ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ಖಂಡಿಸಿ ಚಿಂಚೋಳಿ ಬಂದ್‌ ಯಶಸ್ವಿ

ದಲಿತರ ಮೇಲಿನ ಪ್ರಕರಣ ಹೆಚ್ಚಳಕ್ಕೆ ಕಳವಳ; ಕೇಂದ್ರ–ರಾಜ್ಯ ಸರ್ಕಾರದ ವಿರುದ್ಧ ಯುವಕರ ಆಕ್ರೋಶ
Last Updated 18 ಜನವರಿ 2018, 7:39 IST
ಅಕ್ಷರ ಗಾತ್ರ

ಚಿಂಚೋಳಿ: ದೇಶದಲ್ಲಿ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ಭೀಮಾ ಕೋರೆಗಾಂವ್‌ ಗಲಭೆ ವಿರೋಧಿ ವೇದಿಕೆ ಬುಧವಾರ ಕರೆ ನೀಡಿದ ‘ಚಿಂಚೋಳಿ ಬಂದ್‌’ ಸಂಪೂರ್ಣ ಯಶಸ್ವಿಯಾಯಿತು. ಪಟ್ಟಣದ ಬಸ್‌ ನಿಲ್ದಾಣದಿಂದ ವೇದಿಕೆಯ ಸಮಾನ ಮನಸ್ಕ ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ ಅಂಬೇಡ್ಕರ್‌ ವೃತ್ತದಲ್ಲಿ ‘ಮಾನವ ಸರಪಳಿ’ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮುಖ್ಯರಸ್ತೆ ಮೂಲಕ ಚಿಂಚೋಳಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಯುವಕರು, ಮನುವಾದಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಟ್ಟಣದ ಬಸ್‌ ನಿಲ್ದಾಣ ಬಳಿಯ ಬಸ್‌ ಡಿಪೋ ಕ್ರಾಸ್‌ನಲ್ಲಿ ಬಹಿರಂಗ ಸಭೆ ನಡೆಸಿದ ದಲಿತ ಮುಖಂಡರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಿಗ್ಗೆ 5 ಗಂಟೆಯಿಂದಲೇ ಬಸ್‌ ಡಿಪೊ ಎದುರು ಕುಳಿತು ಬಸ್‌ಗಳನ್ನು ಹೊರಗೆ ಬಿಡದಂತೆ ತಡೆಯುವುದರೊಂದಿಗೆ ಆರಂಭವಾದ ಪ್ರತಿಭಟನೆ ಸಂಜೆ 5.30ರವರೆಗೂ ಶಾಂತಿಯುತವಾಗಿ ನಡೆಯಿತು.

‘ಭೀಮಾ ಕೋರೆಗಾಂವ್‌ನಲ್ಲಿ ಮಹಾರ್‌ ರೆಜಿಮೆಂಟ್‌ ಸೈನಿಕರು ಪೇಶ್ವೆ ಸೇನೆಯನ್ನು ಸೋಲಿಸಿದ ಘಟನೆಯ ದ್ವಿತೀಯ ಶತಮಾನೋತ್ಸವದಲ್ಲಿ ಪಾಲ್ಗೊಂಡವರ ಜತೆ ಜಗಳ ತೆಗೆದು ಗಲಭೆ ಸೃಷ್ಟಿಸಲಾಗಿದೆ.
ಇದರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಹೊಣೆ ಹೊತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ವಿಜಯಪುರದಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಆಕೆಯ ಸಾವಿಗೆ ಕಾರಣವಾದವರು ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾಗಿದ್ದಾರೆ. ಆ ಪಕ್ಷದ ನಾಯಕರು ಆರೋಪಿ ಗಳನ್ನು ರಕ್ಷಿಸುತ್ತಿದ್ದಾರೆ.
ಇದರಿಂದಾಗಿಯೇ 6 ಆರೋಪಿಗಳ ಪೈಕಿ ಮೂವರನ್ನು ಮಾತ್ರ ಬಂಧಿಸ ಲಾಗಿದೆ. ಆರೋಪಿಗಳ ಎಷ್ಟೇ ಪ್ರಭಾವಿ ಗಳಾಗಿದ್ದರೂ ಅದಕ್ಕೆ ಮಣಿಯದೇ ಅವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಚಿಂಚೋಳಿ ಪಟ್ಟಣದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಬೇಗ ಕೈಗೆತ್ತಿಕೊಳ್ಳಬೇಕು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕು. ದೇಶದಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲಿನ ದಾಳಿ ತಡೆಯಬೇಕು. ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರದ ಬದಲು ಮತಪತ್ರ ಬಳಸಬೇಕು. ಸರ್ಕಾರದಿಂದ ರೈತರ ಶೋಷಣೆ ನಿಲ್ಲಬೇಕು. ಅವರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು. ಗದಗ ಜಿಲ್ಲೆಯ ಮುಂಡರಗಿಯ ತಾಲ್ಲೂಕಿನ ಸಿಂಗಟಾಲೂರು ಗ್ರಾಮದ ಶಾಂತವ್ವಳಿಗೆ ಬೆಂಕಿ ಹಚ್ಚಿ ಕೊಲೆಗೈಯ್ದ ದುಷ್ಕರ್ಮಿಗಳಿಗೆ ಮರಣ ದಂಡನೆ ವಿಧಿಸಬೇಕು. ಖ್ಯಾತ ಸಾಹಿತಿ ಎಂ.ಎಂ.ಕಲಬುರಗಿ, ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆಯ ಆರೋಪಿಗಳನ್ನು ಬೇಗ ಬಂಧಿಸಬೇಕು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಬೇಕು’ ಎಂದು ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ ಅರುಣ ಕುಮಾರ ಕುಲಕರ್ಣಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಚಿಮ್ಮಾಈದ ಲಾಯಿ ಹಿರೇಮಠದ ವಿಜಯ ಮಹಾಂತ ಶಿವಾಚಾರ್ಯ, ಪ್ರದೇಶ ಕುರುಬ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಕಪ್ಪ ಬೀರಾಪೂರ, ಜೆಡಿಎಸ್‌ ಹಿರಿಯ ಮುಖಂಡ ಶಿವಕುಮಾರ ಕೊಳ್ಳೂರು, ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಯ್ಯದ್‌ ನಿಯಾಜ್‌ ಅಲಿ, ಬಿಎಸ್‌ಪಿ ಅಧ್ಯಕ್ಷ ಗೌತಮ ಬೊಮ್ಮನಳ್ಳಿ ಇದ್ದರು.

ಸಂತೋಷ ಗುತ್ತೇದಾರ, ವಿಲಾಸ ಗೌತಮ, ಅಣ್ಣಾರಾವ್‌ ನಾಟಿಕಾರ್‌, ಗೋಪಾಲ ರಾಂಪುರೆ, ಮಾರುತಿ ಗಂಜಗಿರಿ, ಶೇಖ್‌ ಭಕ್ತಿಯಾರ್‌ ಜಹಾ ಗೀರದಾರ, ಸುಶೀಲಾಬಾಯಿ ಕೊರವಿ, ಆನಂದ ಟೈಗರ್‌, ಭಾರತೀಯ ಪೀಪಲ್ಸ್‌ ಪಾರ್ಟಿಯ ಶಂಕರ ಜಾಧವ್‌, ಲಿಂಗಾಯತ ಮಹಾಸಭಾದ ಅಧ್ಯಕ್ಷ ಗುರುಲಿಂಗಪ್ಪ ಹಾಲಳ್ಳಿ, ಭರತ ಬುಳ್ಳಾ, ಶಿವಯೋಗಿ ರುಸ್ತಂಪುರ, ಆನಂದ ಟೈಗರ್‌, ಅಮರ ಲೊಡ್ಡನೋರ್‌, ಮಲ್ಲು ಕೂಡಾಂಬಲ್‌, ಶ್ರೀನಿವಾಸ ಬೆಡಕಪಳ್ಳಿ, ಕಾಶಿನಾಥ ಸಿಂಧೆ, ಸೌಭಾಗ್ಯಮ್ಮ ಮಠಪತಿ, ಜಯಶ್ರೀ ದೊಡ್ಡಮನಿ, ಶ್ರೀಕಾಂತ ಜಾನಕಿ, ಸಂಜೀವಕುಮಾರ ಪಾಟೀಲ, ಸುಧಾಕರ ಪಾಟೀಲ, ಓಮನರಾವ್‌ ಕೊಳ್ಳೂರು, ಪಾಂಡುರಂಗ ಲೊಡ್ಡನೋರ್‌, ಆಕಾಶ ಕೊಳ್ಳೂರು, ಸೋಮಶೇಖರ ಬೆಡಕಪಳ್ಳಿ, ವಿಲಾಸ ದೇಗಲಮಡಿ, ರವಿಕುಮಾರ ರುಸ್ತಂಪುರ, ಜೈಭೀಮ ಹೋಳ್ಕರ್‌, ರುದ್ರಮುನಿ ರಾಮತೀರ್ಥಕರ, ರಾಜಶೇಖರ ಹೊಸಮನಿ, ರೇವಣಸಿದ್ದ ನಾಗಮರಿ, ಜಗದೇವ ಗೌತಮ, ಶಾಹಬುದ್ದಿನ್‌ ಕನಕಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT