ಬುಧವಾರ, 24 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತಪದಿ

Last Updated 18 ಜನವರಿ 2018, 8:35 IST
ಅಕ್ಷರ ಗಾತ್ರ

ತೆಲುಗಿನ ನಿರ್ದೇಶಕ ಕೆ. ವಿಶ್ವನಾಥ್‌ ಸಂಗೀತಪ್ರಧಾನ ಸಿನಿಮಾಗಳಿಗೇ ಹೆಸರಾದವರು. 1981ರಲ್ಲಿ ಬಿಡುಗಡೆಯಾದ ‘ಸಪ್ತಪದಿ’ ಅವರಿಗೆ ಜನಪ್ರಿಯತೆ ತಂದುಕೊಟ್ಟ ಸಿನಿಮಾಗಳಲ್ಲಿ ಒಂದು. ವೈದಿಕ ಮತ್ತು ಅವೈದಿಕ ಎಂಬ ಸಾಮಾಜಿಕ ವರ್ಗೀಕರಣ, ಮೇಲು ಜಾತಿ ಮತ್ತು ಹರಿಜನ ಎಂಬ ತರತಮಗಳು ಕಲೆ ಮತ್ತು ಜೀವನ ಎರಡೂ ದೃಷ್ಟಿಯಿಂದಲೂ ಮುಖಾಮುಖಿಯಾಗಿಸಿ ಕೊನೆಗೂ ಮಾನವೀಯತೆಯನ್ನೇ ಗೆಲ್ಲಿಸುವ ಸಿನಿಮಾ ಸಪ್ತಪದಿ.

ವೈಯಕ್ತಿಕ ಒಲವು ಮತ್ತು ಅದಕ್ಕೆ ನಿರ್ಬಂಧ ಹಾಕುವ ಸಾಮಾಜಿಕ ರಿವಾಜುಗಳ ಶೋಧನೆ ಈ ಚಿತ್ರದ ಮುಖ್ಯಧಾರೆಯಲ್ಲಿದೆ. ಯಾಜಿ ಮಹಾನ್ ಸಂಪ್ರದಾಯಸ್ಥ ಬ್ರಾಹ್ಮಣ. ಊರ ದೇವಸ್ಥಾನದ ಅರ್ಚಕ. ತನ್ನ ವೈದಿಕ ಸಂಪ್ರದಾಯಗಳಲ್ಲಿ ಅಪಾರ ನಂಬಿಕೆಯುಳ್ಳವನು. ಅವರ ಮೊಮ್ಮಗ ಗೌರಿನಂದನ ಕೂಡ ಅಜ್ಜನ ದಾರಿಯಲ್ಲಿಯೇ ಸಾಗುತ್ತಿರುವವನು. ಯಾಜಿ ಅವರ ಮಗಳ ಮಗಳು ಹೇಮಾ.

ನಾಟ್ಯಪ್ರವೀಣೆ. ಹೆಜ್ಜೆ– ಗೆಜ್ಜೆಗಳ ಮೂಲಕ ವೇದಿಕೆಯಲ್ಲಿ ದೈವಲೋಕದ ಧನ್ಯತೆಯನ್ನು ಸೃಷ್ಟಿಸುವಷ್ಟು ಪ್ರತಿಭಾವಂತೆ. ಅವಳಿಗೆ ಹರಿಬಾಬು ಎಂಬ ಕೊಳಲುವಾದಕನ ಕಂಡರೆ ಇಷ್ಟ. ಅವನ ಕೊಳಲ ನಾದ ಕೇಳಿದರೆ ಅವಳ ನಡಿಗೆಯಲ್ಲಿ ತಂತಾನೆಯೇ ನಾಟ್ಯದ ಲಯವೊಂದು ಹುಟ್ಟಿಕೊಳ್ಳುತ್ತದೆ.

ಹೀಗಿರುವಾಗ ಯಾಜಿಗಳು ಗೌರಿನಂದನ ಮತ್ತು ಹೇಮಾ ಇಬ್ಬರಿಗೂ ವಿವಾಹ ಮಾಡುವುದೆಂದು ನಿಶ್ಚಯಿಸುತ್ತಾರೆ. ಅದನ್ನು ಪ್ರತಿಭಟಿಸುವ, ತನ್ನ ಮನಸ್ಸಿನ ಪ್ರೀತಿಯನ್ನು ಹೇಳುವ ಯಾವ ಅವಕಾಶವೂ ಹರಿಬಾಬುವಿಗಾಗಲೀ, ಹೇಮಾಳಿಗಾಗಲಿ ದೊರಕುವುದಿಲ್ಲ. ಆಗಲೇ ಹರಿಬಾಬು ‘ಹರಿಜನ’ ಹುಡುಗ ಎಂಬುದೂ ಹೇಮಾಳಿಗೆ ತಿಳಿಯುತ್ತದೆ. ಮದುವೆ ನಡೆದೂ ಹೋಗುತ್ತದೆ. ಆದರೆ ಗೌರಿಬಾಬುವಿಗೆ ಹೇಮಾಳಲ್ಲಿ ದೇವಿಯೇ ಕಾಣಿಸುತ್ತಾಳೆ. ಅವಳನ್ನು ಕಾಮಿಸುವುದು, ಕೂಡುವುದು ಅವನಿಗೆ ಸಾಧ್ಯವೇ ಆಗುವುದಿಲ್ಲ.

ಹೀಗೊಂದು ವಿಚಿತ್ರ ಸನ್ನಿವೇಶದಲ್ಲಿ ವಿಶ್ವನಾಥ್‌, ನಮ್ಮ ಸಮಾಜದಲ್ಲಿನ ಜಾತಿಪದ್ಧತಿಯ ಪ್ರಸ್ತುತತೆ, ಅದು ನಿಜಕ್ಕೂ ಅನಿಷ್ಟವಾ? ಧರ್ಮ ಎಂದರೆ ಏನು? ಅದು ಹುಟ್ಟಿನಿಂದ ಬರುವುದಾ? ನಂತರ ರೂಪುಗೊಳ್ಳುವುದಾ? ಧರ್ಮ ಜಾತಿಗಳನ್ನು ಉಳಿಸಿಕೊಂಡೇ ಈ ಸಮಾಜವನ್ನು ಮರುರಚಿಸಿಕೊಳ್ಳುವುದು ಸಾಧ್ಯವಾ? ಎಂಬೆಲ್ಲ ಹಲವು ಪ್ರಶ್ನೆಗಳನ್ನು ಎತ್ತುತ್ತಾರೆ. ಈ ಪ್ರಶ್ನೆಗಳನ್ನು ಚಿತ್ರದೊಳಗಿನ ಪಾತ್ರಗಳೂ ಎತ್ತುತ್ತವೆ, ಹಾಗೆಯೇ ನೋಡುಗರ ಮನಸ್ಸಿನಲ್ಲಿಯೂ ಏಳುವಂತೆ ಸಿನಿಮಾ ಮಾಡುತ್ತದೆ.

ಯಾರನ್ನೋ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ, ಇನ್ನೊಬ್ಬರನ್ನು ಗೆಲ್ಲಿಸುವ ಅಥವಾ ಜಾತಿ ವ್ಯವಸ್ಥೆಯ ಕರಾಳ ಮುಖವನ್ನು ತೋರಿಸುವ ಯಾವ ಉದ್ದೇಶವೂ ಇಲ್ಲದೆ ಮಾನವೀಯತೆಯನ್ನು ಉದ್ದೀಪಿಸುವುದನ್ನಷ್ಟೇ ಗಮನದಲ್ಲಿಟ್ಟುಕೊಂಡಿರುವ ಸಿನಿಮಾ ಇದು. ಆದ್ದರಿಂದಲೇ ಈ ಚಿತ್ರವನ್ನು ಭಾವುಕತೆಯ ಮೈಮರೆವಿನ ಹೊರಗೆ ನಿಂತುನೋಡಿದಾಗ ಕೊಂಚ ಅಸಹಜವಾಗಿಯೂ ಕಾಣುತ್ತದೆ.

ಹೆಜ್ಜೆ ಹೆಜ್ಜೆಗೂ ಎದುರಾಗುವ ಹಾಡುಗಳು ಒಂದಕ್ಕಿಂತ ಇನ್ನೊಂದು ಚೆನ್ನಾಗಿವೆ. ಕೆ.ವಿ. ಮಹದೇವನ್‌ ಮತ್ತು ವೇಟುರಿ ಸುಂದರರಾಮ ಮೂರ್ತಿ ಅವರ ಸಂಯೋಜನೆಯ ಹಾಡುಗಳನ್ನು ಕೇಳುವುದೇ ವಿಶಿಷ್ಟ ಅನುಭವ ನೀಡುತ್ತದೆ.

ಈ ಚಿತ್ರವನ್ನು ಯೂ ಟ್ಯೂಬ್‌ನಲ್ಲಿ https://goo.gl/gNCx8F ಲಿಂಕ್‌ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT