ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ–ಮನುಷ್ಯ ಸಂಬಂಧ

Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ಮಾಲಿನ್ಯದಿಂದ ಬಸವಳಿದಿರುವ ನಗರದಲ್ಲಿ ಹಸಿರು ಜಾಗೃತಿ ಮೂಡಿಸುವ ಹೋರಾಟಗಳು, ಪ್ರದರ್ಶನಗಳು, ಉಪನ್ಯಾಸ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಆದರೂ ಬಹುತೇಕ ಬೆಂಗಳೂರಿಗರಿಗೆ ಲಾಲ್‌ಬಾಗ್, ಕಬ್ಬನ್‌ಪಾರ್ಕ್ ಹೊರತುಪಡಿಸಿ ನಗರದಲ್ಲಿರುವ ಇತರ ಹಸಿರುಧಾಮಗಳ ಪರಿಚಯವಿಲ್ಲ.

ಅಂಥ ತಾಣಗಳ ಪಟ್ಟಿಗೆ ಮಲ್ಲೇಶ್ವರಂನಲ್ಲಿರುವ ಭಾರತೀಯ ಮರವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯೂ ಸೇರುತ್ತದೆ. ಸುಮಾರು 25 ಎಕರೆ ವಿಸ್ತಾರದ ಭೂಮಿಯಲ್ಲಿ ಸಾವಿರಾರು ಗಿಡಮರಗಳಿವೆ. ನಡುವೆ ಅಲ್ಲಲ್ಲಿ ಎದ್ದಿರುವ ಕಟ್ಟಡಗಳೂ ಕಣ್ಣಿಗೆ ಬೀಳುತ್ತವೆ.

ಮರವಿಜ್ಞಾನ, ಅರಣ್ಯರಕ್ಷಣೆ, ಸಸ್ಯಕೃಷಿ, ಸಂಶೋದನೆ, ವನವೈವಿಧ್ಯ, ಹವಾಮಾನ ವೈಪರೀತ್ಯ, ಅರಣ್ಯ ಶಿಕ್ಷಣ ಸೇರಿದಂತೆ ಹತ್ತಾರು ವಿಭಾಗಗಳ ಮಾಹಿತಿ ಇಲ್ಲಿ ಲಭ್ಯ. ಇಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಮರದ ಸಾಮಾಗ್ರಿಗಳು, ಅವುಗಳ ಉಪಯೋಗ ಹಾಗೂ ಅರಣ್ಯದ ಮೇಲಿನ ಪ್ರಾಣಿ ಸಂಕುಲದ ಅವಲಂಬನೆಯನ್ನು ತಿಳಿಸಿಕೊಡುವ ವಿವಿಧ ಪರಿಕರಗಳು ಇವೆ.

ಮನುಷ್ಯ ಹಾಗೂ ಮರದ ನಡುವಣ ಕೊನೆ–ಮೊದಲಿಲ್ಲದ ಸಂಬಂಧದ ಕಥೆಯನ್ನು ಸೊಗಸಾಗಿ ಕಟ್ಟಿಕೊಡುವ ಈ ಪ್ರದರ್ಶನ ನೋಡುಗರ ಮನಸೆಳಯುತ್ತದೆ. ನೆಲದ ಮೇಲೆ ಉರುಳುವ ಚಕ್ರ, ನೀರ ಮೇಲೆ ತೇಲುವ ಹಡಗು, ಜೀವ ಪೋಷಣೆಗೆ ಬೇಕಾದ ಕೃಷಿ ಸಾಮಾಗ್ರಿಗಳು, ಪ್ರಾಣಕ್ಕೆ ಎರವಾಗುವ ಯುದ್ದೋಪಕರಣಗಳು, ದೇಹಕ್ಕೆ ಹಿತವೆನಿಸುವ ಪೀಠೋಪಕರಣಗಳು, ಮನಸಿಗೆ ಮುದ ನೀಡುವ ಆಟೋಪಕರಣಗಳು, ಸಂಗೀತ ಸಾಮಾಗ್ರಿಗಳು ಸೇರಿದಂತೆ ಮರದಿಂದ ಜೀವತಳೆದ ವೈವಿಧ್ಯಮಯ ಪರಿಕರಗಳು ಇಲ್ಲಿವೆ.

ಈ ಪರಿಕರಗಳನ್ನು ನೋಡುತ್ತಿದ್ದಂತೆ ನಾಗರಿಕತೆಯ ಬೆಳವಣಿಗೆಯಲ್ಲಿ ಈ ಸಾಧನಗಳು ನಿರ್ವಹಿಸಿದ ಪಾತ್ರಗಳ ಸಂಕ್ಷಿಪ್ತ ಪರಿಚಯವೂ ಆಗುತ್ತದೆ. ಮರಗಳಿಂದ ಸಿದ್ಧವಾದ ಕರಕುಶಲ ವಸ್ತುಗಳು, ಕಲಾಕೃತಿಗಳು ಹಾಗೂ ಜೀವವೈವಿಧ್ಯತೆ ಕುರಿತು ಮಾಹಿತಿ ನೀಡುವ ಫಲಕಗಳೂ ಇಲ್ಲಿವೆ. ಸುಮಾರು 780 ವರ್ಷ ಜೀವಿತಾವಧಿಯನ್ನು ಹೊಂದಿದ್ದ ತೇಗ ಹಾಗೂ ಗುಲ್‌ಮೊಹರ್ ಮರಗಳ ಬೃಹದಾಕಾರಾದ ದಿಮ್ಮಿಗಳು ಪ್ರದರ್ಶನದಲ್ಲಿ ಗಮನ ಸೆಳೆಯುವ ಅಂಶ.

‘ಈ ರೀತಿಯ ವಸ್ತು ಪ್ರದರ್ಶನಗಳು ಜನರಲ್ಲಿ ಅರಣ್ಯ ರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುತ್ತದೆ’ ಎನ್ನುತ್ತಾರೆ ಅರಣ್ಯ ಇಲಾಖೆಯ ವಿಜ್ಞಾನಿ ಪಂಕಜ್ ಅಗರ್‌ವಾಲ್.

ವಸ್ತುಪ್ರದರ್ಶನದ ಜೊತೆಗೆ ಮರದಿಂದ ಆಧುನಿಕ ಜೀವನ ಶೈಲಿಗೆ ಪೂರಕವಾದ ಪರಿಕರಗಳನ್ನು ತಯಾರಿಸುವ, ಕಲಾತ್ಮಕವ ಸಾಮಾಗ್ರಿಗಳನ್ನು ರೂಪಿಸುವ, ಕರಕುಶಲ ವಸ್ತುಗಳ ತಯಾರಿ ಕಲಿಸುವ ತರಬೇತಿ ತರಗತಿಗಳೂ ಇಲ್ಲಿ ನಡೆಯುತ್ತವೆ.

ವಿಳಾಸ: ಭಾರತೀಯ ಮರವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ. ದೂ– 080 2219 0179. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ. ಪ್ರವೇಶ ಉಚಿತ

ಉದ್ಯಮಿಗಳು ಮತ್ತು ಸಂಶೋಧಕರ ಸಮ್ಮಿಲನ
ಮಲ್ಲೇಶ್ವರಂನ ಮರ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯು ವಿವಿಧ ಸಂಸ್ಥೆಗಳ ಸಹಯೋಗದೊಡನೆ ಶುಕ್ರವಾರ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಮಾವೇಶ ಆಯೋಜಿಸಿದೆ. ಮನೆಗಳಿಗೆ ಬಿದಿರಿನ ಉತ್ಪನ್ನಗಳ ಬಳಕೆ, ವುಡ್ ಪಾಲಿಮರ್ ಕಾಂಪೋಸಿಟ್, ಥರ್ಮಲ್ ಮಾಡಿಫಿಕೇಶನ್ ಆಫ್ ವುಡ್, ಕೈಗಾರಿಕಾ ತ್ಯಾಜ್ಯದ ಮರುಬಳಕೆ, ಕಟ್ಟಡ ತಂತ್ರಜ್ಞಾನದ ಬಳಕೆಗೆ ಲಭ್ಯವಿರುವ ಹೈಬ್ರಿಡ್ ಗ್ರೀನ್ ಕಾಂಪೊಸಿಟ್ ವಸ್ತುಗಳು, ಸಿಮೆಂಟ್‌ ರಹಿತ ಜಿಯೊಪಾಲಿಮಾರ್ ಕಾಂಕ್ರಿಟ್, ರೇಡಿಯೇಷನ್ ಇಲ್ಲದ ಲೋಹದ ವಸ್ತುಗಳು ಸಮಾವೇಶದ ಪ್ರಮುಖ ಆಕರ್ಷಣೆ ಎನಿಸಿವೆ.

ಅಧ್ಯಕ್ಷತೆ ಮತ್ತು ದಿಕ್ಸೂಚಿ ಭಾಷಣ– ನೀತಿ ಆಯೋಗದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಿಂಗ್ ಗೌರ್, ಅತಿಥಿ– ಕೈಗಾರಿಕಾ ಇಲಾಖೆಯ ಆಯುಕ್ತ ದರ್ಪಣ್ ಜೈನ್. ತಾಂತ್ರಿಕ ಗೋಷ್ಠಿಗಳ ಬಳಿಕ ತಜ್ಞರೊಂದಿಗೆ ಸಂವಾದ ನಡೆಯಲಿದೆ.
ಸ್ಥಳ– ಭಾರತೀಯ ಮರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮಲ್ಲೇಶ್ವರಂ. ಶುಕ್ರವಾರ ಬೆಳಿಗ್ಗೆ 9ರಿಂದ 5.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT