ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನ ಭಾಗ್ಯವೆಂಬ ಅಪಪ್ರಚಾರಕ್ಕೆ ಪ್ರಶಸ್ತಿಯೇ ಉತ್ತರ’

ಆಹಾರ ಸಚಿವ ಯು.ಟಿ. ಖಾದರ್ ತಿರುಗೇಟು
Last Updated 18 ಜನವರಿ 2018, 20:44 IST
ಅಕ್ಷರ ಗಾತ್ರ

ಬೆಂಗಳೂರು: ‘ಅನ್ನ ಭಾಗ್ಯವನ್ನು ಕನ್ನ ಭಾಗ್ಯ ಎಂಬ ಬಿಜೆಪಿ ನಾಯಕರ ಅಪಪ್ರಚಾರಕ್ಕೆ ಆಹಾರ ಇಲಾಖೆ ಸಾಧನೆಗೆ ಸಿಕ್ಕಿರುವ ರಾಷ್ಟ್ರೀಯ ಪ್ರಶಸ್ತಿಯೇ ಉತ್ತರ’ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದರು.

‘ಪಡಿತರ ವಿತರಣೆ ಮತ್ತು ಜನಜಾಗೃತಿ ಸಾಧನೆಗಾಗಿರುವ ರಾಷ್ಟ್ರೀಯ ಪ್ರಶಸ್ತಿ ಆಹಾರ ಇಲಾಖೆಗೆ ಸಿಕ್ಕಿದೆ’ ಎಂದು ಸಚಿವರು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಗುಜರಾತ್, ಛತ್ತೀಸ್‌ಗಡ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಬಿಜೆಪಿ‌ ಸರ್ಕಾರವಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬೇರೆ ಪಕ್ಷಗಳು ಅಧಿಕಾರದಲ್ಲಿವೆ. ಆ ರಾಜ್ಯಗಳಲ್ಲಿ ಅನ್ನಭಾಗ್ಯದಂಥ ಯೋಜನೆ ಇಲ್ಲ. ಈ ವಿಷಯದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿ’ ಎಂದು ಬಣ್ಣಿಸಿದರು.

‘ದಾಸೋಹ ಯೋಜನೆಯಡಿ 28 ಸಾವಿರ ಫಲಾನುಭವಿಗಳಿಗೆ ಅಕ್ಕಿ ವಿತರಿಸಲಾಗುತ್ತಿದೆ. ಹಲವು ಸಂಸ್ಥೆಗಳಲ್ಲಿರುವ ನಿರ್ಗತಿಕರು, ವೃದ್ಧರಿಗೆ ಇದರಿಂದ ಅನುಕೂಲವಾಗಿದೆ’ ಎಂದರು.

‘ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರ, ಬಿಪಿಎಲ್ ಕಾರ್ಡ್‌ಗಳನ್ನು ಸಮರ್ಪಕವಾಗಿ ವಿತರಿಸಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಬಳಿಕ 33.70 ಲಕ್ಷ ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‌ ವಿತರಿಸಿದ್ದೇವೆ. ಲಕ್ಷಾಂತರ ಬೋಗಸ್ ಕಾರ್ಡ್ ಪತ್ತೆ ಹಚ್ಚಿದ್ದೇವೆ’ ಎಂದರು.

‘ಕಾಂಗ್ರೆಸ್ ಮುಕ್ತ ದೇಶ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ನಾವು ಬಿಜೆಪಿ ಮುಕ್ತ, ಜೆಡಿಎಸ್ ಮುಕ್ತ ಮಾಡುತ್ತೇವೆ ಎಂದು ಹೇಳುವುದಿಲ್ಲ. ವಿರೋಧ ಪಕ್ಷಗಳೂ ಇರಬೇಕು’ ಎಂದು ವ್ಯಂಗ್ಯವಾಗಿ ಹೇಳಿದರು.

ಪ್ರಧಾನಿಗೆ ರಕ್ತದಲ್ಲಿ‌ ಪತ್ರ: ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮತ್ತು ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕು’ ಎಂದು ಆಗ್ರಹಿಸಿ ಕೆಪಿಸಿಸಿ ಕಿಸಾನ್ ಘಟಕದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಪ್ರಧಾನ ಮಂತ್ರಿ ಬೆಳೆವಿಮೆ ಯೋಜನೆಯಿಂದ ರೈತರಿಗೆ ಅನುಕೂಲವಾಗಬೇಕು. ಉತ್ಪಾದನಾ ವೆಚ್ವದ ಮೇಲೆ ರೈತರಿಗೆ ಲಾಭ ಸಿಗಬೇಕು. ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಬೇಕು ಎಂದು ಬೇಡಿಕೆ ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ. ರಕ್ತದಲ್ಲಿ ಬರೆದ ಪತ್ರಗಳನ್ನು ಬೆಂಗಳೂರಿನ ಕೇಂದ್ರ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT