ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದು ಇಲ್ಲದಂತಾದ ₹ 6 ಕೋಟಿ ಮೊತ್ತದ ಸ್ಕೈ ವಾಕ್‌

Last Updated 16 ಜನವರಿ 2018, 7:19 IST
ಅಕ್ಷರ ಗಾತ್ರ

ತುಮಕೂರು: ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವತಿಯಿಂದ ₹ 5.98 ಕೋಟಿ ವೆಚ್ಚದಲ್ಲಿ ನಗರದಲ್ಲಿ ನಿರ್ಮಾಣ ಮಾಡಲಾಗಿರುವ ಎರಡು ಪಾದಚಾರಿ ಮೇಲ್ಸೇತುವೆ(ಸ್ಕೈವಾಕ್) ಸಾರ್ವಜನಿಕರಿಗೆ ಇದ್ದೂ ಇಲ್ಲದಂತಾಗಿವೆ.

ನಗರದ ತುಮಕೂರು ವಿಶ್ವವಿದ್ಯಾಲಯ ಮುಂಭಾಗ ಮತ್ತು ಟೌನ್ ಹಾಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿ (ಬಿ.ಎಚ್. ರಸ್ತೆ) 206 ರಲ್ಲಿ ಎರಡು ಕಡೆ ನಿರ್ಮಾಣ ಮಾಡಲಾಗಿದೆ.  ಸಾರ್ವಜನಿಕರು ಮಾತ್ರ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ಬೆಂಗಳೂರಿಗೆ ಪರ್ಯಾಯ ನಗರವಾಗಿ ಗುರುತಿಸಿಕೊಳ್ಳುತ್ತಿರುವ ತುಮಕೂರು ನಗರಕ್ಕೆ ಹೆಚ್ಚಿನ ಮೂಲಸೌಕರ್ಯಗಳ ಅವಶ್ಯಕತೆ ಇದೆ. ಈ ಉದ್ದೇಶದಿಂದಲೇ ಎರಡು ಕಡೆ ಸ್ಕೈ ವಾಕ್ ನಿರ್ಮಾಣದ ಅಗತ್ಯತೆ ಇದೆ. ರಸ್ತೆ ದಾಟಲು ಪರದಾಡುವ ಸಾರ್ವಜನಿಕರಿಗೂ ಇದರಿಂದ ಸ್ವಲ್ಪ ನೆಮ್ಮದಿ ಸಿಗಲಿದೆ ಎಂಬ ಆಶಯದಿಂದ ಸ್ಕೈ ವಾಕ್ ನಿರ್ಮಾಣ ಮಾಡಲಾಯಿತು.

ಹೀಗೆ ಸಾರ್ವಜನಿಕರ ಹಿತಾಸಕ್ತಿ ಉದ್ದೇಶದಿಂದ ನಿರ್ಮಾಣ ಮಾಡಿದರೂ ಸಾರ್ವಜನಿಕರು ಅವುಗಳ ಬಳಕೆಗೆ ಉತ್ಸುಕತೆ ತೋರುತ್ತಿಲ್ಲ. ಈ ಜಾಘದಲ್ಲಿ ಇವುಗಳನ್ನು ಯಾಕಾದರೂ ನಿರ್ಮಾಣ ಮಾಡಲಾಯಿತು ಎಂದು ಸಾರ್ವಜನಿಕರೇ ಪ್ರಶ್ನೆ ಮಾಡುತ್ತಿದ್ದಾರೆ. ಸುಮ್ಮನೆ ₹ 6 ಕೋಟಿ ಹಣ ವ್ಯರ್ಥ ಮಾಡಿದರು ಎಂಬ ಆಕ್ರೋಶವೂ ವ್ಯಕ್ತವಾಗುತ್ತಿದೆ.

‘ಎರಡೂ ಸ್ಕೈವಾಕ್‌ಗಳು ರಾಜಕಾರಣಿಗಳಿಗೆ, ಸಂಘ ಸಂಸ್ಥೆಯವರಿಗೆ, ಅಂಗಡಿ ಮುಂಗಟ್ಟಿನವರಿಗೆ ಫ್ಲೆಕ್ಸ್ ಹಾಕಿಕೊಳ್ಳಲು ಪುಕ್ಕಟೆಯಾಗಿ ವ್ಯವಸ್ಥೆ ಮಾಡಿಕೊಟ್ಟಂತಾಗಿದೆ. ಒಂದೆಡೆ ತುಮಕೂರು ಸ್ಮಾರ್ಟ್ ಸಿಟಿಯಾಗುತ್ತಿದೆ. ಮತ್ತೊಂದೆಡೆ ಎಷ್ಟು ಅಂದಗೆಡುತ್ತಿದೆ ಎಂಬುದನ್ನು ಹೊರಗಿನವರಿಗೆ ಈ ಎರಡೂ ಸ್ಕೈವಾಕ್‌ಗಳ ಮೇಲೆ ಹಾಕಿರುವ ಫ್ಲೆಕ್ಸ್, ಹಚ್ಚಿರುವ ಭಿತ್ತಿ ಚಿತ್ರಗಳೇ ಹೇಳುತ್ತವೆ. ನಗರ ಸೌಂದರ್ಯೀಕರಣ, ಸ್ವಚ್ಛತೆ, ಸಂಚಾರ ಸುರಕ್ಷತೆಯ ಬಗ್ಗೆ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಗಮನಹರಿಸಿಲ್ಲ’ ಎಂದು ಸಾಮಾಜಿಕ  ಕಾರ್ಯಕರ್ತ ಇಮ್ರಾನ್ ಪಾಷಾ ಸಮಸ್ಯೆ ವಿವರಿಸಿದರು.

ರಸ್ತೆ ವಿಭಜಕ ಹಾಕದಿರುವುದು ಕಾರಣ: ಸ್ಕೈವಾಕ್ ನಿರ್ಮಾಣ ಮಾಡಲು ತೋರಿದ ಆಸಕ್ತಿ ಸಾರ್ವಜನಿಕರು ಅವುಗಳನ್ನು ಹೇಗೆ ಬಳಸಿಕೊಳ್ಳುವಂತೆ ಮಾಡಬೇಕು ಎಂಬುದರ ಬಗ್ಗೆ ನಿರ್ಮಾಣ ಕಾಮಗಾರಿ ಕೈಗೊಂಡವರು, ಯೋಜನೆ ರೂಪಿಸಿದರು, ಜನಪ್ರತಿನಿಧಿಗಳಿಗಳಿಗೆ ಇಲ್ಲದೇ ಇದ್ದುದು ಇದಕ್ಕೆ ಕಾರಣ. ಹೀಗಾಗಿ ಜನರು ಅವುಗಳನ್ನು ಬಳಕೆ ಮಾಡುತ್ತಿಲ್ಲ’ ಎಂದು ಸಂಚಾರ ಠಾಣೆ ಪೊಲೀಸರೊಬ್ಬರು ’ಪ್ರಜಾವಾಣಿ’ಗೆ ತಿಳಿಸಿದರು.

‘ಬಿ.ಎಚ್. ರಸ್ತೆಯಲ್ಲಿ ರಸ್ತೆ ವಿಭಜಕದಲ್ಲಿ ಕಬ್ಬಿಣದ ಗ್ರಿಲ್ ಹಾಕಲಾಗಿದೆ. ಆದರೆ, ವಿಶ್ವವಿದ್ಯಾಲಯದ ಮುಂಭಾಗದಲ್ಲಿ ಸ್ಕೈವಾಕ್ ಇರುವ ಕಡೆ ಹಾಕಿಲ್ಲ. ಹೀಗಾಗಿ, ಪಾದಾಚಾರಿಗಳು ನಡೆದುಕೊಂಡೇ ಓಡಾಡುತ್ತಾರೆ. ಎಷ್ಟೇ ವಾಹನ ಸಂಚಾರ ದಟ್ಟಣೆ ಇರಲಿ. ಲೆಕ್ಕಿಸದೇ ಅವಸರದಲ್ಲಿ ದಾಟುತ್ತಾರೆಯೇ ಹೊರತು ಸ್ಕೈವಾಕ್ ಹತ್ತಿ ಇಳಿಯುವ ಪ್ರಯತ್ನ ಮಾಡುವುದಿಲ್ಲ’ಎಂದು ವಿದ್ಯಾರ್ಥಿ ರಾಕೇಶ್ ಸಮಸ್ಯೆ ವಿವರಿಸಿದರು.

’ಹಾಗೆಯೇ ಟೌನ್ ಹಾಲ್ ಹತ್ತಿರವೂ ಇದೇ ರೀತಿ ಆಗುತ್ತದೆ. ಇಲ್ಲಿ ಪಾದಾಚಾರಿಗಳು ರೈಲ್ವೆ ಸ್ಟೇಶನ್ ಕಡೆಯಿಂದ ಬಸ್ ನಿಲ್ದಾಣ ಕಡೆಗೆ ಮತ್ತು ಬಸ್ ನಿಲ್ದಾಣ ಕಡೆಯಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವವರೇ ಹೆಚ್ಚು ಸಂಚರಿಸುತ್ತಾರೆ. ಬಿ.ಜಿ.ಎಸ್ ವೃತ್ತದಲ್ಲಿ ದಂಡಿ ದಂಡಿಯಾಗಿ, ಗ್ರಂಥಾಲಯ ಆವರಣ ಮುಂಭಾಗದಿಂದ ನಡೆದುಕೊಂಡೇ ಜನರು ಹೋಗುತ್ತಾರೆ’ ಎಂದು ಹೇಳಿದರು.

ವಯಸ್ಸಾದವರು ಹತ್ತಿ ಇಳಿಯಲು ಕಷ್ಟ
‘ಸಾರ್ವಜನಿಕರ ಉಪಯೋಗಕ್ಕೆ ಕೋಟ್ಯಂತರ ಹಣ ಖರ್ಚು ಮಾಡಿ ಸ್ಕೈ ವಾಕ್ ನಿರ್ಮಾಣ ಮಾಡಲಾಗಿದೆ. ಯಾರೂ ಜನ ಬಳಕೆ ಮಾಡುತ್ತಿಲ್ಲ. ಯಾಕೆ ಹತ್ತಿ ಇಳಿಯಬೇಕ್ರಿ. ಹೀಗೆ ನಡೆದು ಹೋಗುತ್ತೇವೆ ಎಂದು ಸಾರ್ವಜನಿಕರು ಹೇಳುತ್ತಾರೆ. ಅಲ್ಲದೇ ಬಹಳಷ್ಟು ಎತ್ತರ ನಿರ್ಮಾಣ ಮಾಡಲಾಗಿದೆ. ವಯಸ್ಸಾದವರು ಹತ್ತಿ ಇಳಿಯಲು ಕಷ್ಟ’ ಎಂದು ವ್ಯಾಪಾರಸ್ಥರಾದ ಮುನ್ನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಸರಿಗಷ್ಟೇ ಲಿಫ್ಟ್; ಬಳಕೆಗೆ ಮುಕ್ತವಾಗಿಲ್ಲ
‘ ಸ್ಕೈ ವಾಕ್ ನಿರ್ಮಾಣ ಮಾಡಿ ಬಹಳಷ್ಟು ದಿನಗಳಾಯಿತು. ಕೆಲವು ದಿವಸ ಲಿಫ್ಟ್ ಅಳವಡಿಸಲಾಗುತ್ತದೆ. ಆ ಬಳಿಕವೇ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಎಂದು ಹೇಳಿಕೊಂಡು ಬಂದಿದ್ದರು. ಲಿಫ್ಟ್ ಅಳವಡಿಸಿ ಉದ್ಘಾಟನೆಯನ್ನೂ ಮಾಡಲಾಗಿದೆ. ಆದರೆ ಮೂರು ತಿಂಗಳಾದರೂ ಲಿಫ್ಟ್ ತೆಗೆದಿಲ್ಲ’ಎಂದು ಆಟೋ ಚಾಲಕ ನಾಗರಾಜ್ ‘ಪ್ರಜಾವಾಣಿ’ಗೆ ವಿವರಿಸಿದರು.

’ಲಿಫ್ಟ್ ತೆರೆದರೆ ವಯಸ್ಸಾದವರು, ಮಹಿಳೆಯರು ಇದರಲ್ಲಿ ಹತ್ತಿ ಹೋಗಿ ದಾಟುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ವಿ.ವಿಗೆ ವಾಯು ವಿಹಾರಕ್ಕೆ ಹೋಗುವವರು ಹೆಚ್ಚು. ಅಂತಹವರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಎಪಿಎಂಸಿ ಮುಂದೆ, ಕ್ಯಾತ್ಸಂದ್ರದಲ್ಲಿ ನಿರ್ಮಿಸಲಿ
’ಈಗ ಸ್ಕೈವಾಕ್ ನಿರ್ಮಿಸಿರುವ ಸ್ಥಳಗಳಕ್ಕಿಂತ  ಬಟವಾಡಿ ಎಪಿಎಂಸಿ ಮುಂಭಾಗದಲ್ಲಿ ಹಾಗೂ ಕ್ಯಾತ್ಸಂದ್ರದ ಬಳಿ ಹೆದ್ದಾರಿಯಲ್ಲಿ ನಿರ್ಮಾಣದ ಅಗತ್ಯವಿತ್ತು. ಈ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾರ್ವಜನಿಕರು, ಎಪಿಎಂಸಿ ವ್ಯಾಪಾರಸ್ಥರು ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಯಾರೂ ಕಿವಿಗೊಡಲಿಲ್ಲ’ ಎಂದು ಎಪಿಎಂಸಿ ವರ್ತಕರೊಬ್ಬರು ದೂರಿದರು.

’ಅಷ್ಟೇನೂ ಅಗತ್ಯವಿಲ್ಲದ ಕಡೆ ಬಿ.ಎಚ್.ರಸ್ತೆಯಲ್ಲಿ ಸ್ಕೈವಾಕ್ ನಿರ್ಮಾಣ ಮಾಡಿ ಹಣ ಪೋಲು ಮಾಡಲಾಗಿದೆ. ಇನ್ನಾದರೂ ಕ್ಯಾತ್ಸಂದ್ರ ಮತ್ತು ಎಪಿಎಂಸಿ ಮುಂದೆ ಸ್ಕೈವಾಕ್ ನಿರ್ಮಿಸಲಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT