ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಗಾಸೆ ಕಲೆ ಬೆಳೆಸುವ ಹಂಬಲ

Last Updated 17 ಜನವರಿ 2018, 8:39 IST
ಅಕ್ಷರ ಗಾತ್ರ

ಚಾಮರಾಜನಗರ: ಜನಪದ ಕಲಾ ಪ್ರಕಾರದಲ್ಲಿ ಒಂದಾದ ವೀರಗಾಸೆ ಕುಣಿತದ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವವರಲ್ಲಿ ತಾಲ್ಲೂಕಿನ ಮಲೆಯೂರು ಗ್ರಾಮದ ಕಲಾವಿದ ಎಂ.ಎನ್‌. ರಾಜು ಕೂಡ ಒಬ್ಬರು.

ಈ ಭಾಗದಲ್ಲಿ ಶುಭ ಸಮಾರಂಭ ನಡೆಯುತ್ತವೆ ಎಂದರೆ ಇವರಿಗೆ ಆಮಂತ್ರಣ ಕಾಯಂ. ಬಣ್ಣದ ವಸ್ತ್ರಗಳು, ತಲೆಗೆ ಅಗಲವಾದ ಕಿರೀಟ, ಕಾಲಿಗೆ ಗೆಜ್ಜೆ ಧರಿಸಿ ವೀರಭದ್ರನ ವೇಷಧಾರಿಯಾಗಿ ವಾದ್ಯಮೇಳದ ಸದ್ದಿಗೆ ಖಡ್ಗ ಬೀಸುತ್ತಾ ಹೆಜ್ಜೆ ಹಾಕ ತೊಡಗಿದರೆ ಪ್ರೇಕ್ಷಕರಿಗೂ ಹೆಜ್ಜೆ ಹಾಕುವ ತವಕ ಮೂಡುತ್ತದೆ.

ಈಗ ಅವರಿಗೆ 56 ವರ್ಷ. ಅವರೊಳಗೆ ಸೇರಿರುವ ವೀರಗಾಸೆ ಕುಣಿತದ ಕಲಾವಿದನಿಗೆ ಮೂವತೈದರ ವಸಂತ ತುಂಬಿದೆ. ಬಾಲ್ಯದಿಂದಲೇ ಬಳುವಳಿಯಾಗಿ ಬಂದ ಕಲೆಯನ್ನು ಆಸಕ್ತಿಯಿಂದ ಕಲಿತ ಅವರು, ಅದನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿ ತಮ್ಮ ಅಳಿಲು ಸೇವೆ ನೀಡುವ ಆಶಯ ಹೊಂದಿದ್ದಾರೆ.

‘ಜಿಲ್ಲಾ ಕೇಂದ್ರದಲ್ಲಿ ನಡೆಯುವ ದಾರ್ಶನಿಕರ ಜಯಂತಿ, ಚಾಮರಾಜೇಶ್ವರ ಸ್ವಾಮಿ ರಥೋತ್ಸವ, ಗಣಪತಿ ವಿಸರ್ಜನಾ ಮಹೋತ್ಸವ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆಯುವ ಮದುವೆ, ಗೃಹಪ್ರವೇಶ ಸಮಾರಂಭಗಳಲ್ಲಿ ನನ್ನ ತಂಡದೊಂದಿಗೆ ಪ್ರದರ್ಶನ ನೀಡಿದ್ದೇನೆ’ ಎಂದು ರಾಜು ತಿಳಿಸಿದರು.

‘ವೀರಗಾಸೆ ಕಲೆಯ ಜೊತೆಗೆ, ವ್ಯವಸಾಯ ಹಾಗೂ ಗ್ರಾಮದ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೌರೋಹಿತ್ಯ ಕೆಲಸ ಮಾಡುತ್ತೇನೆ. ಇದರಿಂದ ಕುಟುಂಬ ನಿರ್ವಹಣೆಗೆ ಯಾವುದೇ ತೊಂದರೆಯಿಲ್ಲ. ಕಲೆಯನ್ನು ಆಸ್ತಕರಿಗೆ ಕಲಿಸುವ ಉದ್ದೇಶದಿಂದ ಶ್ರೀವೀರಭದ್ರೇಶ್ವರ ವೀರಗಾಸೆ ಕಲಾವಿದರ ಸಂಘವನ್ನು ರಚಿಸಿದ್ದೇನೆ. ಸಂಘದಲ್ಲಿ ಪ್ರಸ್ತುತ 15ಜನ ಯುವ ಕಲಾವಿದರಿದ್ದಾರೆ’ ಎನ್ನುವಾಗ ಅವರಲ್ಲಿನ ವೀರಗಾಸೆ ಕುಣಿತದ ಹುಮ್ಮಸ್ಸಿಗೆ ಇನ್ನೂ ತಾರುಣ್ಯ ತುಂಬುತ್ತಿದ್ದಂತೆ ಕಾಣಿಸುತ್ತಿತ್ತು.

ವೀರಗಾಸೆ ಹುಟ್ಟು

ದಕ್ಷಬ್ರಹ್ಮನ ಮಗಳು ದಾಕ್ಷಾಯಿಣಿ ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಈಶ್ವರನನ್ನು ಮದುವೆಯಾಗಿರುತ್ತಾಳೆ. ಹೀಗಾಗಿ ದಕ್ಷಬ್ರಹ್ಮ ತಾನು ಮಾಡುವ ಯಜ್ಞಕ್ಕೆ ಮಗಳನ್ನು ಆಹ್ವಾನಿಸುವುದಿಲ್ಲ. ಆದರೂ, ವಿಷಯ ತಿಳಿದ ದಾಕ್ಷಾಯಿಣಿ ತಂದೆ ನಡೆಸುತ್ತಿರುವ ಯಜ್ಞದಲ್ಲಿ ಪಾಲ್ಗೊಳ್ಳಲು ತೆರಳುತ್ತಾಳೆ.

ಅಲ್ಲಿ ದಕ್ಷಬ್ರಹ್ಮ ಈಶ್ವರನನ್ನು ನಿಂದಿಸುತ್ತಾನೆ. ಪತಿ ನಿಂದನೆಗೆ ನೊಂದ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಳ್ಳುತ್ತಾಳೆ. ಈ ವಿಷಯ ತಿಳಿದ ಈಶ್ವರ ರುದ್ರಾವತಾರ ತಾಳುತ್ತಾನೆ. ತನ್ನ ಹಣೆಯಲ್ಲಿ ಮೂಡುವ ಬೆವರನ್ನು ತೆಗೆದು ಒಗೆಯುತ್ತಾನೆ. ಆ ಬೆವರಿನಲ್ಲಿ ಹುಟ್ಟುವವನೇ ವೀರಭದ್ರ.

ಈತ ವೀರಾವೇಷದಿಂದ ಗಣಗಳ ಜೊತೆ ನುಗ್ಗಿ ಯಜ್ಞವನ್ನು ಹಾಳು ಮಾಡಿ ದಕ್ಷಬ್ರಹ್ಮನ ತಲೆಯನ್ನು ಕತ್ತರಿಸಿ ಯಜ್ಞ ಕುಂಡಕ್ಕೆ ಹಾಕುತ್ತಾನೆ. ಹೀಗೆ ವೀರಗಾಸೆ ನೃತ್ಯ ಹುಟ್ಟಿಕೊಂಡಿತು ಎನ್ನುವ ಪ್ರತೀತಿ ಇದೆ.

ಉತ್ಸವಗಳಲ್ಲಿ ಮೊದಲ ಸ್ಥಾನ

ವೀರಗಾಸೆ ನೃತ್ಯ ಮದುವೆ, ಗೃಹ ಪ್ರವೇಶಗಳಂತಹ ಶುಭ ಸಮಾರಂಭಗಳಲ್ಲಿ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತದೆ. ವೀರಗಾಸೆಯವರು ಹೊಸ ಮನೆಗೆ ನುಗ್ಗಿದರೆ ಅಲ್ಲಿರುವ ದುಷ್ಟಶಕ್ತಿಗಳು ಓಡಿ ಹೋಗುತ್ತವೆ ಎನ್ನುವ ನಂಬಿಕೆ ಇಂದಿಗೂ ಇದೆ.

ಪ್ರಸ್ತುತದ ದಿನಗಳಲ್ಲಿ ವೀರಗಾಸೆ ಕುಣಿತ ಹೆಚ್ಚಾಗಿ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುತ್ತಿದೆ. ಮೆರವಣಿಗೆ, ರಾಜ್ಯೋತ್ಸವ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ವೀರಗಾಸೆ ನೃತ್ಯ ಕಡ್ಡಾಯ ಎನ್ನುವಂತಾಗಿದೆ.

ಎಸ್. ಪ್ರತಾಪ್‌

* * 

ನಾನು ಹಣಕ್ಕಾಗಿ ಕಲೆಯನ್ನು ಆರಿಸಿಕೊಂಡಿಲ್ಲ. ಕಲೆಗಾಗಿ, ಅದರ ಸೆಳೆತಕ್ಕಾಗಿ ಸಂಪ್ರದಾಯವನ್ನು ಉಳಿಸಲು ಆಸೆಪಟ್ಟು ಆಯ್ಕೆ ಮಾಡಿಕೊಂಡಿದ್ದೇನೆ
ರಾಜು ಎಂ.ಎನ್. ವೀರಗಾಸೆ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT