ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟ, ಪಾಠದಲಿ ಸಮತೋಲನ ಇರಲಿ

Last Updated 19 ಜನವರಿ 2018, 9:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬಾಲ್ಯದಲ್ಲಿ ಪ್ರತಿಯೊಂದು ಮಗುವಿನ ಜೀವನದಲ್ಲಿ ಆಟ ಮತ್ತು ಪಾಠ ಅತಿಮುಖ್ಯ ಅಂಶಗಳಾಗಿರುತ್ತವೆ. ಎರಡಕ್ಕೂ ಆದ್ಯತೆ ನೀಡಿ ಸಮತೋಲನ ಕಾಯ್ದುಕೊಳ್ಳುವವರು ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಕ್ರಿಕೆಟಿಗ ಬಿ.ಕೆ.ವೆಂಕಟೇಶ್‌ ಪ್ರಸಾದ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ನಡೆದ 42 ನೇ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನದ ಮಹತ್ವ ಅರಿತು ಓದಿಗೆ ಒತ್ತುಕೊಡುವ ಜತೆಗೆ ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳುವವರು ಭವಿಷ್ಯದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಲು ಸಾಧ್ಯವಾಗುತ್ತದೆ. ಇವತ್ತು ಇತರೆ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರದಲ್ಲಿ ಕೂಡ ಅಪಾರ ಅವಕಾಶಗಳಿವೆ. ಹಣವಿದೆ. ಅದಕ್ಕಿಂತಲೂ ಹೆಚ್ಚಾಗಿ ಜನಪ್ರಿಯತೆ ದೊರೆಯುತ್ತದೆ’ ಎಂದು ಹೇಳಿದರು.

‘ಆಸಕ್ತಿ ಇರುವ ಕ್ರೀಡೆಯೊಂದನ್ನು ಆಯ್ಕೆ ಮಾಡಿಕೊಂಡು ಬದ್ಧತೆಯಿಂದ ಶ್ರಮ ಹಾಕುವ ಕ್ರೀಡಾಪಟುವಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಅವಕಾಶಗಳಿವೆ. ಆದ್ದರಿಂದ ವಿದ್ಯಾರ್ಥಿಗಳು ಶಿಸ್ತು, ಇಚ್ಛಾಶಕ್ತಿ ಮೈಗೂಡಿಸಿಕೊಳ್ಳುವ ಜತೆಗೆ ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಮುನ್ನುಗ್ಗಬೇಕು. ಆಗ ಮಾತ್ರ ನಿರೀಕ್ಷಿತ ಫಲ ಪಡೆಯಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್, ‘ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ಉತ್ತಮ ನಾಯಕತ್ವದ ಗುಣವನ್ನು ಹೊಂದಿ ಸಮರ್ಪಣಾಭಾವದಿಂದ ಶ್ರಮಿಸಿದರೆ ಪ್ರತಿಯೊಬ್ಬರಿಗೂ ಯಶಸ್ಸು ಲಭಿಸುತ್ತದೆ. ಈ ವಿಚಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ಪ್ರತಿಭೆಗಳು ಮುಂದುವರಿಯಬೇಕು’ ಎಂದು ತಿಳಿಸಿದರು.

ಸತ್ಯಸಾಯಿ ಸಮೂಹ ಸಂಸ್ಥೆಗಳ ಮುಖ್ಯ ಮಾರ್ಗದರ್ಶಕ ಬಿ ಎನ್ ನರಸಿಂಹಮೂರ್ತಿ ಮಾತನಾಡಿ, ‘ಉತ್ಸಾಹ, ಸಾಹಸ, ಧೈರ್ಯ, ಬುದ್ಧಿಶಕ್ತಿ, ಪರಾಕ್ರಮ, ಆರೋಗ್ಯ ಮತ್ತು ವಾಕ್ಪಟುತ್ವಗಳು ಸಾಧಕನ ಲಕ್ಷಣಗಳು. ಆತ್ಮದ ಶಿಕ್ಷಣವೇ ಶಿಕ್ಷಣದ ಆತ್ಮ. ಭಕ್ತಿಯ ಆಧಾರದಲ್ಲಿ ಸಾಧನೆ ಮಾಡಿದಾಗ ಜೀವನ ಪಾವನವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಈ ವೇಳೆ 9 ಜಿಲ್ಲೆಗಳಲ್ಲಿರುವ ಸತ್ಯಸಾಯಿ ಲೋಕಸೇವಾ ಸಮೂಹ ಶಿಕ್ಷಣ ಸಂಸ್ಥೆಯ 19 ನಿವೇಶನಗಳ 31 ವಿದ್ಯಾಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು ವಿವಿಧ ಸಾಹಸ ಕ್ರೀಡೆಗಳನ್ನು ಪ್ರದರ್ಶಿಸಿದರು. ಸಮಗ್ರ ಭಾರತದ ನಾಟ್ಯ ಸಂಸ್ಕೃತಿಯನ್ನು ನೆನಪಿಸುವ ಶಾಸ್ತ್ರೀಯ ಮತ್ತು ಪ್ರಾದೇಶಿಕ ನೃತ್ಯಗಳು ಪ್ರೇಕ್ಷಕರನ್ನು ಮನರಂಜಿಸಿದವು.

ನಿರ್ಮಲಾ ಜಯಚಂದ್ರ, ಪ್ರೇಮಾ ಕೃಷ್ಣಾ, ಉಷಾ ರಾಮಶೆಟ್ಟಿ, ಮೇಜರ್ ಜನರಲ್‌ ಬಕೂನಿ, ರಾಜ ಪುರೋಹಿತ್, ನಟ ಸಾಯಿಕುಮಾರ್, ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಶಶಿಧರ್ ಪ್ರಸಾದ್ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳಾದ ಬಿ.ನಾರಾಯಣರಾವ್, ಸಂಜೀವಶೆಟ್ಟಿ, ರಾಮಶೆಟ್ಟಿ, ಸಿ.ಶ್ರೀನಿವಾಸ್ ಉಪಸ್ಥಿತರಿದ್ದರು.

‘ಕ್ರೀಡಾಗ್ರಾಮ’ಕ್ಕೆ ಭೂಮಿ ಪೂಜೆ

ಸತ್ಯಸಾಯಿ ಗ್ರಾಮದಲ್ಲಿ 30 ಎಕರೆ ಜಮೀನಿನಲ್ಲಿ ಸುಮಾರು ₹30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅತ್ಯಾಧುನಿಕ ‘ಸತ್ಯಸಾಯಿ ಕ್ರೀಡಾಗ್ರಾಮ’ಕ್ಕೆ ಟಿ.ಬಿ. ಜಯಚಂದ್ರ ಅವರು ಭೂಮಿಪೂಜೆ ನೆರವೇರಿಸಿದರು. ‘ಅಂತರರಾಷ್ಟ್ರೀಯ ಗುಣಮಟ್ಟದ ಈ ಕ್ರೀಡಾಗ್ರಾಮದಲ್ಲಿ ಕ್ರಿಕೆಟ್, ವಾಲಿಬಾಲ್, ಫುಟ್‍ಬಾಲ್ ಹಾಗೂ ಒಳಾಂಗಣ ಕ್ರೀಡೆ, ಈಜುಕೊಳದ ವ್ಯವಸ್ಥೆ ಇರುತ್ತದೆ. ಎರಡು ವರ್ಷಗಳಲ್ಲಿ ನಿರ್ಮಾಣ ಕಾಮಗಾರಿ ಮುಗಿಯಲಿದೆ’ ಎಂದು ಸಂಘಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT