ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಗಪಳ್ಳಿ ಬಾಂದಾರು: ಗೇಟು ಅಳವಡಿಕೆ

Last Updated 16 ಜನವರಿ 2018, 9:39 IST
ಅಕ್ಷರ ಗಾತ್ರ

ಚಿಂಚೋಳಿ: ಮುಲ್ಲಾಮಾರಿ ನದಿಗೆ ಬಾಂದಾರು ನಿರ್ಮಾಣಕ್ಕೆ ಚಾಲನೆ ದೊರೆತ ನಂತರ ನನೆಗುದಿಗೆ ಬಿದ್ದಿದ್ದ ಗರಗಪಳ್ಳಿ–ಭಕ್ತಂಪಳ್ಳಿ ಬಾಂದಾರು ಸೇತುವೆ ಈಗ ಪೂರ್ಣಗೊಂಡಿದೆ. 2 ತಿಂಗಳ ಹಿಂದೆ ಬ್ಯಾರೇಜಿಗೆ ಗೇಟುಗಳು ಅಳವಡಿಸಿದ್ದರಿಂದ ಮುಲ್ಲಾಮಾರಿ ನದಿಯಲ್ಲಿ ಸುಮಾರು 1 ಕಿ.ಮೀ ವರೆಗೆ ಹಿನ್ನೀರು ನೀರು ಸಂಗ್ರಹವಾಗಿದೆ.

‘ಎರಡು ದಶಕಗಳ ಹಿಂದೆ ಪ್ರಾರಂಭವಾಗಿದ್ದ ಕಾಮಗಾರಿ ಈಗ ಪೂರ್ಣಗೊಂಡಿದೆ. ಭಾಗಶಃ ಕಾಮಗಾರಿ ನಡೆಸಿ ನನೆಗುದಿಗೆ ಬಿದ್ದ ಸೇತುವೆ ಪೂರ್ಣಗೊಳಿಸಲು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಆಸಕ್ತಿ ವಹಿಸಿದ್ದರು’ ಎಂದು ಗ್ರಾಮಸ್ಥರು ತಿಳಿಸಿದರು.

ಕ್ಷೇತ್ರ ಪುನರ್‌ ವಿಂಗಡನೆ ನಂತರ ಸುಲೇಪೇಟ ಹೋಬಳಿ ಸೇಡಂ ಮತಕ್ಷೇತ್ರಕ್ಕೆ ಸೇರಿದ ನಂತರ 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಡಾ.ಶರಣಪ್ರಕಾಶ ಪಾಟೀಲ ಅವರು ತಮ್ಮ ಕ್ಷೇತ್ರಾಭಿವೃದ್ಧಿಗೆ ನಿಧಿಗೆ ಬಂದ ಶಾಸಕರ ಒಂದು ವರ್ಷದ ಅನುದಾನ ಬಾಂದಾರು ಸೇತುವೆ ಪೂರ್ಣಗೊಳಿಸಲು ಮೀಸಲಿಟ್ಟಿದ್ದರು. ಭೂಸೇನಾ ನಿಗಮದಿಂದ ಕಾಮಗಾರಿ ಕೈಗೊಳ್ಳಲಾಗಿತ್ತು. ನಂತರ 8 ವರ್ಷ ಕೇವಲ ಸೇತುವೆಯಾಗಿ ಬಳಕೆಯಾಯಿತು. ಜನರಿಗೆ ಬಾಂದಾರಿಗಿಂತಲೂ ಸೇತುವೆಯ ಅಗತ್ಯ ಹೆಚ್ಚಾಗಿದ್ದು ಇಲ್ಲಿನ ವಿಶೇಷ.

ಸೇಡಂ ತಾಲ್ಲೂಕಿನಲ್ಲಿ ಕಾಗಿಣಾ ನದಿಗೆ ಬಾಂದಾರುಗಳನ್ನು ಸೇತುವೆ ನಿರ್ಮಿಸಿದ್ದ ಡಾ.ಶರಣಪ್ರಕಾಶ ಪಾಟೀಲ ಗರಗಪಳ್ಳಿ–ಭಕ್ತಂಪಳ್ಳಿ ಬ್ಯಾರೇಜು ಪೂರ್ಣಗೊಳಿಸಲು ಕ್ರಮ ಕೈಗೊಂಡಿದ್ದರು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೆ ಬಂದ ಒಂದು ವರ್ಷದ ಅನುದಾನ ಕಾಮಗಾರಿಗೆ ನೀಡಿದ್ದರು.

‘101 ಮೀಟರ್‌ ಉದ್ದದ ಸೇತುವೆಗೆ ಈಗಾಗಲೇ ಒಂದೂವರೆ ಮೀಟರ್‌ ಎತ್ತರದವರೆಗೆ 120 ಗೇಟು ಅಳವಡಿಸಲಾಗಿದೆ. ಬ್ಯಾರೇಜಿನ ನೀರು ಸಂಗ್ರಹ ಗರಿಷ್ಠ ಎತ್ತರ 2.5 ಮೀಟರ್‌ ಆಗಿದೆ’ ಎಂದು ಎಇಇ ಶ್ಯಾಮವೆಲ್‌ ಹಾಗೂ ಸಿದ್ದು ಗೌಂಡಿ ತಿಳಿಸಿದ್ದಾರೆ.

‘ಬಾಂದಾರು ನಿರ್ಮಾಣ ನನೆಗುದಿಗೆ ಬಿದ್ದಿತ್ತು. ಈಗ ಪೂರ್ಣಗೊಂಡು ನೀರು ಸಂಗ್ರವಾಗಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಿದ್ದು ಜನ, ಜಾನುವಾರುಗಳಿಗೆ ವರವಾಗಿದೆ’ ಎಂದು ಶಿವಶರಣರೆಡ್ಡಿ ಭಕ್ತಂಪಳ್ಳಿ ತಿಳಿಸಿದರು.

‘ತಾವು ಶಾಸಕರಾದ ಮೇಲೆ ನನೆಗುದಿಗೆ ಬಿದ್ದ ಬಾಂದಾರು ಸೇತುವೆ ಪೂರ್ಣಗೊಳಿಸಲು ಚಾಲನೆ ನೀಡಲಾಯಿತು. ₹1 ಕೋಟಿ ನೀಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

‘ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರ ಕನಸಾಗಿದ್ದ ಕಾಗಿಣಾ ನದಿಗೆ ಅಡ್ಡಲಾಗಿ ತಾಲ್ಲೂಕಿನ ಜಟ್ಟೂರು ಬಳಿ ಬಾಂದಾರು ಸೇತುವೆಗೂ ₹36 ಕೋಟಿ ಅಂದಾಜು ವೆಚ್ಚಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ನೆರೆ ರಾಜ್ಯದ ಆಕ್ಷೇಪಣೆಗಳು ನಿವಾರಣೆಯಾಗಿವೆ. ಜತೆಗೆ ಇರಗಪಳ್ಳಿ ಬುರುಗಪಳ್ಳಿ ಜನರ ಬೇಡಿಕೆಯಂತೆ ಮುಲ್ಲಾಮಾರಿ ನದಿಗೆ ಇರಗಪಳ್ಳಿ ಬಳಿ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಶೀಘ್ರವೇ ಟೆಂಡರ್‌ ಕರೆಯಲಾಗುವುದು’ ಎಂದರು.

* * 

ಗರಗಪಳ್ಳಿ ಭಕ್ತಂಪಳ್ಳಿ ಸೇತುವೆ ಪೂರ್ಣಗೊಳಿಸಿ ಗೇಟು ಅಳವಡಿಸಿದ್ದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿ ಅಂತರ್ಜಲ ಹೆಚ್ಚಳಕ್ಕೆ ನೆರವಾಗಿದೆ.
ಶಿವಶರಣರೆಡ್ಡಿ ಚೆಟ್ಟಿ ಜಿಲ್ಲಾ ಪಂಚಾಯಿತಿ ಸದಸ್ಯ, ಭಕ್ತಂಪಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT