ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ದೃಢೀಕರಣಕ್ಕೆ ’ವಿವಿ ಪ್ಯಾಟ್ ’

Last Updated 19 ಜನವರಿ 2018, 7:00 IST
ಅಕ್ಷರ ಗಾತ್ರ

ತುಮಕೂರು: ‘ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಿದ ಬಳಿಕ ತಾವು ಚಲಾಯಿಸಿದ ಮತದ ಕುರಿತು ದೃಢಪಡಿಸಿಕೊಳ್ಳಲು ವಿವಿ ಪ್ಯಾಟ್ ಯಂತ್ರ (ವೋಟರ್ ವೇರಿಯಬಲ್ ಪೇಪರ್ ಆಡಿಟ್ ಟ್ರಯಲ್) ಬಳಕೆ ಮಾಡಲಾಗುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಮತದಾನ ಮಾಡಿದ ಬಳಿಕ ತಾವು ಹಾಕಿದ ಮತ ನಿರ್ದಿಷ್ಟ ಗುರುತು ಸಂಖ್ಯೆಗೆ ಸೂಚಿತವಾಗಿದೆಯೇ ಎಂಬುದರ ಬಗ್ಗೆ ಗೊಂದಲಗಳಿರುತ್ತವೆ. ಅಂತಹ ಗೊಂದಲವನ್ನು ಈ ಯಂತ್ರ ನಿವಾರಿಸಲಿದೆ’ ಎಂದರು.

’ಮತ ಚಲಾಯಿಸಿದ ಬಳಿಕ ಮತದಾರ ಅಲ್ಲಿಯೇ ಈ ಯಂತ್ರದಲ್ಲಿ ದೃಢಪಡಿಸಿಕೊಳ್ಳಬಹುದು. ಚುನಾವಣಾ ಆಯೋಗ ಈ ಬಾರಿ ವಿದ್ಯುನ್ಮಾನ ಮತಯಂತ್ರದ ಜೊತೆಗೆ ಈ ಯಂತ್ರವನ್ನು ಪ್ರತಿ ಮತಗಟ್ಟೆಗೆ ಕಲ್ಪಿಸಲಿದೆ’ ಎಂದು ವಿವರಣೆ ನೀಡಿದರು. ’ಕೆಲ ದಿನಗಳಲ್ಲಿ ಈ ಯಂತ್ರಗಳನ್ನು ಆಯೋಗವು ಪೂರೈಸಲಿದೆ. ತಜ್ಞರು ಈ ಯಂತ್ರದ ಕಾರ್ಯ ನಿರ್ವಹಣೆ ಕುರಿತು ವಿವರಣೆ ನೀಡಲಿದ್ದಾರೆ’ ಎಂದು ತಿಳಿಸಿದರು.

‘ವಿಧಾನ ಸಭಾ ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತ, ಪಾರದರ್ಶಕ ರೀತಿಯಲ್ಲಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮತದಾರರ ಸೇರ್ಪಡೆ, ಬೇರ್ಪಡಿಸುವುದು, ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ’ ಎಂದು ಹೇಳಿದರು.

’ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಆಕ್ಷೇಪಣೆಗೆ ಅರ್ಜಿ ಸಲ್ಲಿಸಲು ಜನವರಿ 22, ವಿಲೇವಾರಿ ಮಾಡಲು ಫೆಬ್ರುವರಿ 12 ಕೊನೆಯ ದಿನವಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರುವರಿ 28ರಂದು ಪ್ರಕಟಿಸಲಾಗುತ್ತಿದೆ’ ಎಂದು ಹೇಳಿದರು.

’ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿನ ಮತದಾರರ ಸಂಖ್ಯೆಗೆ ಅನುಗುಣವಾಗಿ ಮತಗಟ್ಟೆ ಸಂಖ್ಯೆ ಹೆಚ್ಚಿಸುವ ಪ್ರಕ್ರಿಯೆ ನಡೆದಿದೆ. ಈ ಮೊದಲು 2,599 ಮತಗಟ್ಟೆಗಳಿದ್ದವು. ಈಗ 2,645 ಮತಗಟ್ಟೆಗಳಾಗಿವೆ. ಒಟ್ಟಾರೆ 46 ಮತಗಟ್ಟೆಗಳು ಹೆಚ್ಚಾಗಿವೆ. ಇನ್ನೂ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆ ಆಗಲಿದ್ದಾರೆ. ಅದಕ್ಕನುಗುಣವಾಗಿ ಈ ಸಂಖ್ಯೆ ಏರಿಕೆ ಆಗಲಿದೆ’ ಎಂದು ವಿವರಿಸಿದರು.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 2, ತಿಪಟೂರು ಕ್ಷೇತ್ರದಲ್ಲಿ 7, ತುರುವೇಕೆರೆ ಕ್ಷೇತ್ರದಲ್ಲಿ 1, ಕುಣಿಗಲ್ ಕ್ಷೇತ್ರದಲ್ಲಿ 1, ತುಮಕೂರು ನಗರ ಕ್ಷೇತ್ರದಲ್ಲಿ 13, ತುಮಕೂರು ಗ್ರಾಮೀಣ ಕ್ಷೇತ್ರದಲ್ಲಿ 19, ಕೊರಟಗೆರೆ ಕ್ಷೇತ್ರದಲ್ಲಿ 1, ಗುಬ್ಬಿ ಕ್ಷೇತ್ರದಲ್ಲಿ 2 ಸೇರಿ ಒಟ್ಟು 46 ಮತಗಟ್ಟೆಗಳ ಸಂಖ್ಯೆ ಈವರೆಗೆ ಹೆಚ್ಚಾಗಿದೆ’ ಎಂದು ವಿವರಿಸಿದರು.

’ಕರಡು ಮತದಾರರ ಪಟ್ಟಿ ಪ್ರಕಾರ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಶೇ 79.48 ಜನರು ಮತದಾರರಿದ್ದು, ತಲಾ ಶೇ 79ರಷ್ಟು ಪುರುಷರು, ಮಹಿಳೆಯರು ಇದ್ದಾರೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಹಾಗೂ ಉಪವಿಭಾಗಾಧಿಕಾರಿ ತಬುಸಮ್ ಜಹೇರಾ ಮಾತನಾಡಿ, ‘ಜನವರಿ 10ರಂದು ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ 7 ರಾಜಕೀಯ ಪಕ್ಷಗಳ ಸಭೆ ನಡೆಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಪರಿಷ್ಕೃತ ವೇಳಾ ಪಟ್ಟಿಯ ಬಗ್ಗೆ ವಿವರಿಸಲಾಗಿದೆ’ ಎಂದರು.

’ಎಲ್ಲ ರಾಜಕೀಯ ಪಕ್ಷದವರೂ ಮತಗಟ್ಟೆ ಹಂತದ ಸಹಾಯಕರನ್ನು (ಬಿಎಲ್‌ಎ–1 ಮತ್ತು 2) ನೇಮಕ ಮಾಡಬೇಕು ಎಂದು ಸೂಚಿಸಲಾಗಿದೆ. ಪ್ರತಿ ಮತಗಟ್ಟೆಗೆ ಅಧಿಕಾರಿ (ಬಿಎಲ್‌ಒ) ಇರುತ್ತಾರೆ. ಅವರಿಗೆ ಈ ಬಿಎಲ್‌ಒ 1 ಮತ್ತು 2 ಸಹಾಯಕರು ಕೆಲಸ ಮಾಡಲಿದ್ದಾರೆ. ಇದರಿಂದ ಮತದಾರರ ಹೆಸರು ಬಿಟ್ಟು ಹೋಗುವುದು, ಗೊಂದಲಗಳ ನಿವಾರಣೆಗೆ ಸಹಕಾರಿಯಾಗಲಿದೆ’ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ‘ ಮತದಾನ ಜಾಗೃತಿ ಕಾರ್ಯಕ್ರಮವನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣೆ ಕುರಿತು ಅಂತರ ಶಾಲಾ ಮತ್ತು ಕಾಲೇಜು ಮಟ್ಟದ (9ರಿಂದ 12ನೇ ತರಗತಿವರೆಗೆ) ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ರಸಪ್ರಶ್ನೆ( ಕ್ವಿಜ್) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ಹೇಳಿದರು.

‘ಮತದಾನದ ಮಹತ್ವ ಹಾಗೂ ನೋಂದಣಿ ಬಗ್ಗೆ ಶಾಲಾ ಮಕ್ಕಳ ದಿನಚರಿಯಲ್ಲಿ ನಮೂದಿಸಿ ಶಾಲಾ ಮಕ್ಕಳ ಪೋಷಕರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ. ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲೆಯಲ್ಲಿರುವ ವಿವಿಧ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಚುನಾವಣೆ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಕಾರದಲ್ಲಿ ಮತದಾನ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ ಆಯೋಜಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಟಾಂ ಟಾಂ ಮೂಲಕ ಜಾಗೃತಿ ಮೂಡಿಸಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭಿತ್ತಿಪತ್ರ, ಕಲಾ ಜಾಥಾ, ಚಿತ್ರಕಲೆ, ಫ್ಲೆಕ್ಸ್ ಮೂಲಕ ಮತದಾರ ಪಟ್ಟಿಯ ಪರಿಷ್ಕರಣೆ ಮತ್ತು ಮತದಾನ ಮಹತ್ವದ ಕುರಿತು ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.

‘ಗ್ರಾಮ ಮತ್ತು ಬೂತ್ ಮಟ್ಟದಲ್ಲಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಾಕ್ಷರತಾ ಪ್ರೇರಕರಿಗೆ ಈ ಕುರಿತು ತರಬೇತಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ’ ಎಂದು ವಿವರಿಸಿದರು.

––––

21,84 ಲಕ್ಷ ಕರಡು ಮತದಾರರ ಪಟ್ಟಿಯಲ್ಲಿರುವಂತೆ (2017 ನವೆಂಬರ್ 30ರವರೆಗೆ) ಜಿಲ್ಲೆಯ ಮತದಾರರು

11 ಲಕ್ಷ ಪುರುಷರು

10.85 ಲಕ್ಷ ಮಹಿಳೆಯರು

159 ಇತರರು

ಆಯೋಗಕ್ಕೆ ವರದಿ ಸಲ್ಲಿಕೆ

ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಪಂಚಾಕ್ಷರಯ್ಯ ಎಂಬುವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಆಯೋಗವು ಈ ಕುರಿತು ವರದಿ ಸಲ್ಲಿಸಲು ನನಗೆ ಆದೇಶಿಸಿತ್ತು. 63 ಬೂತ್‌ ನಲ್ಲಿ 800 ಮನೆಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಹೇಳಿದರು.

ವರದಿಯನ್ನು ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ಆಯೋಗದಿಂದ ವರದಿ ಕುರಿತು ಪತ್ರ ಬಂದ ಬಳಿಕ ವಿವರಣೆ ನೀಡಲಾಗುವುದು. ಮೇಲ್ಕೋಟಕ್ಕೆ ಅಂತಹ ಲೋಪಗಳು ಕಂಡು ಬಂದಿಲ್ಲ ಎಂಬುದು ತಿಳಿದಿದೆ ಎಂದು ಹೇಳಿದರು.

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 2ನೇ ಸ್ಥಾನ
’ಮತದಾನ ಜಾಗೃತಿ ಕುರಿತ ರಾಷ್ಟ್ರೀಯ ರಸಪ್ರಶ್ನೆ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಕೊರಟಗೆರೆ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢ ಶಾಲಾ ವಿಭಾಗ) ವಿದ್ಯಾರ್ಥಿನಿ ಎಚ್.ಆರ್. ಸುಷ್ಮಾ ಹಾಗೂ ಕೋಳಾಲದ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ನನ್ನೂಸಾಬ್ ಅವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 2ನೇ ಬಹುಮಾನ ಪಡೆದಿದ್ದಾರೆ’ ಎಂದು ಸಿಇಒ ಅನೀಸ್ ಕಣ್ಮಣಿ ಜಾಯ್ ಹೇಳಿದರು.

ಮತದಾನಕ್ಕೆ 2 ಕಿ.ಮೀ ದೂರ ಹೋಗುವಂತಿಲ್ಲ
’ಎರಡು ಕಿ.ಮೀಗಿಂತ ದೂರ ಹೋಗಿ ಮತದಾರರು ಮತ ಚಲಾಯಿಸಬಾರದು ಎಂಬ ಕಾರಣಕ್ಕೆ ಸಮೀಪದಲ್ಲಿಯೇ ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ವಿವರಿಸಿದರು.

’ಚುನಾವಣಾ ಆಯೋಗದ ನಿರ್ದೇಶನದಂತೆ ನಗರ ಪ್ರದೇಶದಲ್ಲಿ 1400 ಮತದಾರರು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 1300 ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸಲಾಗುವುದು  ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT