ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಗೋವಾ ಮುತ್ತಿಗೆ ಎಚ್ಚರಿಕೆ

ಮಹದಾಯಿ ಧರಣಿ 917ನೇ ದಿನಕ್ಕೆ: ಹೋರಾಟ ಸಮಿತಿಯ ಜೋಗಣ್ಣವರ ಆಕ್ರೋಶ
Last Updated 18 ಜನವರಿ 2018, 10:21 IST
ಅಕ್ಷರ ಗಾತ್ರ

ನರಗುಂದ:‘ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಮತ್ತು ಅಲ್ಲಿನ ಜಲಸಂಪನ್ಮೂಲ ಸಚಿವರು ಪದೇ ಪದೇ ಅಡ್ಡಗಾಲು ಹಾಕಿದರೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಗೋವಾಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್‌.ಬಿ.ಜೋಗಣ್ಣವರ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 917ನೇ ದಿನವಾದ ಬುಧವಾರ ಅವರು ಮಾತನಾಡಿದರು.

‘ಮಹದಾಯಿಗಾಗಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್‌ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಗೋವಾದ ಮುಖ್ಯಮಂತ್ರಿ ಒಂದು ರೀತಿಯ ಹೇಳಿಕೆ ನೀಡಿದರೆ, ವಿನೋದ್‌ ಪಾಲ್ಯೇಕರ್‌ ಹೊಸ ಆರೋಪ ಮಾಡಿದ್ದಾರೆ. ಗೋವಾ ಇಂತಹ ಮೊಂಡುವಾದ ನಿಲ್ಲಿಸಿ, ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ರೈತರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು,ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

‘ಗೋವಾ ಮುಖ್ಯಮಂತ್ರಿ ಪತ್ರ ಬರೆದು, ಈಗ ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿರುವುದು ಸರಿಯಲ್ಲ. ಎರಡು ಸಂಸತ್‌ ಸದಸ್ಯರನ್ನು ಹೊಂದಿರುವ ಗೋವಾ ತೋರಿಸುತ್ತಿರುವ ಅಹಂಕಾರಕ್ಕೆ 28 ಸಂಸದರನ್ನು ಹೊಂದಿರುವ ಕರ್ನಾಟಕ ಶಕ್ತವಾಗಿ ತಿರುಗೇಟು ನೀಡಬೇಕು. ನ್ಯಾಯಮಂಡಳಿ ಸೂಚಿದಂತೆ, ಮಹದಾಯಿ ಸಮಸ್ಯೆಯನ್ನು ಮಾತುಕತೆ ಮೂಲಕವೇ ಇತ್ಯರ್ಥಪಡಿಸಿಕೊಳ್ಳಬೇಕು’ ಎಂಧು ಎಂದು ಜೋಗಣ್ಣವರ ಒತ್ತಾಯಿಸಿದರು.

ಮಹದಾಯಿ ಹೋರಾಟ ಸಮಿತಿ ಸದಸ್ಯ ರಾಘವೇಂದ್ರ ಗುಜಮಾಗಡಿ ಮಾತನಾಡಿದರು. ‘ಮಹದಾಯಿ ವಿಷಯದಲ್ಲಿ ಗೋವಾದ ಖ್ಯಾತೆ ಸಲ್ಲದು. ಹಲವು ಬಾರಿ ಗೋವಾಕ್ಕೆ ಎಚ್ಚರಿಕೆ ನೀಡಲಾಗಿದೆ. ಆದರೂ, ಸ್ಪಂದಿಸದೇ ಮೊಂಡುವಾದ ಮುಂದುವರಿಸಿದೆ. ಇದಕ್ಕೆ ಈ ಭಾಗದ ರೈತರು ತಕ್ಕ ಉತ್ತರ ನೀಡಲು ಸಿದ್ದರಾಗಿದ್ದಾರೆ’ ಎಂದರು.

ಧರಣಿಯಲ್ಲಿ ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರ, ಈರಣ್ಣ ಗಡಗಿಶೆಟ್ಟರ, ಭರತಕುಮಾರ, ಚನ್ನಬಸವ್ವ ಆಯಟ್ಟಿ, ಶ್ರೀಶೈಲ ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT