ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಪಕ್ಷ–ಪ್ರತಿಪಕ್ಷಗಳ ಮಧ್ಯೆ ವಾಕ್ಸಮರ

Last Updated 19 ಜನವರಿ 2018, 6:37 IST
ಅಕ್ಷರ ಗಾತ್ರ

ಮಂಗಳೂರು: ಕಲ್ಲಡ್ಕ ಹಾಗೂ ಪುಣಚ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ಸ್ಥಗಿತಗೊಳಿಸಿದ ವಿಷಯ ಗುರುವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಸದಸ್ಯರ ಆರೋಪ–ಪ್ರತ್ಯಾರೋಪಗಳು ತಾರಕಕ್ಕೇರಿದವು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಮಮತಾ ಗಟ್ಟಿ, ಜಿಲ್ಲೆಯಲ್ಲಿ ಎಷ್ಟು ಶಾಲೆಗಳಿಗೆ ಅಕ್ಷರ ದಾಸೋಹದಡಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಯಾವ ಶಾಲೆಗಳು ಈ ಯೋಜನೆಯಿಂದ ವಂಚಿತವಾಗಿವೆ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಡಿಡಿಪಿಐ ವೈ. ಶಿವರಾಮಯ್ಯ, ಜಿಲ್ಲೆಯಲ್ಲಿ 1,423 ಶಾಲೆಗಳಿಗೆ ಅಕ್ಷರ ದಾಸೋಹ ಯೋಜನೆ ಅನುಷ್ಠಾನವಾಗುತ್ತಿದೆ. ಎರಡು ಶಾಲೆಗಳಿಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಊಟ ಪೂರೈಸಲಾಗುತ್ತಿದೆ. ಕಲ್ಲಡ್ಕ ಮತ್ತು ಪುಣಚ ಶಾಲೆಗಳು ಮಧ್ಯಾಹ್ನದ ಬಿಸಿಯೂಟದ ಸಾಮಗ್ರಿ ಸ್ವೀಕರಿಸುತ್ತಿಲ್ಲ. ಆ ಎರಡು ಶಾಲೆಗಳಲ್ಲಿ ಸಂಸ್ಥೆಯವರೇ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.

ಈಗಾಗಲೇ ಎರಡು ಬಾರಿ ಪತ್ರ ಬರೆದು, ಬಿಸಿಯೂಟ ಸಾಮಗ್ರಿ ಇಂಡೆಂಟ್‌ ಕೊಡುವಂತೆ ಕೇಳಿದ್ದೇವೆ. ಆದರೆ, ಅವರು ನಿರಾಕರಿಸಿದ್ದಾರೆ. ಈ ಕುರಿತು ಮಾನವ ಹಕ್ಕುಗಳ ಆಯೋಗದಲ್ಲೂ ದೂರು ದಾಖಲಾಗಿದೆ. ಈ ಬಗ್ಗೆಯೂ ಶಾಲೆಯ ಆಡಳಿತ ಮಂಡಳಿಗೆ ಪತ್ರ ಬರೆಯಲಾಗಿದೆ. ಆದರೆ ಅದಕ್ಕೆ ಉತ್ತರ ನೀಡಿಲ್ಲ ಎಂದು ಅಕ್ಷರ ದಾಸೋಹ ಅಧಿಕಾರಿ ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ತೆಗೆದುಕೊಳ್ಳುವುದಿಲ್ಲ ಎಂದರೆ ಹೇಗೆ? ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಬಿಸಿಯೂಟದ ಸಾಮಗ್ರಿ ತಲುಪುತ್ತಿದೆ. ಈ ಎರಡೂ ಶಾಲೆಗಳಿಗೂ ಸಾಮಗ್ರಿ ತಲುಪಿಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್‌ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್‌ ಡಿಸೋಜ ಮಾತನಾಡಿ, ಈ ಅನುದಾನಿತ ಶಾಲೆಗಳ ಶಿಕ್ಷಕರ ಸಂಬಳವನ್ನು ಸರ್ಕಾರ ನೀಡುತ್ತಿದೆ. ಕ್ಷೀರಭಾಗ್ಯ, ಅಕ್ಷರ ದಾಸೋಹ ಕಟ್ಟಡಗಳನ್ನು ಸರ್ಕಾರದ ಅನುದಾನದಿಂದಲೇ ಒದಗಿಸಲಾಗಿದೆ. ಆದರೆ, ಬಿಸಿಯೂಟ ಮಾತ್ರ ಬೇಡ ಎನ್ನುವುದು ಸರಿಯಲ್ಲ. ರಾಜಕೀಯ ಮಾಡುವುದು ಸರಿಯಲ್ಲ. ಆ ಶಾಲೆಗಳ ಮಕ್ಕಳಿಗೂ ಬಿಸಿಯೂಟ ಪೂರೈಸಬೇಕು. ಇಲ್ಲದೇ ಇದ್ದರೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ‘ನಾವು ರಾಜಕೀಯ ಮಾಡುತ್ತಿಲ್ಲ. ನಿಮ್ಮಿಂದಲೇ ರಾಜಕೀಯ ಮಾಡಲಾಗುತ್ತಿದೆ. ಸುಬ್ರಹ್ಮಣ್ಯ ದೇವಸ್ಥಾನದಿಂದ ಎರಡು ಶಾಲೆಗಳಿಗೆ ಊಟ ಹೋಗುತ್ತಿದೆ. ಕಟೀಲು ದೇವಸ್ಥಾನದಿಂದಲೂ ಶಾಲೆಗಳಿಗೆ ಊಟ ಪೂರೈಕೆ ಆಗುತ್ತಿತ್ತು. ಆ ಬಗ್ಗೆ ಮಾತನಾಡದವರು, ಕಲ್ಲಡ್ಕ ಮತ್ತು ಪುಣಚ ಶಾಲೆಗಳ ಬಗ್ಗೆ ಮಾತ್ರ ಮಾತನಾಡುವುದು ಏಕೆ’ ಎಂದು ಪ್ರಶ್ನಿಸಿದರು.

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್‌ ಹಮೀದ್‌, ‘ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕಟೀಲು ದೇವಸ್ಥಾನದಿಂದ ಊಟ ಪೂರೈಕೆಯಾಗುತ್ತಿದೆ. ಆದರೆ, ಕೊಲ್ಲೂರು ದೇವಸ್ಥಾನದಿಂದ ಹಣ ಕೊಡಲಾಗುತ್ತಿತ್ತು. ನಿಮಗೆ ಸಾಮಗ್ರಿ ಬೇಕಿಲ್ಲ. ಹಣ ಬೇಕಾಗಿದೆ’ ಎಂದು ಹೇಳುತ್ತಿದ್ದಂತೆಯೇ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

‘ಈ ವಿಷಯದಲ್ಲಿ ಅಧಿಕಾರಿಗಳ ತಪ್ಪಿಲ್ಲ. ಸರ್ಕಾರವೇ ಈ ಆದೇಶ ಮಾಡಿದೆ. ಅಧಿಕಾರಿಗಳ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುವುದು ಸರಿಯಲ್ಲ. ನಿಮಗೆ ನಾಚಿಕೆ ಆಗಬೇಕು’ ಎಂದು ಆಡಳಿತ ಪಕ್ಷದ ಸದಸ್ಯರಾದ ಕೆ. ರವೀಂದ್ರ ಕಂಬಳಿ, ಜನಾರ್ದನ ಗೌಡ, ಕೆ. ಕೊರಗಪ್ಪ ನಾಯ್ಕ್‌, ಎಂ.ಎಸ್‌. ಮನ್ಮಥ ಹೇಳಿದರು.

ಪ್ರತಿಪಕ್ಷದ ಸದಸ್ಯ ಎಂ.ಎಸ್‌. ಮುಹಮ್ಮದ್‌ ಮಾತನಾಡಿ, ನಾಳೆಯಿಂದಲೇ ಆ ಎರಡೂ ಶಾಲೆಗಳಿಗೆ ಬಿಸಿಯೂಟದ ಸಾಮಗ್ರಿ ಪೂರೈಕೆ ಆಗಬೇಕು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಿ ಎಂದು ಆಗ್ರಹಿಸಿದರು.

ಸರ್ಕಾರದಿಂದ ಕೇವಲ 900 ವಿದ್ಯಾರ್ಥಿಗಳಿಗೆ ಮಾತ್ರ ಬಿಸಿಯೂಟ ಪೂರೈಸಲಾಗುತ್ತಿದೆ. ಕಲ್ಲಡ್ಕ ಶಾಲೆಯಲ್ಲಿ 3,500 ವಿದ್ಯಾರ್ಥಿಗಳಿದ್ದಾರೆ. ಎಲ್ಲರಿಗೂ ಬಿಸಿಯೂಟ ಒದಗಿಸುವಂತೆ ನಿರ್ಣಯ ಕೈಗೊಳ್ಳಬೇಕು ಎಂದು ರವೀಂದ್ರ ಕಂಬಳಿ ಆಗ್ರಹಿಸಿದರು.

ಇದರಿಂದ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸಭೆಯನ್ನು ಅರ್ಧಗಂಟೆ ಮುಂದೂಡಿದರು.

ಮತ್ತೆ ಸಭೆ ಸೇರಿದಾಗಲೂ ಇದೇ ವಿಷಯದ ಚರ್ಚೆ ಆರಂಭವಾಯಿತು. 2007 ರಲ್ಲಿ ಸರ್ಕಾರದ ಆದೇಶದಂತೆಯೇ ಕೊಲ್ಲೂರು ದೇವಸ್ಥಾನದಿಂದ ಈ ಶಾಲೆಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡ ಲಾಗಿತ್ತು. ಅದೇ ವ್ಯವಸ್ಥೆಯನ್ನು ಮುಂದುವರಿಸ ಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಆಶಾ ತಿಮ್ಮಪ್ಪಗೌಡ ಒತ್ತಾಯಿಸಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ.ಎಂ.ಆರ್‌. ರವಿ, ಮುಜರಾಯಿ ಇಲಾಖೆ ಈ ಆದೇಶ ಹೊರಡಿಸಿದ್ದು, ಅದು ಜಿಲ್ಲಾ ಪಂಚಾ ಯಿತಿ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಈ ಕುರಿತು ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಅಭಿಪ್ರಾಯವನ್ನು ದಾಖಲಿಸಿ, ಸರ್ಕಾರಕ್ಕೆ ಕಳುಹಿಸಿಕೊಡ ಲಾಗುವುದು ಎಂದು ಹೇಳುವ ಮೂಲಕ ಚರ್ಚೆಗೆ ವಿರಾಮ ನೀಡಿದರು. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ಅಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಕಲ್ಲಡ್ಕ ಶಾಲೆಯವರಿಗೆ ಊಟ ಬೇಕಾಗಿಲ್ಲ. ಹಣ ಬೇಕಾಗಿದೆ. ಬಿಸಿಯೂಟವನ್ನು ಪಡೆಯದೇ ಇದ್ದರೆ, ಕೋರ್ಟ್‌ ಮೆಟ್ಟಿಲೇರುತ್ತೇನೆ.
ಚಂದ್ರಪ್ರಕಾಶ್‌ ಶೆಟ್ಟಿ
ತುಂಬೆ ಪ್ರತಿಪಕ್ಷದ ಸದಸ್ಯ ‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT