ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಸಂತೆ: ಅಜ್ಞಾತ ದೇಗುಲಗಳು ಬೆಳಕಿಗೆ

Last Updated 16 ಜನವರಿ 2018, 9:05 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನ ಕೆರೆಸಂತೆಯಲ್ಲಿ ನೂರಾರು ವರ್ಷಗಳಿಂದ ಗಿಡಗಂಟಿಗಳ ನಡುವೆ ಅಜ್ಞಾತವಾಗಿದ್ದ ಐತಿಹಾಸಿಕ ದೇಗುಲಗಳನ್ನು ಯುವಕರ ಪಡೆಯೊಂದು ಸ್ವಚ್ಛ ಮಾಡುವ ಮೂಲಕ ಬೆಳಕಿಗೆ ತಂದಿದೆ. ಕೆರೆಸಂತೆ ಗ್ರಾಮದ ಸೋಮೇಶ್ವರ, ಜನಾರ್ದನ ದೇಗುಲಗಳನ್ನು ಶುಚಿ ಮಾಡುವ ಮೂಲಕ ದೇವಾಲಯಗಳು ಜನರ ದರ್ಶನಕ್ಕೆ ಸಿದ್ಧಗೊಂಡಿವೆ.

ಕೆರೆಸಂತೆಗೆ ಹೇಮಾವತಿ ಪಟ್ಟಣ ಎಂಬ ಹೆಸರಿದೆ. ಇಲ್ಲಿರುವ ವಿಷ್ಣುಸಮುದ್ರ ಕೆರೆ ಹೊಯ್ಸಳ ವಿಷ್ಣುವರ್ಧನ ನಿರ್ಮಿಸಿದ್ದು, ಅವು ಗಳಲ್ಲಿ ಲಕ್ಷ್ಮೀಜನಾರ್ದನ ದೇಗುಲ ವಿಶಿಷ್ಟವಾದದು. ಈ ದೇಗುಲ ದಲ್ಲಿರುವ ಗರ್ಭಗೃಹದಲ್ಲಿ ಒಂದು ’v’ ಆಕಾರದ ಕಿಂಡಿ ಇದೆ. ಪ್ರತಿ ದಿನ ಪ್ರಥಮ ಉಷಾಕಿರಣಗಳು ಈ ಕಿಂಡಿಯ ಮೂಲಕ ಹಾದು ಅಲ್ಲಿಂದ ಸುಮಾರು 300 ಮೀಟರ್‌ಗಳಿಗೂ ಹೆಚ್ಚು ದೂರದಲ್ಲಿರುವ ಮಹಾಲಕ್ಷ್ಮಿ ದೇವಾಲಯದ ಗರ್ಭಗೃಹ ಪ್ರವೇಶಿಸಿ ಲಕ್ಷ್ಮೀ ವಿಗ್ರಹದ ಪಾದಕ್ಕೆ ಬೀಳುವುದು ಕೌತುಕ. ಈ ಜನಾರ್ದನ ದೇಗುಲ ಸಂಪೂರ್ಣ ಶಿಥಿಲಗೊಂಡಿದ್ದು, ಇಲ್ಲಿ ಅನೇಕ ಶಾಸನಗಳಿವೆ. ಹೆಚ್ಚಿನ ಅಧ್ಯಯನದ ಅಗತ್ಯವಿದೆ.

ಮಹಾಲಕ್ಷ್ಮಿ ದೇಗುಲ ಸಹ ಹೊಯ್ಸಳರ ಕಾಲದ್ದು. ಲಕ್ಷ್ಮಿ ವಿಗ್ರಹದ ಪಾದ ಭೂಸ್ಪರ್ಶ ಮಾಡುತ್ತಿರುವುದು ಇಲ್ಲಿನ ವಿಶೇಷ. ಭಾರತದಲ್ಲಿ ಈ ರೀತಿ ಇರುವುದು ಮೂರು ಕಡೆ ಮಾತ್ರ. ಕೊಲ್ಹಾಪುರ, ಆಂಧ್ರದ ತಿರುಪತಿ ಬಳಿಯ ಅಲಮೇಲು ಮಂಗಾಪುರದ ಪದ್ಮಾವತಿ ಮತ್ತು ಕೆರೆಸಂತೆಯ ಮಹಾಲಕ್ಷ್ಮಿ ದೇಗುಲದಲ್ಲಿ ಮಾತ್ರ ಈ ವಿಶೇಷವಿದೆ. ಸಾವಿರಾರು ಭಕ್ತರು ಲಕ್ಷ್ಮೀ ದರ್ಶನಕ್ಕಾಗಿ ಬರುತ್ತಾರೆ.

ನೂರಾರು ವರ್ಷಗಳಿಂದ ಇಲ್ಲಿರುವ ದೇಗುಲಗಳು ಶಿಥಿಲಾವಸ್ಥೆ ತಲುಪಿವೆ. ಜನಾರ್ಧನ ಸ್ವಾಮಿಯ ಮನಮೋಹಕ ವಿಗ್ರಹ ಕಡೂರಿನ ಹಳೇ ಪೊಲೀಸ್ ಠಾಣೆಯಲ್ಲಿದ್ದುದ್ದನ್ನು ಮಹಾಲಕ್ಷ್ಮಿ ದೇಗುಲದ ಸಮಿತಿಯ ಅಧ್ಯಕ್ಷ ಕರಿಬಡ್ಡೆ ಶ್ರೀನಿವಾಸ್ ಅವರ ಆಸಕ್ತಿಯಿಂದ ಮತ್ತೆ ಕೆರೆಸಂತೆಗೆ ತರಲಾಗಿದೆ. ಈ ಗ್ರಾಮದಲ್ಲಿ ಜನಾರ್ದನ, ಮಲ್ಲಿಕಾರ್ಜುನ ದೇಗುಲಗಳೂ ಸೇರಿದಂತೆ ಹೊಯ್ಸಳ ಶಿಲ್ಪ ವೈಭವ ಸಾರುವ ಅಸಂಖ್ಯ ದೇಗುಲಗಳಿವೆ. ಐದಾರು ದಶಕಗಳಿಂದ ಈ ದೇಗುಲಗಳು ಚಿರತೆ, ನರಿ, ಕರಡಿಗಳ ಅವಾಸ ಸ್ಥಾನವಾಗಿತ್ತು. ಐತಿಹಾಸಿಕ ಮಹತ್ವದ ಈ ಗ್ರಾಮಕ್ಕೆ ಮಹಾಲಕ್ಷ್ಮಿ ದೇಗುಲ ನೋಡಲು ಬರುವವರಿಗೆ ದೇಗುಲಗಳ ಬಗ್ಗೆ ಮಾಹಿತಿ ಇರಲಿಲ್ಲ, ಮಾಹಿತಿ ನೀಡುವವರು ಇರಲಿಲ್ಲ.

ಇದನ್ನು ಗಮನಿಸಿದ ಕಡೂರಿನ ಒಂದಿಷ್ಟು ಯುವಕರು ಭಾನುವಾರ ಕೆರೆಸಂತೆಗೆ ತೆರಳಿ ಶ್ರಮದಾನದ ಮೂಲಕ ಗಿಡಗಂಟಿಗಳನ್ನು ತೆಗೆದು ಅಲ್ಲಿನ ದೇಗುಲಗಳನ್ನು ಮತ್ತೆ ಹೊರಜಗತ್ತಿಗೆ ಕಾಣುವಂತೆ ಮಾಡಿ ದ್ದಾರೆ. ನಮ್ಮೂರಿನಲ್ಲಿ ಇಂತಹ ಸುಂದರ ದೇಗುಲಗಳಿವೆಯೇ ಎಂದು ಗ್ರಾಮದವರೇ ಅಚ್ಚರಿ ಪಡುವಂತೆ ದೇಗುಲಗಳು ಕಾಣತೊಡಗಿವೆ.

‘ಐತಿಹಾಸಿಕ ಕಲಾಕೃತಿಗಳನ್ನು ಉಳಿಸುವುದು ನಮ್ಮ ಕರ್ತವ್ಯ. ಅವುಗಳ ಮಹತ್ವ ಇಂದಿನವರಿಗೆ ತಿಳಿದಿಲ್ಲ. ಅದ್ಭುತ ವಾಸ್ತುಶಿಲ್ಪದ ಕಲಾಕೃತಿಗಳು ನಮ್ಮ ಸುತ್ತಮುತ್ತಲೂ ಇದ್ದು, ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಈ ದೇಗುಲಗಳನ್ನು ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದೇವೆ. ಈ ದೇಗುಲಗಳು ಹಿಂದಿನ ವೈಭವ ಮತ್ತೆ ಕಾಣಬೇಕು ಎಂಬ ನಿಟ್ಟಿನಲ್ಲೂ ಪ್ರಯತ್ನ ಆರಂಭಿಸಿದ್ದೇವೆ. ಬೆಂಗಳೂರಿನ ಗಿರೀಶ್ ಭಾರದ್ವಾಜ್ ಹಾಗೂ ನರೇಂದ್ರ ಅವರ ಮಾರ್ಗದರ್ಶನ ಮತ್ತು ಪ್ರೇರಣೆಯೇ ಇದಕ್ಕೆ ಮೂಲ. ಕೆರೆಸಂತೆ ಗ್ರಾಮಸ್ಥರ ಸಹಕಾರವೂ ಇದೆ’ ಎನ್ನುತ್ತಾರೆ ಕಡೂರಿನ ಲೋಹಿತ್ ಆರಾಧ್ಯ ಮತ್ತು ಬಿದರೆಕಾರ್ತಿಕ್ ಹಾಗೂ ಪ್ರತಾಪ್ ಶೆಟ್ಟಿ. ಐತಿಹಾಸಿಕ ದೇಗುಲಗಳನ್ನು ಹೊರಜಗತ್ತಿಗೆ ಕಾಣುವಂತೆ ಮಾಡು ವಲ್ಲಿ ಕಡೂರಿನ ಯುವಕರ ಶ್ರಮ ಶ್ಲಾಘನೀಯವಾದುದು ಎನ್ನುತ್ತಾರೆ ಕೆರೆಸಂತೆ ಗ್ರಾಮಸ್ಥರು.

ಬಾಲುಮಚ್ಚೇರಿ,ಕಡೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT