ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚೋದನಕಾರಿ ಬರಹ ಪ್ರಕಟಿಸಿದರೆ ಕ್ರಮ

Last Updated 17 ಜನವರಿ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಮು ಭಾವನೆ ಪ್ರಚೋದಿಸುವ, ಶಾಂತಿಗೆ ಧಕ್ಕೆ ತರುವ ಪೋಸ್ಟ್‌, ಚಿತ್ರ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೂಲಭೂತವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರಚೋದನಾಕಾರಿ ಬರಹಗಳ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂತಹವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಸೂಚಿಸಿದ್ದೇನೆ’ ಎಂದರು.

ಪ್ರಚೋದನಾಕಾರಿ ಭಾಷಣ ಮಾಡಿದ್ದ ವಿರೋಧ ಪಕ್ಷದ ಮುಖಂಡರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ, ‘ಈ ರೀತಿ ಭಾಷಣ ಮಾಡಿದ್ದ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಏರಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜವಾಬ್ದಾರಿ ಇಲ್ಲದ ಸಚಿವ: ಸರ್ಕಾರದಿಂದ ನಿವೇಶನ ಪಡೆಯಲು ಕೆಲವರು ಸಾಹಿತಿ ಎನ್ನುವ ಪಟ್ಟ ಕಟ್ಟಿಕೊಂಡಿದ್ದಾರೆ ಎಂಬ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಅವರು ಜವಾಬ್ದಾರಿ ಇಲ್ಲದ ಸಚಿವ. ಅವರ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು’ ಎಂದರು.

ವಿರೋಧ ಪಕ್ಷದವರದ್ದು ಕಾಮಾಲೆ ಕಣ್ಣು: ‘ಸರ್ಕಾರದ ಎಲ್ಲ ಕೆಲಸಗಳನ್ನು ವಿರೋಧ ಪಕ್ಷದವರು ಟೀಕಿಸುತ್ತಾರೆ. ಅದಕ್ಕೇ ಅವರಿಗೆ ವಿರೋಧ ಪಕ್ಷ ಎನ್ನುತ್ತಾರೆ. ಅವರ ಕಣ್ಣುಗಳು ಯಾವಾಗಲೂ ಹಳದಿ. ಆ ಬಣ್ಣ ಬಿಟ್ಟು ಬೇರೆ ಯಾವ ಬಣ್ಣವೂ ಅವರಿಗೆ ಕಾಣುವುದಿಲ್ಲ’ ಎಂದು ಟೀಕಿಸಿದರು.

ರಾಜ್ಯದಲ್ಲಿ ಕೌರವರು, ಪಾಂಡವರು ಇದ್ದಾರಾ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ, ‘ಕೌರವರು, ಪಾಂಡವರು ಎಂದು ಯಾರೂ ಇಲ್ಲ. ಆ ರೀತಿ ಕಲ್ಪನೆ ಮಾಡಿಕೊಳ್ಳಲು ಇದೇನು ಧರ್ಮಯುದ್ಧವೇ’ ಎಂದು ಹೇಳಿ ಮುಗುಳ್ನಕ್ಕರು.

ಚುನಾವಣೆಗೆ ಸಿದ್ಧತೆ: ‘ಮುಂದಿನ 3 ತಿಂಗಳಿನಲ್ಲಿ ಚುನಾವಣೆ ಬರಲಿದೆ. ಇದಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ರಾಜ್ಯದಲ್ಲಿ ಸುಮಾರು 56,000 ಮತಗಟ್ಟೆಗಳಿವೆ. ಜನರು ನಿರ್ಭಯವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸುವ ವಾತಾವರಣ ನಿರ್ಮಿಸುವಂತೆ ಹೇಳಿದ್ದೇನೆ. ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಆ ಭಾಗದ ಠಾಣೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಹೇಳಿದ್ದೇನೆ’ ಎಂದರು.

‘ಗಲಭೆ ನಡೆಸುವವರ ಮೇಲೆ ನಿಗಾ’

‘ಚುನಾವಣೆ ಸಂದರ್ಭ ಸಣ್ಣ ವಿಚಾರಗಳೇ ದೊಡ್ಡದಾಗುತ್ತವೆ. ಹೀಗಾಗದಂತೆ ನಿಗಾ ವಹಿಸಬೇಕು. ರಾಜಕೀಯ ಉದ್ದೇಶಕ್ಕಾಗಿ ಕೆಲವರು ಮತೀಯ ಗಲಭೆ ಸೃಷ್ಟಿಸುತ್ತಾರೆ. ಊರು– ಊರುಗಳ ನಡುವೆ, ಜಾತಿ– ಜಾತಿ ನಡುವೆ ಜಗಳ ಹಚ್ಚುತ್ತಾರೆ. ಅಂಥ ಶಕ್ತಿಗಳ ಮೇಲೆ ಕಣ್ಣಿಡಬೇಕು. ಅಗತ್ಯ ಬಿದ್ದರೆ ಬಂಧಿಸಿ ಜೈಲಿಗೆ ಕಳುಹಿಸುವಂತೆ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT