ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ: 29 ಸರಕು, 54 ಸೇವೆ ಅಗ್ಗ

Last Updated 18 ಜನವರಿ 2018, 18:26 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಜಾರಿಗೆ ಬಂದಿರುವ ಸಮಗ್ರ ಪರೋಕ್ಷ ತೆರಿಗೆ ವ್ಯವಸ್ಥೆಯಾಗಿರುವ ಸರಕು ಮತ್ತು ಸೇವಾ ತೆರಿಗೆಗಳಲ್ಲಿ ‘ಜಿಎಸ್‌ಟಿ ಮಂಡಳಿ’ಯು ಗುರುವಾರ ವ್ಯಾಪಕ ಬದಲಾವಣೆಗಳನ್ನು ಮಾಡಿದೆ.

ಮಿಠಾಯಿ, ಜೈವಿಕ ಡೀಸೆಲ್‌ ಒಳಗೊಂಡಂತೆ 29 ಸರಕುಗಳ ಮೇಲಿನ ತೆರಿಗೆ ಹೊರೆ ತಗ್ಗಿಸಲಾಗಿದೆ. ಜಾಬ್‌ ವರ್ಕ್ಸ್‌, ಟೇಲರಿಂಗ್‌ ಸೇವೆ, ಪಾರ್ಕ್‌ಗಳ ಪ್ರವೇಶ ಶುಲ್ಕ ಒಳಗೊಂಡಂತೆ 54 ಬಗೆಯ ಸೇವೆಗಳ ಮೇಲಿನ ತೆರಿಗೆ ದರವನ್ನೂ ಕಡಿಮೆ ಮಾಡಲಾಗಿದೆ.

ಬಳಸಿದ ಮಧ್ಯಮ, ದೊಡ್ಡ ಗಾತ್ರ ಮತ್ತು ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ಗಳ (ಎಸ್‌ಯುವಿ) ಮೇಲಿನ ದರವನ್ನು ಶೇ 28 ರಿಂದ ಶೇ 18ಕ್ಕೆ ಇಳಿಸಲಾಗಿದೆ. ಹಳೆಯ ಕಾರುಗಳ ಮೇಲಿನ ದರವನ್ನು ಶೇ 12ಕ್ಕೆ ತಗ್ಗಿಸಲಾಗಿದೆ. ವಜ್ರ ಮತ್ತು ಅಮೂಲ್ಯ ಹರಳುಗಳ ಮೇಲಿನ ದರವನ್ನು ಶೇ 3 ರಿಂದ ಶೇ 0.25ಕ್ಕೆ ಇಳಿಸಲಾಗಿದೆ. ನೀರಾವರಿ ಸಲಕರಣೆ, ಮದರಂಗಿ, ಖಾಸಗಿಯವರು ಪೂರೈಸುವ ಎಲ್‌ಪಿಜಿ ಮೇಲಿನ ದರಗಳೂ ಕಡಿತಗೊಂಡಿವೆ.

ರಿಟರ್ನ್‌ ಸಲ್ಲಿಕೆ ಸರಳ: ಜಿಎಸ್‌ಟಿ ರಿಟರ್ನ್‌ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿ ಸಣ್ಣ ವರ್ತಕರ ಮೇಲಿನ ತೆರಿಗೆ ಪಾವತಿ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆ ವಿವರವಾಗಿ ಚರ್ಚಿಸಿತು. ಪ್ರತಿ ತಿಂಗಳೂ ಒಂದು ರಿಟರ್ನ್‌ ಸಲ್ಲಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಇನ್ಫೊಸಿಸ್‌ನ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ರಿಟರ್ನ್‌ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸುವ ಬಗ್ಗೆ ಮಾಹಿತಿ ನೀಡಿದರು. ಹೊಸ ಪ್ರಕ್ರಿಯೆಯನ್ನು ಮಂಡಳಿಯ ಮುಂದಿನ ಸಭೆಯಲ್ಲಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ 25ನೇ ಸಭೆಯಲ್ಲಿ 29 ಕೈ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೂನ್ಯಕ್ಕೆ ಇಳಿಸಲಾಗಿದೆ. ಹೊಸ ದರಗಳು ಇದೇ 25 ರಿಂದ ಜಾರಿಗೆ ಬರಲಿವೆ.

ಫೆ. 1ರಿಂದ ಇ–ವೇ ಬಿಲ್‌:  ‘₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳ ಅಂತರರಾಜ್ಯ ಸಾಗಾಣಿಕೆಯಲ್ಲಿ ವಿದ್ಯುನ್ಮಾನ ವೇಬಿಲ್‌ (ಇ–ವೇ ಬಿಲ್) ವ್ಯವಸ್ಥೆಯನ್ನು ಫೆಬ್ರುವರಿ 1ರಿಂದ ದೇಶದಾದ್ಯಂತ ಜಾರಿಗೆ ತರಲಾಗುವುದು. ಇದೇ 25ರವರೆಗೆ ಈ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

ಇದರಿಂದ ವಹಿವಾಟುದಾರರ ತೆರಿಗೆ ತಪ್ಪಿಸುವ ಪ್ರವೃತ್ತಿಯು ಸಂಪೂರ್ಣವಾಗಿ ಕೊನೆಗೊಳ್ಳಲಿದೆ. ಈ ವ್ಯವಸ್ಥೆ ಜಾರಿಗೆ ತರಲು ಇದುವರೆಗೆ 15 ರಾಜ್ಯ ಸರ್ಕಾರಗಳು ಸಮ್ಮತಿಸಿವೆ.

ಒಂದೊಮ್ಮೆ ಇ–ವೇ ಬಿಲ್‌ ಜಾರಿಗೆ ಬರುತ್ತಿದ್ದಂತೆ ತೆರಿಗೆ ತಪ್ಪಿಸುವುದು ಕಠಿಣವಾಗಲಿದೆ. ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳ ಸಾಗಾಣಿಕೆ ವಿವರಗಳೆಲ್ಲ ಸರ್ಕಾರದ ಬಳಿ ಲಭ್ಯ ಇರಲಿದೆ.  ಸರಕುಗಳ ಪೂರೈಕೆದಾರ ಮತ್ತು ಖರೀದಿದಾರರು ತೆರಿಗೆ ರಿಟರ್ನ್ ಸಲ್ಲಿಸದಿದ್ದರೆ ಈ ವಹಿವಾಟಿನ ವಿವರಗಳು ತಾಳೆ ಆಗುವುದಿಲ್ಲ. ತೆರಿಗೆ ತಪ್ಪಿಸಲು ಯತ್ನಿಸಿದವರನ್ನು ಸುಲಭವಾಗಿ ಗುರುತಿಸಲು ಇದರಿಂದ ಸಾಧ್ಯವಾಗಲಿದೆ.

‘ಮಂಡಳಿಯ ಮುಂದಿನ ಸಭೆಯಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲ್‌, ಡೀಸೆಲ್‌ ಮತ್ತು ರಿಯಲ್‌ ಎಸ್ಟೇಟ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ಚರ್ಚಿಸಲಿದೆ. ರಾಜಿ ತೆರಿಗೆ ಸೌಲಭ್ಯದಡಿ ಕೇವಲ ₹ 307 ಕೋಟಿ ಸಂಗ್ರಹವಾಗಿದೆ. ಸಮಗ್ರ ಜಿಎಸ್‌ಟಿಯಡಿ ಸಂಗ್ರಹವಾಗಿರುವ ₹ 35 ಸಾವಿರ ಕೋಟಿಗಳನ್ನು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಿಕೆ ಮಾಡಲಾಗುವುದು’ ಎಂದು ಜೇಟ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT