ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಹೆಲ್ಮೆಟ್‌ ಮಾರದಂತೆ ಎಚ್ಚರಿಕೆ

Last Updated 18 ಜನವರಿ 2018, 20:46 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ಹೆಲ್ಮೆಟ್‌ ಮಾರಾಟದ ಸ್ಥಳಗಳಿಗೆ ಗುರುವಾರ ಭೇಟಿ ನೀಡಿದ ಸಂಚಾರ ಪೊಲೀಸರು, ಐಎಸ್‌ಐ ಗುರುತು ಇಲ್ಲದ ಹೆಲ್ಮೆಟ್‌ಗಳನ್ನು ಮಾರದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.

ಫೆ. 1ರಿಂದ ನಗರದಲ್ಲಿ 'ಆಪರೇಷನ್ ಸೇಫ್‌ ರೈಡ್‌' ಕಾರ್ಯಾಚರಣೆ ಆರಂಭವಾಗಲಿದ್ದು, ಸವಾರರು ಐಎಸ್‌ಐ ಗುರುತು ಇರುವ ಹೆಲ್ಮೆಟ್‌ ಧರಿಸುವುದು ಕಡ್ಡಾಯವಾಗಿದೆ. ಕಳಪೆ ಹೆಲ್ಮೆಟ್‌ಗಳ ಮಾರಾಟ ತಡೆದರೆ, ಪ್ರಯಾಣಿಕರಿಗೆ ಅಂಥ ಹೆಲ್ಮೆಟ್‌ಗಳು ಸಿಗುವುದಿಲ್ಲ ಎಂಬುದನ್ನು ಮನಗಂಡ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆರ್‌.ಹಿತೇಂದ್ರ, ಮಾರಾಟ ಸ್ಥಳಗಳಿಗೆ ಹೋಗಿ ಪರಿಶೀಲನೆ ನಡೆಸುವಂತೆ ಆಯಾ ಠಾಣೆಯ ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಿದ್ದರು. ಇದರಿಂದಾಗಿ ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ಹಲಸೂರು, ಇಂದಿರಾನಗರ, ಹಳೆ ವಿಮಾನ ನಿಲ್ದಾಣ ರಸ್ತೆ, ಕೆ.ಆರ್.ಪುರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಾದಚಾರಿ ಮಾರ್ಗಗಳಲ್ಲಿ ಹೆಲ್ಮೆಟ್ ಮಾರುತ್ತಿದ್ದವರನ್ನು ವಿಚಾರಣೆಗೆ ಒಳಪಡಿಸಿದರು. ಅಲ್ಲದೆ, ‘ಯಾವುದೇ ಕಾರಣಕ್ಕೆ ಐಎಸ್ಐ ಗುರುತಿಲ್ಲದ ಹೆಲ್ಮೆಟ್‌ಗಳನ್ನು ನಾವು ಮಾರುವುದಿಲ್ಲ’ ಎಂದು ಅವರಿಂದ ಮುಚ್ಚಳಿಕೆಯನ್ನೂ ಬರೆಸಿಕೊಂಡರು.

ದೆಹಲಿಯಿಂದ ತಂದು ಮಾರಾಟ: ‘ಏಜೆಂಟರ ಮೂಲಕ ದೆಹಲಿಯಿಂದ ಹೆಲ್ಮೆಟ್‌ಗಳನ್ನು ತಂದು ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲ ಮಾರಾಟಗಾರರಿಗೆ ಐಎಸ್‌ಐ ಗುರುತು ಏನು ಎಂಬುದೇ ಗೊತ್ತಿಲ್ಲ. ಹಣದಾಸೆಗಾಗಿ ಈ ಕೆಲಸ ಮಾಡುತ್ತಿದ್ದಾರೆ' ಎಂದು ಕಾರ್ಯಾಚರಣೆ ತಂಡದಲ್ಲಿದ್ದ ಇನ್‌ಸ್ಪೆಕ್ಟರ್‌ ಹೇಳಿದರು.

‘ಕರ್ನಾಟಕ ಪೊಲೀಸ್‌ ಕಾಯ್ದೆ ಅನ್ವಯ ಹೆಲ್ಮೆಟ್‌ ಮಾರಾಟಗಾರರಿಗೆ ಎಚ್ಚರಿಕೆ ನೋಟಿಸ್‌ ನೀಡಿದ್ದೇವೆ. ಜತೆಗೆ ಏಜೆಂಟರ ಮೂಲಕವೇ ಕಳಪೆ ಹೆಲ್ಮೆಟ್‌ಗಳನ್ನು ವಾಪಸ್‌ ದೆಹಲಿಗೆ ಕಳುಹಿಸುವಂತೆ ಹೇಳಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT