ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಸಡಗರದಲ್ಲಿ ಮಿಂದೆದ್ದ ಜನರು

Last Updated 16 ಜನವರಿ 2018, 7:16 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ದೇಗುಲಗಳಿಗೆ ತೆರಳಿದ ಜನರು ಪೂಜೆ ಸಲ್ಲಿಸಿದರು. ಸಂಕ್ರಾಂತಿ ಸಂಭ್ರಮದ ಹಿನ್ನೆಲೆಯಲ್ಲಿ ಭಕ್ತರಿಗೆ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ದೇವರಿಗೆ ಹೂವಿನ ಅಲಂಕಾರ, ಪ್ರಸಾದ ವಿನಿಯೋಗ, ಎಳ್ಳುಬೆಲ್ಲ ಹಂಚಿಕೆಗೆ ಸಿದ್ಧತೆಗಳು ಭರದಿಂದ ನಡೆದವು.

ವೆಂಕಟೇಶ ನಗರದ ಬಸವಕೇಂದ್ರ, ಹರಕೆರೆ ಶಿವಾಲಯ, ರವೀಂದ್ರನಗರ ಪ್ರಸನ್ನ ಗಣಪತಿ ದೇವಸ್ಥಾನ, ವಿನೋಬನಗರ ಶಿವಾಲಯ, ಕಾಶಿ ವಿಶ್ವನಾಥ ದೇವಸ್ಥಾನ, ಗುಡ್ಡೆಕಲ್ ದೇವಸ್ಥಾನ, ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನ, ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನ ಸೇರಿ ವಿವಿಧ ದೇವಾಲಯಗಳಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಮುಂಜಾನೆ 5ರಿಂದಲೇ ನೂರಾರು ಭಕ್ತರು ಹಾಗೂ ಮಹಿಳೆಯರು ದೇವಾಲಯಗಳಿಗೆ ಬಂದು ದೇವರ ದರ್ಶನ ಪಡೆದರು.

ನಗರದ ಬಹುತೇಕ ಭಾಗಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿತ್ತು. ತರಕಾರಿ, ಹೂ, ಹಣ್ಣು ಮಾರುಕಟ್ಟೆ ಪ್ರದೇಶಗಳು ಜನಜಂಗುಳಿಯಿಂದ ಗಿಜಿಗುಡುತ್ತಿದ್ದವು. ಎಳ್ಳು, ಬೆಲ್ಲ, ಕಬ್ಬಿನ ತುಂಡು, ಸಕ್ಕರೆ ಅಚ್ಚುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲರೂ ಹೊಸ ಬಟ್ಟೆಯನ್ನುಟ್ಟು ಸಂಭ್ರಮಿಸಿದರು. ಹಬ್ಬಕ್ಕಾಗಿ ಮನೆಮನೆಗಳಲ್ಲಿ ಸಿಹಿ ತಿಂಡಿ ತಯಾರಿಸಲಾಗಿತ್ತು. ಹೊಸಬಟ್ಟೆ ಧರಿಸಿದ್ದ ಹೆಣ್ಣು ಮಕ್ಕಳು ಮನೆಗಳಿಗೆ ತೆರಳಿ ಎಳ್ಳು, ಬೆಲ್ಲ, ಕಬ್ಬು ವಿತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ಪ್ರಯುಕ್ತ ಶಾಲೆಗಳಿಗೆ ರಜೆ ಇದ್ದ ಕಾರಣ ಪ್ರಮುಖ ಪಾರ್ಕ್, ಮೈದಾನಗಳು ಮಕ್ಕಳಿಂದ ತುಂಬಿಹೋಗಿದ್ದವು. ಪೋಷಕರ ಜತೆ ಉದ್ಯಾನಕ್ಕೆ ಬಂದಿದ್ದ ಮಕ್ಕಳು ಆಟಗಳನ್ನು ಆಡುತ್ತಾ ಸಂಭ್ರಮಿಸಿದರು. ರಜೆಯ ಹಿನ್ನೆಲೆಯಲ್ಲಿ ಅನೇಕರು ಚಲನಚಿತ್ರ ಮಂದಿರಗಳತ್ತ ದೌಡಾಯಿಸಿದರು. ಇದರ ಜತೆಗೆ ಸೋಮವಾರವೇ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಇದ್ದ ಕಾರಣ ಸಂಭ್ರಮ ದುಪ್ಪಟ್ಟಾಗಿದೆ.

ಕೆಲವರು ಕುಟುಂಬ ಸಮೇತ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು. ಒಂದೆಡೆ ಕೂತು, ಪರಸ್ಪರ ಬುತ್ತಿಯನ್ನು ಹಂಚಿಕೊಂಡು ಹಬ್ಬದ ಊಟ ಮಾಡಿದರು. ಸಂಕ್ರಾತಿಯ ಶುಭಾಶಯ ವಿನಿಮಯ ಮಾಡಿಕೊಂಡರು. ಅಲ್ಲದೆ ಸಂಕ್ರಾಂತಿಯು ಗೋವುಗಳ ಹಬ್ಬವೂ ಆಗಿರುವುದರಿಂದ ಗ್ರಾಮೀಣ ಜನರು ಗೋವುಗಳನ್ನು ಸಿಂಗರಿಸಿ, ಪೂಜಿಸಲು ಅಗತ್ಯ ವಸ್ತುಗಳ ಖರೀದಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT