ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇನು ದನಗಳಾ?: ಅನಂತಕುಮಾರ ಹೆಗಡೆ

ಕೌಶಲ ಅಭಿವೃದ್ಧಿ ಕುರಿತ ಸಮ್ಮೇಳನದಲ್ಲಿ ಬುದ್ಧಿಜೀವಿಗಳ ವಿರುದ್ಧ ಮತ್ತೆ ಹರಿಹಾಯ್ದ ಕೇಂದ್ರ ಸಚಿವ
Last Updated 16 ಜನವರಿ 2018, 19:42 IST
ಅಕ್ಷರ ಗಾತ್ರ

ಬೆಳಗಾವಿ: ‘ಜೀವನದಲ್ಲಿ ಏನಾಗಬೇಕೆಂದು ಕೇಳಿದರೆ ಕೆಲ ಬುದ್ಧಿಜೀವಿಗಳು ಮೊದಲು ಮಾನವನಾಗಬೇಕು ಎಂದು ಹೇಳುತ್ತಾರೆ. ಹಾಗಾದರೆ ಇಷ್ಟು ದಿನ ನಾವೇನು ದನಗಳಾಗಿದ್ದೇವಾ? ಮನುಷ್ಯರಾಗಿ ಹುಟ್ಟಿದ ಮೇಲೆ ನಾವು ಮನುಷ್ಯರಲ್ಲವೇ?’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ
ಹರಿಹಾಯ್ದರು.

ಸ್ಕಿಲ್‌ ಇಂಡಿಯಾ ಅಡಿ ಇಲ್ಲಿ ಆಯೋಜಿಸಿರುವ ‘ಸ್ಕಿಲ್‌ ಆನ್‌ ವ್ಹೀಲ್ಸ್‌’  ಕೌಶಲ ಅಭಿವೃದ್ಧಿ ಕುರಿತು ರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಮನುಷ್ಯರಾಗಿ ಹುಟ್ಟಿದ ಮೇಲೆ ಮತ್ತೆ ಮನುಷ್ಯರಾಗುವುದರಲ್ಲಿ ವಿಶೇಷ ಏನಿದೆ? ಅವರಿಗೆ ದೃಷ್ಟಿದೋಷವಿರಬೇಕು. ಸಂಸ್ಕೃತದಲ್ಲಿ ಶ್ಲೋಕ
ವೊಂದಿದೆ. ಮನುಷ್ಯರಾಗಿ ಹುಟ್ಟಿದವರು ದೇವರಾಗಲು ಪ್ರಯತ್ನಿಸಬೇಕು. ನಾವೆಲ್ಲ ದೇವರಾಗಲು ಪ್ರಯತ್ನಿಸಬೇಕು’ ಎಂದರು.

‘ಸರ್ಕಾರದಿಂದ ಸೈಟ್‌ ಪಡೆದುಕೊಳ್ಳಲು ಕೆಲವರು ಸಾಹಿತಿ ಎನ್ನುವ ಪಟ್ಟ ಕಟ್ಟಿಕೊಂಡಿದ್ದಾರೆ. ಬರೆದಿದ್ದೇ ಸಾಹಿತ್ಯ, ಗೀಚಿದ್ದೇ ಕವಿತೆ ಎನ್ನುವಂತಾಗಿದೆ. ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ. ತುದಿ ಇಲ್ಲ, ಬುಡವೂ ಇಲ್ಲ’ ಎಂದು ಟೀಕಿಸಿದರು.

‘ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚಾಗಲಿದೆ. ಬಲಿಷ್ಠರು ಮಾತ್ರ ಬದುಕುವಂತಹ ಸ್ಥಿತಿ ಬರಲಿದೆ. ದುರ್ಬಲರನ್ನು ದೇವರಲ್ಲ, ಅವರ ತಾಯಿ ಕೂಡ ರಕ್ಷಿಸಲಾರಳು. ಅದಕ್ಕಾಗಿ ಯುವಕರು ಬಲಿಷ್ಠರಾಗಲು ಪ್ರಯತ್ನಿಸಬೇಕು. ನಾವು ಅಂದುಕೊಂಡಿದ್ದನ್ನು ಸಾಧಿಸುವ ಛಲ ಹೊಂದ
ಬೇಕು. ಹುಟ್ಟಿದ್ದು ಆಳಲಿಕ್ಕೋಸ್ಕರ ಎನ್ನುವ ಧ್ಯೇಯದೊಂದಿಗೆ ಯುವಕರು ಮುನ್ನುಗ್ಗಬೇಕು’ ಎಂದು ಹೇಳಿದರು.

‘ನಾನು ಹೋದಲೆಲ್ಲಾ ಸ್ವಚ್ಛ ಮಾಡುತ್ತೀರಾ?’

(ಪ್ರಕಾಶ್ ರೈ ಟ್ವೀಟ್‌)

ಬೆಂಗಳೂರು: ‘ಶಿರಸಿಯಲ್ಲಿ ನಾನು ಮಾತನಾಡಿದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ಸ್ವಚ್ಛಗೊಳಿಸಿದ್ದಾರೆ. ನಾನು ಎಲ್ಲೆಲ್ಲಿ ಹೋಗುತ್ತೇನೋ ಅಲ್ಲೆಲ್ಲಾ ನೀವು ಇದೇ ರೀತಿ ಸ್ವಚ್ಛ ಹಾಗೂ ಪವಿತ್ರಗೊಳಿಸುವ ಕಾರ್ಯವನ್ನು ಮುಂದುವರಿಸುತ್ತೀರಾ’ ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಮಂಗಳವಾರ (ಜ.16) ಪ್ರಕಟವಾಗಿರುವ ವರದಿಯ ಚಿತ್ರ ಮತ್ತು #justasking ಎಂಬ ಹ್ಯಾಷ್‌ಟ್ಯಾಗ್‌ ಜತೆಗೆ ರೈ ಈ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಒಂದು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 300ಕ್ಕೂ ಹೆಚ್ಚು ಜನರು ರೀಶೇರ್ ಮಾಡಿದ್ದಾರೆ.

ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ (ಜ.13) ನಡೆದ ಕಾರ್ಯಕ್ರಮದಲ್ಲಿ ಪ್ರಕಾಶ್‌ ರೈ ಪಾಲ್ಗೊಂಡಿದ್ದರು. ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದ ವೇದಿಕೆ ಹಾಗೂ ಮಠದ ಆವರಣವನ್ನು ಸೋಮವಾರ ಗೋಮೂತ್ರ ಸಿಂಪಡಿಸಿ ಸ್ವಚ್ಛಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT