ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಟನ್‌ಗೆ ಒಂದೇ ದರ ನೀಡಲು ಆಗ್ರಹ

ಕಬ್ಬಿನ ಬಿಲ್‌ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ರೈತರ ಪ್ರತಿಭಟನೆ
Last Updated 18 ಜನವರಿ 2018, 7:21 IST
ಅಕ್ಷರ ಗಾತ್ರ

ಮೂಡಲಗಿ: ಪಟ್ಟಣ ಸಮೀಪದ ಗುರ್ಲಾಪುರ ಕ್ರಾಸ್‌ ಬಳಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಏಕರೂಪದ ಕಬ್ಬಿನ ಬಿಲ್ ನಿಗದಿ ಮಾಡಲು ಆಗ್ರಹಿಸಿ ಬುಧವಾರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ರೈತ ಸಂಘದ ಮುಖಂಡ ತ್ಯಾಗರಾಜ ಕದಂ ಮಾತನಾಡಿ, ಜಿಲ್ಲೆಯಾದ್ಯಂತ ಇರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಏಕರೂಪದ ಬಿಲ್ ನೀಡಬೇಕು. ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್ ಅನ್ನು ಶೀಘ್ರವೇ ರೈತರ ಖಾತೆಗೆ ಜಮಾ ಮಾಡಬೇಕು. ಸರ್ಕಾರಗಳು ರೈತರ ಬದುಕಿನೊಂದಿಗೆ ಚೆಲ್ಲಾಟವಾಡಬಾರದು. ಜಿಲ್ಲಾಡಳಿತ ಹಾಗೂ ಕಾರ್ಖಾನೆ ಮಾಲೀಕರು ಮೊಂಡುತನ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ನಿಪ್ಪಾಣಿಯ ಹಾಲಸಿದ್ಧನಾಥ ಕಾರ್ಖಾನೆ ಪ್ರತಿಟನ್‌ ಕಬ್ಬಿಗೆ ₹ 3,150 ಘೋಷಿಸಿದೆ. ಇದೇ ದರವನ್ನು ಉಳಿದ ಕಾರ್ಖಾನೆಯವರು ಘೋಷಿಸಬೇಕು. ಸಮೀರವಾಡಿಯ ಸೋಮಯ್ಯಾ ಸಕ್ಕರೆ ಕಾರ್ಖಾನೆ ಕೇವಲ ₹ 2,500 ಘೋಷಣೆ ಮಾಡಿದೆ. ರೈತರು 15 ದಿನ ಉಪವಾಸ ಸತ್ಯಾಗ್ರಹ ನಡೆಸಿದರೂ ಕಾರ್ಖಾನೆ ಮಾಲಿಕರು ತಮ್ಮ ನಿಲುವು ಬದಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತ ರೈತರು ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಘೋಷಣೆ ಕೂಗಿದರು. ಸುಮಾರು 3 ತಾಸು ಹೆದ್ದಾರಿ ಬಂದ್ ಮಾಡಲಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿದರು. ಸುಮಾರು ಒಂದು ಕಿ.ಮೀ. ದೂರ ದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT