ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಂದು ನಂದನವನ

Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ಸಂಪ್ರದಾಯಬದ್ಧ ಮನೆಯಲ್ಲಿ ಹುಟ್ಟಿ ಬೆಳೆದ ಪರಿಣಾಮ ಚಿಕ್ಕಂದಿನಿಂದಲೇ ಪೂಜೆ-ಪುನಸ್ಕಾರಗಳು ಮನವನ್ನು ತುಂಬಿಕೊಂಡಿತ್ತು. ಅಮ್ಮ ಆಗಾಗ ಹಾಡುತ್ತಿದ್ದ ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆವು ಸುಮ್ಮನೆ’ ಎಂಬುದರ ಅರ್ಥ ಅಂದು ತಿಳಿಯದಿದ್ದರೂ ಅದೇಕೋ ಮನವನ್ನು ಆರ್ಕಷಿಸಿತ್ತು. ಸಮಾಜದ ಒಂದು ಸಣ್ಣ ಘಟಕವೇ ಮನೆ ಎನ್ನಬಹುದು. ಮನೆಯಲ್ಲಿ ಎಲ್ಲರ ಮನ ಗೆದ್ದವರೇ ಸಮಾಜದಲ್ಲೂ ಉತ್ತಮ ವ್ಯಕ್ತಿಯಾಗುವರೆಂದು ಅಮ್ಮ ಹೇಳುತ್ತಿದ್ದಳು. ಅದಕ್ಕೇ ಅಲ್ಲವೇ ‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು’ ಎನ್ನುವುದು!

ನಮ್ಮ ಪ್ರಾಚೀನರು ಬಾಲ್ಯ, ಕೌಮಾರ, ಯೌವನ, ವೃದ್ಧಾಪ್ಯ - ಎಂಬ ನಾಲ್ಕು ಶರೀರದ ಅವಸ್ಥೆಗಳಲ್ಲಿ ಬಾಲ್ಯಕ್ಕೆ ಮಹತ್ವವನ್ನು ನೀಡಿದ್ದಾರೆ. ಬಾಲ್ಯದ ನೆನಪುಗಳು, ಆ ಅವಸ್ಥೆಯಲ್ಲಿ ಪಡೆದ ಸಂಸ್ಕಾರಗಳು ಜೀವನದ ಕೊನೆಯವರೆಗೂ ಇರುತ್ತದೆ. ಅವುಗಳನ್ನು ಸಂಪೂರ್ಣವಾಗಿ ಅಳಿಸಲಿಕ್ಕೆ ಸಾಧ್ಯವೇ ಇಲ್ಲ. ಹಸಿ ಮಡಕೆಯ ಮೇಲೆ ಬಿಡಿಸಿದ ಚಿತ್ರಗಳು ಆ ಮಡಕೆಯನ್ನು ಸುಟ್ಟಾಗಲೂ ಅಳಿಯದೆಯೇ ಉಳಿಯುತ್ತವೆ. ಅಂದರೆ ಆ ಮಡಕೆಯನ್ನು ಸುಟ್ಟ ಮಾತ್ರಕ್ಕೆ ಅದರ ಮೇಲೆ ಬಿಡಿಸಿದ ಚಿತ್ರಗಳು ನಾಶವಾಗುವುದಿಲ್ಲ. ಅಂತೆಯೇ ಮನುಷ್ಯನ ದೇಹ ಬದಲಾವಣೆ ಹೊಂದಿದ್ದರೂ ಬಾಲ್ಯದಲ್ಲಿ ಮನಸ್ಸಿನ ಮೇಲೆ ಮೂಡಿದ ಪ್ರಭಾವ, ಪರಿಣಾಮ ಮೊದಲಾದವುಗಳು ಬದಲಾಗುವುದೇ ಇಲ್ಲ. ಬಾಲ್ಯಾವಸ್ಥೆ ವ್ಯವಸ್ಥಿತವಾಗಿದ್ದರಷ್ಟೇ ಅವನ ಮುಂದಿನ ಜೀವನ ಸಫಲವಾಗುವುದು. ಮನುಷ್ಯನ ಜೀವನವೆಂಬ ಮಹಾವೃಕ್ಷಕ್ಕೆ ಬಾಲ್ಯದಲ್ಲಿ ಪಡೆದ ಸಂಸ್ಕಾರಗಳೇ ಬೇರು. ಬಿಂದು ರೂಪದಲ್ಲಿ ಸಿಗುವ ಸಂಸ್ಕಾರವೇ ಸಿಂಧುವಾಗುತ್ತದೆ.

ಮನೆಯಲ್ಲಿ ತಂದೆ-ತಾಯಿ ಆದರ್ಶ ಜೀವನ ನಡೆಸಿ ತೋರಿದರೆ ಮಕ್ಕಳೂ ಅದನ್ನೇ ಅನುಸರಿಸುವರು. ಮಕ್ಕಳ ನಿರ್ಮಲ ಮನಕ್ಕೆ ಉತ್ತಮ ವಾತಾವರಣ ನೀಡಿ ಒಳ್ಳೆಯ ನಡೆ-ನುಡಿಯ ಬೀಜ ಬಿತ್ತಿದರೆ ಮಾತ್ರ ಆ ಗುಣ ಹೆಮ್ಮರವಾಗಿ ಬೆಳೆದು ಆತ ಉತ್ತಮ ವ್ಯಕ್ತಿಯಾಗಿ ಸಮಾಜಕ್ಕೆ ಮಾದರಿಯಾಗುವನು. ಹಾಗಾಗಿ ವ್ಯಕ್ತಿತ್ವ ರೂಪುಗೊಳ್ಳಲು ಮನೆಯೇ ಮೂಲ ತಾಣ.

ಹೀಗೆ ಸಂಸ್ಕಾರಗೊಂಡ ಮನವು ಕಾಲಚಕ್ರದೊಂದಿಗೆ ಹೆಜ್ಜೆಯಿಡುವಾಗ ಎದುರಾಗುವ ಎಲ್ಲ ಸನ್ನಿವೇಶಗಳನ್ನೂ ಧೈರ್ಯದಿಂದ ನಿಭಾಯಿಸುವುದು. ಮನೆಯಲ್ಲಿ ಅಜ್ಜಿ-ತಾತ ತೋರಿದ ಪ್ರೀತಿ-ಪ್ರೇಮಗಳು ಬದುಕಿಗೆ ಭರವಸೆ ನೀಡಿದರೆ, ಅಪ್ಪ-ಅಮ್ಮ ಸಹನೆಯಿಂದ ಎದುರಿಸಿದ ಕಷ್ಟದ ದಿನಗಳು ದಾರಿ ದೀಪವಾಗುವವು. ಒಡಹುಟ್ಟಿದವರ ಸ್ನೇಹ-ಬೆಂಬಲಗಳು ನೂರು ಆನೆ ಬಲವನ್ನು ನೀಡುವುದು. ಮನೆಯಲ್ಲಿ ಆಳು-ಕಾಳುಗಳಿಗೆ ತೋರಿದ ಪ್ರೀತಿಯೇ ಮುಂದೆ ಮಕ್ಕಳು ದೀನ-ದಲಿತರ ಬಗ್ಗೆ ತೋರುವ ಕಾಳಜಿಗೆ ಪ್ರೇರಣೆಯಾಗುವುದು.

ತಲೆಯಿಂದ ತಲೆಗೆ, ಪೀಳಿಗೆಯಿಂದ ಪೀಳಿಗೆಗೆ |
ಅಲೆಯಿಂದಲಲೆಗೆ ಟಪ್ಪೆಯ ಚಾರನಂತೆ ||
ಇಳಿಯುತಿದೆ ಯುಗದಿಂದ ಯುಗಕೆ ಮಾನವಧರ್ಮ |
ನಿಲದಮೃತಧಾರೆಯದು - ಮಂಕುತಿಮ್ಮ ||

ಒಂದು ಅಲೆ ಮತ್ತೊಂದು ಅಲೆಗೆ ಕಾರಣವಾಗುವಂತೆ, ಅಂಚೆ ಹಂಚುವವ ತನ್ನ ಕೈಲಿರುವ ಅಂಚೆಯನ್ನು ಹಲವಾರು ಮನೆಗಳಿಗೆ ತಲುಪಿಸುವಂತೆ, ಪ್ರಕೃತಿಯಲ್ಲಿ ಅರಳಿದ ಮನುಷ್ಯ, ತಾನು ರೂಢಿಸಿಕೊಂಡ ವಿಚಾರ, ಆಚಾರ, ಧರ್ಮ, ವಿಜ್ಞಾನ, ಕಲೆ – ಮುಂತಾದವುಗಳನ್ನು ತಲೆಮಾರಿನಿಂದ ತಲೆಮಾರಿಗೆ, ಪೀಳಿಗೆಯಿಂದ ಪೀಳಿಗೆಗೆ ಹಂಚುತ್ತಾ ‘ಅರಿವಿನ ಮತ್ತು ಜ್ಞಾನದ ಅಮೃತಧಾರೆ’ಯನ್ನೂ ಮುಂದಿನ ಪೀಳಿಗೆಯ ವಿಚಾರಶಕ್ತಿಗೆ ಕಾರಕನಾಗುತ್ತಾನೆ ಎನ್ನುವರು ಡಿ.ವಿ.ಜಿ. ಹೀಗೆ ನಮ್ಮ ಸಂಸ್ಕೃತಿಯಲ್ಲಿರುವ ಜ್ಞಾನ, ವಿಜ್ಞಾನ, ಕಲೆಗಳು ಕೇವಲ ಪುಸ್ತಕದ ಅಧ್ಯಯನದಿಂದ ಬರುವಂತಹುದಲ್ಲ. ಒಡನಾಟದಿಂದ, ಅನುಭವದಿಂದ ಕಲಿತಾಗಲಷ್ಟೇ ರಕ್ತಗತವಾಗುವುದು. ಈ ಎಲ್ಲ ಸಮಗ್ರ ತಿಳಿವಳಿಕೆಯನ್ನು, ಕಾಲ ಕಾಲಕ್ಕೆ ಅಂದಿನ ಸ್ಥಿತಿಗೆ ಸಹಜತೆಯನ್ನೂ ರೂಢಿಸಿಕೊಂಡು, ಸಂಸ್ಕೃತಿಯನ್ನೂ ತಿಳಿಸಿಕೊಡುವ ತಾಣವೇ ಮನೆಯಾಗಿದೆ.

ಡಿ.ವಿ.ಜಿ.ಯವರ ಮತ್ತೊಂದು ಕಗ್ಗ ಹೇಳುವಂತೆ ಹೊಸ ಉಪಾಯ, ವಿಚಾರಗಳೊಡನೆ, ಹಳೆಯ ನೆನಪು, ಅನುಭವಗಳು ಹಾಗೂ ಸಿದ್ಧಾಂತಗಳು – ಸೇರಿದರೆ ಜೀವನ ಸಮೃದ್ಧಿಯಾಗುತ್ತದೆ. ಹಿಂದಿನ ಜನಾಂಗದ ವಿಚಾರ, ದಾರ್ಶನಿಕತೆಗಳೊಂದಿಗೆ ನವವಿಚಾರ ಸೇರಿ ಜೀವನಕ್ಕೆ ಯಶಸ್ಸನ್ನು ತಂದುಕೊಡುವುದು. ಈ ಮಾತೂ ಮೊದಲು ಪ್ರಯೋಗಗೊಂಡು, ಯಶಸ್ವಿಯಾಗಬೇಕಿರುವುದು ಮನೆಯಿಂದಲೇ ಅಲ್ಲವೇ?

ನೋವು-ನಲಿವುಗಳ ಸಮರಸದ ಈ ಜೀವನದಲ್ಲಿ ಬೇಸರದ ಕ್ಷಣಗಳೂ ಆವರಿಸದೇ ಇರದು. ಆ ಎಲ್ಲ ಭಾವನೆಗಳನ್ನು ಮನೆಯಲ್ಲಿ ಎಲ್ಲರೆದುರು ತೋಡಿಕೊಂಡಾಗಲೇ ಹಗುರವಾಗುವುದು ಮನ. ಅಜ್ಜಿಯ ಸಂತೈಕೆ, ಅಮ್ಮ ಮನದಲ್ಲಿ ಬಿತ್ತಿದ ಅಧ್ಯಾತ್ಮಭಾವದಿಂದ ಮನಕೆ ಧೈರ್ಯ ಬಾರದೇ ಇರದು. ಯಾವುದೇ ಸುಖ-ದುಃಖಗಳಾಗಲೀ ಶಾಶ್ವತವಲ್ಲ, ನೀರಿನ ಗುಳ್ಳೆಯಂತಿರುವ ಈ ಬದುಕಿನಲ್ಲಿ ಎಂದು ಅಮ್ಮ ಹೇಳಿದಾಗ ಅವಳು ಹೇಳುತ್ತಿದ್ದ ‘ಅಲ್ಲಿದೆ ನಮ್ಮನೆ ಇಲ್ಲಿ ಬಂದೆವು ಸುಮ್ಮನೆ’ ಹಾಡು ಥಟ್ಟನೇ ನೆನಪಾಗುವುದು. ಅಪ್ಪನ ಆತ್ಮವಿಶ್ವಾಸ ಮನಸ್ಸಿಗೆ ಧೈರ್ಯ ನೀಡಿದರೆ, ಒಡಹುಟ್ಟಿದವರ ಪ್ರೀತಿ ಕೈ ಹಿಡಿದು ಮುನ್ನಡೆಸುವುದು. ಸುಖ, ನೆಮ್ಮದಿ, ಪ್ರೀತಿಗಳಿಗೆಲ್ಲಾ ತಾಣವಾದ ಈ ಮನೆಯನ್ನು ‘ನಂದನವನ’ ಎಂದು ಅದಕ್ಕಲ್ಲವೇ ಹೇಳುವುದು! ಇಲ್ಲಿ ವಿಕಸಿತವಾದ ಮನವೇ ತಾನೇ ‘ವಸುದೈವ ಕುಟುಂಬಕಂ’ ಎಂದು ಹೇಳಲು ಸಾಧ್ಯ?

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT