ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಸರ ಪದಗಳಿಗೆ ಸ್ವರ ಹಾಕಬೇಕು’

Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ವಿದುಷಿ ಎಂ.ಎಸ್‌.ಶೀಲಾ ಅವರು ಈ ಸಾಲಿನ ‘ನಿರ್ಮಾಣ್‌ ಪುರಂದರ ಸಂಗೀತ ರತ್ನ ಪ್ರಶಸ್ತಿ’ಯ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಾಸ ಸಾಹಿತ್ಯದ ಬಗ್ಗೆ ಎಂ.ಎಸ್‌.ಶೀಲಾ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

* ಹರಿದಾಸ ಸಾಹಿತ್ಯವನ್ನು ಉಳಿಸಿ, ಬೆಳೆಸುವುದು ಹೇಗೆ?
ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಸಾಹಿತ್ಯದ ಬಗ್ಗೆ ಹೇಳಬೇಕೆಂದರೆ ಅದಕ್ಕೆ ಕೊನೆಯೇ ಇಲ್ಲ. 14ನೇ ಶತಮಾನದಲ್ಲಿ ದಾಸರು ಸಮಾಜದ ಬಗ್ಗೆ ಏನು ಹೇಳಿದ್ದರೋ ಅದೇ ಈಗಲೂ ನಡೆಯುತ್ತಾ ಇದೆ. ಸಾಮಾಜಿಕ ಕಳಕಳಿ, ಚಿಂತನೆಗಳು ಎಂದೆಂದಿಗೂ ಪ್ರಸ್ತುತ. ಹಿಂದಿನ ಮಹಾನ್‌ ಸಾಧಕರ, ದಾಸಾನುದಾಸರ, ವಾಗ್ಗೇಯಕಾರರ ಜೀವನ ಸಂದೇಶ, ಆದರ್ಶಗಳನ್ನು ನೋಡಿದಾಗ ಅವೆಲ್ಲವನ್ನೂ ನಾವು ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು ಎಂಬಂತಿದೆ. ಭಕ್ತಿಮಾರ್ಗ ಹೇಗಿರಬೇಕು, ಸಮಾಜದ ಓರೆಕೋರೆಗಳನ್ನು ಹೇಗೆ ತಿದ್ದಬೇಕು, ಸರಿ ತಪ್ಪುಗಳು ಯಾವುದು ಎಂಬುದೆಲ್ಲವನ್ನೂ ಅಂದೇ ದಾಸರು ಹೇಳಿ ಆಗಿಬಿಟ್ಟಿತ್ತು. ದಾಸ ಸಾಹಿತ್ಯದ ಜತೆಗೆ ಸಂಗೀತವೂ ಮಿಳಿತವಾದಾಗ ಅದು ಜನರನ್ನು ಬಹುಬೇಗ ತಲುಪುತ್ತೆ, ಹೃದಯ ತಟ್ಟುತ್ತೆ ಎಂಬುದು ಮಾತ್ರ ಈಗ ಗಮನಿಸಬೇಕಾದ ಅಂಶ.

* ಹರಿದಾಸ ಸಾಹಿತ್ಯಕ್ಕೆ ಸರಿಯಾದ ಸ್ವರಮಟ್ಟುಗಳನ್ನು ಹಾಕುವ ಕೆಲಸ ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ನೀವು ಏನು ಹೇಳುತ್ತೀರಿ?
ಇದು ಸತ್ಯ. ಸಾವಿರಾರು ದಾಸರ ಪದಗಳು ಸಾಹಿತ್ಯಕವಾಗಿ ರಚನೆಯಾಗಿ ಉಳಿದಿವೆ. ಅವುಗಳಿಗೆ ಸರಿಯಾದ ಸ್ವರಮಟ್ಟುಗಳು ಸಿಕ್ಕಿಲ್ಲ. ಕೇವಲ 30 ಕೃತಿಗಳಿಗೆ ಸ್ವರಮಟ್ಟುಗಳನ್ನು ಹಾಕಲಾಗಿತ್ತು ಎನ್ನುವುದು ಒಂದು ವಾದ. ಇಂಥ ರಚನೆಯನ್ನು ಈ ರಾಗ, ಈ ತಾಳದಲ್ಲಿ ಹಾಡಬಹುದು ಎಂದು ದಾಖಲಾಗಿದೆಯೇ ಹೊರತು, ಅದಕ್ಕೆ ಸ್ವರಪ್ರಸ್ತಾರ, ಸ್ವರಮಟ್ಟುಗಳನ್ನು ಸರಿಯಾಗಿ ಹಾಕಿರಲಿಲ್ಲ. 70ರ ದಶಕದ ನಂತರ ಹಲವು ಕೀರ್ತನೆಕಾರರು, ಕಲಾವಿದರು ಸೇರಿ ಸ್ವರಮಟ್ಟುಗಳನ್ನು ಹಾಕಲಾರಂಭಿಸಿದರು. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳು...

ಈ ಮೂವರು ತ್ರಿಮೂರ್ತಿಗಳ ಕೃತಿಗಳಿಗೆ ರಾಗ, ತಾಳ, ಸ್ವರಮಟ್ಟುಗಳು ವ್ಯವಸ್ಥಿತವಾಗಿ ಇದ್ದಂತೆ ದಾಸಸಾಹಿತ್ಯಕ್ಕೆ ಇಲ್ಲ. ನಾನು ಅನೇಕ ದಾಸರ ಪದಗಳಿಗೆ ಸ್ವರಮಟ್ಟುಗಳನ್ನು ಹಾಕಿದ್ದೇನೆ. ಹಲವಾರು ಕಛೇರಿಗಳಲ್ಲಿ ಹಾಡಿದ್ದೇನೆ. ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ‘ನೆರವಲ್‌, ಸ್ವರಪ್ರಸ್ತಾರ’ ಮುಂತಾದವನ್ನು ಹಾಕುವಂತೆ ದಾಸರಪದಗಳಿಗೂ ಸ್ವರ ಹಾಕಿ ಹಾಡಿದರೆ ಬೇಗನೆ ಜನರನ್ನು ತಲುಪುತ್ತದೆ. ಆದರೆ ಕನಕದಾಸರು ರಚಿಸಿದ ಕೆಲವು ದುಃಖದ ಸನ್ನಿವೇಶಗಳ ಹಾಡುಗಳಿಗೆ ಸ್ವರಮಟ್ಟು ಹಾಕುವುದು ಕಷ್ಟ, ಜತೆಗೆ ಹಾಡುವುದೂ ಕಷ್ಟವೇ.

* ಹರಿದಾಸ ಸಾಹಿತ್ಯವನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?
ಹರಿದಾಸ ಸಾಹಿತ್ಯ ಅಗಾಧ ಹಾಗೂ ಅನಂತ ಚೈತನ್ಯವನ್ನು ಹೊಂದಿರುವ ಅದ್ಭುತ ಸಾಹಿತ್ಯ. ಇದು ಆಧ್ಯಾತ್ಮನಿಧಿಯ ಅನಾವರಣವೇ ಆಗಿದೆ. ಕೇಳುಗರು ದಾಸರ ಪದಗಳ ಗಾನಾಮೃತದಲ್ಲಿ ಪರವಶರಾಗುವುದಲ್ಲದೆ ಅವರಿಗೆ ಆ ತನ್ಮಯತೆಯಲ್ಲಿ ಭಗವಂತನ ದರ್ಶನವೇ ಆಗುತ್ತದೆ. ದಾಸರ ಪದಗಳು ವಿಸ್ಮೃತಿಯ ಬದುಕಿಗೆ ಸಂಜೀವಿನಿ ಶಕ್ತಿ ಇದ್ದಂತೆ. ಹರಿದಾಸರ ಧರ್ಮದ ಶ್ರದ್ಧೆ, ತತ್ವನಿಷ್ಠೆ, ಪರಮಾತ್ಮನನ್ನು ಕಾಣುವ ಹಂಬಲ ಅನನ್ಯ. ಅದಕ್ಕೆ ಭಾಷೆಯ ರೂಪಕೊಟ್ಟು, ರಾಗದ ಛಾಪು ನೀಡಿ, ಹಾಡಾಗಿ ಹರಿಯಬಿಟ್ಟ ದಾಸರು ಸನ್ಮಾರ್ಗ ಸಾಧನೆಗೆ ಸ್ಫೂರ್ತಿಯಾದರು. ಸಮರ್ಪಣೆಯ ಬದುಕಿಗೆ ಪ್ರೇರಕ ಶಕ್ತಿಯಾದರು.

* ದಾಸರ ಪದಗಳನ್ನು ಇನ್ನಷ್ಟು ಜನಪ್ರಿಯಗೊಳಿಸಲು ಏನು ಮಾಡಬೇಕು?
ದಾಸ ಸಾಹಿತ್ಯವನ್ನು ಮಕ್ಕಳಾದಿಯಾಗಿ ಎಲ್ಲರೂ ಚೆನ್ನಾಗಿ ಓದಿ ತಿಳಿದುಕೊಳ್ಳಬೇಕು. ಸಂಗೀತ ಸಂಸ್ಥೆಗಳು, ಸಂಘಟನೆಗಳು, ಸಭೆಗಳು ದಾಸರ ಪದಗಳ ಗಾಯನವನ್ನು ಆಗಾಗ ಏರ್ಪಡಿಸಬೇಕು. ಸಂಗೀತೋತ್ಸವಗಳನ್ನು ನಡೆಸಬೇಕು. ನಗರದ ಕೆಲ ಸಂಸ್ಥೆಗಳು ಈಗಲೂ ಪುರಂದರ ದಾಸರ ಆರಾಧನೋತ್ಸವ ಏರ್ಪಡಿಸಿ ದಾಸರ ಪದಗಳಿಗೇ ಆದ್ಯತೆ ನೀಡುತ್ತವೆ. ಬನ್ನೇರುಘಟ್ಟದ ಸಮೀಪದ ನಿರ್ಮಾಣ್‌ ಶೆಲ್ಟರ್ಸ್‌ ಪ್ರತಿವರ್ಷ ವಿಎಲ್‌ಎನ್‌ ನಿರ್ಮಾಣ್‌ ಪುರಂದರ ಸಂಗೀತೋತ್ಸವ ಏರ್ಪಡಿಸಿದರೆ ಬಿಟಿಎಂ ಕಲ್ಚರಲ್‌ ಅಕಾಡೆಮಿ ವಾಗ್ಗೇಯಕಾರರ, ಸಂಗೀತ ತ್ರಿಮೂರ್ತಿಗಳ ಉತ್ಸವ ಏರ್ಪಡಿಸಿ ದಾಸರ ಪದಗಳಿಗೂ ಆದ್ಯತೆ ನೀಡುತ್ತಿವೆ.

* ಮಕ್ಕಳಲ್ಲಿ ದಾಸ ಸಾಹಿತ್ಯದ ಅರಿವು, ತಿಳಿವಳಿಕೆ ಹೇಗೆ ಮೂಡಿಸಬಹುದು?
ದಾಸಸಾಹಿತ್ಯದಲ್ಲಿ ಸಮಾಜದ ಕಳಕಳಿ, ಆಶಯ ಅತ್ಯಂತ ಸೊಗಸಾಗಿ ಬಿಂಬಿತವಾಗಿರುವುದರಿಂದ ಮಕ್ಕಳ ಮನಸ್ಸಿನಲ್ಲಿ ಈ ಒಳ್ಳೆಯ ಅಂಶಗಳನ್ನು ತುಂಬಬೇಕು. ಅವರಲ್ಲಿ ಸದ್ಭಾವನೆ ಮೂಡಿಸಬೇಕು, ಸಂಸ್ಕಾರ ಬೆಳೆಸಬೇಕು. ಶಾಲೆಗಳಲ್ಲಿ ಸಂಗೀತ ಕಡ್ಡಾಯ ಮಾಡಬೇಕು. ಕೆಲವು ಶಾಲೆಗಳಲ್ಲಿ ಈಗಾಗಲೇ ಸಂಗೀತ ಕಲಿಸುತ್ತಿರುವುದು ಸ್ವಾಗತಾರ್ಹ ವಿಚಾರ. ಹರಿದಾಸರ ಪದಗಳ ರೆಕಾರ್ಡಿಂಗ್‌ಗಳನ್ನು ಮಕ್ಕಳಿಗೆ ಕೇಳಿಸಬೇಕು. ರಾಗಬದ್ಧ, ತಾಳಬದ್ಧವಾಗಿ ಹಾಡಲು ಕಲಿಸಬೇಕು. ನಮ್ಮ ‘ಹಂಸಧ್ವನಿ ಕ್ರಿಯೇಷನ್ಸ್‌’ ಸಂಸ್ಥೆಯಿಂದ ಸಾಕಷ್ಟು ರೆಕಾರ್ಡಿಂಗ್ಸ್‌ ಮಾಡಿದ್ದೇವೆ. 70ರ ದಶಕದಲ್ಲೇ ಲಹರಿ, ಎಚ್‌ಎಂವಿ, ಸಂಗೀತ ಮುಂತಾದ ಆಡಿಯೊ ಕಂಪೆನಿಗಳು ದಾಸರ ಪದಗಳ ಹಲವಾರು ಸೀಡಿಗಳನ್ನು ಹೊರತಂದಿವೆ. ಇವೆಲ್ಲವನ್ನು ಉಳಿಸಿ ಬಳಸಿದರೆ ಮುಂದಿನ ಪೀಳಿಗೆಗೂ ದಾಸಸಾಹಿತ್ಯ ತಲುಪುವುದರಲ್ಲಿ ಸಂಶಯವಿಲ್ಲ.

* ದಾಸ ಸಾಹಿತ್ಯಕ್ಕೆ ನೀವು ನೀಡಿದ ಕೊಡುಗೆಯನ್ನು ಪರಿಗಣಿಸಿ ‘ವಿಎಲ್‌ಎನ್‌ ನಿರ್ಮಾಣ್ ಪುರಂದರ ರತ್ನ ಸಂಗೀತ ಪ್ರಶಸ್ತಿ’ ಇದೀಗ ನಿಮಗೆ ಒಲಿದಿದೆ. ನಿಮ್ಮ ಅನಿಸಿಕೆ ಏನು?
ಒಬ್ಬ ಕಲಾವಿದನ ಹಲವಾರು ವರ್ಷಗಳ ಕಲಾರಾಧನೆಯನ್ನು ಗಮನಿಸಿ, ಗುರುತಿಸಿ ಪ್ರಶಸ್ತಿ ಎಂಬ ಗೌರವ ಬಂದಾಗ ಸಹಜವಾಗಿಯೇ ಖುಷಿ ಆಗುತ್ತೆ. ಸಂಗೀತದಲ್ಲಿ ಮಾಡಿದ ಸತತ ಸಾಧನೆ, ಪರಿಶ್ರಮ ಎಲ್ಲವೂ ಸಾರ್ಥಕತೆ ಪಡೆದುಕೊಳ್ಳುತ್ತೆ. ಅದರಲ್ಲೂ ದಾಸಸಾಹಿತ್ಯದಲ್ಲಿ ಅಪಾರ ಜ್ಞಾನ ಇರುವವರು, ಗಣ್ಯರು ಸೇರಿ ಆಯ್ಕೆ ಮಾಡಿದಂತಹ ಪ್ರಶಸ್ತಿ ಇದು. ಹೆಮ್ಮೆ ಅನಿಸ್ತಾ ಇದೆ. ಜತೆಗೆ ನನ್ನ ಗುರುಗಳಾದ ವಿದ್ವಾನ್‌ ಆರ್‌.ಕೆ. ಶ್ರೀಕಂಠನ್‌ ಅವರೂ ಬಹಳ ವರ್ಷಗಳ ಹಿಂದೆಯೇ ಈ ಪ್ರಶಸ್ತಿ ಪಡದಿದ್ದು, ಅದೇ ಪ್ರಶಸ್ತಿ ಈಗ ನನಗೆ ಬಂದಿರುವುದು ನಿಜಕ್ಕೂ ಖುಷಿಯ ವಿಚಾರ. ಪ್ರಶಸ್ತಿ ಪಡೆಯುವುದು ದೊಡ್ಡ ವಿಚಾರವಲ್ಲ. ಪಡೆದ ಮೇಲೆ ನಮ್ಮ ಆದ್ಯತೆ, ಜವಾಬ್ದಾರಿ ಎರಡೂ ಹೆಚ್ಚುತ್ತೆ. ಕೇಳುಗರ ನಿರೀಕ್ಷೆ ಹೆಚ್ಚಾಗುತ್ತೆ. ಅದನ್ನು ಉಳಿಸಿಕೊಂಡು ಬರುವಲ್ಲಿ ನಮ್ಮ ಹೊಣೆಗಾರಿಕೆಯೂ ದೊಡ್ಡದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT