ ಅಧಿನಿಯಮ 118ರಲ್ಲಿ ನಮೂದಿಸಿರುವ ಸಂಚಾರಿ ನಿಯಂತ್ರಣ ನಿಯಮಗಳ ಕುರಿತಾಗಿ ಬಹು ಆಯ್ಕೆಯ ಪ್ರಶ್ನೆಗಳು ಆನ್‌ಲೈನ್‌ ಪರೀಕ್ಷೆಯಲ್ಲಿ ಇರಲಿವೆ. ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸುವುದರಿಂದ ನಕಲು ಮಾಡು ವುದು, ಇನ್ನೊಬ್ಬರಿಂದ ಉತ್ತರ ಕೇಳಿ ಬರೆಯುವುದು ಸಾಧ್ಯವಾಗುವುದಿಲ್ಲ.

ವಾಹನ ಅಪಘಾತಕ್ಕೆ ಈಡಾಗಿದ್ದಾಗ ಅದರಿಂದ ಸಂಭವಿಸುವ ಪ್ರಾಣಾಪಾಯ ಹಾಗೂ ಗಾಯಗೊಳ್ಳುವಿಕೆ ಅಥವಾ ರಸ್ತೆ ಅಪಘಾತದ ಸಮಯದಲ್ಲಿ ವಾಹನ ಚಾಲಕ ನಿರ್ವಹಿಸಬೇಕಾದ ಕರ್ತವ್ಯಗಳು. ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳಲ್ಲಿ ವಾಹನ ಚಲಿಸುವಾಗ ಚಾಲಕರು ಕೈಗೊಳ್ಳಬೇಕಾದ ಪೂರ್ವ ಜಾಗರೂಕತೆ ಬಗ್ಗೆ, ವಾಹನ ಚಾಲನೆ ಸಮಯದಲ್ಲಿ ವಾಹನದಲ್ಲಿ ಕಡ್ಡಾಯ ವಾಗಿ ಇಡಬೇಕಾಗಿರುವ ದಾಖಲೆಗಳ ಬಗ್ಗೆಯೂ ಪರೀಕ್ಷೆಗೆ ಹಾಜರಾಗುವವರು ತಿಳಿದುಕೊಂಡಿರಬೇಕು.

ಪರೀಕ್ಷೆಯಲ್ಲಿ ಪಾಸಾದವರಿಗೆ ನೀಡುವ ಕಲಿಕಾ ಚಾಲನಾ ಪತ್ರದ ಅವಧಿ ಆರು ತಿಂಗಳು ಮಾತ್ರ. ಅದನ್ನು ಮುಂದಿನ ಅವಧಿಗೆ ನವೀಕರಿಸಲು ಆಗುವುದಿಲ್ಲ ಹಾಗೂ ಆರು ತಿಂಗಳು ಮೀರಿದರೆ ಹೊಸದಾಗಿ ಎಲ್‌ಎಲ್‌ಆರ್‌ ಪಡೆಯಬೇಕು.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು

ವಯಸ್ಸಿನ ಪ್ರಮಾಣ ಪತ್ರ, ವಿಳಾಸ ಪುರಾವೆ, ಪಿಪಿ ಆಕಾರದ 3 ಭಾವಚಿತ್ರಗಳು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಮುದ್ರಿತ ಪ್ರತಿ, ದೇಹದಾರ್ಡ್ಯತೆ ಪ್ರಮಾಣಪತ್ರ (ಫಾರಂ–1)ಗಳನ್ನು ಎಲ್‌ಎಲ್‌ಆರ್‌ಗೆ ಅರ್ಜಿ ಸಲ್ಲಿಸುವವರು ಪಡೆದುಕೊಳ್ಳಬೇಕು.

* * 

ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಆನ್‌ಲೈನ್‌ ಪರೀಕ್ಷಾ ಪದ್ಧತಿ ಜಾರಿ ಇದೆ. ಉಳಿದ ಜಿಲ್ಲೆಗಳಲ್ಲೂ ಹೊಸ ಪದ್ಧತಿ ಶೀಘ್ರವೇ ಜಾರಿಗೆ ಬರಲಿದೆ.
ದಾಮೋದರ್‌ ಪ್ರಭಾರ ಪ್ರಾದೇಶಿಕ ಸಂಚಾರ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT