ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾವಣಿ ಕುಸಿದು ಬಿದ್ದು ಸೆರೆಸಿಕ್ಕ!

Last Updated 16 ಜನವರಿ 2018, 20:39 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯೊಬ್ಬರ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಸೋಮಶೇಖರ್‌ ಎಂಬಾತನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆಯ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.

ಓಮ್ನಿ ವಾಹನದಲ್ಲಿ ಮಹಿಳೆಯನ್ನು ಹಿಂಬಾಲಿಸಿ ಆರೋಪಿ ಈ ಕೃತ್ಯ ಎಸಗಿದ್ದ. ಮಂಗಳವಾರ ನಸುಕಿನಲ್ಲಿ ಗಸ್ತಿನಲ್ಲಿದ್ದ ಕಾನ್‌ಸ್ಟೆಬಲ್‌ ಮಹೇಶ್‌ ನಾಯಕ್‌ ಹಾಗೂ ಬಸವರಾಜ್‌, ಆತನನ್ನು ಬೆನ್ನಟ್ಟಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆತ, ಮನೆಯೊಂದರ ಚಾವಣಿ ಏರಿದ್ದ. ಕೆಲ ನಿಮಿಷದಲ್ಲೇ ಆ ಚಾವಣಿ ಕುಸಿದಿತ್ತು. ಅದರೊಂದಿಗೆ ಆರೋಪಿಯು ಮನೆಯೊಳಗೆ ಬಿದ್ದಿದ್ದ. ಬಳಿಕ ಸಿಬ್ಬಂದಿ, ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದರು.

‘ನಗರದ ಹಲವೆಡೆ ಸೋಮವಾರ ಸರಗಳವು ಪ್ರಕರಣಗಳು ಹೆಚ್ಚು ವರದಿಯಾಗಿದ್ದವು. ಹೀಗಾಗಿ ರಾತ್ರಿಯಿಂದಲೇ ಗಸ್ತು ಹೆಚ್ಚಿಸಿದ್ದೆವು. ಸರ ಕಿತ್ತುಕೊಂಡು ಹೊರಟಿದ್ದ ಆರೋಪಿ, ಓಮ್ನಿ ವಾಹನದಲ್ಲಿ ಪರಾರಿಯಾದ ಬಗ್ಗೆ ಸ್ಥಳೀಯರೊಬ್ಬರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಬೆಳಿಗ್ಗೆ 5.30ಕ್ಕೆ ಓಮ್ನಿ ಗಮನಿಸಿದ್ದ ಕಾನ್‌ಸ್ಟೆಬಲ್‌ಗಳು, ರಸ್ತೆಯಲ್ಲೇ ತಡೆದು ನಿಲ್ಲಿಸಿದ್ದರು. ಆಗ ಆರೋಪಿ, ಓಮ್ನಿ ವಾಹನದಿಂದ ಕೆಳಗೆ ಇಳಿದು ಓಡಲಾರಂಭಿಸಿದ್ದ. ಅದೇ ವೇಳೆ ಕಟ್ಟಡವೊಂದರ ಮಹಡಿ ಏರಿ ಚಾವಣಿಯಿಂದ ಚಾವಣಿಗೆ ಜಿಗಿಯಲಾರಂಭಿಸಿದ್ದ. ಆತನನ್ನು ಕಾನ್‌ಸ್ಟೆಬಲ್‌ಗಳು ಸಹ ಬೆನ್ನಟ್ಟಿದ್ದರು. ಆತ, ಸಾವಿತ್ರಮ್ಮ ಎಂಬುವರ ಮನೆಯ ಚಾವಣಿ ಮೇಲೆ ಕಾಲಿಡುತ್ತಿದ್ದಂತೆ, ಸಿಮೆಂಟ್ ಶೀಟ್ ಕುಸಿದು ಬಿದ್ದಿತ್ತು’ ಎಂದು ವಿವರಿಸಿದರು.

‘ಸಾವಿತ್ರಮ್ಮ ಹಾಗೂ ಅವರ ಕುಟುಂಬದವರು, ಪಕ್ಕದ ಇನ್ನೊಂದು ಕೊಠಡಿಯಲ್ಲಿ ಮಲಗಿದ್ದರಿಂದ ಯಾವುದೇ ತೊಂದರೆಯಾಗಿಲ್ಲ. ಘಟನೆಯಲ್ಲಿ ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.

ವಾಹನ ಕದ್ದು ತಂದಿದ್ದ:

‘ಆನೇಕಲ್‌ ನಿವಾಸಿಯಾದ ಆರೋಪಿ, ಕಳ್ಳತನಕ್ಕೆಂದು ಓಮ್ನಿ ವಾಹನ ಕದ್ದಿದ್ದ. ಅದರಲ್ಲೇ ನಗರಕ್ಕೆ ಬಂದಿದ್ದ ಎಂಬ ಮಾಹಿತಿಯಷ್ಟೇ ಗೊತ್ತಾಗಿದೆ. ಆತನ ಪೂರ್ವಾಪರ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT