ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಸಂಭ್ರಮ ಹಿಂದಿನ ವೈಭವ ಕಣ್ಮರೆ

ಸಾಂಕೇತಿಕ ಆಚರಣೆ*ಕೃಷಿಯಲ್ಲಿ ನಿರಂತರ ತೊಡಗುವ ರೈತರಿಗೆ, ಎತ್ತುಗಳಿಗೆ ಬಿಡುವು
Last Updated 18 ಜನವರಿ 2018, 8:48 IST
ಅಕ್ಷರ ಗಾತ್ರ

ದೇವನಹಳ್ಳಿ: ಗ್ರಾಮೀಣ ಸೊಗಡಿನ ವಾರ್ಷಿಕ ಸುಗ್ಗಿ ಹಬ್ಬ ಸಂಕ್ರಾಂತಿ ಕೇವಲ ಸಾಂಕೇತಿಕ ಆಚರಣೆಗೆ ಸಿಮೀತವಾಗುತ್ತಿದೆ. ಈ ಹಿಂದಿನ ವೈಭವ ಮರೆಯಾಗುತ್ತಿದೆ ಎಂಬುದು ಬಹುತೇಕ ರೈತರ ಅಭಿಪ್ರಾಯ.

ವಾರ್ಷಿಕ ಮುಂಗಾರು ಹಿಂಗಾರು ಈ ಎರಡು ಅವಧಿಯಲ್ಲಿ ನಡೆಯುವ ಕೃಷಿ ಚಟುವಟಿಕೆಯಲ್ಲಿ ನಿರಂತರ ಭಾಗವಹಿಸುವ ರೈತರಿಗೆ ಮತ್ತು ಎತ್ತುಗಳಿಗೆ ಸಂಕ್ರಾಂತಿಯ ನಂತರ ಮುಂದಿನ ಮುಂಗಾರಿನ ವರೆಗೂ ಬಿಡುವು ಇರುತ್ತದೆ.

ವರ್ಷವೆಲ್ಲ ರೈತನ ಸಂಗಾತಿಯಂತೆ ದುಡಿಯುವ ಎತ್ತುಗಳಿಗೆ ಸಂಕ್ರಾಂತಿ ಬಂದರೆ ಮೊದಲ ದಿನ ಮೈ ತೊಳೆದು ಕೊಂಬುಗಳನ್ನು ನಯಗೊಳಿಸಿ, ನೀಲಿ ಬಣ್ಣ ಲೇಪಿಸಿ ಕೊಂಬಿಗೆ ಕಳಸ ಮತ್ತು ಬಣ್ಣದ ಟೇಪುಗಳನ್ನು ಕಟ್ಟಿ ಕೊರಳಿಗೆ ಗಂಟೆ, ಹೊಸ ಮೂಗುದಾರ ತೊಡಿಸಿ ಎತ್ತಿನ ಮೈಮೇಲೆ ಬಣ್ಣ ಬಣ್ಣದ ಚಿತ್ತಾರದ ವಸ್ತ್ರ ಹೊದಿಸಿ ಬೆಂಕಿ ಕಿಚ್ಚು ಹಾಯಿಸುತ್ತಿದ್ದರು. ಅದು ಈ ಹಿಂದಿನ ಸಂಕ್ರಾಂತಿ ಸಂಪ್ರದಾಯ ಎಂಬುದಾಗಿ ರೈತ ಶ್ರೀನಿವಾಸ್ ಹೇಳುತ್ತಾರೆ.

ಸಂಕ್ರಾಂತಿ ದಿನದ ಬೆಳಿಗ್ಗೆ ಸಿಹಿ ಸಂಭ್ರಮಾಚರಣೆ ನಂತರ ಎತ್ತುಗಳಿಗೆ ಬಗೆ ಬಗೆಯ ಮೇವು ನೀಡಿ, ನಂತರ ಸಂಜೆ ಗ್ರಾಮದ ಹೊರ ಭಾಗದಲ್ಲಿ ಪ್ರತಿಷ್ಠಾಪಿಸಿರುವ ಕಾಟೇರಪ್ಪ ಮಣ್ಣಿನ ಪ್ರತಿರೂಪ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಗ್ರಾಮದಲ್ಲಿರುವ ಎಲ್ಲಾ ಎತ್ತು, ಹೋರಿಗಳು ಮೆರವಣಿಗೆಯಲ್ಲಿ ತಮಟೆ ವಾದ್ಯದೊಂದಿಗೆ ಸಾಗಿ ಕಾಟೇರಪ್ಪ ದೇವರ ಮುಂಭಾಗ ನಿಲ್ಲಿಸಿ ಸಾಮೂಹಿಕ ಪೂಜೆಯ ನಂತರ ಸಾಲಾಗಿ ಇಡಲಾ
ಗಿರುವ ಸೌದೆಯನ್ನು ಬೆಂಕಿ ಹಚ್ಚಿ ಜೋಡಿ ಎತ್ತುಗಳಿಂದ ಕಿಚ್ಚು ಹಾಯಿಸುತ್ತಿದ್ದರು. ಅದನ್ನು ನೋಡುವುದಕ್ಕೆ ಗ್ರಾಮಸ್ಥರು ಖುಷಿಯಿಂದ ಕೇಕೆ, ಶಿಳ್ಳೆಯಿಂದ ಸಂಭ್ರಮಿಸಿಸುವುದು ನಡೆದುಕೊಂಡು ಬಂದ ಪರಂಪರೆ. ಆದರೆ, ಪ್ರಸ್ತುತ ಒಂದಿಷ್ಟು ದೂರ ಮೆರವಣಿಗೆ ನಡೆಸಿ ಭತ್ತ ಹುಲ್ಲು ಹಾಸಿ ಬೆಂಕಿ ಹಚ್ಚಿ ಹಾಯಿಸುವುದು ಬರಿ ಸಾಂಕೇತಿಕವಲ್ಲದೆ ಮತ್ತೇನು ಎನ್ನುತ್ತಾರೆ ರೈತರ ಮುನಿನಂಜನಪ್ಪ.

ದೇವನಹಳ್ಳಿ ನಗರದಲ್ಲಿ ಆರೇಳು ಜೋಡಿ ಎತ್ತುಗಳನ್ನ ರೈತರು ಸಂಕ್ರಾಂತಿ ವಿಶೇಷವಾಗಿ ಸೋಮವಾರ ವೇಣುಗೋಪಾಲಸ್ವಾಮಿ ದೇವಾಲಯದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮತ್ತೊಂದೆಡೆ ಪರ್ವತಪುರ ಬಡಾವಣೆಯಲ್ಲಿ ಎತ್ತುಗಳಿಗೆ ಕಿಚ್ಚನ್ನು ಹಾಯಿಸಲಾಯಿತು.

ಮೆರವಣಿಗೆಯಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಗೋಪಾಲ್, ಪುರಸಭೆ ಸದಸ್ಯ ಜಿಎ.ರಮೀಂದ್ರ, ವಿ.ಗೊಪಾಲಕೃಷ್ಣ, ರೈತರಾದ ಶ್ರೀನಿವಾಸ್, ಪ್ರಕಾಶ್, ಸತ್ಯನಾರಾಯಣ, ಗಜೇಂದ್ರ, ಶಿವಾನಂದ, ಮಂಜುನಾಥ್, ಒಂಕಾರ ಪ್ಪನವರ ವೇಣು, ಮುನ್ನಾ, ಅರ್ಜುನ್, ಪೈಲ್ವಾನ್ ಮಂಜುನಾಥ್, ಶ್ರೀನಿವಾಸ್, ಸಿ.ಎಂ.ರಾಜಣ್ಣ, ಚಿಂತಾಮಣಿ ಶ್ರೀನಿವಾಸ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT