ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಬಾರಿ ಸಂಸದರಾಗಿ ಅನಂತಕುಮಾರ ಹೆಗಡೆ ಕೊಡುಗೆ ಏನು?

Last Updated 19 ಜನವರಿ 2018, 6:34 IST
ಅಕ್ಷರ ಗಾತ್ರ

ಕಲಬುರ್ಗಿ: ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಇಲ್ಲದ ರಾಜಕಾರಣಿಗಳು ನಾಲಾಯಕ್ ಎಂದು ಹೇಳಿಕೆ ನೀಡಿರುವ ಅನಂತಕುಮಾರ ಹೆಗಡೆ ಅವರು ಆರು ಬಾರಿ ಸಂಸದರಾಗಿ ಉತ್ತರ ಕನ್ನಡ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅಭಿವೃದ್ಧಿ ಮಾಡದ ಅನಂತಕುಮಾರ ತಮ್ಮನ್ನು ತಾವೇ ನಾಲಾಯಕ್ ಎಂದು ಕರೆದುಕೊಂಡಿದ್ದಾರೆ. ವಿವಾದಿತ ಮಾತುಗಳ ಮೂಲಕ ಬಯಸಿರುವ ಹೆಗಡೆ ಅವರಿಗೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ. ಕೇವಲ ಬುದ್ಧಿಜೀವಿಗಳು, ಸಾಹಿತಿಗಳ ಬಗ್ಗೆ ಹಗುರವಾಗಿ ಮಾತನಾಡುವುದೇ ಅವರ ಸಾಧನೆಯಾಗಿದೆ ಎಂದು ಕುಟುಕಿದರು.

ರಾಮ-ಕೃಷ್ಣನ ಲೆಕ್ಕದಲ್ಲಿ ಹಣ ಪಡೆಯುತ್ತಿರುವ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಹಣ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ವಿಶೇಷ ವಿಮಾನದ ಮೂಲಕ ಹೈಕಮಾಂಡ್ ಗೆ ಹಣ ರವಾನೆಯಾಗುತ್ತಿದೆ. ಈ ಮಹಾನ್ ಕಾರ್ಯಕ್ಕೆ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಐದು ಜನ ಸಚಿವರನ್ನು ನೇಮಕ ಮಾಡಿದ್ದಾರೆ ಎಂದು ದೂರಿದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸೇರಿ ಐದು ಜನ ಸಚಿವರು ಹಣ ಸಾಗಿಸುತ್ತಿದ್ದಾರೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಚೆಕ್ ಮೂಲಕ ಹಣ ಪಡೆಯುತ್ತಿದ್ದರು. ಸಿದ್ದರಾಮಯ್ಯ ರಾಮನ ಲೆಕ್ಕ-ಕೃಷ್ಣನ ಲೆಕ್ಕದಲ್ಲಿ ಹಣ ಪಡೆಯುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಎಲ್ಲರ ಬಣ್ಣ ಬಯಲು ಮಾಡುತ್ತೇವೆ ಎಂದು ಗುಡುಗಿದರು.

ಪ್ರಕರಣದ ದಾರಿ ತಪ್ಪಿಸಲು ಎಸ್ ಐಟಿ ತನಿಖೆ: ಗಣಿ ಹಗರಣದ ಬಗ್ಗೆ ನಾನು ದಾಖಲೆಗಳ ಸಮೇತ ಮಾತನಾಡಿದ್ದರಿಂದ, ಈ ಪ್ರಕರಣದ ದಾರಿ ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ ಐಟಿ ತನಿಖೆಗೆ ವಹಿಸಿದ್ದಾರೆ. ಹಗರಣದ ಬಗ್ಗೆ ದಾಖಲೆ ಸಹಿತ ಮಾತನಾಡಿದ್ದರಿಂದ ಮುಖ್ಯಮಂತ್ರಿ ಗಾಬರಿಯಾಗಿದ್ದಾರೆ ಎಂದು ಹೇಳಿದರು.

ನಾನು ಆರೋಪ ಮಾಡಿದ ಬಳಿಕ ಮುಖ್ಯಮಂತ್ರಿ ಅವರು ಮೂರು ದಿನ ಬಾಗಿಲು ಹಾಕಿಕೊಂಡು ಕುಳಿತು ಉತ್ತರ ಸಿದ್ಧ ಮಾಡಿಕೊಂಡಿದ್ದಾರೆ. ನನ್ನ ಆರೋಪದ ಬಗ್ಗೆ ಸಿದ್ದರಾಮಯ್ಯ ಇದುವರೆಗೂ ಬಾಯಿ ಬಿಟ್ಟಿಲ್ಲ. ನನಗೆ ಹಿಟ್ ಅಂಡ್ ರನ್ ಕುಮಾರಸ್ವಾಮಿ ಎಂದು ಹೇಳುವ ನೈತಿಕ ಹಕ್ಕು ಅವರಿಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT