ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವಾಸಿಗಳ ನಿದ್ದೆಗೆಡಿಸಿದ ‘ಒಳಚರಂಡಿ ನೀರು’!

Last Updated 17 ಜನವರಿ 2018, 9:43 IST
ಅಕ್ಷರ ಗಾತ್ರ

ಕಲಬುರ್ಗಿ: ಬಾಗಿಲು ಮತ್ತು ಕಿಟಕಿಗಳು ತೆರೆದರೆ ಗಬ್ಬು ವಾಸನೆ, ಮನೆಯಲ್ಲಿ ವಾಸ– ಊಟ ಮಾಡುವುದಕ್ಕೂ ಬೇಸರ, ಬಡಾವಣೆಯಲ್ಲಿ ಓಡಾಡುವುದಕ್ಕೂ ಹಿಂಜರಿಕೆ, ಹಂದಿಗಳ ಉಪಟಳ, ಸಂಜೆಯಾಗುತ್ತಲೇ ಸೊಳ್ಳೆ, ಕ್ರಿಮಿಕೀಟಗಳ ಕಾಟ...

ಇದು ದತ್ತನಗರದ ನಿವಾಸಿಗಳು ನಿತ್ಯ ಅನುಭವಿಸುವ ನರಕಯಾತನೆ. ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಗಲೀಜು ನೀರು ಉಕ್ಕಿ ಬಡಾವಣೆಯಲ್ಲಿ ‘ಸಣ್ಣಕೆರೆ’ಯೇ ನಿರ್ಮಾಣವಾಗಿರುವುದೇ ಇದಕ್ಕೆ ಕಾರಣ. ಹೊರಗಡೆ ಬಂದ ಮಲ–ಮೂತ್ರ ಹೆಪ್ಪುಗಟ್ಟಿ ದುರ್ವಾಸನೆ ಬರುತ್ತಿರುವುದರಿಂದ ಬಡಾವಣೆಯ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಬಡಾವಣೆಯ ಮೂಲಕ ಬಹಳಷ್ಟು ಹಳೆಯದಾದ ಒಳಚರಂಡಿ ಪೈಪ್‌ ಲೈನ್‌ ಹಾದುಹೋಗಿದೆ. ಈ ಒಳಚರಂಡಿಗಿರುವ 4 ಮ್ಯಾನ್‌ಹೋಲ್‌ಗಳಿಂದ ಗಲೀಜು ನೀರು ಸೋರಿಕೆಯಾಗುತ್ತಿದೆ. ಇದರಲ್ಲಿ ಎಮ್ಮೆ, ಹಂದಿಗಳ ಓಡಾಟದಿಂದ ನೀರು ಮತ್ತಷ್ಟು ಕಲುಷಿತಗೊಂಡು ದುರ್ವಾಸನೆ ಹೆಚ್ಚುತ್ತದೆ.

‘ಸಣ್ಣಕೆರೆಯ ಸುತ್ತ ಸುಮಾರು 25 ಮನೆಗಳು ಇದ್ದು, 40–50 ಮನೆಗಳಿಗೆ ದುರ್ವಾಸನೆ ಹರಡುತ್ತದೆ. ಈ ಮೊದಲು ಈ ಸ್ಥಳದಲ್ಲಿ ಮಳೆ ನೀರು ನಿಂತು ದಿನಕಳೆದಂತೆ ಒಣಗುತ್ತಿತ್ತು. ಆದರೆ, ಮೂರು ತಿಂಗಳಿನಿಂದ ಗಲೀಜು ನೀರು ನಿರಂತರ ಸೋರಿಕೆಯಿಂದ ಸಮಸ್ಯೆ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯೂ ನಮ್ಮನ್ನು ಕಾಡುತ್ತಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ನಿವಾಸಿಗಳು.

‘ಒಳಚರಂಡಿ ನೀರು ಉಕ್ಕುವುದರಿಂದ ಇಲ್ಲಿ ವಾಸಿಸಲು ಆಗದಂತಹ ವಾತಾವರಣ ನಿರ್ಮಾಣವಾಗಿದೆ. ಮನೆಯಲ್ಲಿ ಊಟವೂ ಸೇರುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ಕಳೆದ ಡಿಸೆಂಬರ್‌ನಲ್ಲಿ ಮಹಾನಗರ ಪಾಲಿಕೆಗೆ ನಗರದ ಮುಖಂಡರು ಮನವಿ ಸಲ್ಲಿಸಿದ್ದೆವು. ಆದರೆ, ಪಾಲಿಕೆ ಅಧಿಕಾರಿಗಳು ಈ ಕೆಲಸ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ’ ಎಂದು ಹೇಳುತ್ತಾರೆ ಬಡಾವಣೆಯ ಶಿವಲಿಂಗಪ್ಪ ಸಿಂಗೆ.

ಎಮ್ಮೆಗಾಗಿ ಮ್ಯಾನ್‌ಹೋಲ್‌ಗೆ ಕಲ್ಲು!: ‘ಎಮ್ಮೆಗಳಿಗೆ ಸದಾ ನೀರು ಇರುವ ಕೆಸರಿನ ಪ್ರದೇಶ ಬೇಕು. ಅದಕ್ಕಾಗಿ ಅವುಗಳ ಮಾಲೀಕರು ಉಪಾಯ ಮಾಡಿ ಮ್ಯಾನ್‌ಹೋಲ್‌ಗಳಿಗೆ ಕಲ್ಲು ಹಾಕುತ್ತಾರೆ. ಆಗ ಮ್ಯಾನ್‌ಹೋಲ್‌ ಕಟ್ಟಿ ಅದರಲ್ಲಿನ ಗಲೀಜು ನೀರು ಹೊರಬಂದು ಸಣ್ಣ ಕೆರೆ ನಿರ್ಮಾಣವಾಗುತ್ತದೆ. ಆದರೆ, ಇದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಎಮ್ಮೆ ಮಾಲೀಕರಿಗೆ ತಿಳಿವಳಿಕೆ ನೀಡಿದರೂ ನಮ್ಮ ಮಾತು ಕೇಳಲ್ಲ. ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡಬೇಕು’ ಎಂದು ನಿವಾಸಿಗಳಾದ ಪಿ.ಎಸ್‌.ದತ್ತು, ನಾಗನಗೌಡ ಪಾಟೀಲ, ಶ್ರೀರಾಮ ನಂದೂರು ಆಗ್ರಹಿಸಿದರು.

‘ಒಳಚರಂಡಿ ಮಂಡಳಿ ಅಧಿಕಾರಿಗಳು ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದಲ್ಲಿ ಕಚೇರಿ ಎದುರು ಹೋರಾಟ ನಡೆಸುವುದು ಅನಿವಾರ್ಯ’ ಎಂದು ಎಚ್ಚರಿಸುತ್ತಾರೆ ನಿವಾಸಿಗಳು.

ವಾರದಲ್ಲಿ ಸಮಸ್ಯೆ ಪರಿಹಾರ’

‘ಮ್ಯಾನ್‌ಹೋಲ್‌ ಚೌಕ್‌ಬಂದ್‌ ಆಗಿರುವುದರಿಂದ ನೀರು ಹೊರಗಡೆ ಬರುತ್ತಿದೆ. ಮ್ಯಾನ್‌ಹೋಲ್‌ಗಳಿರುವ ಸ್ಥಳದಲ್ಲಿ ಮುಳ್ಳುಕಂಟಿ ಬೆಳೆದಿದೆ. ಮತ್ತು ಅವುಗಳ ಸುತ್ತ ನೀರು ನಿಂತಿರುವುದರಿಂದ ಮಂಡಳಿಯ ಸ್ವಚ್ಛತಾ ವಾಹನ ಅಲ್ಲಿಗೆ ತೆರಳಲು ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು 6–7 ದಿನಗಳಲ್ಲಿ ಸರಿಪಡಿಸಲಾಗುವುದು’ ಎಂದು ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರಕಾಶ ಹೌದೆ ತಿಳಿಸಿದರು.

* * 

ಒಂದು ಮ್ಯಾನ್‌ಹೋಲ್‌ ರೈಲ್ವೆ ಇಲಾಖೆಯ ಜಾಗದಲ್ಲಿ ಹುದುಗಿದ್ದು, ಅದನ್ನು ತೆಗೆಸುತ್ತೇವೆ ಎಂದಿದ್ದಾರೆ. ಉಳಿದವನ್ನು ಮಂಡಳಿ ಸರಿಪಡಿಸಲಿದೆ.
ಪ್ರಕಾಶ ಹೌದೆ, ಎಇಇ ಒಳಚರಂಡಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT