ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಪ್‌ ಪಂಚಾಯ್ತಿ ಅಂತರ್ಜಾತಿ ವಿವಾಹ ತಡೆಯುವಂತಿಲ್ಲ : ಸುಪ್ರೀಂಕೋರ್ಟ್‌

Last Updated 16 ಜನವರಿ 2018, 10:17 IST
ಅಕ್ಷರ ಗಾತ್ರ

ನವದೆಹಲಿ: ವಯಸ್ಕರಾದ ಯುವಕ–ಯುವತಿಯರು ಅಂತರ್ಜಾತಿ ವಿವಾಹವಾಗುವುದುನ್ನು ಕಾಪ್‌ ಪಂಚಾಯ್ತಿ ಅಥವಾ ಯಾವುದೇ ಸಂಘದವರು ವಿರೋಧಿಸುವುದು, ಹಲ್ಲೆ ನಡೆಸುವುದು ಕಾನೂನು ಬಾಹಿರವೆಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ವಯಸ್ಕರಾದ ಗಂಡು–ಹೆಣ್ಣು ಸಮ್ಮತಿಯ ಮೇರೆಗೆ ಮದುವೆಯಾದಾಗ, ಅವರನ್ನು ಯಾವುದೇ ಕಾಪ್‌ ಪಂಚಾಯ್ತಿ, ನಿರ್ದಿಷ್ಟ ವ್ಯಕ್ತಿ ಅಥವಾ ಸಮಾಜ ಪ್ರಶ್ನಿಸುವಂತಿಲ್ಲ ಎಂದು ತಿಳಿಸಿದೆ.

ಮರ್ಯಾದೆ ಹತ್ಯೆಯ ಹೆಸರಲ್ಲಿ ಅಂತರ್ಜಾತಿಯ ಯುವ ವಿವಾಹಿತರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ತಡೆಯಲು ಅಮಿಕಸ್‌ ಕ್ಯೂರಿ(ನ್ಯಾಯಾಲಯಕ್ಕೆ ಸಲಹೆ ನೀಡುವವರು) ರಾಜು ರಾಮಚಂದ್ರನ್‌ ನೀಡಿರುವ ಸಲಹೆಗಳ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಸೂಚಿಸಿದೆ. ಈ ವಿಚಾರ ಮುಖ್ಯನ್ಯಾಯೂಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಾಧೀಶರಾದ ಎ.ಎಂ.ಖಾನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ ಅವರನ್ನು ಒಳಗೊಂಡ ಪೀಠದಲ್ಲಿ ಪ್ರಸ್ತಾಪವಾಯಿತು.

‘ಅಮಿಕಸ್‌ ಕ್ಯೂರಿ ಕಾಪ್‌ ಪಂಚಾಯ್ತಿ ಬಗ್ಗೆ ಏನಾದರೂ ಹೇಳಲಿ, ಅದಕ್ಕೆ ನಮಗೂ ಸಂಬಂಧವಿಲ್ಲ. ಆದರೆ, ವಯಸ್ಕರು ಸಮ್ಮತಿಯ ಮೇರೆಗೆ ಮದುವೆಯಾದಾಗ, ಅವರಿಗೆ ಯಾರೂ ತೊಂದರೆ ಕೊಡಬಾರದು ಎಂಬುದು ನಮ್ಮ ಕಾಳಜಿ’ ಎಂದಿದೆ.

ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸಲಹೆಗಳನ್ನು ನೀಡುವ ಅಗತ್ಯವಿಲ್ಲ. ಅಮಿಕಸ್‌ ನೀಡಿರುವ ಸಲಹೆಗಳ ಅನುಸಾರ ಆದೇಶ ಹೊರಡಿಸಲಿದ್ದೇವೆ ಎಂದು ತಿಳಿಸಿದ ಪೀಠವು ವಿಚಾರಣೆಯನ್ನು ಫೆಬ್ರುವರಿ 5ಕ್ಕೆ ಮುಂದೂಡಿತು.

ಈ ವಿಚಾರದ ಕುರಿತು ನ್ಯಾಯಾಲಯವು ಈ ಹಿಂದೆ ಶಕ್ತಿ ವಾಹಿನಿ ಸ್ವಯಂಸೇವಾ ಸಂಸ್ಥೆ, ಅಮಿಕಸ್‌ ಕ್ಯೂರಿ ಮತ್ತು ಕಾಪ್‌ ಪಂಚಾಯ್ತಿಗಳಿಂದ ಸಲಹೆಗಳನ್ನು ಕೇಳಿತ್ತು. ಜಾತಿ ಪಂಚಾಯ್ತಿಗಳನ್ನು ಉತ್ತರ ಭಾರತದಲ್ಲಿ ಕಾಪ್‌ ಎಂದು ಕರೆಯಲಾಗುತ್ತದೆ.

ಮರ್ಯಾದೆ ಹತ್ಯೆ ತಡೆಯಲು ಸೂಕ್ತ ಕ್ರಮಗಳನ್ನು ರೂಪಿಸಲು ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಸ್ವಯಂಸೇವಾ ಸಂಸ್ಥೆ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT