ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50ನೇ ವರ್ಷಕ್ಕೆ ನಿವೃತ್ತಿ ಯೋಜನೆ

Last Updated 16 ಜನವರಿ 2018, 19:30 IST
ಅಕ್ಷರ ಗಾತ್ರ

ನೌಕರಿಯಿಂದ ನಿವೃತ್ತರಾದ ಬಳಿಕ ಸುಖಮಯವಾಗಿ ಬದುಕು ಸಾಗಿಸಬೇಕು ಎನ್ನುವುದು ಪ್ರತಿಯೊಬ್ಬರ ಹಂಬಲವಾಗಿರುತ್ತದೆ. ಇದಕ್ಕಾಗಿ, ಅನೇಕರು ಹಲವಾರು ವರ್ಷಗಳಿಂದಲೇ ಉಳಿತಾಯ ಮತ್ತು ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸುತ್ತಾರೆ. ಆದರೆ, ಯಾವುದೋ ಕಾರಣಕ್ಕೆ ಹಲವರಿಗೆ ನೌಕರಿಗೆ ಸೇರಿದ ಬಳಿಕ ನಿವೃತ್ತಿಗಾಗಿ ಹಣ ಕೂಡಿಡಲು ಸಾಧ್ಯವಾಗುವುದಿಲ್ಲ. ಅಂತವರು ನಿರಾಸೆಯಾಗಬೇಕಾಗಿಲ್ಲ. ಕನಿಷ್ಠ 50 ವರ್ಷವಾದಾಗ ನಿವೃತ್ತಿಯ ಬದುಕಿಗಾಗಿ ಯೋಜನೆ ರೂಪಿಸಿಕೊಳ್ಳಲು ಸಾಧ್ಯವಿದೆ. ಅಂತಹ ಸಾಧ್ಯತೆಗಳನ್ನು ಇಲ್ಲಿ ವಿವರಿಸಲಾಗಿದೆ.

ವೆಚ್ಚಕ್ಕೆ ಕಡಿವಾಣ ಉದ್ಯೋಗದಿಂದ ನಿರ್ದಿಷ್ಟ ಆದಾಯ ದೊರೆಯುತ್ತಿದ್ದರೂ ಕುಟುಂಬಕ್ಕೆ ಸಂಬಂಧಿಸಿದ ವೆಚ್ಚವನ್ನು ಜಾಣತನದಿಂದ ಕಡಿಮೆ ಮಾಡುವುದು ಮೊದಲನೇ ಹಂತ. ನಿವೃತ್ತಿ ಜೀವನದಲ್ಲಿ ಆದಾಯ ಸ್ಥಗಿತಗೊಳುತ್ತದೆ. ಆದರೆ, ವೆಚ್ಚಗಳು ಮುಂದುವರಿಯುತ್ತವೆ. ಹೀಗಾಗಿ, ಸಾಧ್ಯವಿದ್ದರೆ ಸ್ಥಿರಾಸ್ತಿ ಅಥವಾ ಚರಾಸ್ತಿಯನ್ನು ಮಾಡಿಕೊಳ್ಳುವ ಯೋಜನೆ ರೂಪಿಸಿಕೊಳ್ಳಬೇಕು.

ಆಸ್ತಿಗಳಿಂದ ದೊರೆಯುವ ಆದಾಯವನ್ನು ನಿವೃತ್ತಿ ಜೀವನದಲ್ಲಿ ಬಳಕೆ ಮಾಡಿಕೊಳ್ಳಬಹುದು. ವೆಚ್ಚಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಕಡ್ಡಾಯದ ವೆಚ್ಚ ಮತ್ತು ಇನ್ನೊಂದು ವಿವೇಚನೆ ಬಳಸಿ ಮಾಡುವ ವೆಚ್ಚ. ಕುಟುಂಬಕ್ಕೆ ಅತ್ಯಂತ ಅನಿವಾರ್ಯವಾಗಿರುವುದು ಕಡ್ಡಾಯ ವೆಚ್ಚವಾಗುತ್ತದೆ. ವಿವೇಚನೆಯಿಂದ ಬಳಸುವ ವೆಚ್ಚವು ಜೀವನ ಶೈಲಿ ಸೇರಿದಂತೆ ಇತರೆ ವೆಚ್ಚಗಳು ಸೇರಿರುತ್ತವೆ. ಇದು ಆಯಾ ವ್ಯಕ್ತಿಗಳ ಮೇಲೆ ಅವಲಂಬಿತವಾಗಿರುತ್ತದೆ.

ಕಡ್ಡಾಯ ವೆಚ್ಚಗಳನ್ನು ಪೂರೈಸಿದ ಬಳಿಕ ಹಣ ಹೆಚ್ಚು ಉಳಿಯತೊಡಗಿದಾಗ ಬಹುತೇಕ ಮಂದಿ ವಿವೇಚನೆಯಿಂದ ಮಾಡುವ ವೆಚ್ಚವನ್ನು ಬಳಸತೊಡಗುತ್ತಾರೆ. ಕ್ರಮೇಣ ಇದು ಹವ್ಯಾಸವಾಗಿ ಬೆಳೆಯತೊಡಗಿದಾಗ ಮುಂದಿನ ದಿನಗಳಲ್ಲಿ ಇದೇ ಕಡ್ಡಾಯ ವೆಚ್ಚವಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ, ಎಚ್ಚರವಹಿಸುವುದು ಮುಖ್ಯ.

ತಡವಾಗಿಯಾದರೂ ಎಚ್ಚರ ಮುಖ್ಯ ಹಲವು ಮಂದಿ ಉಳಿತಾಯ ಯೋಜನೆಯಲ್ಲಿ ಹಣ ತೊಡಗಿಸಲಿಲ್ಲ ಅಥವಾ ಯಾವುದೇ ಆಸ್ತಿ ಮಾಡಲಿಲ್ಲ ಎಂದು ಕೊರಗುತ್ತಾರೆ. ಇದರಿಂದ, ನಿವೃತ್ತಿ ಜೀವನ ಸಾಗಿಸುವುದು ಹೇಗೆ ಎನ್ನುವ ಚಿಂತೆ ಕಾಡತೊಡಗುತ್ತದೆ. ಪರವಾಗಿಲ್ಲ. ಬಹಳ ತಡವಾಗಿದೆ ಎನ್ನುವ ಆತಂಕವೂ ಎದುರಾಗುತ್ತದೆ. ನಿಮ್ಮ ವಯಸ್ಸಿಗೆ ಅನುಕೂಲವಾಗುವಂತೆ ಹಣಕಾಸಿನ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿ ಹಣ ಹೂಡಿಕೆ ಮಾಡುವ ಬಗ್ಗೆ ಯೋಚನೆ ಮಾಡಿ.

ಸಣ್ಣ ವಯಸ್ಸಿನಿಂದ ಉಳಿತಾಯ ಆರಂಭಿಸಿದರೆ ಕಡಿಮೆ ಮೊತ್ತವನ್ನು ಹೂಡಲು ಅವಕಾಶ ದೊರೆಯುತ್ತದೆ ವಯಸ್ಸಾದಂತೆ, ಹೆಚ್ಚು ಮೊತ್ತವನ್ನು ಭರಿಸಬೇಕಾಗುತ್ತದೆ. ₹ 2 ಲಕ್ಷ ಸಂಬಳ ಪಡೆಯುವ ವ್ಯಕ್ತಿ ಪ್ರತಿ ತಿಂಗಳು ರೂ 50 ಸಾವಿರದವರೆಗೆ ಸುಲಭವಾಗಿ ಉಳಿತಾಯ ಮಾಡಬಹುದು. ಇದು ನಿವೃತ್ತಿ ವೇಳೆಗೆ ದೊಡ್ಡ ಮೊತ್ತವಾಗುತ್ತದೆ.

ಕಾಲಕ್ಕೆ ತಕ್ಕಂತೆ ಆದಾಯವೂ ಹೆಚ್ಚಾಗಬೇಕಾಗುತ್ತದೆ. 20 ವಯಸ್ಸಿನವರಿದ್ದಾಗ ಶೇಕಡ 20ರಷ್ಟು ಉಳಿತಾಯ ಮಾಡಿದರೆ 50 ವಯಸ್ಸಿನವರಿದ್ದಾಗ ಶೇಕಡ 50ರಷ್ಟು ಉಳಿತಾಯವಾಗುವಂತೆ ಯೋಜನೆ ರೂಪಿಸಿದರೆ ಉತ್ತಮ. ಆಸ್ತಿ ರೂಪದಲ್ಲಿನ ಮೊದಲ ₹ 10 ಲಕ್ಷ ಗಳಿಸಲು 15 ವರ್ಷಗಳನ್ನು ತೆಗೆದುಕೊಂಡಿದ್ದರೆ ಎರಡನೇ ಹಂತದಲ್ಲಿ ₹ 10 ಲಕ್ಷ ಗಳಿಸಲು 10 ವರ್ಷಗಳನ್ನು ತೆಗೆದುಕೊಳ್ಳಬೇಕು. ಮೂರನೇ ಹಂತದಲ್ಲಿ ಕೇವಲ 5 ವರ್ಷದಲ್ಲಿ ಪೂರೈಸಬೇಕು.

ಸಾಲದಿಂದ ಮುಕ್ತರಾಗಿರಬೇಕು ನಿವೃತ್ತಿಗೆ ಮುನ್ನ ಎಲ್ಲ ರೀತಿಯಲ್ಲೂ ಸಾಲದಿಂದ ಮುಕ್ತರಾಗಿರುವಂತೆ ಯೋಜನೆ ರೂಪಿಸಿಕೊಳ್ಳಬೇಕು. ಉದಾಹರಣೆಗೆ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಲು ಸಾಲ ಪಡೆದಿರುತ್ತಾರೆ ಎಂದು ಭಾವಿಸಿಕೊಳ್ಳೋಣ. ಈಗ ಮಕ್ಕಳು ಪದವಿ ಪಡೆದು ಉದ್ಯೋಗದಲ್ಲಿದ್ದರೆ ಅವರು ಸಾಲ ಮರುಪಾವತಿಸಬೇಕು. ಪೋಷಕರು ಸಾಲವನ್ನು ಮಕ್ಕಳಿಗೆ ವರ್ಗಾವಣೆ ಮಾಡಬೇಕು. ಈ ಮೂಲಕ ಸಾಲದಿಂದ ಋಣಮುಕ್ತರಾಗಬೇಕು.

ನಿವೃತ್ತಿ ಸಂದರ್ಭದಲ್ಲಿ ದೊರೆಯುವ ಮೊತ್ತದಿಂದ ಹೆಚ್ಚಿನ ಆದಾಯ ದೊರೆಯುವಂತೆ ಸುರಕ್ಷಿತವಾದ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕು. ಆದರೆ, ಕೆಲವರು ಹಣ ಉಳಿತಾಯದ ಗೋಜಿಗೆ ಹೋಗಿರುವುದಿಲ್ಲ. ಒಂದು ವೇಳೆ ಹಣ ಉಳಿಸಿದ್ದರೂ ಅದು ಆದಾಯ ತರುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿರುವುದಿಲ್ಲ. ನಿವೃತ್ತಿಗೆ ಮುನ್ನವೇ ಮತ್ತೊಂದು ಉದ್ಯೋಗ ಪ್ರಸ್ತುತ ಉದ್ಯೋಗದಲ್ಲಿದ್ದಾಗಲೇ ಇನ್ನೊಂದು ವೃತ್ತಿಯ ಬಗ್ಗೆ ಯೋಚಿಸಿ. ನಿವೃತ್ತಿ ಬಳಿಕ ಉದ್ಯೋಗ ಹುಡುಕುವುದು ಉತ್ತಮ ಯೋಚನೆ ಅಲ್ಲ. ಈಗಿರುವ ಉದ್ಯೋಗದಲ್ಲಿದ್ದಾಗ ದೊರೆಯುವ ಸಂಪರ್ಕ,

ಸಂಬಂಧಗಳನ್ನು ಬಳಸಿಕೊಂಡು ನಿವೃತ್ತಿಯಾದ ತಕ್ಷಣವೇ ಉದ್ಯೋಗ ದೊರೆಯುವಂತೆ ಯೋಚಿಸಿ. ನಿವೃತ್ತಿಯಾದ ಬಳಿಕ ಏನು ಮಾಡಬೇಕು ಎನ್ನುವ ಬಗ್ಗೆ ಸಮಗ್ರವಾದ ಯೋಜನೆ ರೂಪಿಸಿ. ಜತೆಗೆ ಸಮಯಕ್ಕೆ ತಕ್ಕಂತೆ ಹೂಡಿಕೆ ಬಗ್ಗೆ ಯೋಚಿಸಿ. ನಿವೃತ್ತಿ ಹಂತದಲ್ಲಿ ಸಮಯ, ಹಣ ಮತ್ತು ದೈಹಿಕ ಸಾಮರ್ಥ್ಯದ ಅಂಶಗಳು ಮುಖ್ಯವಾಗುತ್ತವೆ.
ಆಸ್ತಿ ಹಂಚಿಕೆ ಪಠ್ಯಪುಸ್ತಕಗಳ ಪ್ರಕಾರ, ಶೇಕಡ 30ರಷ್ಟು ಆಸ್ತಿ, ಶೇಕಡ 30ರಷ್ಟು ಷೇರು ಮಾರುಕಟ್ಟೆಯಲ್ಲಿ ಮತ್ತು ಶೇಕಡ 30ರಷ್ಟು ನಿಶ್ಚಿತ ಆದಾಯದಲ್ಲಿ ಹಣ ಹೂಡಿಕೆ ಮಾಡಬೇಕು. ಉಳಿದ ಶೇಕಡ 10ರಷ್ಟು ಹಣವನ್ನು ನಗದು ಮತ್ತು ಚಿನ್ನ ಖರೀದಿಯಲ್ಲಿ ತೊಡಗಿಸಿಕೊಳ್ಳಬೇಕು. ನೀವು ವಾಸಿಸುವ ಸ್ವಂತ ಮನೆಯೂ ನಿಮ್ಮದೇ ಆಸ್ತಿಯಾಗಿರುತ್ತದೆ. ಷೇರು ಮೊತ್ತ ನಿವೃತ್ತಿ ಬಳಿಕ ದ್ವಿಗುಣವಾಗಬಹುದು. ನಿಶ್ಚಿತ ಆದಾಯ ನಿಮ್ಮ ವೆಚ್ಚಗಳನ್ನು ನಿಭಾಯಿಸುತ್ತದೆ.

50 ವರ್ಷವಾದಾಗಲೂ ಆಸ್ತಿ ಖರೀದಿಗೆ ಹಣ ಹೂಡಿಕೆ ಮಾಡಬಹುದು. ಆದರೆ, ಇದಕ್ಕೆ ಕೆಲವು ಸಣ್ಣಪುಟ್ಟ ತ್ಯಾಗಗಳಿಗೂ ಸಿದ್ಧರಾಗಿರಬೇಕಾಗುತ್ತದೆ. ಕಡಿಮೆ ವೆಚ್ಚ ಮಾಡಬೇಕು. ಅತಿ ಹೆಚ್ಚು ಉಳಿತಾಯ ಮಾಡಬೇಕು ಮತ್ತು ಹೂಡಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆಸ್ತಿ ಮಾಡಬಹುದು. ಹೀಗಾಗಿ, ಜಾಣತನದ ಹೂಡಿಕೆ ಬಗ್ಗೆ ಯೋಚಿಸಿ ಜೀವನ ರೂಪಿಸಿಕೊಳ್ಳಬೇಕು.

ಸರ್ವನಾ ಕುಮಾರ್‌

(ಎಲ್‌ಐಸಿ ಎಂಎಫ್‌ನ ಸಿಐಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT