ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಘ್ನೇಶ್‌ ಪಡೆಗೆ ಜಯದ ಹಂಬಲ

ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಇಂದು ಪುದುಚೇರಿ ವಿರುದ್ಧ ಪೈಪೋಟಿ
Last Updated 18 ಜನವರಿ 2018, 20:13 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಪಂದ್ಯದಲ್ಲಿ ಗೋಲಿನ ಮಳೆ ಸುರಿಸಿ ತವರಿನ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದ್ದ ಕರ್ನಾಟಕ ತಂಡ ಈಗ ಮತ್ತೆ ಜಯದ ಮಂತ್ರ ಜಪಿಸುತ್ತಿದೆ.

ಅಶೋಕ ನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಹೋರಾಟದಲ್ಲಿ ವಿಘ್ನೇಶ್‌ ಗುಣಶೇಖರನ್‌ ಬಳಗ ಪುದುಚೇರಿ ವಿರುದ್ಧ ಸೆಣಸಲಿದೆ.

ಬುಧವಾರ ನಡೆದ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ 5–0 ಗೋಲುಗಳಿಂದ ತೆಲಂಗಾಣವನ್ನು ಸೋಲಿಸಿತ್ತು. ಈ ಹೋರಾಟದಲ್ಲಿ ಮುಂಚೂಣಿ ವಿಭಾಗದ ಆಟಗಾರರಾದ ಎಸ್‌.ರಾಜೇಶ್ ಮತ್ತು ಲಿಟನ್‌ ಶಿಲ್‌, ತಲಾ ಎರಡು ಗೋಲು ದಾಖಲಿಸಿದ್ದರು.

ರಕ್ಷಣಾ ವಿಭಾಗದ ಆಟಗಾರ ಶಹಬಾಜ್‌ ಖಾನ್‌ ಕಾಲ್ಚಳಕದಲ್ಲೂ ಗೋಲು ಅರಳಿತ್ತು. ಕೋಚ್‌ ಪಿ.ಮುರಳೀಧರನ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಆತಿಥೇಯರು ಗುರುವಾರ ಕಠಿಣ ತಾಲೀಮು ನಡೆಸಿದ್ದು ಪುದುಚೇರಿ ತಂಡವನ್ನೂ ಸುಲಭವಾಗಿ ಮಣಿಸುವ ಲೆಕ್ಕಾಚಾರ ಹೊಂದಿದ್ದಾರೆ.

ವಿವಿಧ ಡಿವಿಷನ್‌ ಲೀಗ್‌ಗಳಲ್ಲಿ ಆರ್‌ಡಬ್ಲ್ಯುಎಫ್‌ ತಂಡದ ಪರ ಆಡಿರುವ ರಾಜೇಶ್‌ ಮತ್ತು ಎಂಇಜಿ ತಂಡವನ್ನು ಪ್ರತಿನಿಧಿಸುವ ಲಿಟನ್‌, ಶುಕ್ರವಾರದ ಹಣಾಹಣಿಯಲ್ಲೂ ಮೋಡಿ ಮಾಡಲು ಕಾಯುತ್ತಿದ್ದಾರೆ.

ಡಿಫೆಂಡರ್‌ಗಳಾದ ಸುನಿಲ್‌ ಕುಮಾರ್‌, ಶಫೀಲ್‌ ಮತ್ತು ಕೀತ್‌ ರೇಮಂಡ್‌ ಸ್ಟೀಫನ್‌ ಅವರ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ. ನಾಯಕ ವಿಘ್ನೇಶ್‌, ಸೊಲೈಮಲೈ, ಲಿಯೊನ್‌ ಆಗಸ್ಟೀನ್‌ ಮತ್ತು ಅಜರುದ್ದೀನ್‌ ಅವರು ಮಿಡ್‌ ಫೀಲ್ಡ್‌ ವಿಭಾಗದಲ್ಲಿ ತಂಡಕ್ಕೆ ಬಲ ತುಂಬುವ ನಿರೀಕ್ಷೆ ಇದೆ.

ಜಯದ ಹಾದಿಗೆ ಮರಳಲು ಕಾತರ: ಪುದುಚೇರಿ ತಂಡ ಜಯದ ಹಾದಿಗೆ ಮರಳುವ ವಿಶ್ವಾಸ ಹೊಂದಿದೆ. ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಕಾರ್ತಿಕೇಯನ್‌ ಪಡೆ ಸರ್ವಿಸಸ್‌ ವಿರುದ್ಧ ಸೋತಿತ್ತು.

ಮೊದಲರ್ಧದಲ್ಲಿ ತಂಡ ಗುಣಮಟ್ಟದ ಆಟ ಆಡಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ರಕ್ಷಣಾ ವಿಭಾಗದಲ್ಲಿ ಮಾಡಿಕೊಂಡ ಎಡವಟ್ಟುಗಳು ತಂಡಕ್ಕೆ ಮುಳುವಾಗಿದ್ದವು.

ಸರ್ವಿಸಸ್‌ ವಿರುದ್ಧ ಗೋಲು ಗಳಿಸಿದ್ದ ನಾಯಕ ಕಾರ್ತಿಕೇಯನ್‌, ಕರ್ನಾಟಕದ ರಕ್ಷಣಾ ವಿಭಾಗಕ್ಕೂ ಸವಾಲಾಗಬಲ್ಲರು. ಇವರಿಗೆ ಇತರ ಆಟಗಾರರಿಂದ ಸೂಕ್ತ ಬೆಂಬಲ ಸಿಕ್ಕರೆ ಆತಿಥೇಯರನ್ನು ಅದರದ್ದೇ ನೆಲದಲ್ಲಿ ಮಣಿಸುವ ಈ ತಂಡದ ಕನಸು ನನಸಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT