ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅಭಿವೃದ್ಧಿ: ಜನರಿಗೇ ಹೊಣೆ

Last Updated 19 ಜನವರಿ 2018, 9:19 IST
ಅಕ್ಷರ ಗಾತ್ರ

ಚಾಮರಾಜನಗರ: ಕೆರೆಗಳ ನಿರ್ವಹಣೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಒಳಗೊಳ್ಳುವ ದೃಷ್ಟಿಯಿಂದ ಕೆರೆ ಬಳಕೆದಾರರ ಸಂಘಗಳನ್ನು ರಚಿಸಲು ಪಂಚಾಯತ್ ರಾಜ್ ಎಂಜಿನಿಯರಿಂಗ್‌ ಇಲಾಖೆ ಅನುಮೋದನೆ ನೀಡಿದೆ.

ಗ್ರಾಮ ಪಂಚಾಯಿತಿಗಳ ಅಧೀನದಲ್ಲಿರುವ ಕೆರೆಗಳ ಒತ್ತುವರಿ, ದುರ್ಬಳಕೆ ತಡೆಯಲು ಮತ್ತು ಅವುಗಳ ವ್ಯವಸ್ಥಿತ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಭಾಗದ ಜನಪ್ರತಿನಿಧಿಗಳು ಮತ್ತು ನಾಗರಿಕರಿಗೆ ವಹಿಸುವುದರಿಂದ ಕೆರೆಗಳ ರಕ್ಷಣೆಗೆ ಅನುಕೂಲವಾಗಲಿದೆ ಎನ್ನುವುದು ಈ ಯೋಜನೆಯ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ಅನೇಕ ಪ್ರಮುಖ ಕೆರೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿತ್ತು. ಈಗ ಕೆರೆಗಳ ಸಂಪೂರ್ಣ ನಿರ್ವಹಣೆ ಹೊಣೆಗಾರಿಕೆ ಗ್ರಾಮದ ಜನರೇ ನಿರ್ವಹಿಸುವುದರಿಂದ ಮತ್ತು ಅದು ಸಾಂಸ್ಥಿಕ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವುದರಿಂದ ಅಕ್ರಮ ಗಳಿಗೆ ಕಡಿವಾಣ ಹಾಕಬಹುದು ಎನ್ನುತ್ತಾರೆ ಅಧಿಕಾರಿಗಳು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಕೆರೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಈ ಸಂಘಗಳ ವ್ಯಾಪ್ತಿಗೆ ಒಳಪಡಲಿದೆ.

ನಾಗರಿಕರೇ ಸದಸ್ಯರು: ಕೆರೆ ಅಚ್ಚುಕಟ್ಟು ಪ್ರದೇಶದ ರೈತರು, ಮೀನು ಸಾಕಣೆ ದಾರರು ಕೆರೆ ಬಳಕೆದಾರರ ಸಂಘದ ಸದಸ್ಯರಾಗು ತ್ತಾರೆ. ಈ ಸದಸ್ಯರಲ್ಲಿ 6 ಪ್ರತಿನಿಧಿಗಳನ್ನು ಆಯ್ದುಕೊಳ್ಳಬೇಕು. ಇವರಲ್ಲಿ ಕನಿಷ್ಠ ಒಬ್ಬರು ಮಹಿಳೆ, ಪರಿಶಿಷ್ಟ ಜಾತಿ ಅಥವಾ ಪಂಗಡದವರು, ಅಲ್ಪಸಂಖ್ಯಾತ ವರ್ಗದವರು ಇರಬೇಕು.

ಆ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಒಬ್ಬ ಎಂಜಿನಿಯರ್‌ ಪದನಿಮಿತ್ತ ಸದಸ್ಯರಾಗಿರುತ್ತಾರೆ.

ಗ್ರಾಮದ ಯುವಕ/ಯುವತಿ ಮಂಡಳಿ ಅಥವಾ ಸ್ವಸಹಾಯ ಸಂಘದ ಒಬ್ಬ ಪ್ರತಿನಿಧಿ ಮತ್ತು ಅಲ್ಲಿ ವಾಸವಾಗಿರುವ ಶಿಕ್ಷಣ ತಜ್ಞ, ಪರಿಸರ ಪ್ರೇಮಿ, ಎನ್‌ಜಿಒ ಅಥವಾ ಎನ್‌ಪಿಒದ ಒಬ್ಬ ಪ್ರತಿನಿಧಿಯನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಈ ಸಂಘದ ಅವಧಿ ಮೂರು ವರ್ಷವಾಗಿರಲಿದೆ. ಅವಶ್ಯಕತೆಗೆ ಅನುಗುಣವಾಗಿ ಕಾರ್ಯಕಾರಿ ಅಥವಾ ಉಪಸಮಿತಿ ರಚಿಸಿಕೊಳ್ಳಬಹುದು.

ಸಂಪೂರ್ಣ ಜವಾಬ್ದಾರಿ: ಕೆರೆಯ ಹೂಳು ಬಳಸಿಕೊಂಡು ಕುಂಬಾರಿಕೆ, ಇಟ್ಟಿಗೆ ತಯಾರಿಕೆ ಮುಂತಾದ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದು. ಜಲಾನಯನ ಪ್ರದೇಶದ ರೈತರಿಗೆ ಹೊಲಗಳಿಗೆ ಹೂಳು ಬಳಸಿಕೊಳ್ಳಲು ಅವಕಾಶ ನೀಡುವುದು. ಮಹಿಳೆಯರ ಮತ್ತು ಬುಡಕಟ್ಟು ಜನಾಂಗದವರ ಆರ್ಥಿಕ ಸುಧಾರಣೆಗೆ ಪ್ರತ್ಯೇಕ ಕಿರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು. ತೂಬು ಕಾಲುವೆಗಳಿಗೆ, ಕೆರೆ ಏರಿಗೆ ಹಾನಿಯಾದರೆ ಇಲಾಖೆಗಳ ನೆರವಿನಿಂದ ಸರಿಪಡಿಸುವುದು. ರಾಜಕಾಲುವೆ, ಕೋಡಿಗಳಲ್ಲಿ ಹೂಳು ತೆಗೆಯುವುದು ಮುಂತಾದ ಕೆರೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಸಂಘ ನಿಭಾಯಿಸಬೇಕು.

ಅನುಷ್ಠಾನಗೊಳಿಸಿದ ಕಾರ್ಯಗಳು, ಸಭೆಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳ ವರದಿ ನೀಡುವುದು, ಯೋಜನೆಗಳ ಅನುಷ್ಠಾನ, ಸಂಪನ್ಮೂಲಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಮುಂತಾದ ಜವಾಬ್ದಾರಿಗಳನ್ನು ಉಪಸಮಿತಿ ನಿರ್ವಹಿಸಲಿದೆ.

ಸಂಪನ್ಮೂಲ ಎಲ್ಲಿಂದ?: ಕೆರೆ ನೀರಿನ ಬಳಕೆದಾರರಿಂದ ನೀರಿನ ತೆರಿಗೆ ಸಂಗ್ರಹ, ಕೆರೆಯಲ್ಲಿ ಮೀನು ಸಾಕಣೆಯಿಂದ ಆದಾಯ, ಕೆರೆಯ ಮಣ್ಣು, ಹೂಳು, ಮರಳು ಅಥವಾ ಅರಣ್ಯ ಉತ್ಪನ್ನಗಳ ಹರಾಜು ಮತ್ತು ಕೆರೆ ಅಂಗಳದಲ್ಲಿ ಇಟ್ಟಿಗೆ ಗೂಡು ಮಾಡುವ ಬಳಕೆದಾರರಿಗೆ ವಿಧಿಸುವ ಶುಲ್ಕದಿಂದ ಸಂಪನ್ಮೂಲವನ್ನು ಕ್ರೋಡೀಕರಣ ಮಾಡಬೇಕು. ಅದರಲ್ಲಿ ಒಟ್ಟುಗೂಡುವ ಆದಾಯದಲ್ಲಿ ಶೇ 75ರಷ್ಟನ್ನು ಕೆರೆ ನಿರ್ವಹಣೆಗಾಗಿ ಉಳಿಸಿಕೊಳ್ಳಬೇಕು ಮತ್ತು ಶೇ 25ರಷ್ಟನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಇಲಾಖೆ ಸೂಚಿಸಿದೆ.

‘ಈ ರೀತಿಯ ಯೋಜನೆ ಒಳ್ಳೆಯದು. ಆದರೆ, ಈಗ ಇರುವ ನೀರು ಬಳಕೆದಾರರ ಸಮಿತಿಗಳಿಗೆ ನೀಡಬೇಕಾದ ಅನುದಾನವನ್ನು ಸರ್ಕಾರ ಮೊದಲು ಬಿಡುಗಡೆ ಮಾಡಲಿ. ಕೆರೆಗಳ ದುರಸ್ತಿ ಕಾರ್ಯವನ್ನು ಯಂತ್ರಗಳ ಮೂಲಕ ಮಾಡಿಸುವ ಬದಲು, ಕಾರ್ಮಿಕರಿಗೆ ವಹಿಸಲಿ’ ಎಂದು ಕೆರೆ ಅಚ್ಚುಕಟ್ಟು ಹೋರಾಟ ಸಮಿತಿಯ ಕೆ. ವೀರಭದ್ರಸ್ವಾಮಿ ಹೇಳಿದರು.

* * 

ಪ್ರಸ್ತುತ ಕೆರೆಗಳ ಅಳತೆ ಕಾರ್ಯ ನಡೆಯುತ್ತಿದೆ. ಪ್ರತಿ ಕೆರೆ ಅಳತೆ ಮುಗಿಯುತ್ತಿದ್ದಂತೆಯೇ ಅಲ್ಲಿ ಸಂಘ ರಚನೆ ಕೆಲಸವೂ ಆರಂಭವಾಗುತ್ತದೆ
ಬಿ.ರಾಮು, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT