ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂದುಗುಂಬಳ ಎಂದರೆ ಮಜ್ಜಿಗೆಹುಳಿಯಷ್ಟೆ ಅಲ್ಲ!

Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ಬೂದುಗುಂಬಳಕಾಯಿ ಶೇವು
ಬೇಕಾಗುವ ಸಾಮಗ್ರಿಗಳು:
ಹದ ಗಾತ್ರದ ಬೂದುಗುಂಬಳಕಾಯಿ – 1, ಅಕ್ಕಿಹಿಟ್ಟು – 1ಕೆ.ಜಿ., ಜೀರಿಗೆ – 3ಚಮಚ, ಓಂಕಾಳು – 1ಚಮಚ, ಖಾರದಪುಡಿ – ಅಗತ್ಯವಿದ್ದಷ್ಟು, ಉಪ್ಪು – ರುಚಿಗೆ,  ಎಣ್ಣೆ – ಕರಿಯಲು

ತಯಾರಿಸುವ ವಿಧಾನ: ಅಕ್ಕಿಹಿಟ್ಟನ್ನು ಕಮ್ಮಗೆ ಹುರಿದುಕೊಳ್ಳಿ. ಕುಂಬಳಕಾಯಿಯ ಸಿಪ್ಪೆ ಹಾಗೂ ತಿರುಳನ್ನು ತೆಗೆದು, ತುರಿಯಿರಿ. ಇದಕ್ಕೆ ಜೀರಿಗೆ, ಓಂಕಾಳು, ಖಾರದಪುಡಿ ಹಾಕಿ ನೀರು ಹಾಕದೆ ನುಣ್ಣಗೆ ಮಿಕ್ಸಿಗೆ ಹಾಕಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ದಪ್ಪ ತಳದ ಪಾತ್ರೆಗೆ ಹಾಕಿ ಉಪ್ಪು ಹಾಗೂ ಎರಡು ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಕುದಿಸಿ. ಆಮೇಲೆ ಹುರಿದುಕೊಂಡ ಅಕ್ಕಿಹಿಟ್ಟನ್ನು ಹಾಕಿ ಕೆಳಗಿಳಿಸಿ. ತಣ್ಣಗಾದ ಮೇಲೆ ಹಿಟ್ಟನ್ನು ಹದ ಮಾಡಿಕೊಂಡು, ಶೇವಿನ ಒರಳಿಗೆ ಹಾಕಿ ಕಾದ ಎಣ್ಣೆಯಲ್ಲಿ ಹಾಕಿ. ಹೊಂಬಣ್ಣ ಬರುವವರೆಗೂ ಕುರಿದು ತೆಗೆಯಿರಿ.

*


ಬೂದುಗುಂಬಳಕಾಯಿ ಎಣ್ಣೆ ರೊಟ್ಟಿ
ಬೇಕಾಗುವ ಸಾಮಗ್ರಿಗಳು:
ತುರಿದುಕೊಂಡ ಬೂದುಕುಂಬಳಕಾಯಿ – 3ಕಪ್, ಅಕ್ಕಿಹಿಟ್ಟು – 2ಕಪ್, ಗೋಧಿಹಿಟ್ಟು – 3/4ಕಪ್, ಕೊಚ್ಚಿಕೊಂಡ ಈರುಳ್ಳಿ – 1ಕಪ್, ಕೊತ್ತಂಬರಿ ಸೊಪ್ಪು –  ಸ್ವಲ್ಪ, ಕರಿಬೇವಿನ ಸೊಪ್ಪು – 1ಎಸಳು, ಜೀರಿಗೆ – 1ಚಮಚ, ಶುಂಠಿ – 1ಇಂಚು, ಲಿಂಬೆಹುಣ್ಣು – ಅರ್ಧ, ಉಪ್ಪು – ರುಚಿಗೆ, ಸಕ್ಕರೆ – 1ಚಮಚ, ಅಚ್ಚ ಖಾರದಪುಡಿ – 2ಚಮಚ ಅಥವಾ ಹಸಿಮೆಣಸು ಖಾರಕ್ಕೆ ತಕ್ಕಷ್ಟು.

ತಯಾರಿಸುವ ವಿಧಾನ: ದಪ್ಪ ತಳವಿರುವ ಪಾತ್ರೆಗೆ ತುರಿದ ಕುಂಬಳಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು, ಜೀರಿಗೆ, ಶುಂಠಿ ಪೇಸ್ಟ್, ಸಕ್ಕರೆ, ಲಿಂಬೆಹುಳಿ, ಉಪ್ಪು, ಖಾರದಪುಡಿ, ಹಾಕಿ ಚೆನ್ನಾಗಿ ಕುದಿಸಿರಿ. (ನೀರನ್ನು ಬೇಕಿದ್ದರೆ ಮಾತ್ರ ಸೇರಿಸಿ) ಆಮೇಲೆ ಅಕ್ಕಿಹಿಟ್ಟು, ಗೋಧಿಹಿಟ್ಟನ್ನು ಹಾಕಿ ಕೆಳಗಿಳಿಸಿಕೊಂಡು ತಣ್ಣಗಾದ ಮೇಲೆ ಹಿಟ್ಟನ್ನು ಹದ ಮಾಡಿಕೊಂಡು, ಬಾಳೆಎಲೆ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ತಟ್ಟಿ ಕಾದ ತವಾದ ಮೇಲೆ ಸರಿಯಾಗಿ ಎಣ್ಣೆ ಹಾಕಿ ಬೇಯಿಸಿಕೊಳ್ಳಿ. ಕಾಯಿಚಟ್ನಿಯೊಂದಿಗೆ ಸವಿಯಿರಿ.

*


ಬೂದುಗುಂಬಳಕಾಯಿ ಪಕೋಡ
ಬೇಕಾಗುವ ಸಾಮಗ್ರಿಗಳು:
ತುರಿದ ಕುಂಬಳಕಾಯಿ – 1ಕಪ್, ಅಕ್ಕಿಹಿಟ್ಟು – 3/4ಕಪ್, ಚಿರೋಟಿರವೆ – 1/2ಕಪ್, ಕೊಚ್ಚಿಕೊಂಡ ಈರುಳ್ಳಿ – 1/2ಕಪ್, ಜೀರಿಗೆ, ಓಂಕಾಳು – ತಲಾ ಅರ್ಧ ಚಮಚ, ಶುಂಠಿ ಪೇಸ್ಟ್ – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಖಾರದಪುಡಿ – 1ಚಮಚ, ತೆಂಗಿನತುರಿ – 1/4ಕಪ್, ಉಪ್ಪು – ರುಚಿಗೆ, ಚಿಟಿಕೆ ಸೋಡ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಒಂದು ಪಾತ್ರೆಗೆ ಎಲ್ಲ ಸಾಮಗ್ರಿಗಳನ್ನೂ ಹಾಕಿ ನೀರು ಸೇರಿಸದೆ ಚೆನ್ನಾಗಿ ಕಲಸಿ, ಅರ್ಧಗಂಟೆ ಬಿಟ್ಟು ಕಾದ ಎಣ್ಣೆಯಲ್ಲಿ ಚಿಕ್ಕದಾದ ಉಂಡೆಗಳನ್ನು ಬಿಟ್ಟು ಹೊಂಬಣ್ಣ ಬರುವವರೆಗೆ ಕರಿಯಿರಿ. ಇದಕ್ಕೆ ಟೊಮೆಟೊ ಸಾಸ್ ಹಾಕಿ ತಿನ್ನಲು ಕೊಡಿ.

*


ಬೂದುಗುಂಬಳಕಾಯಿ ತಿರುಳಿನ ಗೊಜ್ಜು
ಬೇಕಾಗುವ ಸಾಮಗ್ರಿಗಳು:
ಕುಂಬಳಕಾಯಿ ಒಳಗಿನ ತಿರುಳು – 1ಕಪ್, ಬೆಲ್ಲ – 1ಚಮಚ, ಉದ್ದಿನಬೇಳೆ – 1ಚಮಚ, ಸಣ್ಣಮೆಣಸು – ಆರು (ಹಸಿಮೆಣಸಿನ ಕಾಯಿ ಖಾರಕ್ಕೆ ತಕ್ಕಷ್ಟು), ಬಿಳಿಎಳ್ಳು  – 1/2ಚಮಚ, ಇಂಗು – ಚಿಟಿಕೆ, ಹುಣಸೆಹಣ್ಣು – ಸ್ವಲ್ಪ, ಉಪ್ಪು – ರುಚಿಗೆ, ತೆಂಗಿನತುರಿ – 3/4ಕಪ್, ಒಗ್ಗರಣೆಗೆ ಎಣ್ಣೆ, ಸಾಸಿವೆಕಾಳು, ಕೆಂಪುಮೆಣಸು ಒಂದು.

ತಯಾರಿಸುವ ವಿಧಾನ: ಕುಂಬಳಕಾಯಿ ತಿರುಳಿಗೆ ಬೆಲ್ಲ, ಉಪ್ಪು ಹಾಕಿ ಬೇಯಿಸಿಕೊಳ್ಳಿ. (ನೀರನ್ನು ಹಾಕಬೇಡಿ.) ಉದ್ದಿನಬೇಳೆ, ಎಳ್ಳು, ಸಣ್ಣಮೆಣಸಿಗೆ ಚಮಚ ಎಣ್ಣೆ ಬಿಟ್ಟು ಕಮ್ಮಗೆ ಹುರಿದುಕೊಂಡು, ಇಂಗು ಸೇರಿಸಿ, ಕಾಯಿಯೊಂದಿಗೆ ಹುಣಸೆಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು, ಬೇಯಿಸಿಕೊಂಡ ತಿರುಳನ್ನು ಹಾಕಿ ಮತ್ತೊಮ್ಮೆ ರುಬ್ಬಿ ತೆಗೆಯಿರಿ. ನಂತರ ಸಾಸಿವೆಕಾಳಿನ ಒಗ್ಗರಣೆ ಕೊಡಿ. ಇದನ್ನು ಅನ್ನದೊಂದಿಗೆ ಸವಿಯಿರಿ.

*


–ಅರ್ಚನಾ ಜಿ. ಬೊಮ್ನಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT