ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಗಂಗಾ ಮಠ ರಸ್ತೆಗೆ ಬೇಕಿದೆ ಮೇಲ್ಸೇತುವೆ ಭಾಗ್ಯ

Last Updated 16 ಜನವರಿ 2018, 7:24 IST
ಅಕ್ಷರ ಗಾತ್ರ

ತುಮಕೂರು: ಇದು ರಾಜ್ಯದ ಪ್ರಮುಖ ಮಠ. ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವ ಪುಣ್ಯ ಸ್ಥಳ. ಆದರೆ ರಾಷ್ಟ್ರೀಯ ಹೆದ್ದಾರಿಯಿಂದ ಈ ಮಠಕ್ಕೆ ಹೋಗುವ ರಸ್ತೆಯಲ್ಲಿಯೇ ರೈಲ್ವೆ ಗೇಟ್‌ ಇರುವುದರಿಂದ ಮಠಕ್ಕೆ ಹೋಗುವವರು, ಬರುವವರು ತೊಂದರೆ ಅನುಭವಿಸುವಂತಾಗಿದೆ.

ಹೌದು, ಈ ಸಮಸ್ಯೆ ಎದುರಾಗುತ್ತಿರುವುದು ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಭಕ್ತರಿಗೆ. ಇಲ್ಲಿ ನಿತ್ಯವೂ ಜಾತ್ರೆಯಂತೆ ಭಕ್ತರು ಭೇಟಿ ನೀಡುತ್ತಾರೆ. ಆಗಾಗ ಶತಾಯುಷಿ ಸ್ವಾಮೀಜಿ ದರ್ಶನಕ್ಕೆ ಭೇಟಿ ನೀಡುವ ಗಣ್ಯರಿಗೂ ಕೊರತೆಯೇನಿಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿಯಿಂದ ಮಠದ ಕಡೆಗೆ ಸಾಗುವ ರಸ್ತೆಯಲ್ಲಿಯೇ ರೈಲ್ವೆ ಗೇಟ್‌ ಇರುವುದರಿಂದ, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಕ್ಯಾತ್ಸಂದ್ರದ ವೃತ್ತದಿಂದ ಮಠದ ಕಡೆಗೆ ಸಾಗುವಾಗ ಸದಾ ವಾಹನ ದಟ್ಟಣೆ ಕಂಡು ಬರುತ್ತದೆ. ಅದರಲ್ಲೂ ಶಿವರಾತ್ರಿ, ನವರಾತ್ರಿ, ಸಂಕ್ರಾಂತಿಯಂತಹ ಹಬ್ಬಗಳಲ್ಲಂತೂ ಭಕ್ತ ಸಾಗರವೇ ಮಠಕ್ಕೆ ಹರಿದು ಬರುವುದರಿಂದ ರಸ್ತೆ ತುಂಬಿ ತುಳುಕುತ್ತದೆ. ನಗರದಿಂದ ಮಠಕ್ಕೆ ಭೇಟಿ ನೀಡುವ ಭಕ್ತರಿಗೆಂದೇ ಪ್ರತಿನಿತ್ಯ ಹತ್ತಾರು ಕೆಎಸ್‌ಆರ್‌ಟಿಸಿ ಬಸ್‌ನ ವ್ಯವಸ್ಥೆಯನ್ನು ಒದಗಿಸಲಾಗಿದೆ. ಆದರೆ ಪ್ರತಿದಿನ 20ಕ್ಕೂ ಹೆಚ್ಚು ರೈಲುಗಳು ಓಡಾಡುವ ರೈಲು ಮಾರ್ಗದ ಮೂಲಕ ರಸ್ತೆ ಹಾದು ಹೋಗುತ್ತಿರುವುದರಿಂದ ಜನರು ರಸ್ತೆಯಲ್ಲಿಯೇ ಸಮಯ ವ್ಯರ್ಥ ಮಾಡುವಂತಾಗಿದೆ ಎನ್ನುವುದು ನಗರದ ಮೃತ್ಯುಂಜಯ ಹೇಳುವ ಮಾತು.

‘ಇಲ್ಲಿ ಪ್ರತಿನಿತ್ಯ ಸರಾಸರಿ 25 ರೈಲುಗಳು ಓಡಾಡುತ್ತವೆ. ಹೀಗೆ ರೈಲು ಬರುವಾಗಲೆಲ್ಲಾ, ಇಲ್ಲಿನ ಸರ್ಕಲ್‌ನವರೆಗೂ ವಾಹನಗಳು ನಿಂತಿರುತ್ತವೆ. ರಸ್ತೆಯು ಕಿರಿದಾಗಿರುವುದರಿಂದ ಜನರು ಬಹಳ ತೊಂದರೆ ಅನುಭವಿಸುತ್ತಾರೆ. ಹೀಗಾಗಿ ಇಲ್ಲಿ ಅಂಡರ್‌ಪಾಸ್‌ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡುವುದು ಅಗತ್ಯ’ ಎನ್ನುತ್ತಾರೆ ಮಠದ ಭಕ್ತ ಗುರು.

ಮಠದಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಇವರಲ್ಲಿ ಕೆಲವರು ನಗರದಲ್ಲಿರುವ ಶಾಲೆ, ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಹೀಗಾಗಿ ಅವರು ಪ್ರತಿನಿತ್ಯ ಮಠದಿಂದ ನಗರಕ್ಕೆ ಹೋಗಬೇಕಾಗುತ್ತದೆ. ಶಾಲೆಗೆ ಹೋಗುವ ವೇಳೆಯಲ್ಲಿ ರೈಲ್ವೆ ಗೆಟ್‌ ಬಂದಿದ್ದರೆ, ಅವರಿಗೆ ಶಾಲೆಗೆ ಹೋಗಲು ತಡವಾಗುತ್ತದೆ’ ಎನ್ನುತ್ತಾರೆ ಪರಮೇಶ್‌.

ಎರಡು ಬಾರಿ ಅರ್ಜಿ ಹಾಕಿದ್ದೇವು

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಠದ ಆಡಳಿತಾಧಿಕಾರಿ ಎಸ್‌.ವಿಶ್ವನಾಥಯ್ಯ, ‘ಮಠಕ್ಕೆ ಬರುವ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ ನಿರ್ಮಾಣ ಮಾಡಿದ್ದರೆ ಮಠಕ್ಕೆ ಬರುವವರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಜಾಫರ್‌ ಷರೀಪ್‌ ಮತ್ತು ಮುನಿಯಪ್ಪ ಅವರು ರೈಲ್ವೆ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ್ದೇವು. ಆದರೆ ಇದುವರೆಗೂ ಈ ಬಗ್ಗೆ ರೈಲ್ವೆ ಇಲಾಖೆ ಕ್ರಮ ಕೈಗೊಂಡಿಲ್ಲ’ ಎಂದರು.

ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆ

‘ಜಿಲ್ಲೆಯಲ್ಲಿಯೇ ದೊಡ್ಡ ದೊಡ್ಡ ನಾಯಕರಿದ್ದಾರೆ. ಚುನಾವಣೆ ಬಂದಾಗ ಅಥವಾ ಯಾವುದೇ ಬಿಕ್ಕಟ್ಟು ಎದುರಾದಾಗ ಸ್ವಾಮೀಜಿಯ ದರ್ಶನ ಪಡೆಯಲು ಬರುವ ರಾಷ್ಟ್ರ, ರಾಜ್ಯ ಮಟ್ಟದ ನಾಯಕರೇ ದಂಡೇ ಇದೆ. ಆದರೆ ಮಠದ ಭಕ್ತರಿಗೆ ನೆರವಾಗುವ ಈ ರೀತಿಯ ಯೋಜನೆಯನ್ನು ಕೈಗೊಳ್ಳಲು ಮಾತ್ರ ಯಾರಿಗೂ ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆ ಇರುವಂತಿದೆ’ ಎನ್ನುತ್ತಾರೆ ಹೆಸರು ಹೇಳಲು ಬಯಸದ ಸ್ಥಳೀಯರೊಬ್ಬರು.

* * 

ನಗರದಲ್ಲಿ ಅನೇಕ ಕಡೆ ವಾಹನದಟ್ಟಣೆ ಇಲ್ಲದಿರುವ ಕಡೆಯೂ ಅಂಡರ್‌ಪಾಸ್‌ ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಪ್ರತಿನಿತ್ಯ ಸಾವಿರಾರು ಜನ ಭಕ್ತರು ಭೇಟಿ ನೀಡುವ ಮಠದ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ಮಾಡಲಿ
ರುದ್ರಮುನಿಯಪ್ಪ, ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT