ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟು ನಿಸರ್ಗ ಸಹಜ...

Last Updated 17 ಜನವರಿ 2018, 19:30 IST
ಅಕ್ಷರ ಗಾತ್ರ

‘ಪ್ಯಾಡ್‌ಮನ್’ ಚಿತ್ರ ಜನವರಿ 25ಕ್ಕೆ ತೆರೆಕಾಣಲಿದೆ. ಚಿತ್ರದ ಬಗ್ಗೆ ಅಕ್ಷಯ್ ವಿವಿಧ ಸಂದರ್ಭಗಳಲ್ಲಿ ಹೇಳಿರುವ ಮಾತುಗಳನ್ನು ಪೋಣಿಸಿಕೊಟ್ಟಿದ್ದಾರೆ ರೇಷ್ಮಾಶೆಟ್ಟಿ

‘ಟಾಯ್ಲೆಟ್‌: ಏಕ್ ಪ್ರೇಮ್ ಕಥಾ’ ಹಾಗೂ ‘ಪ್ಯಾಡ್‌ಮನ್’ ಸಾಮಾಜಿಕ ಬದ್ಧತೆಯುಳ್ಳ ಸಿನಿಮಾಗಳು. ಒಬ್ಬ ನಟನಾಗಿ ನನಗೆ ಸಿನಿಮಾದ ಮೂಲಕ ಸಮಾಜದಲ್ಲಿ ಬದಲಾವಣೆ ತರುವುದು ಖುಷಿಯ ವಿಷಯ. ‘ಟಾಯ್ಲೆಟ್ ...’ ಬಿಡುಗಡೆಗೂ ಮುನ್ನ ನಮ್ಮ ದೇಶದ ಶೇ62ರಷ್ಟು ಮಂದಿ ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿದ್ದರು. ಈಗ ಅದು ಶೇ33ಕ್ಕೆ ಇಳಿದಿದೆ. ‘ಪ್ಯಾಡ್‌ಮನ್’ ಬಗ್ಗೆಯೂ ನನಗೆ ಇಂಥದ್ದೇ ನಿರೀಕ್ಷೆಗಳಿವೆ.

ನನಗೆ 20 ವರ್ಷ ವಯಸ್ಸಾಗುವವರೆಗೂ ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದೀಚೆಗೆ ಮುಟ್ಟಿನ ಬಗ್ಗೆ ತಿಳಿದುಕೊಂಡೆ. ‘ಪ್ಯಾಡ್‌ಮನ್’ ಟೀಸರ್ ನೋಡಿದ ಮೇಲೆ ಲಕ್ಷಾಂತರ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಮೊದಲೆಲ್ಲಾ ಮುಟ್ಟಿನ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದ ಗಂಡಸರು ಈಗ ಅವರವರಲ್ಲೇ ಮುಟ್ಟಿನ ಬಗ್ಗೆ ಮಾತನಾಡುತ್ತಿದ್ದಾರೆ. ಟೀಸರ್ ನೋಡದವರಿಗೆ ನೋಡುವಂತೆ ಪ್ರೇರೆಪಿಸುತ್ತಿದ್ದಾರೆ.

ಗಂಡಸರಲ್ಲಿ ಮುಟ್ಟಿನ ಬಗ್ಗೆ ಇರುವ ತಾತ್ಸಾರದ ಮನೋಭಾವ ಬದಲಾಗಿ ಅವರೂ ಇದರ ಬಗ್ಗೆ ಮುಕ್ತವಾಗಿ ಮಾತನಾಡುವಂತೆ ಆಗಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ. ಅವರು ಈ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ವಿಷಯ ಬರೀ ಹೆಂಗಸರದ್ದು ಎಂಬ ಮನೋಭಾವ ಬದಲಾಗಬೇಕು.

‘ಪ್ಯಾಡ್‌ಮನ್‌’ ಚಿತ್ರವು ಸತ್ಯಕತೆಯಿಂದ ಪ್ರೇರಣೆ ಪಡೆದಿದೆ. ಅರುಣಾಚಲಂ ಮುರುಗನಾಥಂ ಎಂಬ ಅವಿದ್ಯಾವಂತ ವ್ಯಕ್ತಿಯೊಬ್ಬ ಮುಟ್ಟಿನ ಸಮಯದಲ್ಲಿ ತನ್ನ ಹೆಂಡತಿ ಪಡುವ ಕಷ್ಟ ನೋಡಲಾರದೆ ಕಡಿಮೆ ವೆಚ್ಚದಲ್ಲಿ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರವನ್ನು ಅನ್ವೇಷಿಸುತ್ತಾನೆ. ಆ ಮೂಲಕ ಸಾಮಾಜಿಕ ಬದಲಾವಣೆ ತರುತ್ತಾನೆ. ಅವರ ಕಥೆಯನ್ನೇ ಆಧರಿಸಿ ಚಿತ್ರ ನಿರ್ಮಿಸಲಾಗಿದೆ.

ಇದು ತುಂಬಾ ಸೂಕ್ಷ್ಮ ವಿಷಯ. ಆದರೂ ನಾನು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಾನು ಇದನ್ನು ಸೂಕ್ಷ್ಮ ಎಂದು ಕರೆಯಲು ಇಷ್ಟಪಡುವುದೂ ಇಲ್ಲ. ಇದು ಮನುಷ್ಯ ದೇಹದಲ್ಲಿ ನಡೆಯುವ ನೈರ್ಸಗಿಕ ಪ್ರಕ್ರಿಯೆ. ನಾವು ಈ ವಿಷಯದೊಂದಿಗೆ ಅಂಟಿಕೊಂಡಿರುವ ಮೌಢ್ಯಗಳನ್ನು ತೊಡೆದು ಹಾಕಿ, ಅದರ ಬಗ್ಗೆ ಫ್ರೌಢವಾಗಿ ಯೋಚಿಸಬೇಕಾಗಿದೆ. ಮಹಿಳೆಯರು ಈ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯಬಾರದು, ತಮ್ಮತಮ್ಮಲ್ಲೇ ಗುಟ್ಟುಗುಟ್ಟಾಗಿ ಮಾತನಾಡುವುದನ್ನು ನಿಲ್ಲಿಸಬೇಕು.

ನಮ್ಮ ದೇಶದಲ್ಲಿ ಮಹಿಳೆಯರ ನೈಮರ್ಲ್ಯದ ಕಲ್ಪನೆಗಳು ಕೆಟ್ಟದಾಗಿವೆ. ಆ ಕಾರಣಕ್ಕೆ ಈ ವಿಷಯ ಅಪಹ್ಯಾಸಕ್ಕೆ ಒಳಗಾಗಿದೆ. ‘ಪ್ಯಾಡ್‌ಮನ್‌’ನಲ್ಲಿ ತೊಡಗಿಸಿಕೊಂಡ ನಂತರ ಎಷ್ಟೋ ಮಹಿಳೆಯರು ನನ್ನೊಡನೆ ಈ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮುಟ್ಟಿನ ರಕ್ತಸ್ರಾವ ತಡೆಯಲು ಮಣ್ಣು, ಬೂದಿ ಹಾಗೂ ಕೊಳಕು ಬಟ್ಟೆಯನ್ನು ಉಪಯೋಗಿಸುತ್ತಿದ್ದಾರೆ ಎಂಬ ವಿಷಯ ತಿಳಿದು ನನಗೆ ಶಾಕ್ ಆಗಿತ್ತು.

ನಾನು ಕೆಲ ವಿದೇಶಿ ಮಹಿಳೆಯರನ್ನು ಭೇಟಿಯಾಗಿದ್ದೆ. ನಮ್ಮ ದೇಶದ ಮಹಿಳೆಯರಿಗೆ ಸ್ಯಾನಿಟರಿ ‌‍ಪ್ಯಾಡ್‌ಗಳ ಬಗ್ಗೆ ತಿಳಿದಿಲ್ಲ ಎಂಬುದನ್ನು ಕೇಳಿ ನಕ್ಕುಬಿಟ್ಟಿದ್ದರು. ನನಗೆ ಬೇಸರವಾಗಿತ್ತು. ನಮ್ಮ ದೇಶಕ್ಕೆ ಪ್ಯಾಡ್‌ಮನ್‌ನಂಥ ಚಿತ್ರದ ಅವಶ್ಯಕತೆ ಇದೆ. ಇಲ್ಲಿಯವರೆಗೆ ಯಾರೂ ಇಂಥ ವಿಷಯದ ಚಿತ್ರ ನಿರ್ಮಿಸಿರಲಿಲ್ಲ. ಕೆಲ ಸಾಕ್ಷ್ಯಚಿತ್ರಗಳಲ್ಲಿ ಪ್ಯಾಡ್‌ಗಳನ್ನು ಗಪ್‌ಚುಪ್ ಆಗಿ ತೋರಿಸಲಾಗಿತ್ತು. ಇದೆಲ್ಲಾ ನಿಜಕ್ಕೂ ನೋವಿನ ಸಂಗತಿಯೇ ಸರಿ.

ನನಗೆ 20 ವರ್ಷ ಆಗುವವರೆಗೂ ನಾನು ಒಂದು ದಿನವೂ ಕೈಯಲ್ಲಿ ಪ್ಯಾಡ್ ಹಿಡಿದಿರಲಿಲ್ಲ. ನನ್ನ ಮನೆಯಲ್ಲಿ ಯಾರೂ ನನಗೆ ಪ್ಯಾಡ್ ತರಲು ಹೇಳುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ವಿವರವಾಗಿ ತಿಳಿದುಕೊಂಡೆ. ಮುಟ್ಟಿನ ಸಮಯದಲ್ಲಿ ಹೆಂಗಸರನ್ನು ಧಾರ್ಮಿಕವಾಗಿ ಅಸ್ಪೃಶ್ಯರು ಎಂಬಂತೆ ಕಾಣುತ್ತಾರೆ. ಆ ಮೂರೂ ದಿನಗಳು, ಕೆಲ ಮನೆಗಳಲ್ಲಿ ಐದು ದಿನಗಳು ಅವರು ಉಪ್ಪಿನಕಾಯಿ ಮುಟ್ಟವ ಹಾಗಿಲ್ಲ, ಅಡುಗೆಮನೆ ಪ್ರವೇಶಿಸುವ ಹಾಗಿಲ್ಲ, ದೇವಸ್ಥಾನಕ್ಕೆ ಹೋಗುವ ಹಾಗಿಲ್ಲ, ತಲೆಸ್ನಾನ ಮಾಡುವ ಹಾಗಿಲ್ಲ ಎಂಬೆಲ್ಲಾ ಮೌಢ್ಯಗಳು ಚಾಲ್ತಿಯಲ್ಲಿವೆ.

ಕೆಲ ಹೆಣ್ಣುಮಕ್ಕಳು ಮುಟ್ಟಿನ ಸ್ರಾವದಿಂದ ಶಾಲೆಯನ್ನು ಅರ್ಧಕ್ಕೆ ನಿಲ್ಲಿಸಿದರು. ಇಂಥ ಮೌಢ್ಯವನ್ನು ತೊಡೆದು ಹಾಕಲು ‘ಪ್ಯಾಡ್‌ಮನ್’ ಪ್ರೇರಣೆಯಾಗುತ್ತದೆ ಎಂಬುದು ನನ್ನ ಭರವಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT