ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಸಂಸತ್‌ ನಡೆಸಿ ದೇಶವನ್ನೇ ಸೆಳೆದ ಸಂತ

5 ಬಾರಿ ಪರ್ಯಾಯ ಪೂರೈಸಿ ದಾಖಲೆ ಬರೆದ ವಿಶ್ವೇಶತೀರ್ಥ ಸ್ವಾಮೀಜಿ –ಹಲವು ವಿವಾದಗಳೂ ಉದ್ಭವ
Last Updated 20 ಡಿಸೆಂಬರ್ 2019, 13:33 IST
ಅಕ್ಷರ ಗಾತ್ರ

ಉಡುಪಿ: ಐದು ಪರ್ಯಾಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಅಷ್ಟ ಮಠ ಗಳ ಪರಂಪರೆಯಲ್ಲಿ ಹೊಸ ದಾಖಲೆ ಬರೆದರು. ಸತತ ಎರಡು ವರ್ಷಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಅನೂಚಾನವಾಗಿ ನಡೆಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು ಈ ಹಿರಿಯ ಯತಿ.

ವಿಶ್ವೇಶತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಉಡುಪಿಯಲ್ಲಿ ನಡೆದ 3 ದಿನಗಳ ಧರ್ಮ ಸಂಸತ್ ಸಮಾವೇಶ ಚರಿತ್ರೆಯ ಪುಟ ಸೇರಿತು. ಸುಮಾರು ಒಂದೂವರೆ ಸಾವಿರ ಸಂತರು ಒಂದೆಡೆ ಸೇರಿ ಧರ್ಮದ ಬಗ್ಗೆ ಚಿಂತನೆ ನಡೆಸಿದರು. ಹಿಂದೂಗಳ ಸ್ವಾಭಿಮಾನ ಎಂದೇ ಕರೆಯಲಾಗುವ ಅಯೋಧ್ಯೆ ರಾಮ ಮಂದಿರ ನಿರ್ಮಾ ಣದ ಸಂಕಲ್ಪವನ್ನೂ ಇಲ್ಲಿ ಮಾಡಿದ್ದು, ಇಡೀ ದೇಶ ಕೃಷ್ಣನೂರಿನ ಕಡೆಗೆ ತಿರುಗಿ ನೋಡುವಂತಾಯಿತು. ಅಸ್ಪೃಶ್ಯತೆ ನಿವಾರಣೆಯ ಬಗ್ಗೆ ದೃಢ ತೀರ್ಮಾನ ಕೈಗೊಳ್ಳುವ ಮೂಲಕ ಹಿಂದೂ ಧರ್ಮದಲ್ಲಿನ ಅನಿಷ್ಟಗಳನ್ನು ತೊಡೆಯುವೆಡೆ ಇನ್ನೊಂದು ಹೆಜ್ಜೆ ಯನ್ನು ಇಡಲಾಯಿತು ಎಂದರೆ ಉತ್ಪ್ರೇಕ್ಷೆಯಾಗದು.

ಮೂರು ದಿನಗಳ ಕಾಲ ರಾಷ್ಟ್ರ ಮಟ್ಟದ ಸಂಸ್ಕೃತ ಸಮ್ಮೇಳನವನ್ನು ಏರ್ಪಡಿಸಿ ಚಿಂತನ– ಮಂಥನ ನಡೆಸಲಾಯಿತು. ದೇಶದ ಪ್ರಸಿದ್ಧ ವಿದ್ವಾಂಸರು ಇದರಲ್ಲಿ ಪಾಲ್ಗೊಂಡರು. 1 ಕೋಟಿ ಗಿಡಗಳನ್ನು ವಿತರಣೆ ಮಾಡುವ ಸಂಕಲ್ಪ ವನ್ನು ಮಾಡಿದ್ದರು. ಆದರೆ ಗಿಡಗಳ ಕೊರತೆಯ ಕಾರಣದಿಂದಾಗಿ ಅದನ್ನು ಸಂಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಸುಮಾರು ₹11 ಕೋಟಿ ಮೊತ್ತದ ಅಭಿವೃದ್ಧಿ: ಪೇಜಾವರ ಪರ್ಯಾಯ ಎಂದರೆ ಅದು ಕೃಷ್ಣನ ಸೇವೆ ಮಾತ್ರವಲ್ಲ ಅಭಿವೃದ್ಧಿಯ ಪರ್ವವೂ ಹೌದು. ಅದಕ್ಕೆ ಸಾಕ್ಷಿ ಎಂಬಂತೆ ಸುಮಾರು ₹11 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಯಿತು. ಪಾಜಕದ ಶಿಕ್ಷಣ ಸಂಸ್ಥೆಯನ್ನು ಸಹ ₹6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಯಿತು.

ಮಠದ ಸುತ್ತುಪೌಳಿಯನ್ನು ಅದರ ಪ್ರಾಚೀನತೆಗೆ ಧಕ್ಕೆ ಬಾರದ ಹಾಗೆ ನವೀಕರಣಗೊಳಿಸುವ ಕೆಲಸವನ್ನು ನೆರವೇರಿಸಲಾಯಿತು. ದೇಶದ ಮೂಲೆ ಮೂಲೆಯಿಂದ ಉಡುಪಿಗೆ ಸಾವಿ ರಾರು ಮಂದಿ ಭಕ್ತರು ಬರುತ್ತಾರೆ. ಅವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಯಾತ್ರಿ ನಿವಾಸಗಳನ್ನು ಸಹ ನಿರ್ಮಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾ ವೇದಿಕೆ ರಾಜಾಂಗಣವನ್ನು ಸಹ ಇನ್ನಷ್ಟು ಆಕರ್ಷ ಕಗೊಳಿಸಲಾಗಿದೆ. ಇನ್ನೊಂದು ದೊಡ್ಡ ಮಾಳಿಗೆಯನ್ನೂ ನಿರ್ಮಾಣ ಮಾಡುವ ಮೂಲಕ ಅದನ್ನು ವಿಸ್ತರಿಸಲಾಗಿದೆ.

ಅನಾರೋಗ್ಯ ಸವಾಲು ಎದುರಿಸಿದ ಸ್ವಾಮೀಜಿ: 86ರ ಹರೆಯದ ಸ್ವಾಮೀಜಿ ಅವರು ಪರ್ಯಾಯ ಪೀಠ ಏರುವಾಗಲೇ ಅವರು ಯಶಸ್ವಿ ಯಾಗಿ ನಿಭಾಯಿಸಬಲ್ಲರೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಅವರ ಸಂಪೂರ್ಣ ಸಹಕಾರದಿಂದ ಎದುರಾದ ಎಲ್ಲ ಕ್ಲಿಷ್ಟಕರ ಪರಿಸ್ಥಿತಿಯನ್ನೂ ಸ್ವಾಮೀಜಿ ನಿಭಾಯಿಸಿದರು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸ್ವಾಮೀಜಿ ಒಮ್ಮೆ ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಮೂರು ದಿನ ಆಸ್ಪತ್ರೆಯಲ್ಲಿದ್ದರು. ಅದಾಗಿ ಕೆಲವೇ ತಿಂಗಳ ನಂತರ ಇನ್ನೊಂದು ಶಸ್ತ್ರ ಚಿಕಿತ್ಸೆ ಅನಿವಾರ್ಯವಾಯಿತು. ಆದರೂ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದ ಹಿರಿಯ ಯತಿಗಳು ಕೃಷ್ಣ ಪೂಜೆಯ ಕೈಂಕರ್ಯವನ್ನು ಪೂರ್ಣಗೊಳಿಸಿದರು.

ವಿವಾದಗಳೂ ಬೆನ್ನು ಹತ್ತಿದವು: ಪೇಜಾವರ ಸ್ವಾಮೀಜಿ ಅವರ ಪರ್ಯಾಯ ಕೆಲವು ವಿವಾದಗಳಿಂದಲೂ ಸದ್ದು ಮಾಡಿದೆ. ಮುಸ್ಲಿಮರಿಗೆ
ಕಳೆದ ವರ್ಷ ಇಫ್ತಾರ್ ಕೂಟವನ್ನು ಸ್ವಾಮೀಜಿ ಏರ್ಪಡಿಸಿದ್ದು ಸಂಪ್ರದಾ ಯವಾದಿಗಳ ಟೀಕಿಗೆ ಗುರಿಯಾಯಿತು. ಮಠದೊಳಗೆ ಪ್ರಾರ್ಥನೆ (ನಮಾಜ್) ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸ್ವಾಮೀ ಜಿಯ ಕೆಲವು ಹಿಂಬಾಲಕರೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅದಕ್ಕೆ ಸ್ವಾಮೀಜಿ ಅವರು ಸಮರ್ಥನೆಯನ್ನೂ ನೀಡಿ ‘ಸ್ವ ಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ’ ಪಾಲಿಸುವುದು ತಪ್ಪೇನು ಎಂದು ತಿರುಗೇಟು ಸಹ ನೀಡಿದರು.

ಇನ್ನೊಂದು ಪರ್ಯಾಯ ಮಾಡು ತ್ತೀರ ಸ್ವಾಮೀಜಿ ಎಂದು ಕೇಳಿದರೆ ‘ಕೃಷ್ಣ ಎಷ್ಟು ಆಯಸ್ಸು ಅವಕಾಶ ಕೊಡು ತ್ತಾನೋ ಅಷ್ಟು ಸೇವೆ ಮಾಡುತ್ತೇನೆ’ ಎಂದು ಸ್ವಾಮೀಜಿ ಉತ್ತರಿಸುತ್ತಾರೆ. ಅಂದಹಾಗೆ ಮುಂದಿನ ಪರ್ಯಾಯದ ವೇಳೆಗೆ ಸ್ವಾಮೀಜಿ ಅವರಿಗೆ ಭರ್ತಿ 100 ವರ್ಷ ತುಂಬಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT