ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರಿಂದಲೆ ಹಾಳಾದ ಸಿಮೆಂಟ್ ರಸ್ತೆ; ಹದಗೆಟ್ಟ ಗ್ರಾಮದ ಪರಿಸರ

ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ನಿರ್ಮಾಣ ಮಾಡಿದ ಸಿಮೆಂಟ್ ರಸ್ತೆಯನ್ನು ಗ್ರಾಮಸ್ಥರೆ ಹದಗೆಡಿಸಿ ಹಾಳು ಮಾಡಿದ್ದಾರೆ ಎಂಬುದನ್ನು ಖಾತರಿ ಮಾಡಿಕೊಳ್ಳಲು ಆಸಕ್ತರು ಗ್ರಾಮದ ಕಡೆಗೆ ಹೆಜ್ಜೆ ಹಾಕಿ ನೋಡಿದರೆ ಅದರ ದರ್ಶನವಾಗುತ್ತದೆ.

ಕಳೆದ ಏಳು ದಶಕಗಳಿಂದ ಗ್ರಾಮದ ಪರಿಶಿಷ್ಟರ ಬಡಾವಣೆಗೆ ಉತ್ತಮ ರಸ್ತೆಯಿರಲಿಲ್ಲ. ರಸ್ತೆಯ ಮೇಲೆ ಹರಿಯುವ ಚರಂಡಿ ಕೊಳಚೆ ನೀರು, ಕೆಸರಿನಲ್ಲಿ ನಡೆದಾಡುವ ಅನಿವಾರ್ಯವಿತ್ತು. ಸಚಿವ ಪ್ರಿಯಾಂಕ್ ಖರ್ಗೆ ಅವರು ಮುತುವರ್ಜಿ ವಹಿಸಿ ಕಳೆದ 2017 ರಲ್ಲಿ ₹35 ಲಕ್ಷಕ್ಕೂ ಅಧಿಕ ಅಗತ್ಯ ಅನುದಾನ ಸೌಲಭ್ಯ ಒದಗಿಸಿ ಪರಿಶಿಷ್ಟರ ಬಡವಾಣೆಗೆ ಸಂಪರ್ಕಿಸುವ ಮತ್ತು ಬಡವಾಣೆಯಲ್ಲಿ ಸಿಮೆಂಟ್ ರಸ್ತೆಯ ಭಾಗ್ಯ ನೀಡಿದ್ದರು. ಅದು ವರ್ಷದಲ್ಲೆ ಗ್ರಾಮಸ್ಥರೆ ಹಾಳು ಮಾಡಿದ್ದಾರೆ.

‘ಕಾಗಿಣಾ ನದಿಯಿಂದ ಹಗಲು ರಾತ್ರಿ ಮರಳು ತುಂಬಿದ ಟ್ರ್ಯಾಕ್ಟರ್, ಟಿಪ್ಪರ್, ಲಾರಿ ಸಂಚಾರದಿಂದ ಸಿಮೆಂಟ್ ರಸ್ತೆ ಹದಗೆಟ್ಟು ಕಿತ್ತಿ ಹೋಗಿದೆ. ರಸ್ತೆಯಲ್ಲಿ ಗುಂಡಿ ಬಿದ್ದು ಜನರು ನಡೆದಾಡಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿವೆ. ಗ್ರಾಮದ ಸೀಬಾರ ಕಟ್ಟೆಯಿಂದ ಇವಣಿ ರಸ್ತೆಯವರೆಗೆ ಸಿಮೆಂಟ್ ರಸ್ತೆ ಹಾಳಾಗಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗ್ರಾಮದ ಮುಖ್ಯ ಬಜಾರ್‌ನಿಂದ ಸರ್ಕಾರಿ ಆಸ್ಪತ್ರೆಗೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ (ಕನ್ನಡ ಮತ್ತು ಉರ್ದು) ಎರಡು ಶಾಲೆಗಳಿಗೆ ಸಂಪರ್ಕಿಸುವ ರಸ್ತೆಯ ಸ್ಥಿತಿ ಹದಗೆಟ್ಟಿದೆ. ಇಡೀ ರಸ್ತೆಯನ್ನು ಬಚ್ಚಲು ಮತ್ತು ಚರಂಡಿ ನೀರು ಆಕ್ರಮಿಸಿದೆ. ಗಬ್ಬು ವಾಸನೆಯ ದುನಾರ್ತದಿಂದ ಜನರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿ, ಶಿಕ್ಷಕರು ಮೂಗು ಮುಚ್ಚಿಕೊಂಡು ಶಾಲೆಗೆ ಹೋಗಬೇಕು. ಶಾಲೆಯ ಬಳಿ ಸಿಮೆಂಟ್ ರಸ್ತೆಯಲ್ಲಿ ಜನರು ಸೆಗಣಿ, ಕಸಕಡ್ಡಿ ಹಾಕುತ್ತಿದ್ದಾರೆ. ಪಂಚಾಯಿತಿ ಆಡಳಿತ ಅದಕ್ಕೂ ತನಗೂ ಸಂಬಂಧವೇ ಇಲ್ಲ ಎಂದು ಮೂಕಪ್ರೇಕ್ಷಕ ನೀತಿಗೆ ಶರಣಾಗಿದೆ’ ಎಂದು ಜನರು ಆರೋಪಿಸಿದ್ದಾರೆ.

‘ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಸರ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಶಾಲಾ ಕಟ್ಟಡದ ಸುತ್ತಲೂ ಗಬ್ಬು ವಾಸನೆ ಹರಡುತ್ತಿದೆ. ಜನರು ಶಾಲೆಯ ಮುಂದಿನ ಮುಖ್ಯರಸ್ತೆಯಲ್ಲಿ ಮತ್ತು ಕಾಂಪೌಂಡ್ ದಾಟಿ ಶಾಲೆಯ ಆವರಣದೊಳಗೆ ಬಂದು ಶೌಚಕ್ಕೆ ಕೂಡುತ್ತಾರೆ. ಮಕ್ಕಳಿಗೆ, ಶಿಕ್ಷಕರಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದೆ. ದುರ್ವಾಸನೆ ಹಿಂಸೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಯಾರೂ ಮುಂದಾಗುತ್ತಿಲ್ಲ’ ಎನ್ನುವ ಆರೋಪ ಶಿಕ್ಷಕರಿಂದ ಕೇಳಿಬಂದಿದೆ.

‘ಉರ್ದು ಹಿರಿಯ ಪ್ರಾಥಮಿಕ ಶಾಲಾ ಕೋಣೆಗಳ ಕಟ್ಟಡ ನಿರ್ಮಾಣ ಕಾಮಗಾರಿ ಅಡಿಪಾಯದಲ್ಲೆ ಸ್ಥಗಿತಗೊಂಡಿದೆ. ಎರಡೂ ಶಾಲೆಯ ಪರಿಸರ ಅಚ್ಚುಕಟ್ಟುತನ ಕಳೆದುಕೊಂಡಿವೆ. ಸುಣ್ಣಬಣ್ಣವಿಲ್ಲದೆ ಹಾಳು ಬಿದ್ದ ಕಟ್ಟಡದಂತೆ ಬಣಬಣ ಎನ್ನುತ್ತಿದೆ. ಕನ್ನಡ ಶಾಲೆಯ ಹಳೆ ಕಟ್ಟಡದ ಕೋಣೆಗಳ ಗೋಡೆ ಬಿರುಕು ಬಿಟ್ಟು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಆತಂಕ ಸೃಷ್ಟಿಸಿದೆ. ಯಾರೂ ಈ ಕಡೆಗೆ ಗಮನವೇ ಹರಿಸುತ್ತಿಲ್ಲ’ ಎನ್ನುವುದು ಮಕ್ಕಳ ಪಾಲಕರ ಆರೋಪವಾಗಿದೆ.

ಬಿಸಿಯೂಟದ ಕೋಣೆಯ ಹಿಂಭಾಗದಲ್ಲಿ ಜಿ.ಪಂ 2010-11ನೇ ಸಾಲಿನ ಎಂ.ಎಸ್.ಡಿ.ಪಿ ಯೋಜನೆ ಅಡಿಯಲ್ಲಿ ₹3.45 ಲಕ್ಷದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ಕಟ್ಟಲಾಗಿದೆ. ಕಟ್ಟಡದ ಸುತ್ತಲೂ ಗಿಡಗಂಟಿ, ಶೌಚದ ದುರ್ವಾಸನೆಯ ಕಾರುಬಾರು ಜೋರಾಗಿದೆ. ಅದರ ಪಕ್ಕದಲ್ಲೆ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣಕ್ಕೆ ತೋಡಿದ ಗುಂಡಿಯಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳ ಉತ್ಪಾದನೆ ತಾಣವಾಗಿದೆ. ಕಾಮಗಾರಿ ಮಾತ್ರ ಇನ್ನೂ ಶುರುವಾಗಿಲ್ಲ. ಸರ್ಕಾರಿ ಆಸ್ಪತ್ರೆ ಬಳಿ ನಿರ್ಮಾಣ ಮಾಡಿರುವ ರಂಗ ಮಂದಿರ ಉಪಯೋಗವಿಲ್ಲದೆ ಹಾಳು ಸುರಿದು ಇಡೀ ಕಟ್ಟಡ ಬಿರುಕು ಬಿಟ್ಟು ಧರೆಗುರುಳುವ ಸ್ಥಿತಿ ತಲುಪಿದೆ.

‘ಗ್ರಾಮದ ಸಿದ್ಧಿಖಿ ಮನೆ ಬಳಿಯ ಚಿನವಾರ ಬಾವಿಯ ಪರಿಸರ ಹಾಳಾಗಿದೆ. ರಸ್ತೆಯಲ್ಲಿ ಜನರು ಮನೆಯ ಕಸಕಡ್ಡಿ ಹಾಕಿದ್ದಾರೆ. ಬಚ್ಚಲು ನೀರು ಜಮಾವಣೆಗೊಂಡು ಕೆಟ್ಟ ವಾಸನೆ ಹರಡುತ್ತಿದೆ. ಮನೆಯ ಮುಂದೆ, ಕಟ್ಟೆಯ ಮೇಲೆ ಕುಳಿತುಕೊಳ್ಳಲು ಆಗುತ್ತಿಲ್ಲ. ಊಟ ಮಾಡಲು ಬಾಗಿಲು ಮುಚ್ಚಿಕೊಂಡು ತೀವ್ರ ಕಿರಿಕಿರಿ ಅನುಭವಿಸಬೇಕಾಗಿದೆ. ಸೊಳ್ಳೆಗಳ ಕಾಟ ಹೆಚ್ಚಿದೆ. ಸ್ವಚ್ಛತೆ ಮಾಡುವಂತೆ ಪಂಚಾಯಿತಿ ಸಿಬ್ಬಂದಿಗೆ, ಸದಸ್ಯರಿಗೆ ಹೇಳಿದ್ದೇವೆ. ಆದರೆ, ಪ್ರಯೋಜನೆಯಾಗಿಲ್ಲ’ ಎಂದು ಬಡಾವಣೆಯ ಅರ್ಜುನ ಮಡಿಕಿ, ಶಿವಯೋಗಿ ತೊಟ್ನಳ್ಳಿ ಆರೋಪಿಸಿದ್ದಾರೆ.

‘ಉರ್ದು ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿ ಭೂಸೇನಾ ನಿಗಮಕ್ಕೆ ವಹಿಸಲಾಗಿದೆ. ಕುಡಿಯುವ ನೀರು ಸರಬರಾಜು ಮಾಡಲು ಜಿ.ಪಂ ಯೋಜನೆಯ ₹40 ಲಕ್ಷ ವೆಚ್ಚದಲ್ಲಿ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಜಾಗದ ಮಣ್ಣಿನ ಪರೀಕ್ಷೆ ಮಾಡಿಸಿದ್ದು ಮಣ್ಣು ಸರಿಯಿಲ್ಲ ಎಂದು ವರದಿ ಬಂದಿದೆ. ಮತ್ತಷ್ಟು ಆಳ ಗುಂಡಿ ತೋಡಿ ಮತ್ತೊಮ್ಮೆಅಂದಾಜು ಪಟ್ಟಿ ಸಿದ್ಧಪಡಿಸಲಾಗುತ್ತಿದೆ’ ಎಂದು ಜಿ.ಪಂ ಸದಸ್ಯೆ ಶಶಿಕಲಾ ರಾಜಶೇಖರ ತಿಮ್ಮನಾಯಕ ಹೇಳಿದ್ದಾರೆ.

‘ಗ್ರಾಮದಲ್ಲಿ ತುಂಬಿರುವ ಚರಂಡಿ ಸ್ವಚ್ಛತೆ ಮಾಡಲು ಪಂಚಾಯಿತಿ ಸಿಬ್ಬಂದಿಯಿಂದ ಆಗುತ್ತಿಲ್ಲ. ಚಿತ್ತಾಪುರದ ಕಾರ್ಮಿಕರನ್ನು ಸಂಪರ್ಕಿಸಿ ಸ್ವಚ್ಛತೆಗೆ ಗುತ್ತಿಗೆ ನೀಡಲಾಗಿದೆ. ಗ್ರಾಮದ ಎಲ್ಲಾ ಚರಂಡಿಗಳನ್ನು ಶೀಘ್ರದಲ್ಲಿ ಸ್ವಚ್ಛತೆ ಮಾಡಿಸುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಖಿಉನ್ನಿಸ್ಸಾ ಬೇಗಂ ಹೇಳಿದ್ದಾರೆ.

* * 

ನೀರಿನ ಟ್ಯಾಂಕ್ ಕಾಮಗಾರಿ ಶೀಘ್ರ ಶುರು ಮಾಡಲಾಗುತ್ತಿದೆ. ಗ್ರಾಮದ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಪಂಚಾಯಿತಿ ಅಧಿಕಾರಿಗೆ ತಿಳಿಸಿ ಸ್ವಚ್ಛತೆ ಮಾಡಿಸಲಾಗುವುದು.
ಮುನಿಯಪ್ಪ ಕೊಳ್ಳಿ, ತಾ.ಪಂ ಸದಸ್ಯ ತೆಂಗಳಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT