ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿ

Last Updated 17 ಜನವರಿ 2018, 6:45 IST
ಅಕ್ಷರ ಗಾತ್ರ

ವಿಜಯಪುರ: ‘ಮುಂಬರುವ ವಿಧಾನಸಭಾ ಚುನಾವಣೆಯ ನಿಮಿತ್ತ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಗಳನ್ನು ತಪ್ಪದೇ ನಿರ್ವಹಿಸಿ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಚುನಾವಣೆಗೆ ಸಂಬಂಧಪಟ್ಟಂತೆ ನೀಡಿರುವ ಜವಾಬ್ದಾರಿಗಳ ಪರಿಶೀಲನೆಗಾಗಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಜ 22ರವರೆಗೆ ವಿಸ್ತರಿಸಲಾಗಿದೆ. ಮತದಾರ ಪಟ್ಟಿಯಿಂದ ಹೊರಗುಳಿದ ಎಲ್ಲ ಅರ್ಹ ಮತದಾರರು ತಪ್ಪದೇ ತಮ್ಮ ಹೆಸರನ್ನು ಸೇರ್ಪಡಿಸಲು ನೋಂದಾಯಿಸಿಕೊಳ್ಳುವಂತೆ ಇದೇ ಸಂದರ್ಭ ಮನವಿ ಮಾಡಿದರು.

‘ಈ ಅವಧಿಯೊಳಗೆ ಎಲ್ಲ ಎಇಆರ್ಓಗಳಾದ ತಹಶೀಲ್ದಾರರು, ಬಿಎಲ್ಓಗಳು ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು, ಮತದಾರ ಪಟ್ಟಿಗೆ ಸೇರ್ಪಡೆಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಪದವಿ ಕಾಲೇಜು ಪ್ರಾಚಾರ್ಯರು ಜಿಲ್ಲೆಯ ಎಲ್ಲ ತಾಂತ್ರಿಕ, ವೈದ್ಯಕೀಯ, ಪದವಿ ಕಾಲೇಜ್‌ಗಳಿಗೆ ಭೇಟಿ ನೀಡಿ, ಆಯಾ ಕಾಲೇಜುಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, 18 ವರ್ಷ ಪೂರೈಸಿದ ಯುವಕರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಕುರಿತಂತೆ, ಸೂಕ್ತ ಅರ್ಜಿ ನಮೂನೆಗಳನ್ನು ಒದಗಿಸಿ ಹೆಚ್ಚಿನ ರೀತಿಯಲ್ಲಿ ಚುನಾವಣಾ ಗುರುತಿನ ಚೀಟಿ ಪಡೆಯುವಂತೆ ನೋಡಿಕೊಳ್ಳಬೇಕು. ಮುಂಬರುವ ಮೂರು ದಿನ ಈ ಚಟುವಟಿಕೆಯನ್ನು ತಪ್ಪದೆ ನಿರ್ವಹಿಸಿ’ ಎಂದು ಸಂಬಂಧಿಸಿದ ಪ್ರಾಚಾರ್ಯರಿಗೆ ಸಲಹೆ ನೀಡಿದರು.

‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲ ಅಧಿಕಾರಿಗಳು, ಯಾವುದೇ ಲೋಪಕ್ಕೆ ಅವಕಾಶ ನೀಡದೇ ಈಗಿನಿಂದಲೇ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಬೇಕು. ಮತದಾನ ಕೇಂದ್ರಗಳು ಸಮರ್ಪಕವಾಗಿ ಸ್ಥಾಪನೆಯಾಗುವ ಜತೆಗೆ, ಅವುಗಳಿಗೆ ಸೂಕ್ತ ಸೌಕರ್ಯಗಳಿರುವಂತೆ ನೋಡಿಕೊಳ್ಳಬೇಕು.

ಮತದಾನ ಯಂತ್ರಗಳ ನಿರ್ವಹಣೆ, ರವಾನೆ, ಮತಗಟ್ಟೆಗಳ ಸ್ಥಾಪನೆ ಸೇರಿದಂತೆ ಇನ್ನಿತರ ಎಲ್ಲ ಕ್ರಮಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸಬೇಕು. ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆಗೆ ಸಂಬಂಧಪಟ್ಟಂತೆ ಚುನಾವಣಾ ಆಯೋಗದ ನಿರ್ದೇಶದನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು.

ಮತಪತ್ರಗಳ ನಿರ್ವಹಣೆ, ಶಿಷ್ಟಾಚಾರ ಪಾಲನೆ, ಮತದಾರರಲ್ಲಿ ಮತದಾನದ ಕುರಿತು ಜಾಗೃತಿ, ಮತದಾರರ ಗುರುತಿನ ಚೀಟಿ ಪಡೆಯುವ ಕುರಿತು ಸೂಕ್ತ ಜಾಗೃತಿ, ಮತಗಟ್ಟೆಗಳ ಆನ್‌ಲೈನ್‌ (ಅಪಡೇಟ್) ಆಧುನೀಕರಣ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

‘ಮತದಾನದ ಜಾಗೃತಿ ಅಂಗವಾಗಿ ಸೂಕ್ತ ಕ್ರಿಯಾ ಯೋಜನೆಯೊಂದಿಗೆ ಜಿಲ್ಲೆಯಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮತದಾರರ ಪಟ್ಟಿ, 18 ವಯೋಮಾನ ಕಡಿಮೆ ಹಾಗೂ ಹೆಚ್ಚಿರುವ ಮತದಾರರ ಬಗ್ಗೆ ಅಂಕಿ-ಅಂಶಗಳ ಮಾಹಿತಿ, ಅವಶ್ಯಕತೆ ಇರುವ ಮತಗಟ್ಟೆಗಳ ಮಾಹಿತಿ, ಲಿಂಗ ಅನುಪಾತಗಳ ಸೂಕ್ತ ಮಾಹಿತಿ ಸೇರಿದಂತೆ ಶಾಲಾ-ಕಾಲೇಜುಗಳಲ್ಲಿಯೂ ಸೂಕ್ತ ಅರಿವು ಮೂಡಿಸಬೇಕು. ವಿವಿಧ ಗ್ರಾಮಗಳಲ್ಲಿ ಡಂಗುರ ಸಾರಿಸಿ ಜಾಗೃತಿ ಮೂಡಿಸಬೇಕು. ಹೆಚ್ಚು ಮತದಾರರು ಮತಪಟ್ಟಿಯಲ್ಲಿ ಸೇರ್ಪಡೆಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ)ದ ಅಧಿಕಾರಿಗಳು ಸೂಕ್ತ ಸಾಫ್ಟ್‌ವೇರ್‌ಗಳ ಅನ್ವಯ ಅವಶ್ಯಕ ಕ್ರಮ ಕೈಗೊಳ್ಳಬೇಕು. ಅವಶ್ಯಕತೆಯಿರುವ ಕಡೆ ತಾಂತ್ರಿಕ ಅಡೆ-ತಡೆಗಳನ್ನು ನಿವಾರಿಸಿಕೊಂಡು ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.

ವೆಬ್‌ಕಾಸ್ಟಿಂಗ್ ತಂಡ ರಚಿಸಿ ಸೂಕ್ತ ತರಬೇತಿಗೊಳಿಸಬೇಕು. ಮತದಾನ ಕೇಂದ್ರವಾರು ನೆಟ್‌ವರ್ಕ್‌ ಮ್ಯಾಪ್‌ಗಳನ್ನು ತಯಾರಿಸಿಟ್ಟುಕೊಳ್ಳಬೇಕು. ಇವಿಎಂ ಯಂತ್ರ ಸರಬರಾಜು ಮಾಡುವಂತಹ ಪ್ರತಿಯೊಂದು ವಾಹನ, ಸ್ಟ್ಯಾಟಿಕ್ ಸರ್ವೇಲನ್ಸ್ ತಂಡ, ಸಂಚಾರಿ ವಿಚಕ್ಷಣ ದಳ ಕಡ್ಡಾಯವಾಗಿ ಜಿಪಿಎಸ್ ಒಳಗೊಂಡ ವಾಹನಗಳು ಇರುವಂತೆ ನೋಡಿಕೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಅವರು ಸೂಚಿಸಿದರು.

ವಿವಿಧ ಜವಾಬ್ದಾರಿಗಳನ್ನು ಈಗಾಗಲೇ ನೀಡಿ, ಸಂಬಂಧಪಟ್ಟ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಆಯಾ ಅಧಿಕಾರಿಗಳು ತಮ್ಮ ಕಾರ್ಯವನ್ನು ಅರ್ಥ ಮಾಡಿಕೊಂಡು ಗಂಭೀರತೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

* * 

ಮತದಾನ ಜಾಗೃತಿ ಕಾರ್ಯಕ್ರಮ ಚುರುಕುಗೊಳಿಸಿ. ಕಾಲೇಜುಗಳಿಗೆ ಭೇಟಿಯಾಗಿ 18 ವರ್ಷ ತುಂಬಿದ ಯುವ ಸಮೂಹದ ನೋಂದಣಿ ಮಾಡಿಸಿ ಕೆ.ಬಿ.ಶಿವಕುಮಾರ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT