ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಗಮನ ಕೊಡಿ

Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿಯ ಮತ್ತೊಂದು ವರದಿ (ASER) ಬಿಡುಗಡೆಯಾಗಿದೆ. ಪ್ರಥಮ್ ಸ್ವಯಂ ಸೇವಾ ಸಂಸ್ಥೆ ಪ್ರತಿವರ್ಷ ಬಿಡುಗಡೆ ಮಾಡುವ ಈ ವರದಿಯಲ್ಲಿ, ಈ ವರ್ಷದ ಸಾಧನೆಯೂ ಮಂಕಾಗಿ ಕಾಣಿಸುತ್ತಿದೆ. ಸಮೀಕ್ಷೆಗೆ ಒಳಪಟ್ಟ ಗ್ರಾಮೀಣ ಭಾರತದ ಸರ್ಕಾರಿ ಹಾಗೂ ಖಾಸಗಿ ಶಾಲೆ– ಕಾಲೇಜುಗಳ ಬಹುತೇಕ ವಿದ್ಯಾರ್ಥಿಗಳು ಓದು ಹಾಗೂ ಲೆಕ್ಕ ಮಾಡುವ ಕೌಶಲಗಳಲ್ಲಿ ಹಿಂದುಳಿದಿದ್ದಾರೆ ಎಂಬುದು ಆತಂಕಕಾರಿ. 24 ರಾಜ್ಯಗಳ 28 ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆದಿದೆ. ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನವಾದ ಎಂಟು ವರ್ಷಗಳ ನಂತರ 8ನೇ ತರಗತಿ ತೇರ್ಗಡೆಯಾದ 14-18ರ ವಯೋಮಾನದ ವಿದ್ಯಾರ್ಥಿಗಳನ್ನು ಈ ಸಮೀಕ್ಷೆ ಕೇಂದ್ರೀಕರಿಸಿತ್ತು.

ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಕಂಡುಬಂದಿದ್ದ ಕಲಿಕಾ ಕೊರತೆಯ ಪರಂಪರೆ ಈಗ ಹದಿಹರೆಯದ ಮಕ್ಕಳಲ್ಲೂ ಕಂಡುಬಂದಿದೆ ಎಂಬುದನ್ನು ಈ ಅಧ್ಯಯನ ಬಹಿರಂಗಗೊಳಿಸಿದೆ. ಗಡಿಯಾರ ನೋಡಿ ಸರಿಯಾದ ಸಮಯವನ್ನು ಹೇಳಲಿಕ್ಕೂ ಈ ಗುಂಪಿನ ಶೇ 40ರಷ್ಟು ವಿದ್ಯಾರ್ಥಿಗಳಿಗೆ ಆಗಿಲ್ಲ ಎಂಬುದು ಆತಂಕಕಾರಿ. ತಮ್ಮದೇ ಮಾತೃಭಾಷೆಯನ್ನು ಸುಲಲಿತವಾಗಿ ಓದಲು ಸುಮಾರು ಕಾಲುಭಾಗದಷ್ಟು ವಿದ್ಯಾರ್ಥಿಗಳು ಕಷ್ಟಪಟ್ಟಿದ್ದಾರೆ. ಶೇ 57ರಷ್ಟು ವಿದ್ಯಾರ್ಥಿಗಳಿಗೆ ಸರಳ ಭಾಗಾಕಾರ ಮಾಡುವುದು ಸಾಧ್ಯವಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಭಾರತದ ಜನಸಂಖ್ಯೆಯಲ್ಲಿ ಸುಮಾರು ಶೇ 10ರಷ್ಟು ಮಂದಿ ಈ ವಯೋಮಾನಕ್ಕೆ ಸೇರುವುದರಿಂದ ಅವರ ಉತ್ಪಾದಕತೆಯು ಭಾರತದ ಆರ್ಥಿಕತೆಯ ಸ್ಪರ್ಧಾತ್ಮಕತೆಯ ಮೇಲೆ ನೇರ ಪರಿಣಾಮ ಬೀರುವಂತಹದ್ದು. ಈ ಹದಿಹರೆಯದ ಮಕ್ಕಳಲ್ಲಿನ ಕಲಿಕೆಯ ಕೊರತೆಯು ಕೌಶಲಪೂರ್ಣ ಮಾನವಶಕ್ತಿಯ ಕೊರತೆಗೆ ಕಾರಣ ಆಗಬಹುದು. ಇದು ಭವಿಷ್ಯದಲ್ಲಿ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಹದ್ದು. ಶಿಕ್ಷಣ ಪೂರೈಸಿ ಹೊರಬರುವ ಲಕ್ಷಾಂತರ ಯುವ ಜನರು ಉದ್ಯೋಗಕ್ಕೆ ಅಗತ್ಯವಾದ ಮೂಲ ಅರ್ಹತೆಗಳನ್ನೂ ಗಳಿಸಿಕೊಂಡಿರದಿದ್ದಲ್ಲಿ ‘ಕೌಶಲ ಭಾರತ’ (ಸ್ಕಿಲ್ ಇಂಡಿಯಾ) ಆಶಯಗಳಿಗೆ ಧಕ್ಕೆ ಆಗಬಹುದು. ಹೆಚ್ಚಿನ ಸಂಖ್ಯೆಯಲ್ಲಿರುವ ಯುವಜನರೇ ಭಾರತದ ಶಕ್ತಿ ಎಂದುಕೊಳ್ಳುತ್ತೇವೆ. ಆದರೆ ಉದ್ಯೋಗ ರಂಗಕ್ಕೆ ಈ ಶಕ್ತಿ ಸೇರ್ಪಡೆ ಆಗದಿದ್ದಲ್ಲಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ.

ಈ ಕಲಿಕಾ ಕೊರತೆಗೆ ಕಾರಣವೇನು, ಇದನ್ನು ಸರಿಪಡಿಸುವುದು ಹೇಗೆ ಎಂಬುದನ್ನು ನಮ್ಮ ನೀತಿ ನಿರೂಪಕರು ಗಂಭೀರವಾಗಿ ತೆಗೆದುಕೊಳ್ಳಬೇಕು. ಮೂಲಸೌಕರ್ಯಗಳ ಕೊರತೆ, ಅಧ್ಯಾಪಕರ ಕೊರತೆ, ಅಧ್ಯಾಪಕರ ಬೋಧನಾ ಗುಣಮಟ್ಟ ಕುರಿತಾದ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಪ್ರವೃತ್ತರಾಗಬೇಕು. ಗ್ರಾಮೀಣ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅಪಾರ ದೋಷಗಳಿವೆ ಎಂಬುದು ಈ ಸಮೀಕ್ಷೆಯಿಂದ ಸ್ಪಷ್ಟ. ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಏರಿಕೆ ಆಗಿರಬಹುದು. ಆದರೆ ಕಲಿಕೆಯಲ್ಲಿ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂಬುದನ್ನು ಕಡೆಗಣಿಸಲಾಗದು. ಹಾಗೆಯೇ ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳ ದಾಖಲಾತಿ ಅಂತರ, ಮಕ್ಕಳ ವಯಸ್ಸು ಹೆಚ್ಚುತ್ತಿದ್ದಂತೆ ಏರುತ್ತಲೇ ಹೋಗುತ್ತದೆ.

14ನೇ ವಯಸ್ಸಿನ ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣ ಶೇ 94.3ರಷ್ಟು ಇದ್ದರೆ ಬಾಲಕರ ಪ್ರಮಾಣ ಶೇ 95.3. ಇದರಲ್ಲೇನೂ ಅಂತಹ ವ್ಯತ್ಯಾಸ ಇಲ್ಲ. ಆದರೆ 18ನೇ ವಯಸ್ಸಿನಲ್ಲಿ ಈ ಅಂತರ ಹೆಚ್ಚಾಗುತ್ತದೆ, ಆಗ ಬಾಲಕರ ದಾಖಲಾತಿ ಶೇ 71.6ರಷ್ಟು ಇದ್ದರೆ ಬಾಲಕಿಯರ ದಾಖಲಾತಿ ಶೇ 67.4 ಮಾತ್ರ. ವಯಸ್ಸು ಹೆಚ್ಚುತ್ತಿದ್ದಂತೆ ಶಾಲೆ ಬಿಡುವವರ ಪ್ರಮಾಣ ಹೆಚ್ಚುವುದು ಇದರಿಂದ ವ್ಯಕ್ತ. ಇದನ್ನು ತಡೆಯಲು ಅಗತ್ಯ ಕ್ರಮಗಳ ಜೊತೆಗೆ ಜಾಗೃತಿ ಮೂಡಿಸುವುದೂ ಅವಶ್ಯ.

ಮತ್ತೊಂದು ಕುತೂಹಲದ ಸಂಗತಿ ಎಂದರೆ ವಯಸ್ಸು ಏರಿದಂತೆ ಮಾತೃಭಾಷೆ ಹಾಗೂ ಇಂಗ್ಲಿಷ್ ಓದುವ ಸಾಮರ್ಥ್ಯ ಸುಧಾರಿಸಿದಂತೆ ಕಾಣುತ್ತದೆ. 14 ವರ್ಷದವರಿಗಿಂತ 18 ವರ್ಷದವರ ಓದುವ ಸಾಮರ್ಥ್ಯ ಸುಧಾರಿಸಿದೆ. ಆದರೆ ಇದೇ ತರ್ಕ ಗಣಿತಕ್ಕೆ ಅನ್ವಯವಾಗುವುದಿಲ್ಲ. 18ರ ವಯಸ್ಸಿನಲ್ಲೂ ಲೆಕ್ಕ ಮಾಡುವ ಸಾಮರ್ಥ್ಯ ಸುಧಾರಿಸಿರುವುದಿಲ್ಲ ಎಂಬುದು ಕಳವಳದ ಸಂಗತಿ. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು. ‘ಕಲಿಕೆಯ ಕೊರತೆ’ ರಾಷ್ಟ್ರದ ಪ್ರಗತಿಗೆ ತಡೆಯಾಗುವುದನ್ನು ತಪ್ಪಿಸಲು ನಮ್ಮ ಸರ್ಕಾರಗಳು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT